×
Ad

ಅದ್ದೆಯವರ ‘ಬಡವರ ರಾಜಕುಮಾರ’ ಎಂಬ ಕರ್ನಾಟಕದ ಇತಿಹಾಸ

Update: 2025-11-12 11:40 IST

‘‘ಭಾರತ ಎನ್ನುವುದು ಮುಸ್ಲಿಮರು ಮತ್ತು ಹಿಂದುಗಳ ನಡುವೆಯಷ್ಟೇ ಅಲ್ಲದೆ, ಕುಲಕುಲದ ನಡುವೆ, ಜಾತಿ ಜಾತಿಗಳ ನಡುವೆ ವಿಭಜಿತವಾದ ದೇಶ. ಇಂತಹ ದೇಶ ಸುಲಿಗೆಕೋರರಿಗೆ ಸುಲಭವಾಗಿ ಒಲಿಯುತ್ತದೆ’’ 1853 ರಲ್ಲಿ ಕಾರ್ಲ್‌ಮಾರ್ಕ್ಸ್ ಹೇಳಿದ ಮಾತಿದು. ಇಂತಹ ದೇಶದಲ್ಲಿ ತಳಸಮುದಾಯದ, ಅಂಚಿಗೆ ತಳ್ಳಲ್ಪಟ್ಟ ವರ್ಗ ಮತ್ತು ಸಮುದಾಯಗಳನ್ನು ಎಚ್ಚರಿಸುವ, ಹಕ್ಕು ಕೇಳುವ ಚೈತನ್ಯ ಕೊಡುವ ನಿಟ್ಟಿನಲ್ಲಿ ಕನ್ನಡ ಚಲನಚಿತ್ರಗಳ ಮತ್ತು ಚಿತ್ರನಟರ ಪಾತ್ರ ಏನು? ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ಸಂಶೋಧಕ, ಪತ್ರಕರ್ತ, ರಾಜಕೀಯ ಮುಖಂಡರಾಗಿರುವ ಡಾ. ಮಂಜುನಾಥ ಅದ್ದೆಯವರು ಬರೆದಿರುವ ‘ಬಡವರ ರಾಜಕುಮಾರ’ ಪುಸ್ತಕ ಸಂಶೋಧನೆ ನಡೆಸುತ್ತಾ ಹೋಗುತ್ತದೆ.

‘ಬಡವರ ರಾಜಕುಮಾರ’ ಪುಸ್ತಕವು ವರನಟ ಡಾ. ರಾಜ್ ಕುಮಾರ್ ಅವರ ಸಿನೆಮಾ ಬದುಕಿಗೆ ಸಂಬಂಧಪಟ್ಟ ಜೀವನ ಚರಿತ್ರೆ ಎಂದು ಅನ್ನಿಸಿದರೆ ಅದು ತಪ್ಪು. ಇದು ನಟ ರಾಜ್ ಕುಮಾರ್ ಅವಧಿಯ ಕರ್ನಾಟಕದ ಇತಿಹಾಸವನ್ನು ತೆರೆದಿಡುವ ಪುಸ್ತಕ. ಡಾ. ರಾಜ್ ಕುಮಾರ್ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ, ಸಾಂಸ್ಕೃತಿಕ ರಾಜಕಾರಣವನ್ನು ತನಗೇ ತಿಳಿಯದಂತೆ ಮಾಡಿದವರು. ರಾಜ್ ಕುಮಾರ್ ಅಭಿನಯಿಸಿದ ಪ್ರತೀ ಸಿನೆಮಾದ ಸಂದರ್ಭದಲ್ಲೂ ಕರ್ನಾಟಕದಲ್ಲಿ ಘಟಿಸಿದ ಸಾಮಾಜಿಕ- ರಾಜಕೀಯ-ಸಾಂಸ್ಕೃತಿಕ ವಿದ್ಯಮಾನಗಳು ಈ ಪುಸ್ತಕದಲ್ಲಿ ದಾಖಲಾಗಿದೆ.

ರೈತ ಚಳವಳಿ, ಕಮ್ಯುನಿಷ್ಟರ ಕಾರ್ಮಿಕ ಚಳವಳಿ, ದಲಿತ ಚಳವಳಿಗಳು, ಕನ್ನಡ ಚಳವಳಿಗಳು ಡಾ. ರಾಜ್ ಕುಮಾರ್ ಅವಧಿಯಲ್ಲಿ ಹೇಗಿತ್ತು? ಜನರನ್ನು ಈ ಚಳವಳಿಗಳತ್ತ ಆಕರ್ಷಿಸಲು ಸಿನೆಮಾಗಳು ಹೇಗೆ ಪ್ರಭಾವ ಬೀರಿದವು ಎಂಬುದನ್ನು ಉದಾಹರಣೆ ಸಹಿತ ಡಾ. ಮಂಜುನಾಥ ಅದ್ದೆಯವರು ವಿವರಿಸುತ್ತಾರೆ.

