ಪಿಆರ್‌ಸಿ ಮತ್ತು ಎಸ್‌ಐಆರ್: ಶೋಭಕ್ಕನ ನಕಲಿ ದೇಶಭಕ್ತಿ ಬಿಜೆಪಿಯ ಅಸಲಿ ಜನದ್ರೋಹ
ಭಾರತದ ನಾಗರಿಕರೆಂದು ಸಾಬೀತಾದವರಿಗೆ ಮಾತ್ರ ‘ಖಾಯಂ ನಿವಾಸಿ’ ಪತ್ರ ಕೊಡಬೇಕೆಂದು ತಾವು ವಾದಿಸಿದ್ದೀರಿ. ಆದರೆ ಶೋಭಕ್ಕನವರೇ, ಭಾರತ ದೇಶದಲ್ಲಿ ಭಾರತದ ನಾಗರಿಕ ಎಂದು ಖಚಿತವಾಗಿ ಘೋಷಿಸುವ ಯಾವುದಾದರೂ ಒಂದು ಪ್ರಮಾಣ ಪತ್ರವಿದೆಯೇ? ತಾವು ಕೇಂದ್ರ ಮಂತ್ರಿಗಳು. ನಿಮ್ಮ ಪ್ರಧಾನಿಯನ್ನೇ ಕೇಳಿ ನೋಡಿ.
ನಿಮ್ಮ ಸರಕಾರವಂತೂ ಈವರೆಗೆ ನಾಗರಿಕತ್ವದ ಪುರಾವೆಯೆಂಬಂತಿದ್ದ ಪಾಸ್‌ಪೋರ್ಟ್ ಕೂಡ ಕೇವಲ ಬಸ್ ಟಿಕೆಟ್ ಇದ್ದ ಹಾಗೆ ಪ್ರಯಾಣ ದಾಖಲೆ ಎಂದು ಹೇಳಿ ಬಿಟ್ಟಿದೆ. ಉಳ್ಳವರ ಪರಿಸ್ಥಿತಿಯೇ ಹೀಗಿರುವಾಗ, ಬಹುಸಂಖ್ಯಾತ ಬಡ-ದಮನಿತ-ಹಿಂದೂಗಳು ತಮ್ಮ ನಾಗರಿಕತ್ವ ಹೇಗೆ ಸಾಬೀತು ಮಾಡಿ ಕೊಳ್ಳುವುದು, ಶೋಭಕ್ಕ?
ಬಿಜೆಪಿಯ ಕೂಗುಮಾರಿ ಬ್ರಿಗೇಡಿನ ಮುಖ್ಯಸ್ಥರು ಮತ್ತು ಕೇಂದ್ರ ಮಂತ್ರಿಗಳೂ ಆದ ಶೋಭಾ ಕರಂದ್ಲಾಜೆಯವರು ತಮ್ಮ ಹಳೆ ಚಾಳಿಯನ್ನೇ ಮುಂದುವರಿಸಿದ್ದಾರೆ ಹಾಗೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರದ ವಿರುದ್ಧ ಕೇಂದ್ರಕ್ಕೆ ದೂರು ಸಲ್ಲಿಸಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಾಗರಿಕತ್ವವನ್ನು ಸಾಬೀತು ಪಡಿಸಿಕೊಳ್ಳಲು ಬೇಕಾಗಿರುವ Permanent Residence Certificate (PRC)- ಖಾಯಂ ನಿವಾಸ ಪ್ರಮಾಣ ಪತ್ರವನ್ನು ಒದಗಿಸಲು ಕರ್ನಾಟಕದ ಕಾಂಗ್ರೆಸ್ ಸರಕಾರ ಇತ್ತೀಚೆಗೆ ನಿಯಮಗಳನ್ನು ಸರಳೀಕರಿಸಿ ಒಂದು ಆದೇಶವನ್ನು ತಡವಾಗಿ ಮತ್ತು ಅವರಸರದಿಂದ ಹೊರಡಿಸಿತ್ತು.
ಅದರ ಬಗ್ಗೆ ಆಯೋಗವು ಯಾವುದೇ ಅಭಿಪ್ರಾಯವನ್ನು ನೀಡುವ ಮುನ್ನವೇ ಶೋಭಕ್ಕ ಬ್ರಿಗೇಡ್ ಪಿಆರ್‌ಸಿಯ ಬಗ್ಗೆ ಅಸಂಬದ್ಧ ಮತ್ತು ಹಾಸ್ಯಾಸ್ಪದ ಆದರೆ ಅಪಾಯಕಾರಿ ಆಕ್ಷೇಪಣೆಗಳನ್ನು ಎತ್ತಿದ್ದಾರೆ.
ಶೋಭಕ್ಕನ ಹುಸಿ ತಕರಾರಿನ ಸಾರಾಂಶವಿಷ್ಟು:
1. ಕರ್ನಾಟಕ ಸರಕಾರವು ಸಂವಿಧಾನ ಬಾಹಿರವಾಗಿ ‘ಭಾರತದ ನಾಗರಿಕತ್ವ’ಕ್ಕೆ ಪರ್ಯಾಯವಾಗಿ ‘ಶಾಶ್ವತ ವಾಸಿಗಳು’ ಎಂಬ ಹೊಸ ಪ್ರಭೇದ ಸೃಷ್ಟಿಸುತ್ತಿದೆ. ಅದರ ಮೂಲಕ ಈ ದೇಶದ ನಾಗರಿಕದಲ್ಲದವರೂ ಕೂಡ ನಾಗರಿಕತ್ವ ಪಡೆದುಕೊಳ್ಳಲು ಅವಕಾಶ ಮಾಡಿಕೊಡುತ್ತಿದೆ.
