ಮಿಜೋ ಜನರ ಮಧ್ಯೆ

ಮಿಜೋರಾಂನ ನನ್ನ ಪ್ರವಾಸ, ಅದರ ಇತಿಹಾಸ ಮತ್ತು ಅಲ್ಲಿನ ಜನಸಮುದಾಯದ ಮೂಲಕ ಮಾತ್ರವೇ ನಾನು ತಿಳಿದಿದ್ದ ರಾಜ್ಯದ ಜನರ ಕುರಿತ ನನ್ನ ಗೌರವಭಾವನೆಯನ್ನು ಇನ್ನಷ್ಟು ಹೆಚ್ಚಿಸಿತು. ದುರಂತವೆಂದರೆ, ಸಾಮಾನ್ಯವಾಗಿ ಈಶಾನ್ಯದ ಇತರ ರಾಜ್ಯಗಳಂತೆಯೆ ಮಿಜೋರಾಂಗೆ ಗಣರಾಜ್ಯದಲ್ಲಿ ಇರುವುದು ತೀರಾ ಕಡಿಮೆ ಮಟ್ಟದ ಪರಿಗಣನೆ. ಈ ಪ್ರದೇಶವನ್ನು ದಿಲ್ಲಿಯ ಸರಕಾರಗಳು ನಿರಾಕರಣೆ ಮತ್ತು ನಿರ್ಲಕ್ಷ್ಯದ ಧೋರಣೆಯಿಂದಲೇ ನೋಡುತ್ತವೆ. ಭಾಗಶಃ ಅಥವಾ ಹೆಚ್ಚಾಗಿ ಇದು ಕಡಿಮೆ ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಆದರೂ ಮುಖ್ಯಭೂಮಿ ಎಂದು ಕರೆಯಲ್ಪಡುವ ನಾವು ಮಿಜೋ ಜನರಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಅವರ ಸಮುದಾಯದ ಮನೋಭಾವ, ಸೋಲು ಮತ್ತು ಹತಾಶೆಯಿಂದ ಚೇತರಿಸಿಕೊಳ್ಳುವ ಅವರ ಸಾಮರ್ಥ್ಯ, ಅವರು ಜಾತಿ ಪೂರ್ವಾಗ್ರಹವನ್ನು ಮೀರಿರುವುದು ಮತ್ತು ಮಿಜೋ ಮಹಿಳೆಯರ ಉನ್ನತ ಸ್ಥಾನಮಾನ, ಅವರ ಜೀವನ ಪ್ರೀತಿ ಮತ್ತು ಸಂಗೀತಪ್ರೇಮ ಇವೆಲ್ಲದರಲ್ಲೂ ನಮಗೆ ಪಾಠಗಳಿವೆ.

Update: 2024-04-07 04:45 GMT

ಕಳೆದ ತಿಂಗಳು ಹಲವಾರು ದಿನಗಳ ಕಾಲ ನಾನು ಮಿಜೋರಾಂನಲ್ಲಿದ್ದೆ. ಅಲ್ಲಿನ ರಾಜಕೀಯ ಇತಿಹಾಸ ಸ್ವಲ್ಪ ಗೊತ್ತಿತ್ತಾದರೂ, ಹಲವಾರು ಮಿಜೋ ಜನರನ್ನು ಭೇಟಿಯಾಗಿದ್ದೇನಾದರೂ, ಮೊದಲೆಂದೂ ಅಲ್ಲಿಗೆ ಹೋಗಿರಲಿಲ್ಲ.

