'ಯಾಂಬು'ಗೊಂದು ಕೊಂಬು : ಕೃತಕ ಬುದ್ಧಿಮತ್ತೆ ನಮ್ಮನ್ನಾಳುವುದೇ?

ಯಾಂತ್ರಿಕ ಬುದ್ಧಿಮತ್ತೆಯು ಹೀಗೆ ಮುಂದುವರಿಯುತ್ತಾ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಾ ಮುಂದೊಂದು ದಿನ ಅದು ನಮ್ಮನ್ನು ಆಳಬಹುದಲ್ಲವೇ? ಅದನ್ನು ಎಲ್ಲೆಡೆ ಬೆಳೆಯಲು ಬಿಟ್ಟರೆ ಈಗಿರುವ ವಿದ್ಯಾವಂತರ ಪಾಡೇನು? ಯಾಂತ್ರಿಕ ಬುದ್ಧಿವಂತಿಕೆಯು ಎಲ್ಲಾ ಕೆಲಸಗಳನ್ನು ಮಾಡುವುದಾದರೆ ಮಾನವರ ಅಗತ್ಯವಾದರೂ ಏನು? ಈಗಲೇ ಕೆಲಸವಿಲ್ಲದೆ ನಿರುದ್ಯೋಗಿಗಳಾಗುತ್ತಿರುವವರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಒಂದು ವೇಳೆ ಯಾಂಬು ಎಲ್ಲ್ಲೆಡೆ ಕಾರ್ಯ ನಿರ್ವಹಿಸುವಂತಾದರೆ ನಿರುದ್ಯೋಗಿಗಳ ಪಾಡೇನು? ಇದರಿಂದ ಕುಟುಂಬ ನಿರ್ವಹಣೆಯ ಮಾರ್ಗವೇನು? ಎಂಬ ಪ್ರಶ್ನೆಗಳು ಬೆಳೆಯುತ್ತಲೇ ಹೋಗುತ್ತವೆ.

Update: 2023-07-15 18:35 GMT

ನಾನು ಪ್ರಾಥಮಿಕ ಶಾಲೆ ಓದುವ ಕಾಲದಲ್ಲಿ ಯಾಂತ್ರಿಕ ಜಗತ್ತು ಹೆಚ್ಚು ಸದ್ದು ಮಾಡುತ್ತಿತ್ತು. ಆಗತಾನೆ ಜಗತ್ತಿಗೆ ಕಾಲಿಟ್ಟ ಸಣ್ಣ ಸಣ್ಣ ಯಂತ್ರಗಳು ಕ್ರಮೇಣವಾಗಿ ನನ್ನ ಹೊಳಗುಂದಿಯನ್ನೂ ಆವರಿಸತೊಡಗಿದ್ದವು. ದೇವಸ್ಥಾನಗಳಲ್ಲಿ ಮಾತ್ರ ಹಾಡಲು ಕೇಳಲು ಅವಕಾಶವಿದ್ದ ನನ್ನೂರು ಹೊಳಗುಂದಿಗೆ ವಾಕ್‌ಮನ್ ಕಾಲಿಟ್ಟಾಗ ''ಅವರು ಮನೇಲಿ ಹಾಡು ಹೇಳುವ ಯಂತ್ರ ತಂದಿದ್ದಾರಂತೆ. ಬಟನ್ ಒತ್ತಿದ್ರೆ ಸಾಕು ಅದು ಹಾಡಲು ಶುರು ಮಾಡುತ್ತೆ. ಓಡಾಡುತ್ತಾ ನಾವಿದ್ದಲ್ಲೇ ಹಾಡು ಕೇಳಬಹುದಂತೆ'' ಎಂಬುದನ್ನು ಕೇಳಿ ಅಚ್ಚರಿ ಪಟ್ಟಿದ್ದೆವು. ಇಂತಹ ಅನೇಕ ಕಿರು ಯಂತ್ರಗಳು ನನ್ನೂರಿಗೆ ಬಂದಾಗ ಅಚ್ಚರಿ ಮತ್ತು ಕಾತರದಿಂದ ನೋಡಲು ಮನಸ್ಸು ಹಪಹಪಿಸುತ್ತಿತ್ತು. ಅದು ಬಳಸಲು ನಮಗೆ ಸಿಗುವುದೇ ಎಂಬ ಆತಂಕವೂ ಇತ್ತು. ಅಂದು ಶಾಲೆಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಯಾರಾದರೂ ಚೆನ್ನಾಗಿ ಭಾಷಣ ಮಾಡಿದಾಗ, ಹರಳು ಹುರಿದಂತೆ ಮಾತನಾಡಿದ ಎಂದು ಚಪ್ಪಾಳೆ ತಟ್ಟುತ್ತಿದ್ದೆವು. ಕಾರ್ಯಕ್ರಮ ನಿರೂಪಣೆಯಲ್ಲಿ ನಮ್ಮ ಹಾಲೇಶಣ್ಣನದು ಎತ್ತಿದ ಕೈ. ತುಂಬಾ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸುತ್ತಿದ್ದ. ಇದನ್ನು ಕಲಿಯುವುದು ಹೇಗೆ ಎಂದು ನಾವಂದು ತಲೆಕೆಡಿಸಿಕೊಂಡಿದ್ದೆವು. ನಿರೂಪಣೆಯನ್ನು ನಮಗೂ ಕಲಿಸಿ ಎಂದು ಕೇಳಲು ಭಯ. ಆದರೆ ಈಗ ಕಲಿಸಲು ಯಾರನ್ನೂ ಕೇಳಬೇಕಾದ ಅಗತ್ಯ ಇಲ್ಲ. ಎಲ್ಲವನ್ನು ಮೊಬೈಲ್ ಎಂಬ ಜಾದೂ ಯಂತ್ರವೇ ಹೇಳಿಕೊಡುತ್ತದೆ. ನಾವು ಬಾಲಕರಾಗಿದ್ದಾಗ ಪ್ರತೀ ಕಾರ್ಯಕ್ರಮದ ಭಾಷಣದಲ್ಲೂ ''ಇದು ವಿಜ್ಞಾನ ಯುಗ'' ಎಂದು ಎಲ್ಲರೂ ಹೇಳುತ್ತಿದ್ದರು. ಈಗ ಅದು ವಿಜ್ಞಾನ ಯುಗದಿಂದ ತಂತ್ರಜ್ಞಾನ ಯುಗಕ್ಕೆ, ತಂತ್ರಜ್ಞಾನ ಯುಗದಿಂದ ಕಂಪ್ಯೂಟರ್ ಯುಗಕ್ಕೆ ಬದಲಾಗಿ, ಪ್ರಸಕ್ತ ಕೃತಕ ಯುಗಕ್ಕೆ ಕಾಲಿಟ್ಟಿದ್ದೇವೆ. ಕಣ್ಣಿಗೆ ಕಂಡದ್ದೆಲ್ಲವೂ ನಿಜ ಎಂದು ಹೇಳಲು ಆಗುವುದೇ ಇಲ್ಲ. ಈ ಕ್ಷಣದಲ್ಲಿ ನಿಜ ಇದ್ದದ್ದು ಮರುಕ್ಷಣದಲ್ಲಿ ಸುಳ್ಳಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ನಾವು ಬಾಲಕರಿದ್ದಾಗ ಕೃತಕ ಬುದ್ಧಿಯ ಬಗ್ಗೆ ಇರಲಿ, ಕೃತಕ ಮಾನವರನ್ನೂ ಊಹಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಆದರೆ ಈಗ ಅದೂ ಸತ್ಯವಾಗಿದೆ. ಈಗ ಎಲ್ಲೆಡೆ ಕೃತಕ ಬುದ್ಧಿಮತ್ತೆಯ ಬಗ್ಗೆ ಚರ್ಚಿಸಲಾಗುತ್ತಿದೆ. ನಮ್ಮ ದೈನಂದಿನ ಅನೇಕ ಕೆಲಸಗಳನ್ನು ಮಾಡಲು ಕೃತಕ ಬುದ್ಧಿ ಮತ್ತೆ ಆಧಾರಿತ ಯಂತ್ರಮಾನವರು ಅಥವಾ ಚಾಟ್‌ಬಾಟ್‌ಗಳು ಕೆಲಸ ಮಾಡುತ್ತಿವೆ. ಕೃತಕ ಬುದ್ಧಿವಂತಿಕೆಯನ್ನು ಹೊಂದಿದ ಯಂತ್ರ ಮಾನವರ ಬುದ್ಧಿಗೆ ಯಾಂತ್ರಿಕ ಬುದ್ಧಿವಂತಿಕೆ (ಯಾಂಬು) ಎಂದು ಕರೆಯುತ್ತಾರೆ.

