ವನ್ಯ ಜೀವಿಗಳು, ನಮ್ಮ ಜೀವಿಗಳು

ಇತ್ತೀಚಿನ ವರ್ಷಗಳಲ್ಲಿ ವನ್ಯ ಜೀವಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿರುವುದು ಕಳವಳಕಾರಿಯಾಗಿದೆ. ಪ್ರತೀ ವರ್ಷ ಅಂದಾಜು 10,000 ವಿವಿಧ ಜಾತಿಯ ಜೀವಿಗಳು ನಾಶ ಹೊಂದುತ್ತಿವೆ. ಇಂದು ವಿಶ್ವದ ವನ್ಯಜೀವಿ ಜನಸಂಖ್ಯೆಯ ಅರ್ಧದಷ್ಟು ಜೀವಿಗಳು ಕಣ್ಮರೆಯಾಗಿವೆ. ವನ್ಯಜೀವಿಗಳ ಸಂರಕ್ಷಣೆ ಎಂದಿಗಿಂತ ಇಂದು ಅಗತ್ಯವಾಗಿದೆ. ಏಕೆಂದರೆ ವನ್ಯಜೀವಿ ನೈಸರ್ಗಿಕ ವಿಕಾಸದ ಆಧಾರಸ್ತಂಭವಾಗಿವೆ.

Update: 2024-03-03 06:30 GMT

ಇಂದು (ಮಾರ್ಚ್-3) ‘ವಿಶ್ವ ವನ್ಯಜೀವಿ ದಿನ’. ವನ್ಯ ಜೀವಿಗಳು ಎಂದಾಕ್ಷಣ ಚಿಕ್ಕಂದಿನಿಂದಲೂ ನಮ್ಮೂರಿನಲ್ಲಿ ನೋಡುತ್ತಿದ್ದ ಒಂದು ಫೋಟೊ ನೆನಪಾಗುತ್ತದೆ. ನಮ್ಮೂರ ಬಸ್‌ಸ್ಟ್ಯಾಂಡ್ ಬಂದಾಗಲೆಲ್ಲ ತೆಲಿಗಿ ಶ್ರೀಶೈಲಪ್ಪನರ ಪಂಚರ್ ಅಂಗಡಿಯಲ್ಲಿ ನೇತು ಹಾಕಿದ್ದ ಹುಲಿಯ ಜೊತೆಗಿನ ಕಪ್ಪುಬಿಳುಪಿನ ಚಿತ್ರ ಸದಾ ನನ್ನನ್ನು ಆಕರ್ಷಿಸುತ್ತಿತ್ತು. ಆ ಫೋಟೊ ಬಗ್ಗೆ ಶ್ರೀಶೈಲಪ್ಪರನ್ನು ಕೇಳಿದಾಗ ದೊಡ್ಡದಾದ ಒಂದು ಕುತೂಹಲ ಕಥನ ತೆರೆದುಕೊಳ್ಳುತ್ತಿತ್ತು. ಪ್ರತೀ ಬಾರಿ ಕೇಳಿದಾಗಲೂ ನಿನ್ನೆ ಮೊನ್ನೆ ನಡೆದ ಘಟನೆಯೇನೋ ಎಂಬಂತೆ ಭಾಸವಾಗುತ್ತಿತ್ತು. 1955ರ ಆಸುಪಾಸಿನಲ್ಲಿ ನಮ್ಮೂರಿಗೆ ಒಂದು ಹುಲಿ ಬಂದಿತಂತೆ. ಹೇಳಿ ಕೇಳಿ ನಮ್ಮೂರು ಬಯಲು ಸೀಮೆಯ ನಾಡು. ಸುತ್ತಮುತ್ತ ಎಲ್ಲೂ ಕಾಡು ಇಲ್ಲ. ಆದರೂ ಅದೆಲ್ಲಿಂದಲೋ ಬಂದ ಹುಲಿಯೊಂದು ನಮ್ಮೂರಿನ ಸುತ್ತಮುತ್ತ ಕಾಣಿಸಿಕೊಂಡಿತಂತೆ. ವಿದ್ಯುತ್ ಇನ್ನೂ ನಮ್ಮೂರಿಗೆ ಕಾಲಿಡದ ಆ ಸಮಯದಲ್ಲಿ ಹುಲಿ ವಿಷಯ ಕೇಳಿ ಅನೇಕರು ರಾತ್ರಿ ನಿದ್ದೆ ಇಲ್ಲದೆ ಕಳೆದಿದ್ದರಂತೆ. ಸುದ್ದಿ ತಿಳಿದ ಅರಣ್ಯ ಇಲಾಖೆಯವರು ಹಾಗೂ ಪೊಲೀಸ್ ಇಲಾಖೆಯವರು ಹುಲಿ ಹಿಡಿಯಲು ಅಗತ್ಯ ಸಾಮಗ್ರಿಗಳೊಂದಿಗೆ ಠಿಕಾಣಿ ಹೂಡಿದರಂತೆ. ಮೂರ್ನಾಲ್ಕು ದಿನಗಳ ಕಾಲ ಅಲ್ಲಿ ಇಲ್ಲಿ ತಪ್ಪಿಸಿಕೊಂಡು ಓಡಾಡಿದ ಹುಲಿ ಅನಿವಾರ್ಯವಾಗಿ ಪೊಲೀಸರ ಗುಂಡೇಟಿಗೆ ಬಲಿಯಾಯಿತಂತೆ. ಅದರಲ್ಲೂ ವಿಶೇಷವಾಗಿ ನಮ್ಮೂರಿನ ಪಕ್ಕೀರಪ್ಪ ಎಂಬವರು ಹುಲಿಯನ್ನು ಹಿಡಿಯಲು ಹೋಗಿ ಅದರೊಂದಿಗೆ ಸೆಣಸಿ, ಅದರ ಬಾಯಿಗೆ ತನ್ನ ಮೊಣಕೈ ತುರುಕಿದರಂತೆ. ಆಗ ಪೊಲೀಸರು ಗುಂಡೇಟು ನೀಡಿ ಕೊಂದರಂತೆ. ಈ ಘಟನೆಯ ನಂತರ ಕಲ್ಲುಕುಟಿಗರ ಪಕ್ಕೀರಪ್ಪ ಹುಲಿ ಪಕ್ಕೀರಪ್ಪನೆಂದೇ ಹೆಸರುವಾಸಿಯಾದರು.

