ಪರಿವಾರ ರಾಜಕೀಯ

ಭಾರತದಲ್ಲಿನ ವಿರೋಧ ಪಕ್ಷದ ರಾಜಕಾರಣಿಗಳು Aಗಳಲ್ಲಿ ಒಬ್ಬರಾದ ಅದಾನಿಗಳು ಮೋದಿ ಸರಕಾರದೊಂದಿಗೆ ಹೊಂದಿರುವ ಸಾಮೀಪ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೂ, ಜಾಮ್‌ನಗರ ವಿಮಾನ ನಿಲ್ದಾಣದ ಪ್ರಕರಣಗಳು ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ತಿದ್ದುಪಡಿಗಳು ತೋರಿಸಿದಂತೆ, ಅಂಬಾನಿಗಳು ತಮ್ಮ ಇಚ್ಛೆಗೆ ತಕ್ಕಂತೆ ಪ್ರಬಲವಾದ ಭಾರತ ಸರಕಾರವನ್ನು ಬಗ್ಗಿಸುವ ಸಾಮರ್ಥ್ಯ ಹೊಂದಿದ್ದಾರೆ. ಪ್ರಸಕ್ತ ಫ್ಯಾಶನ್ ಆಗಿರುವ ಪರಿಭಾಷೆಯಲ್ಲಿ ಹೇಳುವುದಾದರೆ, ಉದ್ಯಮ ಮತ್ತು ಕುಟುಂಬಗಳೆರಡರ ವಿಷಯಗಳಲ್ಲಿ ಅದಾನಿಗಳು ಮತ್ತು ಅಂಬಾನಿಗಳು ‘ಮೋದಿ ಸರಕಾರ್ ಕಿ ಗ್ಯಾರಂಟಿ’ಯನ್ನು ಅನುಭವಿಸುತ್ತಿದ್ದಾರೆ.

Update: 2024-03-09 04:56 GMT

ಮಾರ್ಚ್ 1, 2024. ‘ದಿ ಹಿಂದೂ’ ಪತ್ರಿಕೆಯ ಆನ್‌ಲೈನ್ ಆವೃತ್ತಿಯಲ್ಲಿ ಪ್ರಕಟವಾದ ಜಾಗೃತಿ ಚಂದ್ರ ಅವರ ವರದಿಯ ಶೀರ್ಷಿಕೆ ಹೀಗಿತ್ತು: ‘ಅನಂತ್ ಅಂಬಾನಿ ವಿವಾಹಪೂರ್ವ ಸಮಾರಂಭಕ್ಕಾಗಿ ಜಾಮ್‌ನಗರ ವಿಮಾನ ನಿಲ್ದಾಣಕ್ಕೆ ಅಂತರ್‌ರಾಷ್ಟ್ರೀಯ ಸ್ಥಾನಮಾನ’. ರಕ್ಷಣಾ ಪಡೆಗಳ ನಿರ್ವಹಣೆಯಲ್ಲಿರುವ ಜಾಮ್‌ನಗರದ ಸಣ್ಣ ವಿಮಾನ ನಿಲ್ದಾಣವನ್ನು ಫೆಬ್ರವರಿ 25ರಿಂದ ಮಾರ್ಚ್ 5ರ ಹತ್ತು ದಿನಗಳ ಕಾಲ ಹೇಗೆ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸಲಾಗಿದೆ ಎಂಬುದನ್ನು ವರದಿ ವಿವರಿಸಿತ್ತು. ನೀತಾ ಮತ್ತು ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅವರ ಮೂರು ದಿನಗಳ ವಿವಾಹಪೂರ್ವ ಸಮಾರಂಭಕ್ಕೆ ಬಿಲ್ ಗೇಟ್ಸ್, ಮಾರ್ಕ್ ಝುಕರ್‌ಬರ್ಗ್, ರಿಹಾನ್ನಾ, ಇವಾಂಕಾ ಟ್ರಂಪ್ ಮತ್ತು ಹಲವಾರು ಮಾಜಿ ಪ್ರಧಾನಿಗಳನ್ನು ಸ್ವಾಗತಿಸಲು ಈ ವ್ಯವಸ್ಥೆ ಮಾಡಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಕಸ್ಟಮ್, ಇಮಿಗ್ರೇಷನ್ ಮತ್ತು ಕ್ವಾರಂಟೈನ್ ಸೌಲಭ್ಯ ಸ್ಥಾಪಿಸಲು ಕೇಂದ್ರ ಸರಕಾರದ ಆರೋಗ್ಯ ಸಚಿವಾಲಯ, ಹಣಕಾಸು ಸಚಿವಾಲಯ ಮತ್ತು ಗೃಹ ವ್ಯವಹಾರಗಳ ಸಚಿವಾಲಯಗಳಿಂದ ಒತ್ತಡವಿದ್ದುದರ ಬಗ್ಗೆ ವರದಿ ಹೇಳಿತ್ತು.