ಕಳೆದ ರವಿವಾರ (9ನೇ ಜುಲೈ 2023) ಒಡಿಶಾದ ಖಾಸಗಿ ವಾಹಿನಿಯಲ್ಲಿ 'ಲಿಸಾ' ಎಂಬ ಯಾಂತ್ರಿಕ ಬುದ್ಧಿಮತ್ತೆಯ ಮಹಿಳೆ ಅತ್ಯಂತ ಸುಮಧುರವಾಗಿ, ಸುಲಲಿತವಾಗಿ, ಯಾವುದೇ ಕಿರುಚಾಟ ಇಲ್ಲದೆ ಸುದ್ದಿಯನ್ನು ಓದಿ ಎಲ್ಲರ ಮನ ಗೆದ್ದಿದ್ದಾಳೆ. ಒಡಿಶಾದ ಸಾಂಪ್ರದಾಯಿಕ ಕೈಮಗ್ಗದ ಸೀರೆಯನ್ನು ಧರಿಸಿದ್ದ ಲಿಸಾ, ಒಡಿಯಾ ಮತ್ತು ಇಂಗ್ಲಿಷ್‌ನಲ್ಲಿ ಒಟಿವಿ ನೆಟ್‌ವರ್ಕ್‌ನ ದೂರದರ್ಶನ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗಾಗಿ ಸುದ್ದಿಗಳನ್ನು ಪ್ರಸ್ತುತಪಡಿಸಿದಳು. ಲಿಸಾ ಹಲವು ಭಾಷೆಗಳಲ್ಲಿ ಮಾತನಾಡಬಲ್ಲಳು ಎಂಬುದು ಅದನ್ನು ರೂಪಿಸಿದವರ ಅನಿಸಿಕೆ. ಆದರೆ ಸದ್ಯಕ್ಕೆ ಒಟಿವಿ ನೆಟ್‌ವರ್ಕ್‌ನ ದೂರದರ್ಶನ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್ ಗಳಿಗಾಗಿ ಒಡಿಯಾ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಸುದ್ದಿಗಳನ್ನು ಪ್ರಸ್ತುತಪಡಿಸುತ್ತಾರೆ. ಹಾಗಂತ ಲಿಸಾ ಜಗತ್ತಿನ ಮೊದಲ ಯಾಂಬು ಸುದ್ದಿ ವಾಚಕಿ ಏನಲ್ಲ. ಕಳೆದ ಎಪ್ರಿಲ್‌ನಲ್ಲಿ ಕುವೈತ್ ಮಾಧ್ಯಮ ಔಟ್ಲೆಟ್, ಕುವೈತ್ ನ್ಯೂಸ್‌ನಲ್ಲೂ 'ಫೆದಾ' ಹೆಸರಿನ ಯಾಂಬು ಮಹಿಳೆ ಸುದ್ದಿ ವಾಚಿಸಿದ್ದಳು. ಇದನ್ನು ಗಮನಿಸಿದರೆ ಪ್ರಸಕ್ತ ಖಾಸಗಿ ದೂರದರ್ಶನ ವಾಹಿನಿಗಳಲ್ಲಿ ಕಿವಿಯ ತಮಟೆ ಒಡೆದು ಹೋಗುವಂತೆ ಕಿರುಚಾಡುವ ಸುದ್ದಿ ನಿರೂಪಕರಿಗೆ ಬ್ರೇಕ್ ಬೀಳಲಿದೆಯೇ? ಒಂದು ಸಾಲನ್ನು ತಿರುವು ಮುರುವು ಮಾಡಿ ಹೇಳಿದ್ದನ್ನೇ ಪದೇ ಪದೇ ಏರಿಸಿದ ಧ್ವನಿಯಲ್ಲಿ ಅರಚುವ ಸುದ್ದಿ ನಿರೂಪಕರ ಧ್ವನಿ ಅಡಗುವುದೇ? ಎಂಬಂತಹ ಪ್ರಶ್ನೆಗಳು ಕಾಡತೊಡಗಿವೆ. ಈ ಪ್ರಶ್ನೆಗಳಿಗೆ ಉತ್ತರ ಹೌದು ಎಂದಾಗಬಹುದು. ಇದಕ್ಕೆಲ್ಲ ಕಾರಣ ಕೃತಕ ಬುದ್ಧಿಮತ್ತೆಯ ಭಾಗವಾಗಿ ರೂಪುಗೊಂಡ ಚಾಟ್‌ಬಾಟ್‌ಗಳು. ಇಂತಹ ಚಾಟ್‌ಬಾಟ್‌ಗಳು ಈಗಾಗಲೇ ಅನೇಕ ಆನ್‌ಲೈನ್ ವೇದಿಕೆಯಲ್ಲಿ ಕೆಲಸ ಮಾಡುತ್ತಿವೆ. ಕೆಲವು ಜಾಲತಾಣಗಳಿಗೆ ನೀವು ಭೇಟಿಕೊಟ್ಟಾಗ ಅದರಲ್ಲೂ ವಾಣಿಜ್ಯೋದ್ಯಮ ವಹಿವಾಟಿನ ಜಾಲತಾಣಗಳಿಗೆ ಭೇಟಿಕೊಟ್ಟಾಗ ಅಲ್ಲಿ ಒಂದು ಕಿರಿದಾದ ಕಿಟಕಿಯಲ್ಲಿ ನಾನು ನಿಮಗೆ ಸಹಾಯ ಮಾಡಬಹುದೇ? ಎಂಬ ಬರಹ ಕಾಣಿಸಿಕೊಳ್ಳುತ್ತದೆ. ಅದಕ್ಕೊಂದು ಆಕರ್ಷಕವಾದ ಎಮೋಜಿಯೂ ಅಲ್ಲಿ ಕಾಣಿಸಿಕೊಳ್ಳುತ್ತದೆ. ಅದು ನಿಮ್ಮನ್ನು ಸೆಳೆದುಕೊಳ್ಳುವ ಭಾಗವಾಗಿ ಬ್ಲಿಂಕ್ ಆಗುತ್ತಲೇ ಇರುತ್ತದೆ. ಇವೆಲ್ಲವೂ ಕೃತಕ ಬುದ್ಧಿಮತ್ತೆಯಿಂದ ಸೃಜಿತವಾದ ಚಾಟ್‌ಬಾಟ್‌ಗಳು. ಆ ಜಾಲತಾಣಕ್ಕೆ ಸಂಬಂಧಿಸಿದ ಸಂದೇಹ ಹಾಗೂ ಪ್ರಶ್ನೆಗಳಿದ್ದರೆ ಅವುಗಳನ್ನು ಚಾಟ್‌ಬಾಟ್‌ನಲ್ಲಿ ಹಾಕಿದರೆ ತಕ್ಷಣವೇ ನಿಮಗೆ ಮಾಹಿತಿ ನೀಡುತ್ತವೆ. ಅನೇಕ ಖಾಸಗಿ ಕಂಪೆನಿಗಳು ತರಬೇತಿ ನೀಡಿದ ಚಾಟ್‌ಬಾಟ್‌ಗಳನ್ನು ಬಳಸುತ್ತಿವೆ. ಕಳೆದ ನವೆಂಬರ್ 2022 ರಿಂದ ಜಾರಿಗೆ ಬಂದ 'ಚಾಟ್ ಜಿಪಿಟಿ' ಹೆಸರಿನ ಚಾಟ್‌ಬಾಟ್ ಇಡೀ ಜಗತ್ತಿನ ದಿಕ್ಕನ್ನೇ ಬದಲಾಯಿಸಿತು. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಲ್ಲಿ ಯಾಂತ್ರಿಕ ಬುದ್ಧಿಮತ್ತೆ ಎಂಬುದು ಒಂದು ಮಹತ್ತರ ಬೆಳವಣಿಗೆಯಾಗಿದೆ. ಕೃತಕ ಬುದ್ಧಿಮತ್ತೆ ಈ ಕಾಲದ ಅತ್ಯಂತ ಪ್ರಮುಖ ಮತ್ತು ವೇಗವಾಗಿ ವಿಕಸಿಸುವ ತಂತ್ರಜ್ಞಾನಗಳಲ್ಲಿ ಒಂದಾಗುತ್ತಿದೆ. ಯಂತ್ರ ಕಲಿಕೆ, ನೈಸರ್ಗಿಕ ಭಾಷಾ ಸಂಸ್ಕರಣೆ ಮತ್ತು ಕಂಪ್ಯೂಟರ್ ದೃಷ್ಟಿಯಲ್ಲಿನ ಪ್ರಗತಿಯೊಂದಿಗೆ, ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು, ಪ್ರಾಪಂಚಿಕ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಲು ಮತ್ತು ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ರಚಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಲಾಗುತ್ತಿದೆ. ಯಾಂತ್ರಿಕ ಬುದ್ಧಿಮತ್ತೆ ಬಳಕೆ ದಿನೇ ದಿನೇ ವಿಸ್ತಾರಗೊಳ್ಳುತ್ತಲೇ ಇದೆ. ಅದು ಬಹುತೇಕ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಲೇ ಇದೆ. ವಾಹನ ಚಾಲನೆಯಿಂದ ಹಿಡಿದು ಹೋಟೆಲ್‌ನ ಮಾಣಿ ಕೆಲಸದವರೆಗೂ ವೈವಿಧ್ಯಮಯ ಕೆಲಸಗಳನ್ನು ಮಾಡಲು ಯಾಂತ್ರಿಕ ಬುದ್ಧಿಮತ್ತೆಯನ್ನು ಬಳಸಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೆಲ ಹೋಟೆಲ್‌ಗಳಲ್ಲಿ ರೊಬೋಟ್‌ಗಳು ಸಪ್ಲಯರ್‌ಗಳಾಗಿರುವ ವೀಡಿಯೊ ತುಣುಕುಗಳು ನಮಗೆ ಸಾಕಷ್ಟು ಸಿಗುತ್ತವೆ. ಇಷ್ಟೆಲ್ಲಾ ಅಲ್ಲದೆ ಐಶಾರಾಮಿ ಜೀವನದ ಚಾಕರಿಗೆ ಅನೇಕ ರೊಬೋಟ್‌ಗಳು ಲಭ್ಯ ಇವೆ. ನಿಮಗೆ ಯಾವ ಕೆಲಸ ಬೇಕೋ ಆ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸುವ ಹಾಗೂ ಬೇಸರವಿಲ್ಲದೆ ಅದೇ ಕೆಲಸವನ್ನು ಮತ್ತೆ ಮತ್ತೆ ಮಾಡುವ ಯಂತ್ರ ಮಾನವರು ಸಾಕಷ್ಟಿದ್ದಾರೆ. ಯಾಂತ್ರಿಕ ಬುದ್ಧಿಮತ್ತೆಯ ಕೆಲಸ ಇಷ್ಟಕ್ಕೆ ನಿಂತಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ರೋಗ ಪತ್ತೆ ಹಚ್ಚುವ, ಚಿಕಿತ್ಸೆ ನೀಡುವ, ಅವಕಾಶ ಸಿಕ್ಕರೆ ಶಸ್ತ್ರಚಿಕಿತ್ಸೆಯನ್ನೂ ಮಾಡುವ ರೊಬೋಟ್‌ಗಳೂ ಇವೆ. ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವಲ್ಲಿ ಯಾಂತ್ರಿಕ ಬುದ್ಧಿಮತ್ತೆಯುಳ್ಳ ಯಂತ್ರಮಾನವರ ಕಾರ್ಯ ಶ್ಲಾಘನೀಯವೇ ಸರಿ. ಯಾಂಬು ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿರುವುದು ಒಂದು ರೀತಿ ಖುಷಿ ಎನಿಸಬಹುದು. ವೈದ್ಯಕೀಯ, ಶಿಕ್ಷಣ ಸೇರಿದಂತೆ ಇನ್ನಿತರ ಸೇವಾ ವಲಯಕ್ಕೆ ಯಾಂಬು ಕಾಲಿಟ್ಟರೆ ಅಲ್ಲಿ ಕೆಲಸ ಮಾಡುವವರ ಪಾಡೇನು? ಎಂಬ ಆತಂಕ ಕಾಡದೆ ಇರದು.