2. ನಾಗರಿಕರಲ್ಲದವರಿಗೆ ಈ ಬಗೆಯ ಖಾಯಂ ನಿವಾಸಿ ಪತ್ರ ಕೊಡಬಾರದು. ಆದ್ದರಿಂದ ಕೇಂದ್ರ ಸರಕಾರವು ನಾಗರಿಕತ್ವವನ್ನು ಪ್ರಮಾಣಿಸಿದವರಿಗೆ ಮಾತ್ರ ಖಾಯಂ ನಿವಾಸಿ ಪತ್ರ ಕೊಡುವಂತೆ ಆದೇಶಿಸಬೇಕು.
3. ಕರ್ನಾಟಕ ಸರಕಾರದ ಖಾಯಂ ನಿವಾಸಿ ಪತ್ರದ ಸಾಂವಿಧಾನಿಕತೆ ಮತ್ತು ಕಾನೂನು ಬದ್ಧತೆ ತೀರ್ಮಾನವಾಗುವವರೆಗೂ ಈ ಖಾಯಂ ಪತ್ರ ಕೊಡದಂತೆ ನಿಷೇಧಿಸಬೇಕು.
ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಈ ತಕರಾರಿನಲ್ಲಿ ತರ್ಕವೂ ಇಲ್ಲ, ದೇಶಭಕ್ತಿಯೂ ಇಲ್ಲ. ಜನಕಾಳಜಿಯಂತೂ ಲವಲೇಶವೂ ಇಲ್ಲ. ಇರುವುದೆಲ್ಲಾ ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ ತಾನು ದ್ವೇಷಿಸುವವರ ಎರಡೂ ಕಣ್ಣುಗಳೂ ಹೋಗಬೇಕು ಎಂಬ ದುರುದ್ದೇಶ ಮತ್ತು ದ್ವೇಷೋದ್ದೇಶಗಳಷ್ಟೆ.
ಈ ತಕರಾರಿನಲ್ಲಿ ಏನಾದರೂ ಹುರುಳಿದೆಯೇ ಎಂದು ಮೊದಲು ನೋಡೋಣ:
ನಾಗರಿಕತ್ವ ಸಾಬೀತು ಮಾಡಲೆಂದೇ ಖಾಯಂ ನಿವಾಸಿ ಪತ್ರವಲ್ಲವೇ?
ಶೋಭಕ್ಕನವರೇ, ತಾವು ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರಾದ್ದರಿಂದ ನಿಮಗೆ ತರ್ಕ, ಕಾನೂನು ಮತ್ತು ಸಂವಿಧಾನಗಳ ಪರಿಚಯ ಮತ್ತು ತಿಳವಳಿಕೆ ಸಹಜವಾಗಿ ಕಡಿಮೆ ಇರಬಹುದು. ಆದರೆ ತಾವು ಅಧಿಕಾರಕ್ಕೆ ಬಂದ ಮೇಲೆ ನಿಮಗೆ ಸೂಕ್ತ ತಿಳವಳಿಕೆ ಮತ್ತು ಮಾರ್ಗದರ್ಶನ ಮಾಡಬೇಕಿದ್ದ ಅಧಿಕಾರಿಗಳು ಮತ್ತು ಸಲಹೆಕೋರರು ಸಹ ಬಿಜೆಪಿಯವರಂತೆ ವಿತಂಡವಾದಿಗಳು, ಕುತರ್ಕಿಗಳೂ ಆಗಿದ್ದಾರೆಂಬುದನ್ನು ನಿಮ್ಮ ಪತ್ರ ಸ್ಪಷ್ಟ ಪಡಿಸುತ್ತದೆ.
ಭಾರತದ ನಾಗರಿಕರೆಂದು ಸಾಬೀತಾದವರಿಗೆ ಮಾತ್ರ ‘ಖಾಯಂ ನಿವಾಸಿ’ ಪತ್ರ ಕೊಡಬೇಕೆಂದು ತಾವು ವಾದಿಸಿದ್ದೀರಿ. ಆದರೆ ಶೋಭಕ್ಕನವರೇ, ಭಾರತ ದೇಶದಲ್ಲಿ ಭಾರತದ ನಾಗರಿಕ ಎಂದು ಖಚಿತವಾಗಿ ಘೋಷಿಸುವ ಯಾವುದಾದರೂ ಒಂದು ಪ್ರಮಾಣ ಪತ್ರವಿದೆಯೇ? ತಾವು ಕೇಂದ್ರ ಮಂತ್ರಿಗಳು. ನಿಮ್ಮ ಪ್ರಧಾನಿಯನ್ನೇ ಕೇಳಿ ನೋಡಿ.
ನಿಮ್ಮ ಸರಕಾರವಂತೂ ಈವರೆಗೆ ನಾಗರಿಕತ್ವದ ಪುರಾವೆಯೆಂಬಂತಿದ್ದ ಪಾಸ್ ಪೋರ್ಟ್ ಕೂಡ ಕೇವಲ ಬಸ್ ಟಿಕೆಟ್ ಇದ್ದ ಹಾಗೆ ಪ್ರಯಾಣ ದಾಖಲೆ ಎಂದು ಹೇಳಿ ಬಿಟ್ಟಿದೆ. ಉಳ್ಳವರ ಪರಿಸ್ಥಿತಿಯೇ ಹೀಗಿರುವಾಗ, ಬಹುಸಂಖ್ಯಾತ ಬಡ-ದಮನಿತ-ಹಿಂದೂಗಳು ತಮ್ಮ ನಾಗರಿಕತ್ವ ಹೇಗೆ ಸಾಬೀತು ಮಾಡಿ ಕೊಳ್ಳುವುದು, ಶೋಭಕ್ಕ?
