ದೇವರ ಮನೆಗೆ ಕನ್ನ
ಇಡೀ ಜನಸಮೂಹ ಒಂದು ಭ್ರಮೆ, ವಿಸ್ಮತಿ, ಉನ್ಮಾದಕ್ಕೆ ಒಳಗಾದರೆ ವ್ಯವಸ್ಥೆ ಅಲ್ಲೋಲಕಲ್ಲೋಲವಾಗುವುದು ಸಹಜ. ಅದು ಅರಿವಾಗುವುದು ಅದರಲ್ಲಿ ನಲುಗಿದವರಿಗೆ ಮಾತ್ರ. ಸದ್ಯ ಈ ದೇಶದಲ್ಲಿ ‘ಶ್ರೀರಾಮ್’ ಎಂಬ ಪದವು ರಾಷ್ಟ್ರೀಯತೆಯ ಹೆಸರಿನಲ್ಲಿ ರಾಜಕೀಯ ಭಕ್ತಿಯನ್ನು ಪ್ರದರ್ಶಿಸಿ ಅಧಿಕಾರಭುಕ್ತರಾದವರಿಗೆ ಈ ಆಟವನ್ನು ಮುಂದುವರಿಸಲು ಒಂದು ಲಾಂಛನವಾಗಿದೆ. ಮುಗ್ಧತೆಯ ಜನರಿಗೆ ಈ ಲಾಂಛನದ ಅಡಿಯಲ್ಲಿ ದೇವರ ದುಡ್ಡನ್ನು ಲೂಟಿಮಾಡುವುದು ಗೋಚರಿಸುವುದಿಲ್ಲ; ಧೂರ್ತರಿಗೆ ಇದು ತಮ್ಮ ಹಕ್ಕು ಎನ್ನಿಸಬಹುದು. ಕೊನೆಗೆ ಪ್ರಾಜ್ಞರು ‘ಹೇರಾಮ್’ ಎನ್ನಬಹುದು ಮತ್ತು ರಾಮನಾಮ್ ಸತ್ಯ ಹೈ ಎಂದು ತಲೆತಗ್ಗಿಸಬಹುದು.
ಭಾರತವನ್ನು ಭಾರತೀಯರೇ ಲೂಟಿಮಾಡಿ ಭಾರತದ ಮಾನ ಹರಾಜಾಗುತ್ತಿರುವುದಕ್ಕೆ, ಇತ್ತೀಚೆಗೆ ಅಯೋಧ್ಯೆಯಲ್ಲಿ ದೇವರ ಮನೆಗೇ ಕನ್ನ ಹಾಕಿದ ಉದಾಹರಣೆ ಅಪೂರ್ವವಾದದ್ದು. ಇದೊಂದು ರೀತಿಯಲ್ಲಿ ನೈಜ ಪ್ರಜಾಪ್ರಭುತ್ವ ಮತ್ತು ಅದಿನ್ನೂ ಭಾರತದಲ್ಲಿ ಪ್ರಚಲಿತದಲ್ಲಿದೆಯೆಂಬುದಕ್ಕೆ ಸಾಕ್ಷಿ, ಉದಾಹರಣೆ, ನಿದರ್ಶನ. ನಮ್ಮ ದೇವರು, ನಮ್ಮ ದುಡ್ಡು ಅಥವಾ ನಮ್ಮ ದೇವರ ದುಡ್ಡು, ಇವನ್ನು ನಾವು ಕದಿಯದೆ ಇನ್ಯಾರು ಕದಿಯಬೇಕು ಎಂಬ ಕ್ರೂರ ವ್ಯಂಗ್ಯದ ದಾರ್ಷ್ಟ್ಯವು ಸ್ವಘೋಷಿತ ದೇಶಭಕ್ತರಲ್ಲಿ ಮನೆಮಾಡಿದ್ದರೂ ಅದು ನೇರ ಪ್ರಕಟವಾದದ್ದು ಅಯೋಧ್ಯೆಯ ಸಂದರ್ಭದಲ್ಲಿ. ಗಮನಸೆಳೆಯುವ ಸಂಗತಿಯೆಂದರೆ ಈ ಆರೋಪಿಗಳಲ್ಲೊಬ್ಬ ‘ಲವಕುಶ’ನಿದ್ದಾನೆ; ನೇರ ರಾಮನ ವಾರಸುದಾರ.
ಅಯೋಧ್ಯೆಯ ರಾಮಮಂದಿರದಲ್ಲಿ ತಾನೇ ಪ್ರತಿಷ್ಠಾಪನೆ ಯಾಗಬೇಕೆಂಬ ತುಡಿತವಿದ್ದರೂ ಹಾಗೂ ಹೀಗೂ ಪರಿಸ್ಥಿತಿಯ ಒತ್ತಡದಿಂದ ಬಾಲರಾಮನನ್ನು ಪ್ರತಿಷ್ಠಾಪನೆ ಮಾಡಿದ ನಮ್ಮ ಪ್ರಧಾನಿ ಮೋದಿ ಅಲ್ಲಿನ ಎಲ್ಲ ಆಗುಹೋಗುಗಳ ಹೊಣೆಯನ್ನು ಹೊತ್ತಿದ್ದರು. ಅಲ್ಲಿನ ಎಲ್ಲ ಕಾರ್ಯಕ್ರಮಗಳಲ್ಲೂ, ಸಮಾರಂಭಗಳಲ್ಲೂ ಏಕಮೇವರಾಗಿ, ಅದ್ವಿತೀಯರಾಗಿ ಶೋಭಿಸಿದ್ದರು. ಸ್ಪರ್ಧಿಗಳನ್ನು ದೂರವಿಟ್ಟು ತನ್ನ ಹಿಮ್ಮೇಳವನ್ನಷ್ಟೇ ಜೊತೆಗಿಟ್ಟುಕೊಂಡು ನಿಷ್ಠ ಮಾಧ್ಯಮದ ಮೂಲಕ ಶೋಭಿಸಿದ್ದರು. ತನ್ನ ಹಿಂಬಾಲಕರ ಮತ್ತು ಅಪ್ತ ಚತುಷ್ಟಯದ ಒಂದು ಖಾಸಗಿ ಟ್ರಸ್ಟನ್ನು ಈ ಮಂದಿರದ ಆಡಳಿತಕ್ಕೆ ರಚಿಸಿದ್ದರು. ಅದರ ವ್ಯವಹಾರವು ಹೊರಜಗತ್ತಿಗೆ ಗೊತ್ತಾಗಬಾರದೆಂದು ಅದನ್ನು ಮಾಹಿತಿ ಹಕ್ಕಿನ ಕಾಯ್ದೆಯಿಂದ ಹೊರಗಿಟ್ಟಿದ್ದರು. ತಕ್ಷಕನ ಶಾಪದಿಂದ ಪಾರಾಗಲು ಪರೀಕ್ಷಿತನು ಕಟ್ಟಿಕೊಂಡ ಭವನಕ್ಕಿಂತಲೂ ಈ ರಾಮಭವನ ಹೆಚ್ಚು ದುರ್ಗಮವಾಗಿತ್ತು.
ಆದರೆ ಮೊನ್ನೆ ಸುನಾಮಿಯಂತೆ ಮಂದಿರವು ಲೂಟಿಯಾದಾಗ ಅದು ತನಗೆ ಸಂಬಂಧವೇ ಇಲ್ಲದ ಒಂದು ಘಟನೆಯೆಂಬ ರೀತಿಯಲ್ಲಿ ಪ್ರಧಾನಿ ಮೌನವಾಗಿದ್ದರು. ಬಾಯಿಗೆ ಹಾಕಿಕೊಂಡ ಬೀಗವನ್ನು ಪ್ರಧಾನಿ ಇನ್ನೂ ಅದನ್ನು ತೆಗೆಯಲಿಲ್ಲ. ಮನ್ ಕೀ ಬಾತಿನಲ್ಲೂ ಈ ಬಾತ್ ತೆರೆದುಕೊಳ್ಳಲಿಲ್ಲ. ಏಕೆಂದರೆ ಅಲ್ಲಿದ್ದ ಈ ಚೋರಶಿಖಾಮಣಿಗಳೆಲ್ಲರೂ ಪ್ರಧಾನಿಯವರ ಉಚಿತ ಕೊಡುಗೆಗಳೇ!
ಉತ್ತರಪ್ರದೇಶದ ಮುಖ್ಯಮಂತ್ರಿಗಳು ಅನಿವಾರ್ಯವಾಗಿ ತನಿಖೆಗೆ ಆದೇಶಿಸಿದರು. ಅದು ಆಮೆಯ ವೇಗದಲ್ಲಿ ಆಯ್ಕೆಯನ್ನು ಮಾಡುತ್ತಾ ಕುಂಟುತ್ತ ನಡೆಯುತ್ತಿದೆ. ಈ ಮಂದಿಯಲ್ಲದೇ ಹೋಗಿದ್ದರೆ ಇಷ್ಟರಲ್ಲೇ ಆರೋಪಿಗಳ ಮನೆಗಳು ಬುಲ್ಡೋಜರ್‌ಗೆ ಬಲಿಯಾಗುತ್ತಿದ್ದವು. ಅದಕ್ಕೂ ಧರ್ಮ-ಮತಗಳ ಆವರಣವಿರುವುದರಿಂದ ಎಲ್ಲವನ್ನೂ ಅವಸರಮಾಡದೆ ‘ನ್ಯಾಯಯುತವಾಗಿ’ ನಡೆಸಬೇಕಾಗಿದೆ.