ಮೊದಲು ಗುವಾಹಟಿಗೆ ಹೋಗಿ, ಅಲ್ಲಿ ಕೆಲವು ಹಳೆಯ ಸ್ನೇಹಿತರನ್ನು ಕಂಡೆ. ವಿಶ್ವವಿದ್ಯಾನಿಲಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಗಾಂಧಿ ಕುರಿತು ಮಾತನಾಡಿದೆ. ಐಜ್ವಾಲ್ ವಿಮಾನದಲ್ಲಿ ನಾನು ಸಹಜವಾಗಿಯೇ ಕಿಟಕಿಯ ಪಕ್ಕದ ಸೀಟನ್ನು ಆರಿಸಿಕೊಂಡಿದ್ದೆ. ವಿಮಾನ ಮೋಡಗಳನ್ನು ಭೇದಿಸುತ್ತ ಹಾರಿ ನೆಲಕ್ಕಿಳಿಯುವ ಮೊದಲು ಬೆಟ್ಟಗಳ ಹತ್ತಿರ ಅಪಾಯಕಾರಿಯಾಗಿ ಹಾರುವುದನ್ನು ಗಮನವಿಟ್ಟು ನೋಡಿದೆ. ವಿಮಾನ ನಿಲ್ದಾಣದಲ್ಲಿ ಬ್ರಿಟಿಷ್ ರಾಜ್ ಕಾಲದ ವ್ಯವಸ್ಥೆಯಾದ ‘ಇನ್ನರ್ ಲೈನ್ ಪರ್ಮಿಟ್’ ಪಡೆಯಬೇಕಿತ್ತು.

ದೇಶದೊಳಗಿನ ಇಂಥ ಪ್ರದೇಶಗಳನ್ನು ನೋಡಲು ವಿಮಾನಕ್ಕಿಂತ ರೈಲು ಪ್ರಯಾಣ ಒಳ್ಳೆಯದು. ಆದರೆ ಕಾರಿನಲ್ಲಿ ಪ್ರಯಾಣಿಸುವುದು ಬಹುಶಃ ಇನ್ನೂ ಉತ್ತಮ. ಲೆಂಗ್‌ಪುಯಿ ವಿಮಾನ ನಿಲ್ದಾಣದಿಂದ ರಾಜ್ಯದ ರಾಜಧಾನಿ ಐಜ್ವಾಲ್‌ಗೆ ಒಂದೂವರೆ ಗಂಟೆಗಳ ಪ್ರಯಾಣ. ಅಲ್ಲಿನ ಸೊಗಸನ್ನು ನೋಡಲು ಬೇಕಾದಷ್ಟು ಸಮಯ ಸಿಕ್ಕಂತಾಯಿತು. ಆ ಬೆಟ್ಟಗಳ ಸ್ವರೂಪ, ನಾನು ಹುಟ್ಟಿ ಬೆಳೆದಿದ್ದ, ಮೊದಲು ಉತ್ತರ ಪ್ರದೇಶದಲ್ಲಿದ್ದ ಮತ್ತು ಈಗ ಉತ್ತರಾಖಂಡದ ಭಾಗವಾಗಿರುವ ಜಿಲ್ಲೆಯನ್ನು ನೆನಪಿಸಿತು. ಅಲ್ಲಿನಂತೆಯೇ ಕಿರಿದಾದ ಮತ್ತು ಅಂಕುಡೊಂಕಾದ ರಸ್ತೆಗಳು ಮತ್ತು ವೇಗವಾಗಿ ಹರಿಯುವ ತೊರೆಗಳಿದ್ದವು. ಸಾಕಷ್ಟು ಬಿದಿರು, ಸಾಕಷ್ಟು ಪ್ರಮಾಣದ ಪತನಶೀಲ ಮರಗಳಿದ್ದ ಸಸ್ಯವರ್ಗ ಸ್ವಲ್ಪ ವಿಭಿನ್ನವಾಗಿತ್ತು. ಆದರೆ ಉತ್ತರಾಖಂಡದಲ್ಲಿ ಶಂಕುಗಳು ಮತ್ತು ನಿತ್ಯಹರಿದ್ವರ್ಣ ಎಲೆಗಳನ್ನು ಹೊಂದಿರುವ ಮರಗಳ ಜಾತಿಯಿಲ್ಲ. ಜನರೂ ಇಲ್ಲಿ ವಿರಳ.