ನಾನು ಚಂದ್ರ ಅವರ ವರದಿಯನ್ನು ಓದಿದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿನ ಪ್ರತಿಕ್ರಿಯೆಗಳನ್ನು ನೋಡಲು ಹೋದೆ. ಇವತ್ತಿನ ಸಂದರ್ಭದಲ್ಲಿ ನಿರೀಕ್ಷಿಸಿದಂತೆ ಅವು ಬಹಳ ಧ್ರುವೀಕೃತವಾಗಿದ್ದವು. ಒಂದೆಡೆ, ಅಂಬಾನಿಗಳಿಗೆ ಈ ಅಸಾಧಾರಣ ಅನುಕೂಲವನ್ನು ಮಾಡಿಕೊಟ್ಟ ಸರಕಾರದ ಬೆಂಬಲಿಗರಿಂದ ಸಮರ್ಥನೀಯ ಪ್ರತಿಕ್ರಿಯೆಗಳ ಸಾಲೇ ಇತ್ತು. ಕಾಂಗ್ರೆಸ್ ಸರಕಾರ 2011ರಲ್ಲಿ ಚಂಡಿಗಡ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನಿ ಪ್ರವಾಸಿಗಳಿಗೆ ಅನುಕೂಲವಾಗುವಂತೆ ಹೀಗೆಯೇ ಮಾಡಿತ್ತು ಎಂದು ನೆನಪಿಸಲಾಗಿತ್ತು (ಆದರೆ ಅದು ಪ್ರಮುಖ ಅಂತರ್‌ರಾಷ್ಟ್ರೀಯ ಕ್ರೀಡಾಕೂಟಕ್ಕಾಗಿ, ಕ್ರಿಕೆಟ್ ವಿಶ್ವಕಪ್‌ನ ಸೆಮಿಫೈನಲ್‌ಗಾಗಿ ಆಗಿತ್ತೇ ಹೊರತು ಖಾಸಗಿ ವಿವಾಹವಾಗಿರಲಿಲ್ಲ). ಅಂಬಾನಿಗಳು ಸಾವಿರಾರು ಭಾರತೀಯರಿಗೆ ಉದ್ಯೋಗ ನೀಡಿದ್ದಾರೆ, ಭೇಟಿ ನೀಡುವ ವಿಐಪಿಗಳಿಗೆ ಸರಿಯಾದ ಗೌರವ ಮತ್ತು ಭದ್ರತೆಯನ್ನು ನೀಡಬೇಕು ಎಂಬ ಮಾತುಗಳಿದ್ದವು.

ಇನ್ನೊಂದು ಕಡೆ, ಆತಂಕ ಮತ್ತು ದಿಗ್ಭ್ರಮೆಯನ್ನು ವ್ಯಕ್ತಪಡಿಸುವ ಟೀಕೆಗಳಿದ್ದವು. ಒಬ್ಬರು, ‘ಭಾರತದಲ್ಲಿ ಅದಾನಿ ಮತ್ತು ಅಂಬಾನಿ ಜೀವನವು ಸ್ವರ್ಗದಲ್ಲಿದ್ದಂತೆ ಇದೆ ಮತ್ತು ಉಳಿದವರಿಗೆ ಅದು ನರಕವಾಗಿದೆ’ ಎಂದಿದ್ದರು. ಮತ್ತೊಬ್ಬರು, ‘ನಾವು ಇನ್ನೂ ದೊಡ್ಡ ಅಲಿಗಾರ್ಕಿಯನ್ನು ಹೊಂದಿರುವ ಹೊಸ ರಶ್ಯ’ ಎಂದಿದ್ದರು. ಮತ್ತೊಬ್ಬರು, ‘ಜಗತ್ತೇ ಒಂದು ಕುಟುಂಬ ಎಂಬರ್ಥದ ‘‘ವಸುಧೈವ ಕುಟುಂಬಕಂ’’ ಎಂಬ ಮಹಾನ್ ಉಕ್ತಿಯನ್ನು ‘‘ನಾನು, ನನ್ನ ಶ್ರೀಮಂತ ಸ್ನೇಹಿತರು ಮತ್ತು ಅವರ ಸ್ನೇಹಿತರು ಒಂದೇ ಕುಟುಂಬ’’ ಎಂದು ತಿದ್ದಿ ಬರೆಯಲಾಗಿದೆ’ ಎಂದು ಶುಷ್ಕವಾಗಿ ಟೀಕಿಸಿದ್ದರು.