ತನಿಖೆಯಲ್ಲಿ ಅನಾವರಣಗೊಳ್ಳುತ್ತಿರುವ ಸುದ್ದಿಗಳು ಭಗವಂತನನ್ನೂ ಬೆಚ್ಚಿ ಬೀಳಿಸುವಂಥವು. ಲೂಟಿಯಾದ ಹಣದಲ್ಲಿ ಚರ-ಸ್ಥಿರಾಸ್ತಿಗಳು, ಶೇರುಗಳಂತಹ ಬಂಡವಾಳ ಹೀಗೆ ಹಲವಾರು ಲಜ್ಜಾಹೀನ ಹೂಡಿಕೆಗಳು ಆಗಿರುವುದು ನಾವು ದೇವರ ಅಸ್ತಿತ್ವವನ್ನು ಎಷ್ಟು ನಂಬುತ್ತೇವೆಂಬುದನ್ನು ಎತ್ತಿತೋರಿಸುತ್ತದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ದೇಶಭಕ್ತರು ಈ ರಾಮಭಕ್ತರನ್ನು ಅನುಸರಿಸಿ ರಾಕ್ಷಸರಾಗುವ ದಿನಗಳು ಬರಬಹುದು. ವಿಶೇಷವೆಂದರೆ ಮುಖ್ಯ ಆರೋಪಿಯಾಗಬೇಕಾದವರೊಬ್ಬರು ಈ ನಿಧಿಚೌರ್ಯವನ್ನು ಖಂಡಿಸಿ ಪಾರಾಗಲು ಸನ್ನದ್ಧರಾಗಿದ್ದಾರೆ. ಅವರಿಗೆ ಅಧಿಕಾರದ ಉತ್ತುಂಗದಲ್ಲಿರುವವರ ಅಭಯ ಹಸ್ತವಿದೆ. ಅವರ ಪ್ರಾಚೀನ ಸಾಧನೆಗಳನ್ನು ವೈಭವೀಕರಿಸಿ ಅವರು ಇಂಥದ್ದೆಲ್ಲ ಮಾಡಲಾರರು ಎಂಬ ನಂಬಿಕೆಯನ್ನು ಹಬ್ಬಿಸಲು ಅವರ ಪಡೆ ಸಿದ್ಧವಾಗಿದೆ.
ಪುರಾಣಕಾಲದಲ್ಲಿ ವೈಯಕ್ತಿಕ ಏಳಿಗೆಗಾಗಿ ರಾಕ್ಷಸರು ದೈವಭಕ್ತರಾಗುತ್ತಿದ್ದರು. ಕಠಿನ ತಪಸ್ಸನ್ನು ಆಚರಿಸಿ ಬೇಕಾದ ವರಗಳನ್ನು ಪಡೆದು ಕೊಬ್ಬುತ್ತಿದ್ದರು. ಕೊನೆಗೆ ಯಾವುದೋ ಕಾರಣಿಕಕ್ಕೆ ಬಲಿಯಾಗುತ್ತಿದ್ದರು. ಈಗ ನಡೆಯುತ್ತಿರುವುದೂ ಅದೇ. ಈಗಿನ ರಾಕ್ಷಸರಿಗೆ ಅತೀ ನಿಕಟ ಹೋಲಿಕೆಯೆಂದರೆ ಸೀತಾಪಹಾರದ ರಾವಣ. ಆತ ಸನ್ಯಾಸಿಯ ವೇಷ ಹಾಕಿಕೊಂಡು ಬಂದು ಸೀತೆಯನ್ನು ಕೊಂಡೊಯ್ದ. ಈಗಲೂ ನಡೆಯುತ್ತಿರುವುದು ಇದೇ. ಕಾವಿಧಾರಿ ಧಾರ್ಮಿಕರ ವೇಷದಲ್ಲಿರುವ ಖಳರೇ ಇಂದಿನ ಅಯೋಧ್ಯೆಯ ದಯನೀಯ ಸ್ಥಿತಿಗೆ ಕಾರಣರು.