ಐಜ್ವಾಲ್ ಪಟ್ಟಣದಲ್ಲಿ ಪ್ರತೀ ಬೆಟ್ಟದ ಪ್ರತಿಯೊಂದು ಹಂತದಲ್ಲೂ ಒಂದರ ಪಕ್ಕದಲ್ಲೊಂದರಂತೆ ಮನೆಗಳಿದ್ದು, ನೈನಿತಾಲ್ ಮತ್ತು ಮಸ್ಸೂರಿಯನ್ನು ನೆನಪಿಗೆ ತರುತ್ತದೆ. ಆದರೂ, ಸಂಚಾರ ವ್ಯವಸ್ಥೆ ಉತ್ತರ ಬೆಟ್ಟದ ಪಟ್ಟಣಕ್ಕಿಂತ ಗಮನಾರ್ಹವಾಗಿ ಹೆಚ್ಚು ವ್ಯವಸ್ಥಿತವಾಗಿತ್ತು. ಚಾಲಕರು ಕಟ್ಟುನಿಟ್ಟಾಗಿ ಲೇನ್ ಶಿಸ್ತನ್ನು ಅನುಸರಿಸುತ್ತಿದ್ದರು. ವಾಹನ ದಟ್ಟಣೆ ನಡುವೆ ಕಾಯುತ್ತಿದ್ದರು.

ನಾನು ಐಜ್ವಾಲ್‌ಗೆ ಹೋಗಿದ್ದುದು 1958ರಲ್ಲಿ ಸ್ಥಾಪಿಸಲಾದ ಮತ್ತು ರಾಜ್ಯದ ಅತ್ಯಂತ ಹಳೆಯ ಸಂಸ್ಥೆಯಾದ ಪಚುಂಗಾ ವಿಶ್ವವಿದ್ಯಾನಿಲಯ ಕಾಲೇಜು ಆಯೋಜಿಸಿದ್ದ ಸೆಮಿನಾರ್‌ಗಾಗಿ. ಕಾಲೇಜು ಅನೇಕ ಹುಡುಗಿಯರು ಮತ್ತು ಹುಡುಗರನ್ನು ಹೊಂದಿದೆ. ಉತ್ತರ ಪ್ರದೇಶದ ಕೆಲವು ಹಿಂದೂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಅಥವಾ ಕೇರಳದ ಕೆಲವು ಇಸ್ಲಾಮಿಕ್ ಪ್ರಾಬಲ್ಯದ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಸಾಧ್ಯವಿರದ ರೀತಿಯಲ್ಲಿ ಅಲ್ಲಿ ಹುಡುಗ-ಹುಡುಗಿಯರು ಮುಕ್ತವಾಗಿ ಬೆರೆಯುತ್ತಾರೆ. ತಾಂತ್ರಿಕ ಸಹ ಶಿಕ್ಷಣ ಸಂಸ್ಥೆಗಳಲ್ಲಿಯೂ ಇಂಥದೇ ವಾತಾವರಣ ಇದೆಯೇ ಎಂದು ತಿಳಿಯಲು ನಾನು ಆ ಭಾಗಗಳ ಕಾಲೇಜುಗಳೊಂದಿಗೆ ಮಾತನಾಡಿದೆ.

