ನೀರಿನ ತಾಯಿ ಆಮ್ಲಾ ರುಯಾ

Update: 2024-03-10 05:48 GMT

ಅವಶ್ಯಕತೆಯು ಆವಿಷ್ಕಾರದ ತಾಯಿಯಾಗಿರುವುದರಿಂದ, ಶಾಲಾ ಮಕ್ಕಳಿಂದ ಸಾಮಾಜಿಕ ಕಾರ್ಯಕರ್ತರಿಂದ ಸ್ವಯಂ ಪ್ರೇರಿತ ವ್ಯಕ್ತಿಗಳವರೆಗೆ ಪ್ರತಿಯೊಬ್ಬರೂ ಭಾರತದಲ್ಲಿ ನೀರಿನ ಕೊರತೆಯ ವಿರುದ್ಧ ಹೋರಾಡಲು ನೀರಿನ ಸಂರಕ್ಷಣೆಯ ವಿಭಿನ್ನ ಮಾರ್ಗಗಳನ್ನು ಪ್ರಯತ್ನಿಸುತ್ತಿದ್ದಾರೆ. ಇಂತಹ ಅನೇಕ ಜಲಸಂರಕಕ್ಷರ ನಡುವೆ ಆಮ್ಲಾ ರುಯಾ ವಿಭಿನ್ನರು ಮತ್ತು ವಿಶಿಷ್ಟರು ಎನಿಸುತ್ತಾರೆ.

ಮೊನ್ನೆ ಸಂಜೆ ನಾನು ಮತ್ತು ಗೆಳೆಯ ಲೋಕಿ(ಲೋಕೇಶ) ಮಾತಾಡುತ್ತಾ ಕುಳಿತಿದ್ದೆವು. ಹೀಗೆ ಮಾತಾಡುತ್ತಿರುವಾಗಲೇ ನಳದಲ್ಲಿ ಗೊರ ಗೊರ ಸದ್ದು ಕೇಳಿಸಿತು. ಅದು ನಳದಲ್ಲಿ ನೀರು ಬರುವ ಸಂಕೇತ. ನಮ್ಮ ಓಣಿಯಲ್ಲಿ ನೀರು ಬರುತ್ತಿದ್ದಂತೆ ಎಲ್ಲರ ಮನೆಗಳಲ್ಲೂ ಇಂಜಿನ್(ಮೋಟಾರ್) ಸೌಂಡ್ ಶುರುವಾಯಿತು. ನಾವು ಬಾಲಕರಾಗಿದ್ದಾಗ ಬಹುತೇಕ ಮನೆಯಲ್ಲಿ ನಳಗಳು ಇರಲಿಲ್ಲ. ಇಡೀ ಊರಿಗೆ ನಾಲ್ಕಾರು ಸಾರ್ವಜನಿಕ ನಳಗಳಿದ್ದವು. ಬಹುತೇಕ ಮನೆಗಳ ಬಳಕೆಗೆ ಕೆರೆಯ ನೀರೇ ಆಧಾರ. ಕುಡಿಯಲು ಗೌರಿ ಬಾವಿಯಿಂದ, ಗುಡ್ಡದ ಒರತೆಯಿಂದ, ಅಥವಾ ಅಗಸನಕಟ್ಟೆಯಿಂದ ನೀರು ತರುತ್ತಿದ್ದೆವು. ಆದರೆ ಈಗ ನೀರು ಹೊರುವ ಪರಿತಾಪವಿಲ್ಲ. ಮನೆಬಾಗಿಲಲ್ಲೇ ನಳದ ವ್ಯವಸ್ಥೆ ಇದೆ. ಕೊಡಪಾನದಿಂದ ನೀರು ತರುವಾಗ ಇದ್ದ ಮಿತವ್ಯಯ ಈಗ ಮಾಯವಾಗಿರುವುದು ವಿಪರ್ಯಾಸ. ಎಲ್ಲೆಲ್ಲೋ ಇದ್ದ ನಮ್ಮ ಮಾತಿನ ಲಹರಿ ನೀರಿನಲ್ಲಿ ಗಿರಕಿ ಹೊಡೆಯತೊಡಗಿತು. ಅವನು ಇತ್ತೀಚೆಗೆ ಕೋಲಾರಕ್ಕೆ ಹೋಗಿದ್ದ. ಅಲ್ಲಿನ ನೀರಿನ ಅದರಲ್ಲೂ ಕುಡಿಯುವ ನೀರಿನ ಬವಣೆ ಕುರಿತು ತನ್ನ ಅನುಭವಗಳನ್ನು ಹಂಚಿಕೊಳ್ಳತೊಡಗಿದ. ಬಹುತೇಕ ಕಡೆಗಳಲ್ಲಿ ಗಮನಿಸಿದಂತೆ ನೀರಿನ ಸಮಸ್ಯೆಗೆ ಬಾಧಿತರಾಗಿರುವುದು ಮಹಿಳೆಯರು. ಪುರುಷರಾದ ನಾವು ಕಟ್ಟೆ ಮೇಲೆ ಕೂತೋ, ವೇದಿಕೆಯಲ್ಲಿ ಮೈಕ್ ಹಿಡಿದೋ ಮಹಿಳಾ ಸಬಲೀಕರಣದ ಬಗ್ಗೆ ಗಂಟೆಗಟ್ಟಲೆ ಮಾತಾಡುತ್ತೇವೆ. ಆದರೆ ಪ್ರತೀ ಬೇಸಿಗೆಯಲ್ಲೂ ನೀರಿನ ನಿಜವಾದ ಸಮಸ್ಯೆ ಸುತ್ತಿಕೊಳ್ಳುವುದು ಮಹಿಳೆಯರನ್ನು. ಈ ಜಲಕಂಟಕದಿಂದ ಅವರು ತಪ್ಪಿಸಿಕೊಳ್ಳಲು ಪಡಬಾರದ ಕಷ್ಟಪಡುತ್ತಾರೆ.

ಇದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ಶಿರಸಿಯ ಗಣೇಶನಗರದ ಗೌರಿ ನಾಯ್ಕ್ ಎಂಬ ಮಹಿಳೆ ಬಾವಿ ತೋಡಲು ಹೋಗಿ ಪಡಬಾರದ ಕಷ್ಟಪಟ್ಟಿದ್ದನ್ನು ಪತ್ರಿಕೆಗಳಲ್ಲಿ ಓದಿದೆವು. ಹಠ ಬಿಡದ ಗೌರಿ ಅಂಗನವಾಡಿ ಮಕ್ಕಳಿಗಾಗಿ ಗಂಗೆಯನ್ನು ತಂದು ಮಕ್ಕಳಿಗೆ ಮಹದುಪಕಾರ ಮಾಡಿದ್ದಾರೆ. ಶಿರಸಿಯಂತಹ ಮಲೆನಾಡಿನ ಪ್ರದೇಶದಲ್ಲಿಯೇ ನೀರಿಗೆ ತತ್ವಾರ ಬಂದಿರುವಾಗ ಇನ್ನು ಬಯಲು ಸೀಮೆಯಲ್ಲಿ ನೀರಿನ ಸಾವಿರಾರು ಕತೆಗಳು ತೆರೆದುಕೊಳ್ಳುತ್ತವೆ. ಬಯಲು ಸೀಮೆಯಲ್ಲಿ ಕೊಳವೆ ಬಾವಿಗಳೇ ನೀರಿಗೆ ಆಧಾರವಾಗಿದ್ದವು. ಆದರೆ ಈಗ ಅವುಗಳ ಅಂತರ್ಜಲ ಮಟ್ಟ ಕುಸಿದಿದೆ. ಅದೆಷ್ಟೋ ಮಹಿಳೆಯರು ನಿತ್ಯವೂ ನೀರಿಗಾಗಿ ನರಕಯಾತನೆ ಅನುಭವಿಸುತ್ತಾರೆ. ಕುಡಿಯುವ ನೀರಿಗಾಗಿ ಮೈಲುಗಟ್ಟಲೆ ದೂರ ನಡೆದು ಹೋಗಿ 35-40 ಲೀಟರ್ ನೀರನ್ನು ತಲೆ ಮೇಲೆ ಹೊತ್ತು ತರುತ್ತಾರೆ. ಇದನ್ನೆಲ್ಲಾ ನೋಡಿದರೆ ನಗರವಾಸಿ ಮಹಿಳೆಯರು ತುಂಬಾ ಪುಣ್ಯವಂತರು ಎನ್ನಬಹುದು. ಏಕೆಂದರೆ ಸುಡು ಬಿಸಿಲನ್ನೂ ಲೆಕ್ಕಿಸದೆ ನಿತ್ಯವೂ ನೀರಿಗಾಗಿ ನಾಲ್ಕಾರು ಕಿಲೋಮೀಟರ್ ನಡೆಯುವ ಹಳ್ಳಿ ಹೆಣ್ಣುಮಕ್ಕಳು ನಿಜಕ್ಕೂ ಗ್ರೇಟ್ ಎನಿಸುತ್ತಾರೆ.