ಡಾ. ರಾಜ್ ಕುಮಾರ್ ತೀರಿಕೊಂಡಾಗ, ಮೈಸೂರು ರಾಜಮನೆತನವು ಬೆಂಗಳೂರು ಅರಮನೆ ಮೈದಾನದ ಜಮೀನು ಅರಮನೆಗೆ ಸೇರಿದ್ದು ಎಂದು ಹೋರಾಟಕ್ಕೆ ಜನರನ್ನು ಪ್ರೇರೇಪಿಸುತ್ತದೆ. ಆದರೆ ಜನರು ಪ್ರತಿಕ್ರಿಯೆಯೇ ಕೊಡುವುದಿಲ್ಲ. ಇದೇ ಸಂದರ್ಭದಲ್ಲಿ ನೇಪಾಳದಲ್ಲಿ ರಾಜಮನೆತನದ ವಿರುದ್ಧ ಜನರು ಬೀದಿಗಿಳಿದು ಹೋರಾಟ ನಡೆಸುತ್ತಾರೆ. ಈ ಎರಡು ಘಟನೆಗಳ ಮಧ್ಯೆ ಡಾ. ರಾಜ್ ಕುಮಾರ್ ನಿಧನ ಹೊಂದುತ್ತಾರೆ. ಜನ ಧರ್ಮ, ಜಾತಿ, ಲಿಂಗ ಭೇದವಿಲ್ಲದೇ ಬೀದಿಗೆ ಬರುತ್ತಾರೆ. ಈ ಹಿನ್ನೆಲೆಯಲ್ಲಿ ಡಾ. ರಾಜ್ ಅವಧಿಯ ಕರ್ನಾಟಕದ ಸಾಂಸ್ಕೃತಿಕ ರಾಜಕಾರಣವನ್ನು, ಅದು ಜನರ ಮೇಲೆ ಬೀರಿರುವ ಪರಿಣಾಮವನ್ನು ಪುಸ್ತಕ ವಿವರಿಸುತ್ತಾ ಸಾಗುತ್ತದೆ.

ಹಾಗಾಗಿ ಡಾ. ಮಂಜುನಾಥ ಅದ್ದೆಯವರ ‘ಬಡವರ ರಾಜಕುಮಾರ’ ಕೇವಲ ಸಿನೆಮಾ ಅಧ್ಯಯನವಲ್ಲ. ಇದು ಕರ್ನಾಟಕದ ಸಮಾಜಶಾಸ್ತ್ರದ ನೋಟದಿಂದ, ಚಲನಚಿತ್ರದ ಮೂಲಕ ರೂಪುಗೊಂಡ ಜನಮನದ ನವ ಇತಿಹಾಸವಾಗಿದೆ. ಡಾ. ರಾಜ್ ಕುಮಾರ್ ಅವರ ಪಾತ್ರಗಳು, ಅವರ ಮಾತು, ಅವರ ಶೈಲಿ, ಅವರ ಮೌನ ಇವುಗಳು ಕೇವಲ ಮನರಂಜನೆಯ ಸಾಧನಗಳಾಗಿರಲಿಲ್ಲ. ಅವುಗಳು ಜನರ ಬದುಕಿನ ಸಂಕೇತಗಳಾಗಿದ್ದವು.

ಕೃಷಿಕನ ಬಡತನ, ಕಾರ್ಮಿಕನ ಶೋಷಣೆ, ದಲಿತನ ಹಕ್ಕಿನ ಹೋರಾಟ, ಕನ್ನಡಿಗನ ಆತ್ಮಸಂಬಂಧ ಇವುಗಳೆಲ್ಲವು ರಾಜ್‌ಕುಮಾರ್ ಅವರ ಪಾತ್ರಗಳಲ್ಲಿ ಪ್ರತಿಬಿಂಬಿತವಾಗುತ್ತವೆ. ಸರ್ವಶಿಕ್ಷಣಾ ಅಭಿಯಾನಗಳು, ವರದಕ್ಷಿಣೆ ವಿರುದ್ಧದ ಹೋರಾಟ, ಭೂ ಹಕ್ಕುಗಳ ಚಳವಳಿ, ವೇತನದ ಹಕ್ಕಿನ ಚಳವಳಿ, ಜೀತದ ವಿರುದ್ಧದ ಚಳವಳಿ, ಕುಷ್ಠರೋಗದ ವಿರುದ್ಧದ ಚಳವಳಿಯಲ್ಲೂ ಡಾ. ರಾಜ್ ಸಿನೆಮಾದ ಪಾತ್ರವಿತ್ತು. ಚಳವಳಿಗಾರರು ಹಳ್ಳಿಗಳನ್ನು ಸಂಪರ್ಕಿಸಿದಾಗ ಅದಾಗಲೇ ಜನ ಈ ಎಲ್ಲಾ ವಿಷಯಗಳ ಬಗ್ಗೆ ಪ್ರಾಥಮಿಕ ಜಾಗೃತಿ ಹೊಂದಿದ್ದರು. ಅದು ಸಿನೆಮಾದ ಶಕ್ತಿ. ರಾಜ್ ಕುಮಾರ್ ಅವರ ಪ್ರತೀ ಸಿನೆಮಾ ತನ್ನ ಕಾಲದ ಸಾಮಾಜಿಕ ನಡವಳಿಕೆಯನ್ನು ಮತ್ತು ಅದರ ರಾಜಕೀಯ ನಿಲುವುಗಳನ್ನು ಹೊಂದಿದೆ.