ಈ ನಿಟ್ಟಿನಲ್ಲಿ, ಪಚುಂಗಾ ವಿಶ್ವವಿದ್ಯಾನಿಲಯ ಕಾಲೇಜು ಸಂಪೂರ್ಣ ರಾಜ್ಯವನ್ನು ಪ್ರತಿನಿಧಿಸುವಂತಿತ್ತು. ಬೀದಿಗಳಲ್ಲಿ ನಡೆಯುವುದು, ಅಂಗಡಿಗಳಿಗೆ ಹೋಗುವುದು, ಕೆಫೆಗಳಲ್ಲಿ ಹರಟೆ ಹೊಡೆಯುವುದು ಈ ರಾಜ್ಯದ ಮಹಿಳೆಯರ ಪ್ರಗತಿಗೆ ಸಾಕ್ಷಿ. ಅಂಕಿಅಂಶಗಳನ್ನು ಗಮನಿಸಿದರೆ, ಮಿಜೋರಾಂ ಭಾರತದ ಎಲ್ಲಾ ರಾಜ್ಯಗಳಲ್ಲಿ ಎರಡನೇ ಅತಿ ಹೆಚ್ಚು ಮಹಿಳಾ ಸಾಕ್ಷರತೆಯನ್ನು ಹೊಂದಿದೆ ಮತ್ತು ಇಲ್ಲಿ ಮಹಿಳಾ ಉದ್ಯೋಗಿಗಳೂ ಅತ್ಯಧಿಕ ಪ್ರಮಾಣದಲ್ಲಿದ್ದಾರೆ. ಸುಮಾರು ಶೇ.60ರಷ್ಟು ಮಿಜೋ ಮಹಿಳೆಯರು ಮನೆಯ ಹೊರಗೆ ಕೆಲಸ ಮಾಡುತ್ತಾರೆ. ಇದು ಇಡೀ ದೇಶದಲ್ಲಿರುವುದಕ್ಕಿಂತ ಎರಡು ಪಟ್ಟು ಹೆಚ್ಚು. ದೇಶದಲ್ಲಿ ಈ ಪ್ರಮಾಣ ಶೇ.30ಕ್ಕಿಂತ ಕಡಿಮೆ ಇದೆ. ಮಿಜೋ ಮಹಿಳೆಯರು ಭಾರತದಲ್ಲಿ ಬೇರೆಡೆ ಇರುವ ಮಹಿಳೆಯರಿಗಿಂತ ಉತ್ತಮ ಸಂಬಳದ ಅಥವಾ ಹೆಚ್ಚು ಜವಾಬ್ದಾರಿಯುತ ಉದ್ಯೋಗಗಳಲ್ಲಿ ಕೆಲಸ ಮಾಡುವುದು ಜಾಸ್ತಿ. 2022ರ ಜುಲೈನ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಉಲ್ಲೇಖಿಸಿದಂತೆ, ಮಿಜೋರಾಂನಲ್ಲಿ ಶಾಸಕರು, ಹಿರಿಯ ಅಧಿಕಾರಿಗಳು ಮತ್ತು ಮ್ಯಾನೇಜರ್‌ಗಳಾಗಿ ಕೆಲಸ ಮಾಡುವ ಮಹಿಳೆಯರ ಅನುಪಾತ ಅತಿ ಹೆಚ್ಚು ಅಂದರೆ ಶೇ.70.9ರಷ್ಟಿದೆ. ನಂತರದ ಸ್ಥಾನಗಳಲ್ಲಿ ಸಿಕ್ಕಿಂ (ಶೇ. 48.2) ಮತ್ತು ಮಣಿಪುರ (ಶೇ.45.1) ಬರುತ್ತವೆ.

ಮಿಜೋ ಜನರ ಸಾಮಾಜಿಕ ಪ್ರಗತಿ ಹಲವು ವಿಧಗಳಲ್ಲಿ ಗಮನಾರ್ಹವಾಗಿದೆ. ಅದು ಅಲ್ಲಿನ ಭೌಗೋಳಿಕ ಪ್ರತ್ಯೇಕತೆಗೆ ವಿರುದ್ಧವಾಗಿದೆ ಮತ್ತು ಬಂಡುಕೋರರು ಮತ್ತು ರಾಜ್ಯದ ನಡುವಿನ ಅನೇಕ ವರ್ಷಗಳ ಘೋರ ಹಿಂಸಾಚಾರದ ಹೊರತಾಗಿಯೂ ಅದು ಸಾಧ್ಯವಾಗಿದೆ. ಐಜ್ವಾಲ್ ಸಂಪೂರ್ಣವಾಗಿ ಶಾಂತಿಯುತ ಪಟ್ಟಣವಾಗಿದೆ. ಒಮ್ಮೆ ಭಾರತೀಯ ವಾಯುಪಡೆಯಿಂದ ದಾಳಿಗೊಳಗಾದ ದೇಶದ ಮೊದಲ ವಸತಿ ಸ್ಥಳವಾಗಿತ್ತೆಂಬುದನ್ನೂ ಮರೆಸುವಂತಿದೆ.