ಹೀಗಿರುವಾಗ ತಾವು ದಶಕಗಳಿಂದಲೂ ಭಾರತದಲ್ಲೇ ವಾಸ ಮಾಡುತ್ತಿದ್ದೇವೆ ಎಂಬ ಪುರಾವೆ ಬಿಟ್ಟರೆ ಈ ದೇಶದ ಮೂಲನಿವಾಸಿಗಳು ತಮ್ಮಂತಹ ವಲಸಿಗರು ನಿಗದಿಮಾಡುವ ವಸಾಹತುಶಾಹಿ ದಾಖಲೆಗಳನ್ನು ಎಲ್ಲಿಂದ ತರುತ್ತಾರೆ?
ನಿಮಗೆ ನಿಜಕ್ಕೂ ಹಿಂದೂ ದಿನಗೂಲಿ, ಹಿಂದೂ ರೈತ-ಕೂಲಿ, ಹಿಂದೂ ದೇವದಾಸಿ, ಹಿಂದೂ ಟ್ರಾನ್ಸ್ ಜೆಂಡರ್, ಹಿಂದೂ ವಲಸೆ ಕಾರ್ಮಿಕರ ಬದುಕಿನ ಕಿಂಚಿತ್ತು ಪರಿಚಯವಾದರೂ ಇದೆಯೇ? ನಿಮ್ಮದು ಭಾರತೀಯ ಜನತಾ ಪಕ್ಷವಲ್ಲ. ಹಿಂದೂ ಜನತಾ ಪಕ್ಷವೂ ಅಲ್ಲ. ನಿಮ್ಮದು ಕೇವಲ ಸವರ್ಣೀಯ ಉಳ್ಳವರ್ಗದ ಬ್ರಾಹ್ಮಣೀಯ ಪಕ್ಷ ಮಾತ್ರ ಎಂದು ಈ ಆರೋಪದ ಮೂಲಕ ಮತ್ತೊಮ್ಮೆ ಸಾಬೀತು ಪಡಿಸಿದ್ದೀರಿ.
ನಾಗರಿಕತ್ವ ಸಾಬೀತು ಮಾಡುವ ದಾಖಲೆಯನ್ನೇ ಸರಕಾರ ಕೊಡದಿರುವಾಗ, ಜನರು ಬಹುಕಷ್ಟದಿಂದ ಒದಗಿಸಬಹುದಾದ ಖಾಯಂ ನಿವಾಸ ದಾಖಲೆಯನ್ನು ಕೂಡ ನಾಗರಿಕತ್ವ ಸಾಬೀತಾಗದೆ ಒಪ್ಪಿಕೊಳ್ಳಬಾರದು ಎಂದು ವಾದಿಸುವುದು ಹಾಸ್ಯಾಸ್ಪದ, ಕುತರ್ಕ ಮತ್ತು ಕ್ರೌರ್ಯದ ಪರಮಾವಧಿಯಲ್ಲವೇ?
ಪಿಆರ್‌ಸಿ ಚುನಾವಣಾ ಆಯೋಗವೇ ಒದಗಿಸಿರುವ ಅವಕಾಶ
ಶೋಭಕ್ಕನವರೇ,
ವಾಸ್ತವದಲ್ಲಿ ಈ ಎಸ್‌ಐಆರ್ ಮಾಡುತ್ತಿರುವುದೇ ಜನರ ನಾಗರಿಕತ್ವವನ್ನು ಪರಿಶೀಲಿಸಲು. ಅದನ್ನು ಮಾಡುತ್ತಿರುವುದೇ ನಿಮ್ಮ ಸರಕಾರದ ಕೈಗೊಂಬೆಯಾಗಿರುವ ಕೇಂದ್ರ ಚುನಾವಣಾ ಆಯೋಗ.
ನಿಮ್ಮ ಕೇಂದ್ರ ಚುನಾವಣಾ ಆಯೋಗವೇ ತನ್ನ ನಿಯಮಗಳ ಭಾಗವಾಗಿ ಕೆಳಗಿನ 11 ದಾಖಲೆಗಳಲ್ಲಿ ಒಂದನ್ನು ಒದಗಿಸಿದರೆ ಅದು ಆ ವ್ಯಕ್ತಿಯನ್ನು ಮತದಾರ ಮತ್ತು ಆ ಮೂಲಕ ನಾಗರಿಕರೆಂದು ಸಾಬೀತು ಪಡಿಸುತ್ತದೆ ಎಂದು ಘೋಷಿಸಿದೆ.