ನನ್ನ ಒಲವು ಟೀಕಾಕಾರರ ಕಡೆಗೆ. ತಮ್ಮ ಮಗನ ಮದುವೆಯಾದಾಗ, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ ತವರು ಮೈಸೂರಿನಲ್ಲಿ ಮದುವೆ ನಡೆಸಲು ನಿರ್ಧರಿಸಿದ್ದರೆ? ಈಗ ನಾರಾಯಣಮೂರ್ತಿ ಅವರು ಮುಕೇಶ್ ಅಂಬಾನಿಯಂತೆ ಭಾರತೀಯ ಉದ್ಯಮದ ಪ್ರಮುಖ ವ್ಯಕ್ತಿಯಾಗಿದ್ದಾರೆ; ಅವರೂ ಹತ್ತಾರು ಸಾವಿರ ಜನರಿಗೆ ಉದ್ಯೋಗ ನೀಡಿದ್ದಾರೆ. ಅವರು ಮತ್ತವರ ಪತ್ನಿ ಅನೇಕ ಪ್ರಸಿದ್ಧ ವಿದೇಶಿ ಸ್ನೇಹಿತರನ್ನು ಸಹ ಹೊಂದಿದ್ದಾರೆ. ತನ್ನ ಮಗನ ಮದುವೆಯ ಸಮಯದಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಅಂತರ್‌ರಾಷ್ಟ್ರೀಯ ಸ್ಥಾನಮಾನವನ್ನು ನೀಡಬೇಕೆಂದು ಅವರು ಬಯಸಿದ್ದರೆ? ಆ ವಿಮಾನ ನಿಲ್ದಾಣ ಜಾಮ್‌ನಗರದಲ್ಲಿರುವಷ್ಟೇ ಚಿಕ್ಕದಾಗಿದೆ ಮತ್ತು ಮುಖ್ಯವಾಗಿ, ಅದು ರಕ್ಷಣಾ ಪಡೆಯ ವಿಮಾನ ನಿಲ್ದಾಣವಲ್ಲ. ಕೇಂದ್ರ ಸರಕಾರ ನಾರಾಯಣ ಮೂರ್ತಿ ಅವರಿಗೆ ಈ ಅಸಾಧಾರಣ ಸವಲತ್ತನ್ನು ನೀಡುತ್ತಿತ್ತೇ? ಅವರು ಅದನ್ನು ಕೇಳಿದ್ದಾದರೂ ಇತ್ತೆ?

ಅಂಬಾನಿ ವಿವಾಹಪೂರ್ವ ಸಮಾರಂಭ ಕುರಿತಾದ ಒಂದು ಟೀಕೆಯಲ್ಲಿ, ಜಾಮ್‌ನಗರ ವಿಮಾನ ನಿಲ್ದಾಣದ ಮರುವಿನ್ಯಾಸಗೊಳಿಸುವಿಕೆ ಆ ಶ್ರೀಮಂತ ಯುವಕ ಪ್ರಪಂಚದಾದ್ಯಂತದ ಕೆಲವು ಪ್ರಸಿದ್ಧ ಜೀವಿಗಳನ್ನು ಆಹ್ವಾನಿಸುವ ಮೂಲಕ ತನ್ನ ಖಾಸಗಿ ಮೃಗಾಲಯವನ್ನು ಪ್ರದರ್ಶಿಸಲು ಬಯಸುತ್ತಿರುವುದಾಗಿ ಹೇಳಲಾಗಿತ್ತು. ಜಾಮ್‌ನಗರದಲ್ಲಿ ಅಲಂಕೃತ ಆನೆಯ ಮುಂದೆ ಇವಾಂಕಾ ಟ್ರಂಪ್ ಪೋಸ್ ನೀಡುತ್ತಿರುವ ಚಿತ್ರಗಳು ಈ ಹೇಳಿಕೆಗೆ ಪುಷ್ಟಿ ನೀಡಿವೆ.