ನಮಗೆಲ್ಲಾ ತಿಳಿದಿರುವಂತೆ ಭೂಮಿಯ ಮೇಲಿನ ಸಕಲ ಜೀವರಾಶಿಗೆ ನೀರು ಮೂಲ ಆಧಾರ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತ ಸೇರಿದಂತೆ ಹಲವು ದೇಶಗಳಿಗೆ ನೀರಿನ ಬಿಕ್ಕಟ್ಟು ಎದುರಾಗಿದೆ. ಪ್ರತೀ ವರ್ಷ ಬೇಸಿಗೆಯಲ್ಲಿ ಭಾರತದಲ್ಲಿ ನೀರಿನ ಬಿಕ್ಕಟ್ಟು ಕಾಣಿಸಿಕೊಳ್ಳುತ್ತದೆ. ವಾತಾವರಣದ ಹುಚ್ಚಾಟಗಳಿಂದಾಗಿ ಭಾರತದಲ್ಲಿ ಜಲಕ್ಷಾಮ ತಲೆದೋರುತ್ತದೆ. ಭಾರತದಲ್ಲಿ ಶೇ. 75ರಷ್ಟು ಜನರು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಭಾರತ ಸರಕಾರದ ಚಿಂತಕರ ಚಾವಡಿ ನೀತಿ ಆಯೋಗ ವರದಿ ಮಾಡಿದೆ.

ಅವಶ್ಯಕತೆಯು ಆವಿಷ್ಕಾರದ ತಾಯಿಯಾಗಿರುವುದರಿಂದ, ಶಾಲಾ ಮಕ್ಕಳಿಂದ ಸಾಮಾಜಿಕ ಕಾರ್ಯಕರ್ತರಿಂದ ಸ್ವಯಂ ಪ್ರೇರಿತ ವ್ಯಕ್ತಿಗಳವರೆಗೆ ಪ್ರತಿಯೊಬ್ಬರೂ ಭಾರತದಲ್ಲಿ ನೀರಿನ ಕೊರತೆಯ ವಿರುದ್ಧ ಹೋರಾಡಲು ನೀರಿನ ಸಂರಕ್ಷಣೆಯ ವಿಭಿನ್ನ ಮಾರ್ಗಗಳನ್ನು ಪ್ರಯತ್ನಿಸುತ್ತಿದ್ದಾರೆ. ಇಂತಹ ಅನೇಕ ಜಲಸಂರಕಕ್ಷರ ನಡುವೆ ಆಮ್ಲಾ ರುಯಾ ವಿಭಿನ್ನರು ಮತ್ತು ವಿಶಿಷ್ಟರು ಎನಿಸುತ್ತಾರೆ.

ರಾಜಸ್ಥಾನದಂತಹ ಬರಡು ನಾಡಿನ 400 ಹಳ್ಳಿಗಳಿಗೆ ಅನುಕೂಲವಾಗುವಂತೆ 350 ಚೆಕ್ ಡ್ಯಾಂಗಳನ್ನು ನಿರ್ಮಿಸಿರುವ ಆಮ್ಲಾ ರುಯಾ ತಮ್ಮ ಜೀವಿತಾವಧಿಯಲ್ಲಿ 3,000 ಚೆಕ್ ಡ್ಯಾಂಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆ. ಬಾಯಿಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡು ಜನಿಸಿದರೂ, ನೀರಿನ ತೀವ್ರ ಕೊರತೆಯಿಂದ ಜನರು ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿದ ಆಮ್ಲಾ ರುಯಾ ಅವರ ಹೃದಯವು ಮಮ್ಮಲ ಮರುಗಿತು. ವಿಪತ್ತುಗಳ ಸಂತ್ರಸ್ತರಿಗೆ ಹಣ ಮತ್ತು ಬಟ್ಟೆಗಳನ್ನು ನೀಡುವುದು ಶಾಶ್ವತ ಪರಿಹಾರವಲ್ಲ ಎಂಬುದನ್ನು ಅರಿತ ಆಮ್ಲಾ ರುಯಾ ಜಲಸಾಧಕಿಯಾದುದು ವಿಶಿಷ್ಠ.