ನಾವು ಚಿಕ್ಕವರಿದ್ದಾಗ ನಮ್ಮ ಹೊಳಗುಂದಿಗೆ ಒಂದು ಕರಡಿ ಬಂದಿತ್ತು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೆಲವರ ಮೇಲೆ ದಾಳಿ ಮಾಡಿತ್ತು. ಅದರಲ್ಲೂ ತಿಮ್ಮಕ್ಕ ಎಂಬ ಮಹಿಳೆಯ ಮೇಲೆ ದಾಳಿ ಮಾಡಿ ಆಕೆಯ ಮುಖವನ್ನೆಲ್ಲ ಪರಚಿತಂತೆ. ಆದರೆ ಯಾವುದೇ ಪ್ರಾಣಾಪಾಯ ಆಗಿರಲಿಲ್ಲ. ಅರಣ್ಯ ಇಲಾಖೆಯವರು ಹಿಡಿಯಲು ಹರಸಾಹಸ ಮಾಡಿದರು. ಅಂತಿಮವಾಗಿ ಊರ ಹೊರಗಿನ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿತ್ತು. ಆ ನಂತರ ತಿಮ್ಮಕ್ಕ ‘ಕಲ್ಡಿ ತಿಮ್ಮಕ್ಕ’ ಆದರು. ಹೀಗೆ ಕಾಡು ಪ್ರಾಣಿ ಮತ್ತು ಮನುಷ್ಯರ ಮುಖಾಮುಖಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಈ ಮುಖಾಮುಖಿಯಲ್ಲಿ ವನ್ಯಜೀವಿಗಳು ಅಂತ್ಯ ಕಾಣುತ್ತಿರುವುದು ಮಾತ್ರ ಘೋರ ದುರಂತವಾಗಿದೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೊಂದು ದಿನ ಮಾನವರನ್ನು ಮಾನವರೇ ಕೊಲ್ಲುತ್ತಾ ತಮ್ಮ ಉಳಿವಿಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದರೆ ಆಶ್ಚರ್ಯವೇನಿಲ್ಲ.