ಉಲ್ಲೇಖಿತ ಖಾಸಗಿ ಮೃಗಾಲಯವನ್ನು ರಾಧಾಕೃಷ್ಣ ದೇವಾಲಯ ಆನೆ ಕಲ್ಯಾಣ ಟ್ರಸ್ಟ್ ಎಂಬ ಸಂಸ್ಥೆ ನಡೆಸುತ್ತಿದೆ. ಹತ್ತು ದಿನಗಳ ಕಾಲ ರಕ್ಷಣಾ ವಿಮಾನ ನಿಲ್ದಾಣವನ್ನು ಅಂತರ್‌ರಾಷ್ಟ್ರೀಯ ಮಾಡುವುದಕ್ಕಿಂತಲೂ ಈ ಭವ್ಯವಾದ ಧಾರ್ಮಿಕ ಹೆಸರು ಸೆಕ್ಯುಲರ್ ನೆಪದ ಹಗರಣವನ್ನು ಹೆಚ್ಚು ಮರೆಮಾಚುತ್ತದೆ. ಈ ಟ್ರಸ್ಟ್ ಮತ್ತು ಅದರ ಚಟುವಟಿಕೆಗಳನ್ನು 2021ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಸಕ್ರಿಯಗೊಳಿಸಲಾಗಿದೆ. ಇದು ಖಾಸಗಿ ಮೃಗಾಲಯಗಳನ್ನು ನಿರ್ಮಿಸಲು ಅವಕಾಶ ನೀಡುತ್ತದೆ ಮತ್ತು ಆನೆಯಂತಹ ಅಳಿವಿನಂಚಿನಲ್ಲಿರುವ ಕಾಡುಪ್ರಾಣಿಗಳನ್ನು ಸೆರೆಹಿಡಿಯಲು, ಸಾಗಿಸಲು ಮತ್ತು ಮಾರಾಟ ಮಾಡಲು ಉತ್ತೇಜಿಸುತ್ತದೆ. ಆ ಸಮಯದಲ್ಲಿ ಲೇಖಕಿ ಮತ್ತು ಸಂರಕ್ಷಣಾವಾದಿ ಪ್ರೇರಣಾ ಸಿಂಗ್ ಬಿಂದ್ರಾ ಅವರು, ಈ ಹಿಂದೆ ಕಾಯ್ದೆಯು ಸಂರಕ್ಷಿತ ಜೀವಿಗಳ ವಾಣಿಜ್ಯ ವಹಿವಾಟುಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದರೆ, ಈಗ ತಿದ್ದುಪಡಿಯೊಂದಿಗೆ ಸಜೀವ ಸೆರೆಯಲ್ಲಿರುವ ಆನೆಗಳನ್ನು ಈ ಸಾಮಾನ್ಯ ನಿಷೇಧದಿಂದ ಹೊರಗಿಡಲಾಗಿದೆ. ಇದು ಅವುಗಳ ವಾಣಿಜ್ಯಿಕ ಉದ್ದೇಶದ ಮಾರಾಟ ಮತ್ತು ಖರೀದಿಗಾಗಿ ಎಲ್ಲ ಲೋಪದೋಷವನ್ನು ಅಲಕ್ಷಿಸುತ್ತದೆ. ಇದು ಸಂರಕ್ಷಿತ ಕಾಡಾನೆಯನ್ನು ವ್ಯಾಪಾರದ ವಸ್ತುವಾಗಿ ತೋರಿಸುತ್ತದೆ ಮತ್ತು ಆ ಕಾರಣದಿಂದ ವನ್ಯಜೀವಿ (ರಕ್ಷಣೆ) ಕಾಯ್ದೆಯ ಉದ್ದೇಶ ಮತ್ತು ಪ್ರೇರಣೆಗೆ ವಿರುದ್ಧವಾಗಿದೆ. ಕಾನೂನಿನಲ್ಲಿ ಗಂಭೀರ ಅಸಂಗತತೆ ಇದ್ದು, ಅದನ್ನು ಸರಿಪಡಿಸಬೇಕು ಎಂದಿದ್ದರು.