ಲೇಖಕ ಅದ್ದೆಯವರು ಸಿನೆಮಾವನ್ನು ಕೇವಲ ಸಾಂಸ್ಕೃತಿಕ ಉತ್ಪನ್ನವಾಗಿ ನೋಡುವುದಿಲ್ಲ. ಅವರು ಅದನ್ನು ಜನತೆಯ ಚಿಂತನೆ, ಜನರ ಭಾವನೆ ಮತ್ತು ರಾಜಕೀಯ ಬದಲಾವಣೆಯ ವೇದಿಕೆಯೆಂದು ಗುರುತಿಸುತ್ತಾರೆ. ಈ ದೃಷ್ಟಿಯಿಂದ, ‘ಬಡವರ ರಾಜಕುಮಾರ’ ಒಂದು ಕಲಾ ವಿಮರ್ಶೆ ಮತ್ತು ಸಾಂಸ್ಕೃತಿಕ ಇತಿಹಾಸದ ನಡುವಿನ ಸೇತುವೆಯಾಗಿದೆ.

ಪುಸ್ತಕದಲ್ಲಿ ಮಾರ್ಕ್ಸಿಸ್ಟ್ ದೃಷ್ಟಿಕೋನದ ಹಾದಿಯಲ್ಲಿ ಸಮಾಜದ ವರ್ಗಸಂಘರ್ಷದ ಕಣ್ತುಂಬಿದ ವಿಶ್ಲೇಷಣೆ ಕಂಡುಬರುತ್ತದೆ. ರಾಜ್ ಕುಮಾರ್ ಅವರ ಸಿನೆಮಾ ಪಾತ್ರಗಳು ಅನೇಕ ಬಾರಿ ‘ವರ್ಗ ಭೇದ’ ಮತ್ತು ‘ಶೋಷಣೆ’ ವಿರುದ್ಧದ ಧ್ವನಿಯಾಗಿ ಕೇಳಿಸುತ್ತವೆ. ಜನರು ಅವರ ಪರದೆಯ ಮೇಲಿನ ಶಾಂತ ವ್ಯಕ್ತಿತ್ವವನ್ನು ನೋಡುತ್ತಿದ್ದರು; ಆದರೆ ಅದೇ ಸಮಯದಲ್ಲಿ, ಅವರ ಪಾತ್ರಗಳಲ್ಲಿ ಸಾಮಾಜಿಕ ಬದಲಾವಣೆಯ ಕಿಡಿ ಹೊತ್ತಿತ್ತು.

ಕನ್ನಡ ಸಿನೆಮಾ ಮತ್ತು ಸಮಾಜದ ನಡುವಿನ ಈ ಸಂಬಂಧವನ್ನು ಚಿಂತಿಸಲು ‘ಬಡವರ ರಾಜಕುಮಾರ’ ಒಂದು ಅಮೂಲ್ಯ ಪ್ರಯೋಗವಾಗಿದೆ. ಇದು ಕೇವಲ ನಟನ ಬದುಕನ್ನು ಹೇಳುವುದಿಲ್ಲ, ಅದು ಜನರ ಬದುಕನ್ನು ಅರಿಯುವ ಕನ್ನಡದ ಕಣ್ಣಾಗಿದೆ.

