SIR | ಪ್ರತಿಯೊಂದು ಬೂತ್ ವಿಚಾರವಾಗಿ ಸಿಎಂ ಗಮನ ಹರಿಸಲು ಸಾಧ್ಯವೇ?: ಗೃಹ ಸಚಿವ ಪ್ರಿಯಾಂಕ್ ಖರ್ಗೆ
"ನಿಯಮ ಮೀರಿ ಎನ್ಯುಮರೇಷನ್ ಅರ್ಜಿಗಳನ್ನು ವಿತರಿಸುವ ಅಧಿಕಾರಿಗಳ ವಿರುದ್ಧ ಚುನಾವಣಾ ಆಯೋಗ ಕಠಿಣಕ್ರಮ ಕೈಗೊಳ್ಳಬೇಕು"
ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಒತ್ತಡದ ಮೇಲೆ ಸಮುದಾಯ ಭವನದಲ್ಲಿ ಎನ್ಯುಮರೇಷನ್ ಅರ್ಜಿ ನಮೂನೆಗಳನ್ನು ವಿತರಿಸಲಾಗಿದೆ ಎಂಬ ವಿಪಕ್ಷಗಳ ಮುಖಂಡರ ಆರೋಪ ಆಧಾರರಹಿತವಾಗಿದ್ದು, ರಾಜ್ಯದ ಪ್ರತಿಯೊಂದು ಬೂತ್ ವಿಚಾರವಾಗಿ ಮುಖ್ಯಮಂತ್ರಿಯವರು ಗಮನ ಹರಿಸಲು ಸಾಧ್ಯವೇ? ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 59 ಸಾವಿರಕ್ಕೂ ಹೆಚ್ಚು ಬೂತ್‍ಗಳಿವೆ. ಪ್ರಕ್ರಿಯೆ ಬೇಗ ಮುಗಿಯಲಿ ಎಂಬ ಕಾರಣಕ್ಕಾಗಿ ಅಧಿಕಾರಿಗಳು ಸಮುದಾಯ ಭವನದಲ್ಲಿ ಅರ್ಜಿಗಳನ್ನು ವಿತರಿಸಿರಬಹುದು. ಆದರೆ ಇದು ಅಕ್ರಮ. ತಪ್ಪಿತಸ್ಥರ ವಿರುದ್ಧ ಕ್ರಮಗಳಾಗಬೇಕು ಎಂದರು.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ನಿಯಮ ಮೀರಿ ಎನ್ಯುಮರೇಷನ್ ಅರ್ಜಿಗಳನ್ನು ವಿತರಿಸುವ ಅಧಿಕಾರಿಗಳ ವಿರುದ್ಧ ಚುನಾವಣಾ ಆಯೋಗ ಕಠಿಣಕ್ರಮ ಕೈಗೊಳ್ಳಬೇಕು. ಮನೆ ಮನೆಗೆ ತೆರಳಿ ಎನ್ಯುಮರೇಷನ್ ಅರ್ಜಿಗಳನ್ನು ನೀಡಬೇಕು ಎಂಬ ನಿಯಮ ಇದೆ. ಅದನ್ನು ಬಿಟ್ಟು ಸಮುದಾಯ ಭವನದಲ್ಲಿ ಅರ್ಜಿಗಳನ್ನು ನೀಡುವುದು ನಿಯಮ ಬಾಹಿರವಾಗಿದೆ. ಇದರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು ಎಂದರು.
ಎಸ್‍ಐಆರ್ ಬಗ್ಗೆ ಕಾಂಗ್ರೆಸ್ ಕೇಳಿರುವ ಪ್ರಶ್ನೆಗಳಿಗೆ ಆಯೋಗ ಉತ್ತರಿಸಬೇಕಿದೆ. ಜನರ ಮತದಾನದ ಹಕ್ಕುಗಳನ್ನು ಕಸಿದುಕೊಳ್ಳಲು ಯಾರಿಗೂ ಅಧಿಕಾರ ಇಲ್ಲ. ಎಸ್‍ಐಆರ್ ವಿಚಾರದಲ್ಲಿ ನಡೆಯುತ್ತಿರುವ ಗೊಂದಲಗಳ ಬಗ್ಗೆ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು. ಆದರೆ ಈ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೇ ನಿರ್ವಹಣೆ ಮಾಡುತ್ತವೆಯೇ ಎಂದು ಅವರು ಪ್ರಶ್ನಿಸಿದರು.