ರಾಮಮಂದಿರದ ಚಳವಳಿಯನ್ನು ಆರಂಭಿಸುವಾಗಲೇ ಸಂಘ ಪರಿವಾರಕ್ಕೆ ಇದು ಅಧಿಕಾರಕ್ಕೆ ಭಾಜಪವನ್ನೇರಿಸಲು ಒಳ್ಳೆಯ ಅವಕಾಶವೆಂಬ ವಿಶ್ವಾಸವಿತ್ತು. ಕಾಶಿ, ಮಥುರಾದಂತಹ ಸಿದ್ಧ ಉಡುಪುಗಳು ಇದ್ದರೂ ಅಯೋಧ್ಯೆಯನ್ನೇ ಏಕೆ ಆರಿಸಲಾಯಿತು ಎಂಬ ಬಗ್ಗೆ ಅನೇಕರಿಗೆ ಗೊಂದಲವಿದ್ದರೂ ಯಾರೂ ಆ ಕುರಿತು ಕುತೂಹಲವನ್ನು ತೋರಿಸಲಿಲ್ಲ. ಭಾರತದ ಪೌರಾಣಿಕ ಪರಂಪರೆಯಲ್ಲಿ ‘‘ಅಯೋಧ್ಯಾ, ಮಥುರಾ, ಮಾಯಾ ಕಾಶಿ, ಕಾಂಚಿ, ಅವಂತಿಕಾ, ಪುರಿ, ದ್ವಾರಾವತೀ..’’ ಎಂಬ ಏಳು ಕ್ಷೇತ್ರಗಳಿಗೆ ಅಗ್ರಸ್ಥಾನವಿದೆ. ಭದ್ರಾಚಲ, ಕುಂಭಕೋಣಂ ಹೀಗೆ ಹಲವು ಕಡೆ ಶ್ರೀರಾಮನಿಗೆ ದೇವಾಲಯಗಳಿದ್ದರೂ ಇತರ ದೇವರುಗಳಿಗೆ ಹೋಲಿಸಿದರೆ ಶ್ರೀರಾಮ ತನ್ನ ಆರೋಪಿತ ನೇರ, ಸರಳ ಮನುಷ್ಯ ಗುಣಕ್ಕೆ ತಕ್ಕಂತೆ ಅಷ್ಟಾಗಿ ದೇಗುಲದ ದೇವರಲ್ಲ. ಹೊರಾಂಗಣದಲ್ಲಿ ಗುಹ, ಶಬರಿ, ಅಹಲ್ಯೆಯರಿಗೆ ದರ್ಶನ ನೀಡಿದ ಶ್ರೀರಾಮನು ಬಯಲ ದೇವರು. ರಾಮಾಯಣ ಕಾಲದಲ್ಲಿ ವನದ ಫಲಗಳ, ಶಬರಿ ರುಚಿನೋಡಿ ಕೊಟ್ಟ ಹಣ್ಣುಗಳಿಂದ ತೃಪ್ತಿಪಟ್ಟವನು. ಆಧುನಿಕರ ನಡುವೆ ಪಾನಕ, ಪನಿವಾರ, ಕೋಸಂಬರಿಯಿಂದ ತೃಪ್ತಿಗೊಳ್ಳುವವನು. ಪ್ರಾಯಃ ವಚನಕಾರರ ಮಾತಿನಲ್ಲಿ ಹೇಳುವುದಾದರೆ ಶ್ರೀರಾಮನೂ ‘‘ಉಳ್ಳವರು ಶಿವಾಲಯವ ಮಾಡುವರು, ನಾನೇನ ಮಾಡುವೆ..’’ ಎಂದು ಹಂಬಲಿಸುತ್ತಿದ್ದನೋ ಏನೋ?
ಆದರೆ ಯೋಜಕರ ಕಾರ್ಯಸೂಚಿಯಲ್ಲಿ ಅಯೋಧ್ಯೆಯ ದೇವರಿಗೆ ಹೆಚ್ಚಿನ ಮಹತ್ವವಿದೆ. ಮುಖ್ಯವಾದದ್ದೆಂದರೆ, ಸ್ವಂತಕ್ಕೆ ಗುಡಿಯಿಲ್ಲದ ಶ್ರೀರಾಮನಿಗೆ ಭಕ್ತಜನರ ಅನುಕಂಪವಿದೆ. ಕಾಶಿಯನ್ನು ಆರಿಸಿಕೊಂಡರೆ ಶಿವಭಕ್ತರಷ್ಟೇ ಒಲಿದಾರು; ಮಥುರೆಯ ಕೃಷ್ಣ ವೈಷ್ಣವ ಪಂಥದ ದೇವರು. ಇತರರಿಗೆ ಯಾರ ಬಗ್ಗೆಯೂ ಹೆಚ್ಚಿನ ಮೋಹವಿಲ್ಲ ಅಥವಾ ಎಲ್ಲರೂ ಸಮಾನರು. ಈ ಹರಿಹರರ ನಡುವೆ ಸ್ವತಃ ಮಹಾವಿಷ್ಣುವಿನ ಅವತಾರವಾದ ಮತ್ತು ರಾಮೇಶ್ವರದಲ್ಲಿ ಶಿವನನ್ನು ಅರ್ಚಿಸಿ ಶೈವರಿಗೂ ತೃಪ್ತಿ ತಂದ ಶ್ರೀರಾಮ ದೇಶದ ವೈವಿಧ್ಯದಲ್ಲಿ ಏಕತೆಗೆ ಹೊಂದಿಕೊಳ್ಳುವ ದೇವರು. ಇಂತಹ ಹಲವು ಸಮ್ಮೋಹಿನೀ ತಂತ್ರಗಳ ಮೂಲಕ ಅಯೋಧ್ಯೆಯನ್ನು ಒಪ್ಪಿತ ಕ್ಷೇತ್ರವನ್ನಾಗಿಸಿತ್ತು. ಇದು ಮರ್ಯಾದಾ ಪುರುಷೋತ್ತಮನನ್ನು ಜನೋತ್ತಮನಾಗಿಸಿ ಜನಪ್ರಿಯಗೊಳಿಸಿತು. ಜನರ ಅಂತರಂಗದಲ್ಲಿದ್ದ ಗಾಂಧಿ ಪ್ರಣೀತ ‘ರಾಮರಾಜ್ಯ’ದ ಸ್ಥಾಪನೆಗೂ ಇದು ಹಾದಿಯೆಂಬಂತೆ ಬಿಂಬಿಸಲು ಸಂಘ ಪರಿವಾರ ಯಶಸ್ವಿಯಾಯಿತು. ಗ್ರಾಮಗ್ರಾಮಗಳಲ್ಲೂ ರಾಮನಿಗೆ ವಸತಿ ಯೋಜನೆಯ ಅಗತ್ಯ ಜನರಿಗೆ ಮನಗಂಡಿತು. ಇದಕ್ಕೆ ಕಾರಣವೆಂದರೆ ಆ ವರೆಗೆ ಶ್ರೀರಾಮ ಜನಮನದಲ್ಲಿ ಮಾತ್ರವಿದ್ದು ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಒಂದರ್ಥದಲ್ಲಿ ಶ್ರೀರಾಮನು ಬಹುತೇಕ ಜನರಿಗೆ ಪ್ರಜಾಪ್ರಭುತ್ವವಾದಿ ಸರಳ ದೇವರು.
ಶ್ರೀರಾಮ ನಮ್ಮೊಳಗಿನ ಒಬ್ಬ. ದೇವರೇ ಎಂದುಕೊಂಡರೂ ಆತನ ಪವಾಡ ಶ್ರೀಕೃಷ್ಣನಂತಿರಲಿಲ್ಲ. ಹುಟ್ಟು ಸಹಜವಾಗಿತ್ತು. ವನವಾಸಕ್ಕೆ ಹೋಗುವ ಹೊತ್ತಿಗೆ ಆತ ಆಡಳಿತದ ಪಾತ್ರಧಾರಿಯಾಗಿರಲಿಲ್ಲ, ಸೂತ್ರಧಾರಿಯಂತೂ ಆಗಿರಲೇ ಇಲ್ಲ. ದಶರಥ ಚಕ್ರವರ್ತಿಯ ಹಿರಿಯ ಮಗ. ಸಹಜವಾಗಿಯೇ ಸಿಂಹಾಸನಕ್ಕೆ ಉತ್ತರಾಧಿಕಾರಿ. ಆಡಳಿತದಲ್ಲಿ ಪ್ರಜೆಗಳ ಪಾಲು ಏನೂ ಇಲ್ಲದಿದ್ದರೂ ಮತ್ತು ಈ ವಾರಸುದಾರಿಕೆ ಅರಮನೆಗೇ ಸೀಮಿತವಾಗಿ ಅಲ್ಲಿ ಯಾರೇ ಶೋಭಿಸಲಿ, ಅವರನ್ನು ಆಳುವವನೆಂದು ಒಪ್ಪಿಕೊಳ್ಳುವ ಪುರಾಣಕಾಲ ಅದು. ರಾಜನು ಸರ್ವಾಧಿಕಾರವನ್ನು ಹೊಂದಿದ್ದರೂ ಸರ್ವಾಧಿಕಾರಿ ಧೋರಣೆಯನ್ನು ಹೊಂದಿರಲಿಲ್ಲವೆಂದು ಕಾಣುತ್ತದೆ. ಖಾತ್ರಿಯಿಲ್ಲ. ಏಕೆಂದರೆ ಭಯ ಮತ್ತು ಗೌರವಕ್ಕೆ ಅಂತರ ತೀರ ಕಡಿಮೆ. ನಿಯುಕ್ತಿಗೊಂಡ ವಂದಿಮಾಗಧರಲ್ಲದೆ ಮೌನದಲ್ಲಿರುವ ಹೊಗಳು ಭಟರು ಇಂದಿನ ಪ್ರಜಾಪ್ರಭುತ್ವದಂತೆ ಆಗಲೂ ಇದ್ದಿರಬಹುದು! ಉಳಿದವರು ಕುಮಾರವ್ಯಾಸ ಹೇಳಿದಂತೆ ಭೀತಮನರು.