ಅದು 1966ರಲ್ಲಿ ಘಟಿಸಿತು. ಸಶಸ್ತ್ರ ಗುಂಪಾದ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್), ಭಾರತ ಸರಕಾರದ ವಿರುದ್ಧ ದಂಗೆಗೆ ಮುಂದಾದಾಗಿನ ಬೆಳವಣಿಗೆ ಅದಾಗಿತ್ತು. ಲಾಲ್ಡೆಂಗಾ ಎಂಬ ಒಂದು ಕಾಲದಲ್ಲಿ ಅಕೌಂಟೆಂಟ್ ಆಗಿದ್ದ ವ್ಯಕ್ತಿ ಅದರ ನೇತೃತ್ವ ವಹಿಸಿದ್ದರು. ಅವರು ಕೆಲ ವರ್ಷಗಳ ಹಿಂದೆ ಮಿಜೋ ಗುಡ್ಡಗಾಡಿನಲ್ಲಿನ ತೀವ್ರ ಬರದಿಂದ ಸಂಕಷ್ಟಕ್ಕೆ ಒಳಗಾದವರಾಗಿದ್ದರು. ವ್ಯಾಪಕವಾದ ಹಸಿವಿನ ಆ ಸ್ಥಿತಿಗೆ ದಿಲ್ಲಿ ಸರಕಾರದಿಂದ ಸರಿಯಾದ ಸ್ಪಂದನೆ ಸಿಕ್ಕಿರಲಿಲ್ಲ. ಆಗ, ಭಾರತದಲ್ಲಿ ಗೌರವಪೂರ್ಣ ಭವಿಷ್ಯದ ನಿರೀಕ್ಷೆಯಿಲ್ಲ ಎಂದು ಯೋಚಿಸಿದ ಲಾಲ್ಡೆಂಗಾ, ಪೂರ್ವ ಪಾಕಿಸ್ತಾನದ ಮಿಲಿಟರಿ ಸರಕಾರವನ್ನು ಸಂಪರ್ಕಿಸಿದ್ದರು. ಅದು ಶಸ್ತ್ರಾಸ್ತ್ರ ಮತ್ತು ಹಣಕಾಸು ನೆರವಿನ ಭರವಸೆ ನೀಡಿತ್ತು. ಗಡಿಯ ಪಾಕಿಸ್ತಾನದ ಭಾಗದಲ್ಲಿ ಶಿಬಿರಗಳನ್ನು ರಚಿಸಲಾಯಿತು. ಅಲ್ಲಿ ಯುವ ಮಿಜೋ ಬಂಡುಕೋರರಿಗೆ ಆಧುನಿಕ ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ತರಬೇತಿ ನೀಡಲಾಯಿತು.

ಫೆಬ್ರವರಿ 1966ರಲ್ಲಿ ಎಂಎನ್‌ಎಫ್ ಸರಕಾರಿ ಕಚೇರಿಗಳ ಮೇಲೆ ದಾಳಿ ಮಾಡಿತು ಮತ್ತು ಸಂವಹನವನ್ನು ಅಲ್ಲೋಲ ಕಲ್ಲೋಲಗೊಳಿಸಿತು. ಮಿಜೋ ಜನತೆ ತನ್ನದೇ ಆದ ಸ್ವತಂತ್ರ ಗಣರಾಜ್ಯ ರಚಿಸಿದೆ ಎಂದು ಅವರು ಘೋಷಿಸಿದರು. ದಂಗೆಕೋರರು ಲುಂಗ್ಲೆಹ್ ಎಂಬ ಪಟ್ಟಣವನ್ನು ವಶಪಡಿಸಿಕೊಂಡರು ಮತ್ತು ಐಜ್ವಾಲ್ ಮೇಲೆ ಬಲವಾಗಿ ನುಗ್ಗತೊಡಗಿದ್ದರು. ಭಾರತ ಸರಕಾರ ಸೇನೆಯ ಸಾಮೂಹಿಕ ತುಕಡಿಗಳನ್ನಲ್ಲದೆ, ವಾಯುಪಡೆಯನ್ನೂ ಕಳಿಸಿತು. ಆದರೂ ಬಂಡುಕೋರರ ಹೋರಾಟ ತೀವ್ರವಾಗಿತ್ತು. ಅದಾದ ಬಳಿಕವೂ ಸಂಘರ್ಷ ಅಂತಿಮವಾಗಿ ಕೊನೆಗೊಳ್ಳಲು ಮತ್ತು ಇತ್ಯರ್ಥವಾಗಲು ಎರಡು ದಶಕಗಳನ್ನು ತೆಗೆದುಕೊಂಡಿತು. ಲಾಲ್ಡೆಂಗಾ ಮಿಜೋರಾಂನ ಮೊದಲ ಮುಖ್ಯಮಂತ್ರಿಯಾದರು.