ಯಾರು ಅಧಿಕಾರದಲ್ಲಿದ್ದರು ಮತ್ತು ಅವರು ಯಾರಿಗೆ ಉತ್ತರದಾಯಿತ್ವ ಹೊಂದಿದ್ದಾರೆ ಎಂಬುದನ್ನು ಗಮನಿಸಿದರೆ, ಅಸಂಗತತೆ ಹಾಗೇ ಉಳಿದಿದೆ. ಅದರ ಪರಿಣಾಮಗಳು ಈಗ ನಮಗೆ ಸ್ಪಷ್ಟವಾಗಿ ಕಾಣುತ್ತಿವೆ. 2022ರ ಜೂನ್‌ನಲ್ಲಿ ‘ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ನಲ್ಲಿನ ವರದಿ ಒಂದೇ ತಿಂಗಳಲ್ಲಿ ಎಂಟು ಪ್ರಕರಣಗಳನ್ನು ದಾಖಲಿಸಿದೆ. ಅಸ್ಸಾಂನಿಂದ ಕಾಡಾನೆಗಳನ್ನು ಕಳ್ಳಸಾಗಣೆ ಮಾಡಲು ನಕಲಿ ಸಹಿ ಬಳಸಿ ದರೋಡೆಕೋರರು ನಕಲಿ ನಿರಾಕ್ಷೇಪಣಾ ಪ್ರಮಾಣಪತ್ರ ಗಿಟ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಇವುಗಳಲ್ಲಿ ಏಳು ಪ್ರಕರಣಗಳು ಜಾಮ್‌ನಗರದಲ್ಲಿ ಅಂಬಾನಿ ಒಡೆತನದ ಟ್ರಸ್ಟ್‌ಗೆ ಆನೆಗಳನ್ನು ಸಾಗಿಸಲು ಯತ್ನಿಸಿದವುಗಳೇ ಆಗಿವೆ.

ಈ ಎಂಟು ಪ್ರಕರಣಗಳು ಇಂಥದೇ ಕೃತ್ಯಗಳ ಆರಂಭವಷ್ಟೆ. 2024ರ ಫೆಬ್ರವರಿ ಕೊನೆಯ ವಾರದಲ್ಲಿ ಅನಂತ್ ಅಂಬಾನಿ ರಾಧಾಕೃಷ್ಣ ದೇವಸ್ಥಾನದ ಆನೆ ಕಲ್ಯಾಣ ಟ್ರಸ್ಟ್ ಈಗ ಇನ್ನೂರಕ್ಕೂ ಹೆಚ್ಚು ಸಂರಕ್ಷಿತ ಆನೆಗಳನ್ನು ಹೊಂದಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಅದನ್ನು ಗೋದಿ ಮೀಡಿಯಾಗಳು ಅಷ್ಟೇ ದೊಡ್ಡದಾಗಿ ತೆಗೆದುಕೊಳ್ಳುತ್ತವೆ. ಆದಾಗ್ಯೂ, ‘ನಾರ್ತ್‌ಈಸ್ಟ್ ನೌ’ ಎಂಬ ವೆಬ್‌ಸೈಟ್‌ನ ತನಿಖೆ ಈ ಆರೋಗ್ಯಕರ ಮತ್ತು ಪ್ರಯಾಣಿಸಬಲ್ಲ ಶಕ್ತಿಯುಳ್ಳ ಆನೆಗಳನ್ನು ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ತ್ರಿಪುರಾದಿಂದ ರಾಧಾಕೃಷ್ಣ ದೇವಾಲಯ ಆನೆ ಕಲ್ಯಾಣ ಟ್ರಸ್ಟ್‌ಗೆ ಸಾಗಿಸಲಾಯಿತು ಎಂದು ವರದಿ ಮಾಡಿದೆ. ಇದು ಪ್ರಾಣಿಗಳ ಪಾಲಿಗೆ ಅಗತ್ಯವಾಗಿರುವ ಸಂರಕ್ಷಣೆ ಎಂಬ ಸಾಂಪ್ರದಾಯಿಕ ಕಲ್ಪನೆಯ ಬಗ್ಗೆಯೇ ಕಳವಳವನ್ನು ಹುಟ್ಟುಹಾಕಿದೆ. ಈ ಆನೆಗಳಲ್ಲಿ ಹೆಚ್ಚಿನವುಗಳನ್ನು ಅಕ್ರಮವಾಗಿ ಕಾಡಿನಲ್ಲಿ ಸೆರೆಹಿಡಿಯಲಾಗಿದೆ ಮತ್ತು ನಂತರ ಮಧ್ಯವರ್ತಿಗಳ ಸಹಾಯದಿಂದ ಖರೀದಿಸಲಾಗಿದೆ ಎಂಬ ಊಹೆಗಳಿವೆ.