ಆ ಹನ್ನೊಂದು ದಾಖಲೆಗಳ ಪಟ್ಟಿ ಹೀಗಿದೆ: 1) ಯಾವುದೇ ಕೇಂದ್ರ ಅಥವಾ ರಾಜ್ಯ ಸರಕಾರಗಳ ಅಥವಾ ಸರಕಾರಿ ಉದ್ದಿಮೆಗಳು ತಮ್ಮ ರೆಗ್ಯುಲರ್ ನೌಕರರಿಗೆ ನೀಡಿರುವ ಗುರುತು ಪತ್ರ, ಪೆನ್ಶನ್ ಆದೇಶ ಪತ್ರ
2) 1987ರ ಜುಲೈ 1ಕ್ಕೆ ಮುಂಚೆ ಸರಕಾರಗಳು, ಸ್ಥಳೀಯ ಆಡಳಿತ ಸಂಸ್ಥೆಗಳು, ಪೋಸ್ಟ್ ಆಫೀಸ್ ಅಥವಾ ಅಜೀವ ವಿಮಾ ನಿಗಮಗಳು, ಬ್ಯಾಂಕುಗಳು, ಭಾರತದಲ್ಲಿ ನೀಡಿರುವ ಯಾವುದೇ ದಾಖಲೆಗಳು, ಗುರುತು ಅಥವಾ ಪ್ರಮಾಣ ಪತ್ರಗಳು,
3) ಸಕ್ಷಮ ಪ್ರಾಧಿಕಾರವು ನೀಡಿರುವ ಜನನ ಪ್ರಮಾಣ ಪತ್ರ, 4) ಪಾಸ್ ಪೋರ್ಟ್, 5) ಅಧಿಕೃತ ಶಿಕ್ಷಣ ಪ್ರಾಧಿಕಾರ ಅಥವಾ ವಿಶ್ವವಿದ್ಯಾಲಯಗಳು ನೀಡಿರುವ ಎಸೆಸೆಲ್ಸಿ ಅಥವಾ ಇತರ ಪ್ರಮಾಣಿತ ದಾಖಲೆಗಳು
6) ರಾಜ್ಯಗಳ ಸಕ್ಷಮ ಪ್ರಾಧಿಕಾರವು ನೀಡಿರುವ ಶಾಶ್ವತ ವಾಸ ಪತ್ರ
7) ಅರಣ್ಯ ಹಕ್ಕು ಪ್ರಮಾಣ ಪತ್ರ
8) ಸಕ್ಷಮ ಪ್ರಾಧಿಕಾರವು ನೀಡಿರುವ ಯಾವುದೇ ಜಾತಿ ಪ್ರಮಾಣ ಪತ್ರ
9) ಎನ್‌ಆರ್‌ಸಿ ನಡೆದಿದ್ದರೆ ಅದರ ದಾಖಲೆ. (ಸದ್ಯಕ್ಕೆ ಅದು ಅಸ್ಸಾಮಿಗೆ ಮಾತ್ರ ಅನ್ವಯ)
10) ರಾಜ್ಯ ಸರಕಾರ ಅಥವಾ ಸ್ಥಳೀಯ ಸಂಸ್ಥೆಗಳು ಸಿದ್ಧಪಡಿಸಿರುವ ಕೌಟುಂಬಿಕ ದಾಖಲೆಗಳು
11) ಸರಕಾರವು ನೀಡಿರುವ ಯಾವುದೇ ಭೂಮಿ ಅಥವಾ ಮನೆ ದಾಖಲೆಗಳು
ಇದರಲ್ಲಿ 6 ಅಂಶವನ್ನು ಗಮನಿಸಿ:
ರಾಜ್ಯಗಳ ಸಕ್ಷಮ ಪ್ರಾಧಿಕಾರವು ನೀಡಿರುವ ಶಾಶ್ವತ ವಾಸ ಪತ್ರ. ಇಂಗ್ಲಿಷ್‌ನಲ್ಲಿ Permanent Residence Certificate issued by Competenat State Authority
ಅಂದರೆ:
1) ಈ ಶಾಶ್ವತ ವಾಸ ಪತ್ರವು ನಾಗರಿಕತ್ವ ಪುರಾವೆಯಲ್ಲಿ ಒಂದು ಮತ್ತು
2) ಅದನ್ನು ನೀಡುವುದು ರಾಜ್ಯ ಸರಕಾರಗಳ ಸಕ್ಷಮ ಪ್ರಾಧಿಕಾರ. ಕೇಂದ್ರ ಸರಕಾರವೂ ಅಲ್ಲ ಮತ್ತು ಅದನ್ನು ನೀಡುವುದು ನಾಗರಿಕತ್ವ ಸಾಬೀತಾದ ಮೇಲೂ ಅಲ್ಲ. ನಾಗರಿಕತ್ವ ಸಾಬೀತು ಮಾಡಲೆಂದೇ ಜನರಿಗೆ ರಾಜ್ಯ ಸರಕಾರಗಳು ಈ ದಾಖಲೆಯನ್ನು ಒದಗಿಸಬಹುದು ಎಂದು ಬಿಜೆಪಿ ನಿಯಂತ್ರಿತ, ಸುಪ್ರೀಂ ಅನುಮೋದಿತ ಆಯೋಗ ಸ್ಪಷ್ಟ ಪಡಿಸಿದೆ.
ಹೀಗಾಗಿ ಇದನ್ನು ಕರ್ನಾಟಕದ ಕಾಂಗ್ರೆಸ್ ಸರಕಾರ ಹೊಸದಾಗಿ ಮಾಡುತ್ತಿರುವುದಿಲ್ಲ.
(ಡಿಕೆಶಿ ಸರಕಾರ ಈ ಪ್ರಕ್ರಿಯೆಯಲ್ಲಿ ತೋರಿರುವ ಆಲಸ್ಯ ಮತ್ತು ಜಡತ್ವ ಬೇರೆ ರೀತಿಯದ್ದು. ಅದರಿಂದಾಗಿ ಈ ದಾಖಲೆಯೂ ಕೂಡ ನಿಜವಾಗಿ ಇಲ್ಲದವರ ಸಹಾಯಕ್ಕೆ ಬರುತ್ತದೆಯೇ ಎಂಬ ಪ್ರಶ್ನೆ ಇದೆ. ಆದರೆ ಅದು ಬೇರೆ ವಿಷಯ).
ಹೀಗಾಗಿ ಶಾಶ್ವತ ನಿವಾಸಿ ಪತ್ರದಿಂದ ನಾಗರಿಕರಲ್ಲದವರಿಗೆ ನಾಗರಿಕತ್ವ ಕೊಡುವ ಹುನ್ನಾರ ಎಂಬ ನಿಮ್ಮ ಆರೋಪವೇ ದುರುದ್ದೇಶದ್ದು. ನಿಮಗೆ ನಿಮ್ಮ ಆರೋಪದ ಬಗ್ಗೆ ನಿಜಕ್ಕೂ ಬದ್ಧತೆ ಇದ್ದರೆ ನೀವು ವಿರೋಧಿಸಬೇಕಿರುವುದು ಇದನ್ನು ಒಪ್ಪಿಕೊಂಡಿರುವ ಪ್ರಧಾನಿ ಮತ್ತು ಗೃಹಮಂತ್ರಿಗಳನ್ನು ಅರ್ಥಾತ್ ನಿಮ್ಮನ್ನೇ! ಮತ್ತು ನಿಮ್ಮ ಕೈಗೂಸಾದ ಕೇಂದ್ರ ಚುನಾವಣಾ ಆಯೋಗವನ್ನು.