ಇತ್ತೀಚಿನ ವರ್ಷಗಳಲ್ಲಿ ವನ್ಯ ಜೀವಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿರುವುದು ಕಳವಳಕಾರಿಯಾಗಿದೆ. ಪ್ರತೀ ವರ್ಷ ಅಂದಾಜು 10,000 ವಿವಿಧ ಜಾತಿಯ ಜೀವಿಗಳು ನಾಶ ಹೊಂದುತ್ತಿವೆ. ಇಂದು ವಿಶ್ವದ ವನ್ಯಜೀವಿ ಜನಸಂಖ್ಯೆಯ ಅರ್ಧದಷ್ಟು ಜೀವಿಗಳು ಕಣ್ಮರೆಯಾಗಿವೆ. ವನ್ಯಜೀವಿಗಳ ಸಂರಕ್ಷಣೆ ಎಂದಿಗಿಂತ ಇಂದು ಅಗತ್ಯವಾಗಿದೆ. ಏಕೆಂದರೆ ವನ್ಯಜೀವಿ ನೈಸರ್ಗಿಕ ವಿಕಾಸದ ಆಧಾರಸ್ತಂಭವಾಗಿವೆ. ಆನುವಂಶಿಕ ರೂಪಾಂತರವು ಜೀವನದ ಮೂಲ ಮತ್ತು ವಿಕಾಸದ ಆಧಾರ ಸ್ತಂಭದ ಮೂಲಭೂತ ಅಂಶವಾಗಿದೆ. ಸಾಕಷ್ಟು ವೈವಿಧ್ಯತೆಯ ಅನುಪಸ್ಥಿತಿಯಲ್ಲಿ, ಭೂಮಿಯಲ್ಲಿನ ಜೀವಿಗಳು ಸಾಯುತ್ತಿವೆ. ಏಕೆಂದರೆ ಪ್ರತೀ ಜೀವಿಯು ಆಹಾರ ಸರಪಳಿಯಲ್ಲಿ ಪ್ರಮುಖವಾಗಿವೆ. ವನ್ಯಜೀವಿಗಳು ವಾಸಿಸುವ ಪ್ರದೇಶ ಅಪಾರ ಮೌಲ್ಯವನ್ನು ಹೊಂದಿದೆ. ಪರಿಣಾಮವಾಗಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ವನ್ಯಜೀವಿಗಳು ಪ್ರಮುಖವಾಗಿವೆ. ಅವುಗಳ ಹಠಾತ್ ಕಣ್ಮರೆಯು ಸೂಕ್ಷ್ಮವಾದ ಆಹಾರ ಸರಪಳಿ ಸಮತೋಲನವನ್ನು ತೀವ್ರವಾಗಿ ತೊಂದರೆಗೊಳಿಸುತ್ತದೆ ಮತ್ತು ಪರಿಸರ ವ್ಯವಸ್ಥೆಗೆ ಬದಲಾಯಿಸಲಾಗದ ಹಾನಿಗೆ ಕಾರಣವಾಗುತ್ತದೆ.