ಪ್ರಾಯಃ ಅಯೋಧ್ಯೆಯ ಅರಮನೆಯ ರಾಜಕೀಯ ಪ್ರಜೆಗಳಿಗೆ ಬೇಸರ ತಂದಿರಬೇಕು. ತಮಗೆ ಅಧಿಕಾರ ಸಿಗುತ್ತದೆಯೆಂಬ ನಿರೀಕ್ಷೆಯಿಲ್ಲದ ಪ್ರಜೆಗಳು ಯಾವ ಅಪೇಕ್ಷೆಯಿಂದಲೂ ಶ್ರೀರಾಮನಿಗೆ ಗೌರವ, ಬೆಂಬಲ ತೋರಿಸಿರಲಿಕ್ಕಿಲ್ಲ. ಆದರೆ ಸಹಜವಾಗಿ ಬರಬೇಕಾದ ವಾರಸುದಾರಿಕೆ ಅಥವಾ ಉತ್ತರಾಧಿಕಾರವು ಹಿರಿಯ ಮಗನಿಗೆ ಲಭ್ಯವಾಗಿಲ್ಲವಾದ್ದರಿಂದ ಅರಮನೆಯ ರಾಜಕೀಯ ಪ್ರಜಾರಾಜ್ಯಕ್ಕೂ ವಿಸ್ತರಿಸೀತೆಂಬ ಆತಂಕ ಪ್ರಜೆಗಳಲ್ಲಿ ಇದ್ದಿರಬಹುದು. ಅದೂ ಅಲ್ಲದೆ ಶ್ರೀರಾಮನೇ ಪಿತೃವಾಕ್ಯ ಪರಿಪಾಲನೆಯೆಂಬ ನಂಬಿಕೆಯಿಂದ ಅಧಿಕಾರತ್ಯಾಗ ಮಾಡಿದ್ದೂ ಆತನ ಜನಪ್ರಿಯತೆಗೆ ಕಾರಣವಾಗಿರಬಹುದು. ಬೇಡವೆಂಬುದು ಮನುಷ್ಯನಿಗೆ ಬರುವುದು ವೃದ್ಧಾಪ್ಯದಲ್ಲಿ, ಏರುಯವ್ವನದ ಸಂಪನ್ನ ವ್ಯಕ್ತಿಯೊಬ್ಬ ತಾನಾಗಿ ಒದಗಿ ಬಂದ, ಬರುವ ಸಂದರ್ಭವನ್ನು ತ್ಯಜಿಸುತ್ತಾನೆಂಬ ಉದಾರಚರಿತೆಯು ರಾಮನಲ್ಲದೆ ಇನ್ಯಾರಿಗೆ ಬಂದೀತು ಎಂಬುದು ಜನಮನದಲ್ಲಿ ಆಗಿನಿಂದಲೇ ಬೇರೂರಿತ್ತು. (ಹಾಗೆ ನೋಡಿದರೆ ಆತನ ಮೂವರು ತಮ್ಮಂದಿರೂ ಈ ವಿಚಾರದಲ್ಲಿ ಏಕಮುಖಿಗಳಾಗಿದ್ದರು! ಪಾದುಕಾ ಪಟ್ಟಾಭಿಷೇಕದ ಸಂದರ್ಭವೂ ಇಷ್ಟೇ ಮಾರ್ಮಿಕವಾದದ್ದು!) ಇದೊಂದು ಕಾರಣವಲ್ಲದೆ ವಾಲ್ಮೀಕಿಯ ಈ ಮಹಾಕಾವ್ಯದಲ್ಲಿ ಬೇರೇನೂ ಕಾರಣವು ಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ರಾಮಾಯಣದ ಈ ಕಾರಣವೂ ಸಂದರ್ಭವೂ ಇಡೀ ಕಾವ್ಯದಲ್ಲಿ ಪ್ರಜ್ಚಲಿಸುವ ಮತ್ತು ಪ್ರತಿಧ್ವನಿಸುವ ಜೀವನತತ್ವವಾಗಿ ಉಳಿದಿದೆ.
ಇಂತಹ ಘನಹಿನ್ನೆಲೆಯ ವ್ಯಕ್ತಿಯಲ್ಲದೆ ಇನ್ಯಾರು ಸರಿ ರಾಜಕಾರಣಕ್ಕೆ? ದಿಲ್ಲಿಗೆ ಅಯೋಧ್ಯೆಯ ಮೂಲಕ ಹಾದಿ ಹುಡುಕಿದ್ದು ಸಂಘಪರಿವಾರದ ಮಾತ್ರವಲ್ಲ ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತೀ ಮಹತ್ವದ್ದು. ಆಧುನಿಕ ಜಗತ್ತಿನಲ್ಲಿ ಪೌರಾಣಿಕ ವಸ್ತು, ನಂಬಿಕೆ ದೇಶದ ರಾಜಕಾರಣವನ್ನೇ ಬದಲಾಯಿಸಿದ್ದು ಅನನ್ಯ ಮತ್ತು ಅಪೂರ್ವ.