ನಾನು ಐಜ್ವಾಲ್‌ನಲ್ಲಿ ಮಾತನಾಡಿದ ವಿದ್ಯಾರ್ಥಿಗಳ ಅಜ್ಜಿಯರು ಮತ್ತು ಪ್ರಾಯಶಃ ಕೆಲವು ಪೋಷಕರು ಸಹ ಹಿಂಸಾಚಾರದ ಆ ಸಮಯದಲ್ಲಿ ಬದುಕಿದ್ದರು. ತಮ್ಮ ಮನೆಗಳಿಂದ ಓಡಿಹೋಗಿ, ಕಾಡುಗಳಲ್ಲಿ ಆಶ್ರಯ ಪಡೆಯುತ್ತಿದ್ದರು. ಬಂಡುಕೋರರು ಮತ್ತು ಸರಕಾರದ ನಡುವಿನ ಗುಂಡಿನ ಚಕಮಕಿ ನಡುವೆ ಸಿಕ್ಕಿಹಾಕಿಕೊಳ್ಳುತ್ತಿದ್ದರು. ವಸಾಹತುಶಾಹಿ ನಂತರ ಮಿಜೋ ಜನರು ಬಹು ಬೇಗನೆ ಮತ್ತು ಸಂಪೂರ್ಣ ವಾಗಿ ತಮ್ಮ ಜೀವನವನ್ನು ಮರಳಿ ಕಟ್ಟಿಕೊಂಡದ್ದು ಅವರ ಬುದ್ಧಿವಂತಿಕೆ ಮತ್ತು ಧೈರ್ಯಕ್ಕೆ ಸಾಕ್ಷಿ.

ಸಂಕಟವು ಜನರನ್ನು ಪ್ರತೀಕಾರ ತೆಗೆದುಕೊಳ್ಳಲು ಪ್ರೇರೇಪಿಸಬಹುದು. ಯಾರ ಕಾರಣದಿಂದಾಗಿ ಅದನ್ನೆಲ್ಲ ಅನುಭವಿಸಿದರೋ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂತ್ರಸ್ತರು ಬಯಸುವುದುಂಟು. ವಿಭಜನೆಯಿಂದ ನಿರಾಶ್ರಿತರಾದವರ ವಂಶಸ್ಥರು ಮತ್ತು ಹತ್ಯಾಕಾಂಡದ ಬಲಿಪಶುಗಳ ವಂಶಸ್ಥರ ವಿಷಯದಲ್ಲಿ ಇದು ನಿಜವಾಗಿದೆ. ಆದರೂ ಮಿಜೋ ಪ್ರಕರಣದಲ್ಲಿ ಅವರ ಸ್ವಂತ ಇತಿಹಾಸವು ಇತರರ ದುಃಖದ ಬಗ್ಗೆ ಆಳವಾದ ಸಹಾನುಭೂತಿ ಹೊಂದುವಂತೆ ಮಾಡಿದೆ. ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಲ್ಲಿ ಶೋಷಣೆಗೆ ಬಲಿಯಾದವರನ್ನು ಅವರು ಸ್ವಾಗತಿಸಿದ ವಿಧಾನಗಳನ್ನು ಪರಿಗಣಿಸಬಹುದು. ಅನೇಕ ಕ್ರಿಶ್ಚಿಯನ್ನರು, ಕೆಲ ಬೌದ್ಧರು ಕೂಡ ಅವರಲ್ಲಿದ್ಧಾರೆ. ತೀರಾ ಇತ್ತೀಚೆಗೆ ಮಣಿಪುರದಲ್ಲಿ ಜನಾಂಗೀಯ ಘರ್ಷಣೆಯಿಂದ ಪಲಾಯನ ಮಾಡಿದ ಕುಕಿಗಳಿಗೆ ಉದಾರವಾಗಿ ಆಶ್ರಯ ನೀಡಿ ನೆರವಾಗಿದ್ದಾರೆ. ಸರಕಾರ ತೋರಿಸಬೇಕಿದ್ದ ಹೊಣೆಯನ್ನು ಹೊತ್ತಿದ್ದಾರೆ,