ಪರಾಗಸ್ಪರ್ಶ ಮತ್ತು ಸ್ಥಳೀಯ ಸಸ್ಯಗಳ ಬದುಕುಳಿಯುವಿಕೆಗೆ ಜೀವಿಗಳು ಅತ್ಯಗತ್ಯ. ಪಕ್ಷಿಗಳು, ಕೀಟಗಳು ಮತ್ತು ಜೇನುನೊಣಗಳು ಆಹಾರ ಉತ್ಪಾದನೆಗೆ ಗಮನಾರ್ಹವಾಗಿ ಕೊಡುಗೆ ನೀಡುವ ಕೆಲವು ಸಣ್ಣ ಪ್ರಾಣಿಗಳಾಗಿವೆ. ಸಸ್ಯಗಳು ಔಷಧಿಗಳ ಪ್ರಾಥಮಿಕ ಮೂಲವಾಗಿದ್ದರೂ, ಕೆಲವು ಪ್ರಾಣಿಗಳು ಔಷಧಿಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಉದಾಹರಣೆಗೆ, ನಾಗರಹಾವಿನ ವಿಷವು ಕುಷ್ಠರೋಗದ ಔಷಧಿಗಳಲ್ಲಿ ಒಂದು ಪ್ರಮುಖ ಅಂಶವಾಗಿದೆ ಮತ್ತು ಏಡಿಗಳನ್ನು ಶಿಲೀಂಧ್ರ ನಿವಾರಕ ಚಿಕಿತ್ಸೆಗೆ ಬಳಸಲಾಗುತ್ತದೆ. ವನ್ಯಜೀವಿಗಳ ಆರೈಕೆಯು ಅವುಗಳ ನೈಸರ್ಗಿಕ ಆವಾಸಸ್ಥಾನಗಳಾದ ಮರಗಳು ಮತ್ತು ಸಸ್ಯವರ್ಗದ ಆರೈಕೆಯನ್ನು ಒಳಗೊಂಡಿರುತ್ತದೆ. ಮಾನವರು ಆಹಾರಕ್ಕಾಗಿ ಕೃಷಿ, ಸಸ್ಯಗಳು ಮತ್ತು ಪ್ರಾಣಿಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈ ಬೆಳೆಗಳ ಬೆಳವಣಿಗೆಯ ಮೇಲೆ ವನ್ಯಜೀವಿಗಳು ಗಮನಾರ್ಹ ಪರಿಣಾಮ ಬೀರುತ್ತವೆ. ಅಲ್ಲದೆ ವನ್ಯಜೀವಿಗಳು ಬಹುಜನರ ಜೀವನೋಪಾಯಗಳಾಗಿವೆ. ವನ್ಯಜೀವಿ ಪ್ರವಾಸೋದ್ಯಮದಿಂದ ಪ್ರಯೋಜನ ಪಡೆಯುವ ಅನೇಕ ಜನರಿದ್ದಾರೆ. ಉದಾಹರಣೆಗೆ ಮೀನುಗಾರಿಕೆ ಉಪಕರಣಗಳನ್ನು ಒದಗಿಸುವವರು, ಪೋರ್ಟರ್‌ಗಳು, ಮಾರ್ಗದರ್ಶಿಗಳು, ಚಾಲಕರು, ಪಕ್ಷಿ ವೀಕ್ಷಣೆಗೆ ಬೈನಾಕ್ಯುಲರ್‌ಗಳು, ಸ್ನಾರ್ಕ್ಲಿಂಗ್ ಉಪಕರಣಗಳು ಮತ್ತು ಸ್ಕೂಬಾ ಡೈವಿಂಗ್ ಉಪಕರಣಗಳು ಮತ್ತು ಇನ್ನೂ ಮುಂತಾದವುಗಳು ವನ್ಯಜೀವಿಗಳ ಮೇಲಿನ ಜೀವನೋಪಾಯಗಳಾಗಿವೆ.

ಹಾಗಾಗಿ ವನ್ಯಜೀವಿ ಸಂರಕ್ಷಣೆಯು ಎಲ್ಲಕ್ಕಿಂತ ಹೆಚ್ಚು ಮಹತ್ವವುಳ್ಳ ಅಂಶವಾಗಿದೆ. ವನ್ಯಜೀವಿ ಸಂರಕ್ಷಣೆಯ ಪರಿಣಾಮವಾಗಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಭಾರತದ ಕೇಂದ್ರ ಸರಕಾರವು 1972 ರ ವನ್ಯಜೀವಿ (ರಕ್ಷಣೆ) ಕಾಯ್ದೆಯನ್ನು ಜಾರಿಗೆ ತಂದಿತು. ಕಾಯ್ದೆಯು ವನ್ಯಜೀವಿಗಳ ರಕ್ಷಣೆಗಾಗಿ ಸಂರಕ್ಷಿತ ಪ್ರದೇಶಗಳನ್ನು ಸ್ಥಾಪಿಸಲು ಹೆಚ್ಚು ಒತ್ತು ನೀಡಿತು. ಜೊತೆಗೆ ಶೆಡ್ಯೂಲ್ 1ರಿಂದ 4ರವರೆಗೆ ಪಟ್ಟಿ ಮಾಡಲಾದ ನಿರ್ದಿಷ್ಟ ಪ್ರಾಣಿಗಳನ್ನು ಬೇಟೆಯಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.