ಅಷ್ಟು ಮಾತ್ರವಲ್ಲ. ಈ ಹನ್ನೊಂದು ದಾಖಲೆಗಳ ಪಟ್ಟಿಯಲ್ಲಿ ಇರುವುದು ಕೇವಲ ಶಾಶ್ವತ ನಿವಾಸಿ ಪತ್ರ ಮಾತ್ರವಲ್ಲ. ಬದಲಿಗೆ ರಾಜ್ಯ ಸರಕಾರಗಳೇ ಒದಗಿಸಬೇಕಿರುವ ಇನ್ನೂ ಐದು ದಾಖಲೆಗಳಿವೆ.
1) ರಾಜ್ಯ ಸರಕಾರಿ ಉದ್ಯೋಗಿಯಾಗಿದ್ದರೆ, 2) ಅಧಿಕೃತ ಶಿಕ್ಷಣ ಪ್ರಾಧಿಕಾರ ಅಥವಾ ವಿಶ್ವವಿದ್ಯಾಲಯಗಳು ನೀಡಿರುವ ಎಸೆಸೆಲ್ಸಿ ಅಥವಾ ಇತರ ಪ್ರಮಾಣಿತ ದಾಖಲೆಗಳು, 3) ಸಕ್ಷಮ ಪ್ರಾಧಿಕಾರವು ನೀಡಿರುವ ಯಾವುದೇ ಜಾತಿ ಪ್ರಮಾಣ ಪತ್ರ, ರಾಜ್ಯ ಸರಕಾರ ಅಥವಾ 4) ಸ್ಥಳೀಯ ಸಂಸ್ಥೆಗಳು ಸಿದ್ಧಪಡಿಸಿರುವ ಕೌಟುಂಬಿಕ ದಾಖಲೆಗಳು ಮತ್ತು 5) ಸರಕಾರವು ನೀಡಿರುವ ಯಾವುದೇ ಭೂಮಿ ಅಥವಾ ಮನೆ ದಾಖಲೆಗಳು..
ಇವೆಲ್ಲವನ್ನು ಕೊಡುವುದು ರಾಜ್ಯ ಸರಕಾರವೇ ಅಲ್ಲವೇ? ಇವೆಲ್ಲವನ್ನು ಕೊಡಬಹುದೆಂದು ಅವಕಾಶ ಕಲ್ಪಿಸಿಕೊಟ್ಟಿರುವುದು ಕೇಂದ್ರ ಚುನಾವಣಾ ಆಯೋಗವೇ ಅಲ್ಲವೇ? ಈ ದಾಖಲೆಗಳು ‘ಭಾರತೀಯ ನಾಗರಿಕತ್ವಕ್ಕೆ’ ಪರ್ಯಾಯವಾದ, ಎದುರಾಳಿಯಾದ ದಾಖಲೆಗಳು ಹೇಗಾಗುತ್ತವೆ?
ಹಾಗಿದ್ದಲ್ಲಿ ಬಿಜೆಪಿ ಶಾಸಿತ ರಾಜ್ಯಗಳಲ್ಲಿ ಎಸ್‌ಐಆರ್ ನಡೆದಾಗ ಅಲ್ಲಿನ ಬಡ ದಮನಿತ ಹಿಂದೂ ಸಮುದಾಯಗಳಿಗೂ ನೀವು ಈ ದಾಖಲೆಗಳನ್ನು ನೀಡಲಿಲ್ಲವೇ?
ಹೀಗಾಗಿ ಶೋಭಕ್ಕ ಮತ್ತು ಬಿಜೆಪಿ ಪಿಆರ್‌ಸಿ ಬಗ್ಗೆ ಮಾಡುತ್ತಿರುವ ಆರೋಪ ಹುರುಳಿಲ್ಲದ್ದು ಮತ್ತು ಹಾಸ್ಯಾಸ್ಪದ, ಕುತರ್ಕ ಪೂರಿತವಾದದ್ದು. ಅಷ್ಟು ಮಾತ್ರವಲ್ಲ. ಅಪಾಯಕಾರಿಯಾದದ್ದು ಕೂಡ. ಏಕೆಂದರೆ ಈ ಕುತರ್ಕವನ್ನೇ ಪ. ಬಂಗಾಳದಲ್ಲೂ ಬಿಜೆಪಿ ಬಳಸಿತ್ತು. ಅ ಮೂಲಕ ವಿಶೇಷವಾಗಿ ಮುಸ್ಲಿಮರಿಗೆ ಯಾವ ದಾಖಲೆಗಳು ಸಿಗದೆ ಮತಪಟ್ಟಿಯಿಂದ ಹೊರದಬ್ಬಲು ಯೋಜನೆ ಹೂಡಿತ್ತು. ಈ ನೆಪಕ್ಕೆ ಕಾಯುತ್ತಿದ್ದಂತೆ ಚುನಾವಣಾ ಆಯೋಗ ಸಹ ಬಿಜೆಪಿಯ ಆರೋಪಗಳನ್ನು ಯಥಾವತ್ ಒಪ್ಪಿಕೊಂಡು ಬಿಟ್ಟಿತ್ತು.
ಪ. ಬಂಗಾಳದ ಜನಸ್ನೇಹಿ ಪಿಆರ್‌ಸಿ ನಿರ್ಬಂಧಿಸಿ ಇಸಿಐ ಕೊಟ್ಟ ಆದೇಶಗಳು!