ಆಮ್ಲಾ ರುಯಾ ರಾಜಸ್ಥಾನದ ಸಮುದಾಯಗಳನ್ನು ಯಶಸ್ವಿ ಉಪಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತೀ ಚೆಕ್ಡ್ಯಾಂ ನಿರ್ಮಾಣಕ್ಕೆ ಸ್ಥಳೀಯ ಸಮುದಾಯಗಳಿಂದ ಶೇ. 20ರಷ್ಟು ಹಣ ಹೂಡಿಕೆ ಮಾಡಿಸಿದ್ದಾರೆ. ಉಳಿದ ಶೇ. 80ರಷ್ಟನ್ನು ತಮ್ಮ ಆಕಾರ್ ಚಾರಿಟೇಬಲ್ ಟ್ರಸ್ಟ್ನಿಂದ ಭರಿಸಿದ್ದಾರೆ. ಗ್ರಾಮಸ್ಥರು ಹಣವನ್ನು ಹೂಡಿಕೆ ಮಾಡುವುದರಿಂದ ಚೆಕ್ ಡ್ಯಾಂಗಳ ಮಾಲಕತ್ವ ಪಡೆಯುತ್ತಾರೆ ಮತ್ತು ಮುಂದಿನ ಪೀಳಿಗೆಯವರೆಗೂ ಅದನ್ನು ಸರಿಯಾಗಿ ನಿರ್ವಹಣೆ ಮಾಡುತ್ತಾರೆ ಎಂಬುದು ಆಮ್ಲಾ ರುಯಾ ಅವರ ಲೆಕ್ಕಾಚಾರ. ರುಯಾ ನಿರ್ಮಿಸಿದ ಚೆಕ್ ಡ್ಯಾಂಗಳು ಹಳ್ಳಿಗಳಿಗೆ ಮತ್ತೆ ಸಮೃದ್ಧಿಯನ್ನು ತಂದಿವೆ. ಅಲ್ಲಿನ ರೈತರು ವರ್ಷಕ್ಕೆ ಮೂರು ಬೆಳೆ ಬೆಳೆಯುತ್ತಿದ್ದಾರೆ. ಹಳ್ಳಿಗಳಲ್ಲಿ ಸಾಗುವಳಿ ಭೂಮಿ ಹೆಚ್ಚಾಗಿದೆ. ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋದ ರೈತ ಕಾರ್ಮಿಕರು ಮನೆಗೆ ಮರಳಿದ್ದಾರೆ. ಮಹಿಳೆಯರು ನೀರಿಗಾಗಿ ಪರಿತಪಿಸುತ್ತಿಲ್ಲ. ನೀರಿಗಾಗಿ ಶಾಲೆ ಬಿಟ್ಟಿದ್ದ ಬಾಲಕಿಯರು ಪುನಃ ಶಾಲೆಗೆ ಹೋಗಲಾರಂಭಿಸಿದ್ದಾರೆ ಮತ್ತು ಹಳ್ಳಿಗಳಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಮಟ್ಟ ಸುಧಾರಿಸಿದೆ.

ಆಮ್ಲಾ ರುಯಾ ನಿರ್ಮಿಸಿದ ಚೆಕ್ ಡ್ಯಾಂಗಳು ಹಲವಾರು ಶುಷ್ಕ ಹಳ್ಳಿಗಳನ್ನು ಹಸಿರು ತಾಣಗಳನ್ನಾಗಿ ಪರಿವರ್ತಿಸಿವೆ. ಮೂರರಿಂದ ನಾಲ್ಕು ತಿಂಗಳವರೆಗೆ ಚೆಕ್ ಡ್ಯಾಂಗಳಲ್ಲಿ ನೀರು ಸಂಗ್ರಹವಾಗಿರುತ್ತದೆ. ಈ ನೀರು ಸುತ್ತಮುತ್ತಲಿನ ಬಾವಿ ಮತ್ತು ಬೋರ್ವೆಲ್ಗಳನ್ನು ರೀಚಾರ್ಜ್ ಮಾಡುತ್ತದೆ. ಆ ಮೂಲಕ ವರ್ಷವಿಡೀ ನೀರಿನ ಸಮಸ್ಯೆಯನ್ನು ನೀಗಿಸಿವೆ.