Grassroots Options ನಿಯತಕಾಲಿಕದಲ್ಲಿನ ಇತ್ತೀಚಿನ ಬರಹವೊಂದು ಮಿಜೋ ಜನರ ಸಮುದಾಯ ಧೋರಣೆಯ ಬಗ್ಗೆ ಹೇಳಿದೆ. ಜೂಮ್ ಅಥವಾ ಸ್ವಿಡ್ ಕೃಷಿ ಪರಂಪರೆಗೆ ಕಾರಣವಾಗುವು ದರೊಂದಿಗೆ ಐತಿಹಾಸಿಕವಾಗಿ ಅವರ ಮುಖ್ಯ ಜೀವನಾಂಶ ಮತ್ತು ಜೀವನೋಪಾಯವನ್ನು ಒದಗಿಸಿದ ಒಳಗೊಳ್ಳುವಿಕೆ ಅದು. ಕುಟುಂಬಗಳ ನಡುವೆ ಸಹಕಾರವನ್ನು ಮಾತ್ರವಲ್ಲ, ಜೂಮ್ ಪದ್ಧತಿ ಪ್ರಕೃತಿಯೊಂದಿಗೆ ಸಾಮಾಜಿಕ ಬಂಧವನ್ನು ಸೃಷ್ಟಿಸಿದೆ. ಈ ಎಲ್ಲಾ ಹಂಚಿಕೆಯ ಮೌಲ್ಯಗಳು ಮತ್ತು ಆಲೋಚನೆಗಳು ಅಂತಿಮವಾಗಿ ಸಾಮಾಜಿಕ ನಡವಳಿಕೆಯ ಸಂಹಿತೆಯಾಗಿ ರೂಪುಗೊಂಡವು. ಇದಕ್ಕೆ ಮಿಜೋ ಭಾಷೆಯಲ್ಲಿ Tlawmmngaihna ಎಂಬ ಪದವಿದ್ದು, ಅದನ್ನು ‘ಸೇವೆಯಲ್ಲಿ ವಿನಮ್ರತೆಯನ್ನು ಎತ್ತಿಹಿಡಿಯುವುದು, ... ವಿಶೇಷವಾಗಿ ಯಾವುದೇ ಮತ್ತು ಎಲ್ಲಾ ಸಂದರ್ಭಗಳಲ್ಲಿ ನಿರ್ಗತಿಕರಿಗೆ, ರೋಗಿಗಳಿಗೆ, ಅಂಗವಿಕಲರಿಗೆ ಮತ್ತು ವಿಧವೆಯರಿಗೆ’ ಎಂದು Grassroots Options ಅನುವಾದಿಸಿದೆ.

ಮಿಜೋ ಸಮುದಾಯದ ನೀತಿ ಈ ಭಾಗದಲ್ಲಿನ ಕ್ರಿಶ್ಚಿಯನ್ ಧರ್ಮದ ಪ್ರಭಾವವನ್ನು ಸೂಚಿಸುತ್ತದೆ. ಹೆಚ್ಚಿನ ಕಡೆಗಳಲ್ಲಿ, ಒಗ್ಗೂಡಿ ಕೆಲಸ ಮಾಡುವ ಈ ಮನೋಭಾವದ ಹಿಂದಿನ ಶಕ್ತಿಯಾಗಿರುವುದು ಚರ್ಚ್. ಆದರೂ, ಈ ಶ್ಲಾಘನೀಯ ನಿಸ್ವಾರ್ಥ ಕೆಲವು ಸಂದರ್ಭಗಳಲ್ಲಿ ಅನಗತ್ಯವಾದುದಕ್ಕೂ ಎಡೆ ಮಾಡಿಕೊಟ್ಟಿದೆ. ಬಿಷಪ್‌ಗಳ ಕ್ರೋಧಕ್ಕೆ ಹೆದರಿ ರಾಜ್ಯ ಸರಕಾರಗಳು ಮದ್ಯ ನಿಷೇಧವನ್ನು ಜಾರಿಗೆ ತಂದ ಪರಿಣಾಮವಾಗಿ ಕಳ್ಳಭಟ್ಟಿ ಮತ್ತು ನಕಲಿ ಮದ್ಯ ಸೇವನೆ ವ್ಯಾಪಕವಾಗುವುದಕ್ಕೆ ಕಾರಣವಾಯಿತು. ಸಾಂಪ್ರದಾಯಿಕವಾಗಿ ಮನೆಯಲ್ಲಿಯೇ ಮದ್ಯ ತಯಾರಿಸುವ ರೂಢಿಯಿರುವ ಸಂಸ್ಕೃತಿಯಲ್ಲಿ ಅದಕ್ಕೆ ಸಾಂಕೇತಿಕ ಮಹತ್ವವಿದೆ. ಸರಕಾರದಿಂದ ನಿಗ್ರಹ ಕ್ರಮ ಪ್ರತಿ ಉತ್ಪಾದಕ ಪರಿಣಾಮಗಳಿಗೆ ಎಡೆ ಮಾಡಿಕೊಡುತ್ತದೆ ಮತ್ತು ಇದು ರಾಜ್ಯದ ಬೊಕ್ಕಸಕ್ಕೂ ಸಾಕಷ್ಟು ನಷ್ಟ ಉಂಟುಮಾಡಿದೆ. ಕಾನೂನುಬದ್ಧವಾಗಿ ತಯಾರಿಸಿದ ಮತ್ತು ಕಾನೂನುಬದ್ಧವಾಗಿ ಸೇವಿಸುವ ಮದ್ಯದ ಮೇಲಿನ ತೆರಿಗೆಗಳು ಮಿಜೋರಾಂನ ಹದಗೆಟ್ಟ ರಸ್ತೆಗಳನ್ನು ಸುಧಾರಿಸುವ ಖರ್ಚನ್ನಾದರೂ ಸ್ವಲ್ಪ ಮಟ್ಟಿಗೆ ನಿಭಾಯಿಸಬಹುದು.