ಪ. ಬಂಗಾಳದಲ್ಲಿ ಮೋದಿ ಸರಕಾರ ಚುನಾವಣಾ ಆಯೋಗದ ಮೂಲಕ ದುರುದ್ದೇಶದ ಎಸ್‌ಐಆರ್ ಅನ್ನು ಬಿಹಾರದಲ್ಲಿ ಪ್ರಾರಂಭಿಸಿದಾಗಲೇ ಎಚ್ಚೆತ್ತುಕೊಂಡ ಪ. ಬಂಗಾಳದ ಟಿಎಂಸಿ ಸರಕಾರ 2025ರ ಜುಲೈನಲ್ಲೇ ಪ. ಬಂಗಾಳದ ಜನರಿಗೆ Domicile ದಾಖಲೆ ಕೊಡುವುದನ್ನು ಸರಳೀಕರಿಸಬೇಕೆಂದು ಮತ್ತು ಜನರನ್ನು ಸತಾಯಿಸದೆ ದಾಖಲೆಗಳನ್ನು ಕೊಡಬೇಕೆಂದು ಆದೇಶ ಹೊರಡಿಸಿತ್ತು.
ಆ ನಂತರ ಪ. ಬಂಗಾಳದಲ್ಲಿ ಎಸ್‌ಐಆರ್ ಪ್ರಾರಂಭವಾದಾಗ ಜಿಲ್ಲಾಡಳಿತವು Domicile ದಾಖಲೆಗಳನ್ನು ಕೊಡುತ್ತಿದ್ದಂತೆ ಪ. ಬಂಗಾಳದ ವಿರೋಧ ಪಕ್ಷ ಬಿಜೆಪಿಯು ಯಾವ ಕಾರಣಕ್ಕೂ 2025ರ ಜುಲೈ ನಂತರದಲ್ಲಿ ನೀಡಲಾದ ಡೊಮೈಸೈಲ್ ದಾಖಲೆ (ಪಿಆರ್‌ಆಸಿ) ಒಪ್ಪಿಕೊಳ್ಳಬಾರೆದೆಂದು ಆಗ್ರಹಿಸಿತು.
ಅದನ್ನು ಕೂಡಲೇ ಒಪ್ಪಿಕೊಂಡ ಚುನಾವಣಾ ಆಯೋಗ 2025ರ ಜುಲೈ ನಂತರ ಕೊಟ್ಟ ಪಿಆರ್‌ಆಸಿಯನ್ನು ವಿಶೇಷವಾಗಿ ವರ್ಗೀಕರಿಸಿ ತಿರಸ್ಕರಿಸಲು ಪ್ರಾರಂಭಿಸಿತು.
ಆ ನಂತರ ಕೇಂದ್ರ ಚುನಾವಣಾ ಆಯೋಗ ಡೊಮೈಸೈಲ್ ದಾಖಲೆಯನ್ನೇ ಸಂಪೂರ್ಣವಾಗಿ ನಿರಾಕರಿಸಿತಲ್ಲದೆ ಈ ಹಿಂದೆ ಆ ದಾಖಲೆ ಕೊಟ್ಟವರಿಗೂ ಮತ್ತೆ ನೋಟಿಸನ್ನು ನೀಡಿತು. ಆಗ ಅದರ ವಿರುದ್ಧ ಮಮತಾ ಬ್ಯಾನರ್ಜಿ ಸರಕಾರ ಬೀದಿಬೀದಿಯಲ್ಲಿ ದೊಡ್ಡ ಹೋರಾಟ ನಡೆಸಿದ ನಂತರ ಚುನಾವಣಾ ಆಯೋಗ ಆ ದಾಖಲೆಯನ್ನು ಅಂಗೀಕರಿಸಲು ಒಪ್ಪಿಕೊಂಡಿತು. ಆದರೆ ಹಲವು ಕಠಿಣ ಷರತ್ತುಗಳನ್ನು ಸೇರಿಸಿತು.
ಡೊಮೈಸೈಲ್ ದಾಖಲೆಗೆ ಸಂಬಂಧಪಟ್ಟಂತೆ ಪ. ಬಂಗಾಳದ 1999ರ ನವಂಬರ್ 2ರ ಆದೇಶ ಕೆಳಗಿನ ವಿಳಾಸದಲ್ಲಿದೆ:
https://wbxpress.com/guidelines-issue-domicile-certificate-non-bengali/
ಈ ಆದೇಶವು ಸ್ಪಷ್ಟಪಡಿಸುವಂತೆ Domicile certificate ಪಡೆದುಕೊಳ್ಳುವ ಅರ್ಹತೆಗಳು ಸೀಮಿತವಾಗಿದೆ ಮತ್ತು ಈ ದಾಖಲೆಗಳಾಚೆ ಪ್ರತಿಯೊಬ್ಬ ಅರ್ಜಿದಾರನ ನಾಗರಿಕತೆ ಮತ್ತು ಪೊಲೀಸ್ ಪರಿಶೀಲನೆಯೂ ಆಗಬೇಕೆಂದು ಕಡ್ಡಾಯಗೊಳಿಸುತ್ತದೆ.
ಈ ವಿಷಯದ ಬಗ್ಗೆ ಇಸಿಐ ಫೆಬ್ರವರಿ 8ರಂದು ನೀಡಿದ ಅಂತಿಮ ಆದೇಶದಲ್ಲಿ
1) ಪ. ಬಂಗಾಳದ Domicile ದಾಖಲೆಯು 1999ರ ನವೆಂಬರ್ 2ರ ಆದೇಶದಂತೆ ಮಾತ್ರವಿರಬೇಕು. 2) ಅದನ್ನು ಸಕ್ಷಮ ಪ್ರಾಧಿಕಾರ ಮಾತ್ರ ನೀಡಿರಬೇಕು. 3) ಮತ್ತು ಅದರಲ್ಲಿ ನಿಗದಿ ಮಾಡಿರುವ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಪೂರೈಸಲಾಗಿದೆ ಎಂದು ಖಾತರಿ ಪಡಿಸಿಕೊಂಡ ನಂತರವೇ ಇಆರ್‌ಒ ಅದನ್ನು ಮಾನ್ಯ ಮಾಡಬೇಕು.
ಅದನ್ನು ಪರಿಶೀಲಿಸುವ ಜವಾಬ್ದಾರಿಯನ್ನು Micro Observersಗಳಿಗೆ ನೀಡಲಾಯಿತು. ಅಂದರೆ ಪ. ಬಂಗಾಳ ಸರಕಾರ ಮಾಡಿದ ಸರಳೀಕರಣ ಮತ್ತು ಅದನ್ನು ಆಧರಿಸಿ ನೀಡಿದ ದಾಖಲೆಯನ್ನು ಇಸಿಐ ಮಾನ್ಯ ಮಾಡಲಿಲ್ಲ.
ಈಗ ಕರ್ನಾಟಕದಲ್ಲಿ ಡಿಕೆಶಿ ಸರಕಾರ ಖಾಯಂ ನಿವಾಸಿ ದಾಖಲೆಯ ನಿಯಮಗಳನ್ನು ಸರಳೀಕರಿಸಿ ಅದೇಶ ಹೊರಡಿಸಿದೆ. ಇಲ್ಲಿಯೂ ಬಿಜೆಪಿ ಪ. ಬಂಗಾಳದ ರೀತಿಯ ಅಪಪ್ರಚಾರವನ್ನು ಪ್ರಾರಂಭಿಸಿದೆ.
ಕರ್ನಾಟಕದ ಪಿಆರ್‌ಸಿ ಜನಸ್ನೇಹಿ -ಆದರೆ ಆಯೋಗ ಮಾನ್ಯ ಮಾಡುವುದೇ?
ಕರ್ನಾಟಕದ ಸರಕಾರ ಹೊರಡಿಸಿರುವ ಹೊಸ ಪಿಆರ್‌ಸಿ ಮಾರ್ಗಸೂಚಿಯಲ್ಲಿ ಶಾಶ್ವತ ನಿವಾಸಿ ಎಂದು ಸಾಬೀತು ಪಡಿಸಲು ಕರ್ನಾಟಕದಲ್ಲಿ ಕನಿಷ್ಠ ಹತ್ತು ವರ್ಷ ವಾಸ ಅಥವಾ ಹತ್ತು ವರ್ಷ ಶಾಲಾ ಅಧ್ಯಯನ, ರಾಜ್ಯದಲ್ಲಿ ಸ್ಥಿರಾಸ್ತಿ ಇತ್ಯಾದಿಗಳ ಮಾನದಂಡಗಳನ್ನು ವಿಧಿಸಿದರೂ ಅದನ್ನು ಸಾಬೀತು ಪಡಿಸಲು ಆಧಾರ್, ಪಡಿತರ ಚೀಟಿ, ಕಂದಾಯ ಇಲಾಖೆ ದಾಖಲೆಗಳು, ಮತಪಟ್ಟಿ ಇತ್ಯಾದಿಗಳು ಸಾಕು ಎನ್ನುವ ನಿಯಮ ಸೇರಿಸಿದೆ.
ಮಾತ್ರವಲ್ಲದೆ ಇವುಗಳ ಜೊತೆಗೆ ಪರಿಶೀಲನೆ ಮಾಡುವ ಅಧಿಕಾರಿಗಳು ಸ್ಥಳೀಯ ವಿಚಾರಣೆ ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ವರದಿಯನ್ನು ಪಡೆದುಕೊಳ್ಳಬಹುದಾದ ಅವಕಾಶಗಳನ್ನು ಸೇರಿಸಿದೆ. ಅಲ್ಲದೆ ಮೌಖಿಕ ಸಾಕ್ಷ್ಯಗಳನ್ನು ಒಂದು ಪುರಾವೆಯಾಗಿ ಒಪ್ಪಿಕೊಂಡಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಯಾವುದೋ ಒಂದು ದಾಖಲೆ ಇಲ್ಲದ ಕಾರಣಕ್ಕೆ ಅರ್ಜಿಯನ್ನು ತಿರಸ್ಕರಿಸಬಾರದೆಂಬ ನಿಯಮವನ್ನು ಸೇರಿಸಿ ಹೆಚ್ಚು ಒಳಗೊಳ್ಳುವ ಅವಕಾಶವನ್ನು ನಿರ್ಮಿಸಿದೆ. ಅರ್ಜಿ ತಿರಸ್ಕಾರಕ್ಕೆ ಸೂಕ್ತ ಲಿಖಿತ ಕಾರಣವನ್ನು ಒದಗಿಸಬೇಕೆಂದು ಕಡ್ಡಾಯಗೊಳಿಸಿ ಅಧಿಕಾರಿಗಳ ಉತ್ತರದಾಯಿತ್ವವನ್ನೂ ಕೂಡ ಖಾತರಿ ಪಡಿಸುವ ಅವಕಾಶವನ್ನು ಕಲ್ಪಿಸಿದೆ.
ಹೀಗಾಗಿ ಈ ಹೊಸ ನಿಯಮಗಳು ಮೊದಲಿಗಿಂತ ಹೆಚ್ಚು ಜನಸ್ನೇಹಿ ಎಂಬುದರಲ್ಲಿ ಸಂಶಯವಿಲ್ಲ.
ಆದರೆ ಇಷ್ಟು ಸರಳೀಕೃತ ಮತ್ತು ಒಳಗೊಳ್ಳುವ ಪ್ರಕ್ರಿಯೆಯಿಂದ ಪಡೆದುಕೊಳ್ಳುವ ಖಾಯಂ ವಾಸ ದಾಖಲೆ, ಹೆಚ್ಚೆಚ್ಚು ಜನರನ್ನು ಹೊರದಬ್ಬುವ ಉದ್ದೇಶದಿಂದಲೇ ರೂಪುಗೊಂಡಿರುವ ಎಸ್‌ಐಆರ್ ಪ್ರಕ್ರಿಯೆಗೆ ಅರ್ಹತಾ ದಾಖಲೆಯಾಗುವುದೇ?