ರಾಜ್ಯಗಳಲ್ಲಿ ಜೌಗು ಪ್ರದೇಶಗಳನ್ನು ರಕ್ಷಿಸಲು ಜೌಗು ಪ್ರದೇಶ (ಸಂರಕ್ಷಣೆ ಮತ್ತು ನಿರ್ವಹಣೆ) ನಿಯಮಗಳು 2010 ಅನ್ನು ರಚಿಸಲಾಗಿದೆ. ಭೂ ಪ್ರದೇಶದಂತೆ ಜಲಚರ ಪರಿಸರ ವ್ಯವಸ್ಥೆಗಳ ಸಂರಕ್ಷಣೆಗಾಗಿ ಕೇಂದ್ರ ಪ್ರಾಯೋಜಿತ ರಾಮ್ಸರ್ ಸೈಟ್ ಯೋಜನೆಯನ್ನು ಒಳಗೊಂಡಿದೆ. ಇದು ದೇಶದ ತೇವಭೂಮಿಗಳ ನಿರ್ವಹಣೆಗೆ ರಾಜ್ಯಗಳಿಗೆ ಸಹಾಯ ಮಾಡುತ್ತದೆ.

ಅಳಿವಿನಂಚಿನಲ್ಲಿರುವ ಪ್ರಾಣಿಗಳ ವ್ಯಾಪಾರ ಸೇರಿದಂತೆ, ಅಕ್ರಮ ವನ್ಯಜೀವಿ ವ್ಯಾಪಾರವನ್ನು ಎದುರಿಸಲು ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋವನ್ನು ರಚಿಸಲಾಗಿದೆ. ಇದಲ್ಲದೆ, 1973 ರಿಂದ ಭಾರತ ಸರಕಾರವು ನಿರ್ದಿಷ್ಟ ಆವಾಸಸ್ಥಾನ ಅಥವಾ ಪರಿಸರಕ್ಕೆ ಪ್ರಮುಖವಾದ ಪ್ರತ್ಯೇಕ ಪ್ರಾಣಿ ಪ್ರಭೇದಗಳನ್ನು ರಕ್ಷಿಸುವ ಉದ್ದೇಶದಿಂದ ಹಲವಾರು ವನ್ಯಜೀವಿ ಸಂರಕ್ಷಣಾ ಯೋಜನೆಗಳನ್ನು ಪ್ರಾರಂಭಿಸಿದೆ. ಪ್ರಾಜೆಕ್ಟ್ ಟೈಗರ್, ಪ್ರಾಜೆಕ್ಟ್ ಎಲಿಫೆಂಟ್, ಸೀ ಆಮೆ ಯೋಜನೆ ಇತ್ಯಾದಿಗಳು ಗಮನಾರ್ಹ ಉದಾಹರಣೆಗಳಾಗಿವೆ. ಅವುಗಳಲ್ಲಿ ದರೋಜಿ ಕರಡಿಧಾಮ ಯೋಜನೆಯೂ ಒಂದು.