‘ನಾರ್ತ್‌ಈಸ್ಟ್ ನೌ’ ಪ್ರಕಟಿಸಿರುವ ಮತ್ತೊಂದು ವರದಿಯು ಪ್ರಾಣಿ ಹಕ್ಕುಗಳ ಗುಂಪು ಬರೆದ ಪತ್ರದ ವಿವರಗಳನ್ನು ಉಲ್ಲೇಖಿಸಿದೆ. 3,400 ಕಿ.ಮೀ. ದೂರದಲ್ಲಿರುವ ಅರುಣಾಚಲ ಪ್ರದೇಶದ ಫಲವತ್ತಾದ, ಸೊಂಪಾದ, ಉಷ್ಣವಲಯದ, ನೈಸರ್ಗಿಕ ಆವಾಸಸ್ಥಾನದಿಂದ ಪಶ್ಚಿಮ ಗುಜರಾತ್‌ನ ಜಾಮ್‌ನಗರದ ಒಣ, ಅಸ್ವಾಭಾವಿಕ ಭೂಪ್ರದೇಶಕ್ಕೆ ಎಳೆಯ ಆನೆಗಳನ್ನು ಸಾಗಿಸುವುದರಿಂದ ಅವು ತೊಂದರೆಗೀಡಾದವು. ಪ್ರತೀ ಟ್ರಕ್‌ಗೆ ಒಂದೊಂದು ಆನೆಯನ್ನು ಕಟ್ಟಿ, ಮರದ ಚೌಕಟ್ಟಿನಿಂದ ಹತ್ತಿಸಲಾಗಿದೆ. ಒಟ್ಟು ಒಂಭತ್ತು ದಿನಗಳ ಪ್ರಯಾಣದಲ್ಲಿ ಆರು ದಿನಗಳವರೆಗೆ ಬಿಹಾರದ ಮೂಲಕ ಯಾವುದೇ ನಿಲುಗಡೆಯಿಲ್ಲದೆ ಸಾಗಿಸಲಾಗುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಹೊಸದಾಗಿ ಸೆರೆಹಿಡಿದ ಕಾಡಾನೆಗಳ ಅಕ್ರಮ ಮಾರಾಟವನ್ನು ಕಾನೂನುಬದ್ಧಗೊಳಿಸಲಾಗುತ್ತಿರುವ ಬಗ್ಗೆ ಸಾರ್ವಜನಿಕರನ್ನು ಎಚ್ಚರಿಸಲು ಈ ಪತ್ರ ಬರೆಯಲಾಗಿದೆ.

ನಾನು ಮಾತನಾಡಿದ ಪ್ರಾಣಿ ಹಕ್ಕುಗಳ ಕಾರ್ಯಕರ್ತರೊಬ್ಬರು, ಈಗಾಗಲೇ ತಮ್ಮ ನೈಸರ್ಗಿಕ ಆವಾಸಸ್ಥಾನದಿಂದ ಸ್ಥಳಾಂತರಗೊಂಡಿರುವ ಕಾಡು ಪ್ರಭೇದಗಳಿಗೆ ಪುನರ್ವಸತಿ ಮತ್ತು ಆರೈಕೆ ಮಾಡುವ ಪ್ರಯತ್ನಗಳನ್ನು ಸ್ವಾಗತಿಸಿದರೂ, ಈಶಾನ್ಯದಿಂದ ನೂರಾರು ಆನೆಗಳನ್ನು ಸಾಗಿಸುವ ಯೋಜನೆಯು ಹಳೆಯ ಪ್ರಾಣಿ ಕಳ್ಳಸಾಗಣೆ ಜಾಲಗಳು ಮತ್ತೆ ಸಕ್ರಿಯವಾಗಲು ಕಾರಣವಾಗಿದೆ. ಒಮ್ಮೆ, ಕಾಡಾನೆಗಳನ್ನು ಸೆರೆಹಿಡಿದು ದೇವಾಲಯಗಳಿಗೆ ಕಳುಹಿಸಲಾಯಿತು; ಈಗ, ಅವುಗಳನ್ನು ಜಾಮ್‌ನಗರದಲ್ಲಿರುವ ಈ ಖಾಸಗಿ ಆಶ್ರಯಕ್ಕೆ ಕಳುಹಿಸಲಾಗುತ್ತಿದೆ. ಪರಿಸರಶಾಸ್ತ್ರಜ್ಞ ರವಿ ಚೆಲ್ಲಂ ಅವರು ಅಂಬಾನಿ ಮೃಗಾಲಯವನ್ನು ವೈಯಕ್ತಿಕ ಸ್ಟ್ಯಾಂಪ್ ಸಂಗ್ರಹಕ್ಕೆ ಹೋಲಿಸಿದ್ದಾರೆ. ಇದು ಜಾಗತಿಕವಾಗಿ ಗುರುತಿಸಲ್ಪಟ್ಟ ವನ್ಯಜೀವಿ ಸಂರಕ್ಷಣೆಯ ಗುರಿಗಳಿಗೆ ಯಾವುದೇ ಮಹತ್ವದ ಕೊಡುಗೆ ನೀಡುವುದಿಲ್ಲ.