ಮೇಲಾಗಿ ಈ ಹೊಸ ನಿಯಮವನ್ನು ರೂಪಿಸುವಾಗ ಕರ್ನಾಟಕ ಸರಕಾರ ಅದನ್ನು ವಿಶೇಷವಾಗಿ ಮತ್ತು ಸೀಮಿತವಾಗಿ ಎಸ್‌ಐಆರ್ ಅಗತ್ಯಗಳಿಗಾಗಿಯೇ ಮಾಡಿರುವ ತಿದ್ದುಪಡಿಎಂದು ಪರೋಕ್ಷವಾಗಿ ಇಂಗಿತ ವ್ಯಕ್ತಪಡಿಸಿದೆ. ಹೀಗಾಗಿ ಕರ್ನಾಟಕದಲ್ಲೂ ಹೊಸ ಪಿಆರ್‌ಸಿ ನಿಯಮಗಳು ಮೊದಲಿಗಿಂತ ಹೆಚ್ಚು ಜನ ಸ್ನೇಹಿಯಾದರೂ ಇಸಿಐ ಸ್ನೇಹಿ ಮತ್ತು ಎಸ್‌ಐಆರ್ ಮಾನ್ಯವಾಗುವುದು ಕಷ್ಟ.
ಇಸಿಐ ವಿಧಿಸಿದ ನಿಬಂಧನೆಗಳಿಗೆ ಕರ್ನಾಟಕ ಸರಕಾರ ಮಾಡುವ ತಿದ್ದುಪಡಿಗಳನ್ನು ಆಯೋಗ ಒಪ್ಪಿಕೊಳ್ಳಬೇಕಿಲ್ಲ. ಪ. ಬಂಗಾಳದಲ್ಲಿ ಮಾಡಿದಂತೆ ಅವನ್ನು ತಿರಸ್ಕರಿಸಬಹುದು ಅಥವಾ ತನ್ನದೇ ಆದ ಷರತ್ತುಗಳನ್ನು ರೂಪಿಸಿ ತನ್ನ ಅಧಿಕಾರಿಗಳ ಪ್ರತ್ಯೇಕ ವಿಚಕ್ಷಣೆಗೆ ಒಪ್ಪಿಸಿ ಇನ್ನಷ್ಟು ಕಠಿಣಗೊಳಿಸಬಹುದು.
ಕರ್ನಾಟಕ ಸರಕಾರದ ಹೊಸ ಪಿಆರ್‌ಸಿ ನಿಯಮಗಳ ಬಗ್ಗೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು ಈಗಾಗಲೇ ಏನೂ ಹೇಳಲಾಗದು ಎಂಬ ಕೊಕ್ಕೆ ಇಟ್ಟಿದ್ದಾರೆ.
ಅಧಿಕಾರ ತೊರೆದು ಆಯೋಗದ ವಿರುದ್ಧ ಸಮರಕ್ಕೆ ಕಾಂಗ್ರೆಸ್ ಸಿದ್ಧವೇ?
ಇದರ ಹಿಂದೆಯೂ ಒಂದು ಕುತಂತ್ರ ಇರುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಆಗಸ್ಟ್ 5ರಂದು ಮತದಾರರ ಮೊದಲ ಕರಡು ಪಟ್ಟಿ ಪ್ರಕಟವಾಗುತ್ತದೆ. ಆನಂತರ ಸೆಪ್ಟಂಬರ್ 5ರ ಒಳಗೆ ತಕರಾರು ಮತ್ತು ದಾಖಲೆಗಳನ್ನು ಸಲ್ಲಿಸಿ ಸಮಜಾಯಿಷಿ ಕೊಡುವ ಅವಧಿ. ಮುಖ್ಯ ಚುನಾವಣಾಧಿಕಾರಿಗಳು ಆಗಸ್ಟ್ 5ರ ನಂತರ ಪಿಆರ್‌ಸಿ ದಾಖಲೆ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರೆ ಅದನ್ನೇ ನಂಬಿಕೊಂಡ ಮತದಾರರು-ರೈತರು, ಕೂಲಿಗಳು, ದಿನಗೂಲಿಗಳು ಹೊಸ ದಾಖಲೆಗಳನ್ನು ಮತ್ತೊಂದು ತಿಂಗಳಲ್ಲಿ ಜೋಡಿಸಲು ಸಾಧ್ಯವೇ? ಹೀಗಾಗಿ ಹೆಚ್ಚೆಚ್ಚು ಜನರನ್ನು ಹೊರದಬ್ಬಲೆಂದೇ ಚುನಾವಣಾಧಿಕಾರಿಗಳು ಯೋಜಿತ ಮೌನ ಅನುಸರಿಸುತ್ತಿರುವರೇ?
ಒಂದು ವೇಳೆ ಅದೇ ನಿಜವಾದಲ್ಲಿ ಕಾಂಗ್ರೆಸ್ ಸರಕಾರ ಮತ್ತು ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗದ ವಿರುದ್ಧ ಸಂವಿಧಾನಾತ್ಮಕ ಸಮರ ಸಾರುವುದೇ? ಅಧಿಕಾರ ಕಳೆದುಕೊಂಡರೂ ಪರವಾಗಿಲ್ಲವೆಂದು ಜನರನ್ನು ಮತ್ತು ಗಣರಾಜ್ಯವನ್ನು ರಕ್ಷಿಸಲು ಆಯೋಗದೊಂದಿಗೆ ಅಸಹಕಾರ ಘೋಷಿಸಬಲ್ಲದೇ? ಸಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಸಿ ಸಂವಿಧಾನ ಉಳಿಸಲು ಸಮರಕ್ಕೆ ಮುಂದಾಗುವುದೇ?