ಆರಂಭದಲ್ಲಿ ರುಯಾ ಮನೆಯವರಿಂದ ಆಕ್ಷೇಪ ವ್ಯಕ್ತವಾಗಿತ್ತು. ಒಂದು ದಿನ ರುಯಾ ತನ್ನ ಗಂಡನಿಗೆ ಹೇಳಿದಳು. ಜೀವನದಲ್ಲಿ ನಾನು ಒಂದು ಬಾರಿಯಾದರೂ ಪ್ರಪಂಚದ ಅದ್ಭುತಗಳನ್ನು ನೋಡಬೇಕೆಂದು ಕನಸು ಕಂಡಿದ್ದೆ. ಆದರೆ ನೀವು ನನ್ನನ್ನು ಕರೆದುಕೊಂಡು ಹೋಗಲಿಲ್ಲ. ಈಗ ಹೋಗಿ ನೋಡಿ ಭಾರತದ 400 ಹಳ್ಳಿಗಳು ಅದ್ಭುತ ಹಳ್ಳಿಗಳಾಗಿವೆ. ಈಗ ನನ್ನ ಕನಸು ಕನಸಾಗಿದೆ. ಈ ಕಾರಣಕ್ಕಾಗಿಯಾದರೂ ನೀವು ನನ್ನನ್ನು ಬೆಂಬಲಿಸಬೇಕು ಎಂದಳು. ತಮ್ಮ ಪರಿಶ್ರಮ ಹಾಗೂ ಕುಟುಂಬದವರ ಸಹಕಾರದಿಂದ ಆಮ್ಲಾ ರುಯಾ ಇಂದು ಭಾರತದ ಅಗ್ರಗಣ್ಯ ಜಲ ವೀರರಲ್ಲಿ ಒಬ್ಬರಾಗಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು, ನೀರನ್ನು ಸಂರಕ್ಷಿಸಲು, ಪರಿಸರವನ್ನು ಸಂರಕ್ಷಿಸಲು ಮತ್ತು ಆರ್ಥಿಕ ಪ್ರಯೋಜನಗಳನ್ನು ಒದಗಿಸಲು ಸುಸ್ಥಿರ ನೀರಿನ ನಿರ್ವಹಣೆ ಅಭ್ಯಾಸಗಳು ನಿರ್ಣಾಯಕವಾಗಿವೆ. ಕೃಷಿಯ ಮೇಲೆ ಅವಲಂಬಿತವಾದ ಗಮನಾರ್ಹ ಜನಸಂಖ್ಯೆಯೊಂದಿಗೆ, ಸಮರ್ಥ ನೀರಿನ ನಿರ್ವಹಣೆ ಅಭ್ಯಾಸಗಳು ನೀರಾವರಿ ಮತ್ತು ಇತರ ಉದ್ದೇಶಗಳಿಗಾಗಿ ನೀರಿನ ಲಭ್ಯತೆಯನ್ನು ಖಚಿತಪಡಿಸುತ್ತದೆ. ಮಳೆನೀರು ಕೊಯ್ಲು ಮತ್ತು ಜಲಾನಯನ ನಿರ್ವಹಣೆಯಂತಹ ಸುಸ್ಥಿರ ಅಭ್ಯಾಸಗಳು ಮಣ್ಣಿನ ಅವನತಿ, ನೀರು ತುಂಬುವಿಕೆ, ಲವಣಾಂಶ ಮತ್ತು ಮಾಲಿನ್ಯವನ್ನು ತಡೆಯುತ್ತದೆ.

ಬೇಸಿಗೆ ಬಂದಾಗ ನೀರಿಗೆ ಪರಿತಪಿಸುವ ಸಂದರ್ಭದಲ್ಲಿ ಆಮ್ಲಾ ರುಯಾ ಅವರ ಉಪಕ್ರಮ ಕಾರ್ಯಸಾಧು ಎನಿಸುತ್ತದೆ. ಇಂತಹ ಉಪಕ್ರಮಗಳನ್ನು ಉದ್ಯಮಿಗಳು ಎಲ್ಲೆಡೆ ನಿರ್ಮಿಸುವಂತಾಗಲಿ. ಆ ಮೂಲಕ ಜಲಸಂರಕ್ಷಣೆಗೆ ತಮ್ಮ ಬೆಂಬಲ ಸೂಚಿಸಲಿ ಎಂಬುದು ಈ ಬರಹದ ಆಶಯ.

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್.ಬಿ ಗುರುಬಸವರಾಜು

contributor

Similar News