ಇತ್ತೀಚೆಗೆ ಖ್ಯಾತ ವಿಜ್ಞಾನ ಬರಹಗಾರರಾದ ನಾಗೇಶ ಹೆಗಡೆ, ಟಿ.ಜಿ.ಶ್ರೀನಿಧಿ ಹಾಗೂ ಡಾ.ಪರಮೇಶ್ವರಯ್ಯ ಸೊಪ್ಪಿಮಠ ಅವರ ಜೊತೆಗೆ ದರೋಜಿ ಕರಡಿ ಧಾಮಕ್ಕೆ ಹೋಗಿದ್ದೆ. ದರೋಜಿ ಬಯಲು ಸೀಮೆಯ ಕುರುಚಲು ಕಾಡು ಹೊಂದಿದ ಪ್ರದೇಶವಾಗಿದ್ದು, ಇಡೀ ವಿಶ್ವದಲ್ಲಿ ಪ್ರಸಿದ್ಧಿಯಾದ ಕರಡಿಧಾಮವಾಗಿದೆ. ಸುಮಾರು 120 ಕರಡಿಗಳು ಇಲ್ಲಿ ವಾಸಿಸುತ್ತಿವೆ. ರಾಶಿ ರಾಶಿ ಬಂಡೆಗಳಿಂದ ಸೃಷ್ಟಿಯಾದ ಬೆಟ್ಟಗಳಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಗುಹೆಗಳಲ್ಲಿ ಈ ಕರಡಿಗಳ ವಾಸ ಮತ್ತು ಸಂತಾನಾಭಿವೃದ್ಧಿ. ಆಹಾರಕ್ಕಾಗಿ ಈ ಕರಡಿಗಳು ಗುಹೆಗಳಿಂದ ಇಳಿದು ಕುರುಚಲು ಕಾಡಿನೊಳಕ್ಕೆ ಬರುತ್ತವೆ. ಇದು ಹೆಸರಿಗೆ ಮಾತ್ರ ಕರಡಿಧಾಮ. ಆದರೆ ಇಲ್ಲಿ ಇನ್ನಿತರ ವನ್ಯಜೀವಿಗಳೂ ವಾಸವಾಗಿವೆ. ಅದರಲ್ಲೂ ವಿಶೇಷವಾಗಿ ಚಿರತೆ, ತೋಳ, ಕತ್ತೆ ಕಿರುಬ, ಕಾಡುಹಂದಿ, ನಕ್ಷತ್ರ ಆಮೆ, ಮುಳ್ಳುಹಂದಿ, ಪಾಂಗೋಲಿನ್, ಉಡ, ಮುಂಗುಸಿ, ನವಿಲು, ಕೌಜುಗ, ಕಾಡುಕೋಳಿ ಮುಂತಾದ ವನ್ಯಜೀವಿಗಳಿವೆ. ಅನೇಕ ಜಾತಿಯ ಸಸ್ಯಗಳು, 150ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು 30ಕ್ಕೂ ಹೆಚ್ಚು ವಿವಿಧ ಚಿಟ್ಟೆಗಳ ತಾಣವೂ ಆಗಿದೆ. ಹೀಗೆ ನಿರ್ದಿಷ್ಟ ಪ್ರದೇಶಗಳಲ್ಲಿ ವನ್ಯಜೀವಿ ಸಂರಕ್ಷಣ ತಾಣಗಳನ್ನು ನಿರ್ಮಿಸುವ ಮೂಲಕವಾದರೂ ಪ್ರಾಣಿಗಳ ಜೀವವನ್ನು ರಕ್ಷಿಸುವ ಕಾರ್ಯ ಉತ್ತುಂಗಕ್ಕೇರಬೇಕಾದ ಅನಿವಾರ್ಯತೆ ಇದೆ. ಬರೀ ಕಾಯ್ದೆ ಕಾನೂನುಗಳಿಗಿಂತ ಮಾನವ ಇಚ್ಛಾ ಶಕ್ತಿಯೂ ಅಗತ್ಯವಾಗಿದೆ. ವನ್ಯಜೀವಿಗಳು ನಮ್ಮ ಜೀವಿಗಳು ಎಂಬ ಪ್ರಜ್ಞೆ ಎಲ್ಲರಲ್ಲಿ ಮೂಡಿದಾಗ ಮಾತ್ರ ಎಲ್ಲಾ ಜೀವಿಗಳ ಉಳಿವು ಸಾಧ್ಯ. ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಬಿ. ಗುರುಬಸವರಾಜ

contributor

Similar News