1990ರ ದಶಕದಲ್ಲಿ ಅಯೋಧ್ಯೆಯ ರಾಮಮಂದಿರದ ಚಳವಳಿಯಲ್ಲಿ ಭಾಗವಹಿಸಿದ ಎಲ್ಲರೂ ಮತಾಂಧರಲ್ಲ. ಸಾಕಷ್ಟು ಜನರು ಭಕ್ತಿಭಾವದಿಂದ ಅಥವಾ ಭಾವಭಕ್ತಿಯಿಂದ ಶ್ರೀರಾಮನಿಗೊಂದು ಮಂದಿರವಾಗಲಿ ಎಂದು ಅದರ ಹಿಂದಿನ ರಾಜಕೀಯದ ಆಳ-ಅಗಲವನ್ನು ಗಮನಿಸದೆ ಭಾಗವಹಿಸಿದ್ದರು. ಈ ಭಾವಪರವಶತೆಯನ್ನು ಸಂಘಪರಿವಾರವು ದುರ್ಬಳಕೆ ಮಾಡಿದೆಯೆಂದು ವಿದ್ಯಾವಂತರಿಗೂ ಗೊತ್ತಿರಲಿಲ್ಲ. ಅಷ್ಟೇ ಅಲ್ಲ, ಮಂದಿರಕ್ಕೆಂದು ದಾನ ನೀಡಿದವರಲ್ಲಿ ಹಿಂದೂಗಳು ಮಾತ್ರವಲ್ಲ, ಅನ್ಯಧರ್ಮೀಯರು ಬೇಕಷ್ಟಿದ್ದರು. ರಾಜಕೀಯದ ಎಳೆಸುಳಿಗಳನ್ನು ಬಲ್ಲವರಿಗಷ್ಟೇ ಈ ವಿಷವ್ಯೆಹ ಗೊತ್ತಿತ್ತು. ಹಾಗೆ ನೋಡಿದರೆ ಭಾರತದಲ್ಲಿ ಧರ್ಮ ಮತ್ತು ರಾಜಕೀಯ ಇಷ್ಟು ಢಾಳಾಗಿ ಪ್ರಯೋಗವಾದದ್ದು ಮತ್ತು ಜಯಿಸಿದ್ದು ಶ್ರೀರಾಮನೆಂಬ ನಿಷ್ಪಾಪಿ ದೇವರಿಗೆ ದೇಗುಲ ನಿರ್ಮಾಣ ಮಾಡಿದ್ದರಲ್ಲಿ. ದ್ವೇಷವನ್ನೆಂದೂ ಬದುಕಿನಲ್ಲಿ ಕಾಣದ ಶ್ರೀರಾಮನನ್ನು ಏಕಕಾಲಕ್ಕೆ ಇನ್ನೊಂದು ಮತಧರ್ಮದ ದ್ವೇಷಕ್ಕೂ, ಅಧಿಕಾರ ರಾಜಕೀಯಕ್ಕೂ ಬಳಸಿದ್ದು ಒಂದು ಪೌರಾಣಿಕ ವ್ಯಂಗ್ಯ. ಅಯೋಧ್ಯೆಯಲ್ಲೇ ಶ್ರೀರಾಮನು ಹುಟ್ಟಿದನೆಂದು ಒಪ್ಪಿದರೂ ಇದೇ ಜಾಗದಲ್ಲಿ ಎಂದು ಈ ಇತಿಹಾಸದ ಯುಗದಲ್ಲಿ ನಂಬುವುದು, ಸಾಧಿಸುವುದು ರಾಜಕಾರಣದ ಹೊರತು ಇನ್ನೆಲ್ಲೂ ಸಾಧ್ಯವಿಲ್ಲ. ಆದರೆ ಸಂಘ ಪರಿವಾರ ಇದನ್ನು ಮಾಡಿ ತೋರಿಸಿತು. ರಾಜಕಾರಣ ಯಾವುದು, ರಾಷ್ಟ್ರೀಯತೆ ಯಾವುದು ಎಂಬುದನ್ನು ಅಧ್ಯಯನ ಮಾಡಿದರೆ ಇಡೀ ನಿರ್ಮಾಣ ಯೋಜನೆ ಒಂದು ಪೂರ್ವನಿರ್ಧರಿತ ಪ್ರಹಸನದಂತೆ ಕಾಣಿಸುತ್ತದೆ. ದುರಂತವೆಂದರೆ ಮಂದಿರ ನಿರ್ಮಾಣಕ್ಕೆ ಈ ಭ್ರಮೆ ಮುಗಿಯಲಿಲ್ಲ. ಶ್ರೀರಾಮನೇ ಸಂಕೇತವಾಗಿ ಮತಧರ್ಮ ವಿಭಜನೆಯು ಸುಲಭವಾಗಿ ಕೋಟ್ಯಂತರ ಜನರು ಭಾವ-ವಿಚಾರದ ವಿಕಾರದ ಕಿಂದರಿಜೋಗಿಗೆ ಬಲಿಯಾದರು. ಪ್ರಾಯಃ ಶ್ರೀರಾಮನನ್ನು ವಾಲ್ಮೀಕಿ ಚಿತ್ರಿಸಿದ ರೀತಿಯಲ್ಲಿ ಆತ ಏನಾದರೂ ಮರುಹುಟ್ಟು ಪಡೆದು ಬಂದರೆ ವ್ಯಾಸರಂತೆ ಆತನೂ ತನ್ನನ್ನು ಈ ರೀತಿಯಲ್ಲಿ ದುರ್ಬಳಕೆ ಮಾಡಿದ ಕುರಿತು ಮತ್ತು ಇದನ್ನು ನಿವಾರಿಸಲು ತಾನು ಅಸಹಾಯಕನಾಗಿರುವ ಬಗ್ಗೆ ಪಶ್ಚಾತ್ತಾಪ ಪಡಬಹುದು.