ವನ್ಯಜೀವಿ ವಿಜ್ಞಾನಿಗಳು ಮತ್ತು ಸಂರಕ್ಷಣಾಕಾರರು ಎತ್ತಿರುವ ಮೂರು ಪ್ರಶ್ನೆಗಳಿಗೆ ಅಂಬಾನಿಗಳು ಮತ್ತು ಅವರಿಗೆ ಅನುಕೂಲ ಮಾಡಿಕೊಡುವವರು (ಸರಕಾರದ ಒಳಗೆ ಮತ್ತು ಹೊರಗೆ) ಉತ್ತರಿಸಬೇಕು. ಮೊದಲನೆಯದಾಗಿ, ಚೆನ್ನಾಗಿಯೇ ಇರುವ ಮತ್ತು ಕಾಡೊಳಗೆ ಇರಬಯಸುವ ಕಾಡಾನೆಗಳನ್ನು ಸೂಕ್ತವಲ್ಲದ ಒಣ ಕೈಗಾರಿಕಾ ಪ್ರದೇಶವಾದ ಜಾಮ್‌ನಗರಕ್ಕೆ ಏಕೆ ಸಾಗಿಸಬೇಕು? ಎರಡನೆಯದಾಗಿ, ಇದನ್ನು ಸುಲಭಗೊಳಿಸಲು ಸಮಾನಾಂತರ ನಿಯಂತ್ರಣ ವ್ಯವಸ್ಥೆಯನ್ನು ಏಕೆ ರೂಪಿಸಬೇಕು? ಮೂರನೆಯದಾಗಿ, ಆನೆಗಳನ್ನು ಸುರಕ್ಷಿತವಾಗಿರಿಸಲು ಮತ್ತು ಈ ಅದ್ಭುತ ಪ್ರಾಣಿಗಳು ತಾವು ಬಯಸುವಂಥ ನೈಸರ್ಗಿಕ ಆವಾಸ ಸ್ಥಾನಗಳಲ್ಲಿ ಅಂತಹ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಅರಣ್ಯ ಇಲಾಖೆಗಳೊಂದಿಗೆ ಏಕೆ ಕೆಲಸ ಮಾಡಬಾರದು?

ಇವು ಬಹುಮುಖ್ಯವಾದ ಪ್ರಶ್ನೆಗಳಾಗಿವೆ. ಆದರೆ ಅಂಬಾನಿಗಳು ಅಥವಾ ಅವರ ರಾಜಕೀಯ ಪೋಷಕರು ಅವುಗಳಿಗೆ ಉತ್ತರಿಸಲು ತಲೆಕೆಡಿಸಿಕೊಳ್ಳುವ ಸಾಧ್ಯತೆಯಿಲ್ಲ.

ನಾನು ಚಿಕ್ಕವನಿದ್ದಾಗ, ಅಂದಿನ ಕಾಂಗ್ರೆಸ್ ಆಡಳಿತವನ್ನು ಎಡಪಂಥೀಯ ಟೀಕಾಕಾರರು ಟಾಟಾ/ಬಿರ್ಲಾ ಸರಕಾರ ಎಂದು ಅಪಹಾಸ್ಯ ಮಾಡಿದ್ದರು. 1950 ಮತ್ತು 1960ರ ದಶಕದಲ್ಲಿ ತಮ್ಮ ಪ್ರಭಾವ ಮತ್ತು ಅಧಿಕಾರದ ಉತ್ತುಂಗದಲ್ಲಿದ್ದ ಜೆ.ಆರ್.ಡಿ. ಟಾಟಾ ಅಥವಾ ಘನಶ್ಯಾಮ್ ದಾಸ್ ಬಿರ್ಲಾ ಅವರು ಕೂಡ ಜವಾಹರಲಾಲ್ ನೆಹರೂ ಅಥವಾ ಇಂದಿರಾ ಗಾಂಧಿಯವರು ತಮ್ಮ ಕಾರ್ಖಾನೆಗಳಿಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣಗಳಿಗೆ ತಮ್ಮ ಕುಟುಂಬಗಳಲ್ಲಿನ ವಿವಾಹಗಳಿಗಾಗಿ ಅಂತರ್‌ರಾಷ್ಟ್ರೀಯ ಸ್ಥಾನಮಾನ ನೀಡಬೇಕೆಂದು ಖಂಡಿತವಾಗಿ ಯೋಚಿಸಿರಲಿಲ್ಲ. ಒಂದು ಕುಟುಂಬದ ಪ್ರಾಣಿಸಂಗ್ರಹಾಲಯಕ್ಕೆ ಅನುಕೂಲವಾಗುವಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನೇ ಆಮೂಲಾಗ್ರವಾಗಿ ಬದಲಾಯಿಸುವಂತೆ ಮನವೊಲಿಸುವುದೂ ಅವರಿಗೆ ಸಾಧ್ಯವಾಗಲಿಲ್ಲ.