ಆದರೆ ಯಾಂತ್ರಿಕ ಬುದ್ಧಿಮತ್ತೆಯು ಹೀಗೆ ಮುಂದುವರಿಯುತ್ತಾ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಾ ಮುಂದೊಂದು ದಿನ ಅದು ನಮ್ಮನ್ನು ಆಳಬಹುದಲ್ಲವೇ? ಅದನ್ನು ಎಲ್ಲೆಡೆ ಬೆಳೆಯಲು ಬಿಟ್ಟರೆ ಈಗಿರುವ ವಿದ್ಯಾವಂತರ ಪಾಡೇನು? ಯಾಂತ್ರಿಕ ಬುದ್ಧಿವಂತಿಕೆಯು ಎಲ್ಲಾ ಕೆಲಸಗಳನ್ನು ಮಾಡುವುದಾದರೆ ಮಾನವರ ಅಗತ್ಯವಾದರೂ ಏನು? ಈಗಲೇ ಕೆಲಸವಿಲ್ಲದೆ ನಿರುದ್ಯೋಗಿಗಳಾಗುತ್ತಿರುವವರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಒಂದು ವೇಳೆ ಯಾಂಬು ಎಲ್ಲ್ಲೆಡೆ ಕಾರ್ಯ ನಿರ್ವಹಿಸುವಂತಾದರೆ ನಿರುದ್ಯೋಗಿಗಳ ಪಾಡೇನು? ಇದರಿಂದ ಕುಟುಂಬ ನಿರ್ವಹಣೆಯ ಮಾರ್ಗವೇನು? ಎಂಬ ಪ್ರಶ್ನೆಗಳು ಬೆಳೆಯುತ್ತಲೇ ಹೋಗುತ್ತವೆ. ಯಾಂಬುಗೆ ಒಂದು ಮಿತಿಯೂ ಇದೆ ಎಂಬುದನ್ನು ನಾವು ಮರೆಯುವಂತಿಲ್ಲ. ಇದು ಕೇವಲ ಹೇಳಿದ ಅಥವಾ ಅಲ್ಗಾರಿದಮ್ ಆಧಾರಿತ ಕೆಲಸವನ್ನು ಮಾತ್ರ ಮಾಡಬಲ್ಲದೇ ವಿನಹ, ಸ್ವಂತ ಬುದ್ಧಿವಂತಿಕೆಯಿಂದ ಯಾವ ಕೆಲಸವನ್ನೂ ಮಾಡಲಾರದು ಎಂಬುದು ಮುಖ್ಯ. ನನ್ನನ್ನು ಎಲ್ಲ್ಲೆಡೆ ಬಳಸುವರು ಎಂದು ಯಾಂಬುಗೆ ಅಹಂಕಾರದ ಕೊಂಬು ಬಂದರೆ ಆ ಕೊಂಬನ್ನು ಮುರಿಯುವ ಹಾಗೂ ನಮ್ಮ ಕೊಂಬನ್ನು ಬೆಳೆಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಅದಕ್ಕೆ ಬೇಕಾದ ಸಾಮರ್ಥ್ಯವೂ ನಮ್ಮಲ್ಲಿದೆ. ಆದರೆ ಪ್ರಸಕ್ತ ಕಾಲಘಟ್ಟಕ್ಕೆ ಪೂರಕವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ಆರ್.ಬಿ ಗುರುಬಸವರಾಜು

contributor

Similar News