ಇಡೀ ಜನಸಮೂಹ ಒಂದು ಭ್ರಮೆ, ವಿಸ್ಮತಿ, ಉನ್ಮಾದಕ್ಕೆ ಒಳಗಾದರೆ ವ್ಯವಸ್ಥೆ ಅಲ್ಲೋಲಕಲ್ಲೋಲವಾಗುವುದು ಸಹಜ. ಅದು ಅರಿವಾಗುವುದು ಅದರಲ್ಲಿ ನಲುಗಿದವರಿಗೆ ಮಾತ್ರ. ಸದ್ಯ ಈ ದೇಶದಲ್ಲಿ ‘ಶ್ರೀರಾಮ್’ ಎಂಬ ಪದವು ರಾಷ್ಟ್ರೀಯತೆಯ ಹೆಸರಿನಲ್ಲಿ ರಾಜಕೀಯ ಭಕ್ತಿಯನ್ನು ಪ್ರದರ್ಶಿಸಿ ಅಧಿಕಾರಭುಕ್ತರಾದವರಿಗೆ ಈ ಆಟವನ್ನು ಮುಂದುವರಿಸಲು ಒಂದು ಲಾಂಛನವಾಗಿದೆ. ಮುಗ್ಧತೆಯ ಜನರಿಗೆ ಈ ಲಾಂಛನದ ಅಡಿಯಲ್ಲಿ ದೇವರ ದುಡ್ಡನ್ನು ಲೂಟಿಮಾಡುವುದು ಗೋಚರಿಸುವುದಿಲ್ಲ; ಧೂರ್ತರಿಗೆ ಇದು ತಮ್ಮ ಹಕ್ಕು ಎನ್ನಿಸಬಹುದು. ಕೊನೆಗೆ ಪ್ರಾಜ್ಞರು ‘ಹೇರಾಮ್’ ಎನ್ನಬಹುದು ಮತ್ತು ರಾಮನಾಮ್ ಸತ್ಯ ಹೈ ಎಂದು ತಲೆತಗ್ಗಿಸಬಹುದು.
ಅನೇಕ ಬಾರಿ ಆಸ್ತಿಕರೆಂದು ತೋರಿಸಿಕೊಳ್ಳುವವರಿಗೆ ಏನೇನೂ ಭಕ್ತಿಯಿರು ವುದಿಲ್ಲ. ಅದು ಉದರ ವೈರಾಗ್ಯವೆಂದು ದಾಸರು ಶತಮಾನಗಳ ಹಿಂದೆಯೇ ಹೇಳಿದ್ದಾರೆ. ಮತ್ತೆ ವಚನಕಾರರನ್ನು ನೆನಪಿಸಿದರೆ ‘‘ನಾರಿ ತನ್ನ ಮನೆಯೊಳು ಕಳುವೊಡೆ..’’ ಎಂಬ ಮಾತನ್ನು ಹೇಳಿಕೊಂಡು ಸುಮ್ಮನಿರಬಹುದು.
ಈಗ ಈ ಲೂಟಿಯ ಪ್ರಕರಣ ಸರ್ವೋಚ್ಚ ನ್ಯಾಯಾಲಯದ ಕದ ತಟ್ಟಿದೆ. ಅಲ್ಲೂ ಈ ಹಿಂದಿನ ಅಯೋಧ್ಯೆಯ ಪ್ರಕರಣದಂತೆ ನ್ಯಾಯಾಲಯದ ವ್ಯಕ್ತಿನಿಷ್ಠ ನಂಬಿಕೆಗಳು ಅಥವಾ ಅಧಿಕಾರ ರಾಜಕೀಯವು ವಿಜೃಂಭಿಸಿ ಗೆದ್ದರೆ ಶ್ರೀರಾಮ ಸೋಲುವುದು ಖಚಿತ. ಆಗ ಕೋದಂಡ ದಂಡವೂ ಹೀಗೆ ದಂಡ!