ಈಗ ಎಲ್ಲವೂ ತುಂಬಾ ವಿಭಿನ್ನವಾಗಿವೆ. ಅರ್ಥಶಾಸ್ತ್ರಜ್ಞ ಅರವಿಂದ್ ಸುಬ್ರಮಣಿಯನ್ ಅವರು ವಾದಿಸಿದಂತೆ, ಎಲ್ಲಾ ಉದ್ಯಮಿಗಳು ಯಶಸ್ವಿಯಾಗಲು ಸಮಾನ ಅವಕಾಶವನ್ನು ಹೊಂದಿರುವ ಸಮತಟ್ಟಾದ ಆಟದ ಮೈದಾನವನ್ನು ರಚಿಸುವ ಬದಲು, ಭಾರತ ಸರಕಾರ ಇತ್ತೀಚಿನ ವರ್ಷಗಳಲ್ಲಿ ಕಳಂಕಿತ ಬಂಡವಾಳಶಾಹಿಯ 2A ರೂಪಾಂತರವನ್ನು ಬೆಂಬಲಿಸಿದೆ. ಎರಡು ಉದ್ಯಮ ಸಂಸ್ಥೆಗಳಾದ ಅದಾನಿಗಳು ಮತ್ತು ಅಂಬಾನಿಗಳು ತಮ್ಮ ಅದೃಷ್ಟದಲ್ಲಿ ಅದ್ಭುತವಾದ ಏರುಗತಿಯನ್ನು ಕಂಡಿದ್ದಾರೆ. ಬಹುಮಟ್ಟಿಗೆ ಸರಕಾರದ ನೀತಿಗಳು ಬಂದರುಗಳು, ವಿಮಾನ ನಿಲ್ದಾಣಗಳು, ಶುದ್ಧ ಮತ್ತು ಕೊಳಕು ಇಂಧನ, ಪೆಟ್ರೋಕೆಮಿಕಲ್ ಮತ್ತು ದೂರಸಂಪರ್ಕಗಳಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಪ್ರಬಲ ಸ್ಥಾನವನ್ನು ಹೊಂದಲು ಅವರಿಗೆ ಅವಕಾಶ ಮಾಡಿಕೊಟ್ಟಿವೆ.

ಭಾರತದಲ್ಲಿನ ವಿರೋಧ ಪಕ್ಷದ ರಾಜಕಾರಣಿಗಳು ಆ Aಗಳಲ್ಲಿ ಒಬ್ಬರಾದ ಅದಾನಿಗಳು ಮೋದಿ ಸರಕಾರದೊಂದಿಗೆ ಹೊಂದಿರುವ ಸಾಮೀಪ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೂ, ಜಾಮ್‌ನಗರ ವಿಮಾನ ನಿಲ್ದಾಣದ ಪ್ರಕರಣಗಳು ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ತಿದ್ದುಪಡಿಗಳು ತೋರಿಸಿದಂತೆ, ಅಂಬಾನಿಗಳು ತಮ್ಮ ಇಚ್ಛೆಗೆ ತಕ್ಕಂತೆ ಪ್ರಬಲವಾದ ಭಾರತ ಸರಕಾರವನ್ನು ಬಗ್ಗಿಸುವ ಸಾಮರ್ಥ್ಯ ಹೊಂದಿದ್ದಾರೆ. ಪ್ರಸಕ್ತ ಫ್ಯಾಶನ್ ಆಗಿರುವ ಪರಿಭಾಷೆಯಲ್ಲಿ ಹೇಳುವುದಾದರೆ, ಉದ್ಯಮ ಮತ್ತು ಕುಟುಂಬಗಳೆರಡರ ವಿಷಯಗಳಲ್ಲಿ ಅದಾನಿಗಳು ಮತ್ತು ಅಂಬಾನಿಗಳು ‘ಮೋದಿ ಸರಕಾರ್ ಕಿ ಗ್ಯಾರಂಟಿ’ಯನ್ನು ಅನುಭವಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಮಚಂದ್ರ ಗುಹಾ

contributor

Similar News