ಮಿಜೋರಾಂನ ನನ್ನ ಪ್ರವಾಸ, ಅದರ ಇತಿಹಾಸ ಮತ್ತು ಅಲ್ಲಿನ ಜನಸಮುದಾಯದ ಮೂಲಕ ಮಾತ್ರವೇ ನಾನು ತಿಳಿದಿದ್ದ ರಾಜ್ಯದ ಜನರ ಕುರಿತ ನನ್ನ ಗೌರವಭಾವನೆಯನ್ನು ಇನ್ನಷ್ಟು ಹೆಚ್ಚಿಸಿತು. ದುರಂತವೆಂದರೆ, ಸಾಮಾನ್ಯವಾಗಿ ಈಶಾನ್ಯದ ಇತರ ರಾಜ್ಯಗಳಂತೆಯೆ ಮಿಜೋರಾಂಗೆ ಗಣರಾಜ್ಯದಲ್ಲಿ ಇರುವುದು ತೀರಾ ಕಡಿಮೆ ಮಟ್ಟದ ಪರಿಗಣನೆ. ಈ ಪ್ರದೇಶವನ್ನು ದಿಲ್ಲಿಯ ಸರಕಾರಗಳು ನಿರಾಕರಣೆ ಮತ್ತು ನಿರ್ಲಕ್ಷ್ಯದ ಧೋರಣೆಯಿಂದಲೇ ನೋಡುತ್ತವೆ. ಭಾಗಶಃ ಅಥವಾ ಹೆಚ್ಚಾಗಿ ಇದು ಕಡಿಮೆ ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಆದರೂ ಮುಖ್ಯಭೂಮಿ ಎಂದು ಕರೆಯಲ್ಪಡುವ ನಾವು ಮಿಜೋ ಜನರಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಅವರ ಸಮುದಾಯದ ಮನೋಭಾವ, ಸೋಲು ಮತ್ತು ಹತಾಶೆಯಿಂದ ಚೇತರಿಸಿಕೊಳ್ಳುವ ಅವರ ಸಾಮರ್ಥ್ಯ, ಅವರು ಜಾತಿ ಪೂರ್ವಾಗ್ರಹವನ್ನು ಮೀರಿರುವುದು ಮತ್ತು ಮಿಜೋ ಮಹಿಳೆಯರ ಉನ್ನತ ಸ್ಥಾನಮಾನ, ಅವರ ಜೀವನ ಪ್ರೀತಿ ಮತ್ತು ಸಂಗೀತಪ್ರೇಮ ಇವೆಲ್ಲದರಲ್ಲೂ ನಮಗೆ ಪಾಠಗಳಿವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಮಚಂದ್ರ ಗುಹಾ

contributor

Similar News