ಕನ್ನಡದ ಮೇರು ಸಾಹಿತಿ ಕುವೆಂಪು ಮತ್ತು ಕನ್ನಡದ ಮೇರು ನಟ ಡಾ. ರಾಜ್ ಕುಮಾರ್ ಇಬ್ಬರೂ ಒಂದೇ ಕಾಲದಲ್ಲಿ ಬದುಕಿದ್ದವರು. ಇಬ್ಬರ ನಡುವಿನ ‘ರಾಜಕೀಯ-ಸಾಂಸ್ಕೃತಿಕ ಸಂಘರ್ಷ’ ಹೇಗೆ ನಡೆಯುತ್ತಿತ್ತು ಎಂಬುದನ್ನೂ ಈ ಪುಸ್ತಕ ನಮಗೆ ಅಮೂಲ್ಯ ಅರಿವು ಒದಗಿಸುತ್ತದೆ. ಮಾಂಸಾಹಾರಿ ಸಮುದಾಯವಾಗಿರುವ ಈಡಿಗ ಜಾತಿಯ ರಾಜ್ ಕುಮಾರ್ ಅವರು ‘ಮಂತ್ರಾಲಯ ಮಹಾತ್ಮೆ’ ಸಿನೆಮಾದಲ್ಲಿ ಗುರುರಾಘವೇಂದ್ರರ ಪಾತ್ರ ನಿರ್ವಹಿಸಿದಾಗ ವಿವಾದವಾಗುತ್ತದೆ. ಶೂದ್ರನೊಬ್ಬ ಸಸ್ಯಾಹಾರಿಯಾಗಿ ಯಾಕೆ ಪಾತ್ರ ನಿರ್ವಹಿಸಬಾರದು ಎಂಬ ಪ್ರತಿರೋಧದ ಭಾಗವಾಗಿಯೇ ಚಿತ್ರೀಕರಣ ಮುಗಿಯುವವರೆಗೆ ಡಾ. ರಾಜ್ ಕುಮಾರ್ ಸಸ್ಯಾಹಾರಿ ಆಗಿರುತ್ತಾರೆ. ಡಾ. ರಾಜ್ ಕುಮಾರ್ ಅವರ ಈ ಪ್ರತಿರೋಧದ ದಾರಿ ಸರಿ ಇಲ್ಲ ಎಂಬುದನ್ನು ನಿರೂಪಿಸಲು ಅದೇ ಕಾಲದ ಕುವೆಂಪು ಉದಾಹರಣೆಯನ್ನು ಅದ್ದೆಯವರು ನೀಡುತ್ತಾರೆ. ‘ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಬರೆಯುವಾಗ ಕುವೆಂಪು ಸಸ್ಯಾಹಾರಿಯಾಗಲಿಲ್ಲ. ತನ್ನ ಆಹಾರಕ್ಕೂ, ಮಹಾಕಾವ್ಯಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿರುವ ಕುವೆಂಪು, ಮಾಂಸಾಹಾರಿಯಾಗಿಯೇ ರಾಮಾಯಣ ದರ್ಶನಂ ಮಹಾಕಾವ್ಯ ರಚಿಸುತ್ತಾರೆ ಎಂದು ‘ಬಡವರ ರಾಜಕುಮಾರ’ ಸೈದ್ಧಾಂತಿಕ ಘರ್ಷಣೆಯ ಮೂಲಕ ಬೆಳಕು ನೀಡುತ್ತದೆ.

ಅಂತಿಮವಾಗಿ, ಈ ಕೃತಿ ಓದುಗರಿಗೆ ಒಂದು ಪ್ರಶ್ನೆ ಮುಂದಿಡುತ್ತದೆ. ‘ನಮ್ಮ ಕಾಲದ ರಾಜ್‌ಕುಮಾರ್ ಯಾರು? ಜನರ ಕಣ್ಣೀರನ್ನು ಕಾಣುವ, ಅವರ ಹೋರಾಟವನ್ನು ಹಾಡುವ, ಅವರ ಭಾಷೆಯನ್ನು ಮಾತನಾಡುವ ಹೊಸ ಕಲಾವಿದ, ಹೊಸ ಸಾಂಸ್ಕೃತಿಕ ನಾಯಕ ಮತ್ತೆ ಬರಬಹುದೇ?’ ಎಂಬ ನಿಟ್ಟುಸಿರಿನೊಂದಿಗೆ ಪುಸ್ತಕದ ಓದು ಮುಗಿಯುತ್ತದೆ. ಕನ್ನಡ ನಟರು ಜೋಡೆತ್ತುಗಳಾಗಿ ಚುನಾವಣಾ ಪ್ರಚಾರ, ಹಣಕ್ಕಾಗಿ ಬೆಟ್ಟಿಂಗ್ ಆ್ಯಪ್, ಗುಟ್ಕಾ, ಬಿಯರ್‌ಗಳ ಜಾಹೀರಾತುಗಳಲ್ಲಿ ನಟಿಸುವ ಸ್ಟಾರ್ ಗಳು, ಜೈಲಿನಲ್ಲಿ ಇರುವ ಕೊಲೆ ಆರೋಪಿ ನಟನ ಕಾಲದಲ್ಲಿ ನಾವು ‘ಬಡವರ ರಾಜಕುಮಾರ್’ ಓದುವ ಮೂಲಕ ಕರ್ನಾಟಕದ ಇತಿಹಾಸವನ್ನು ಅರಿಯುವ ಅಗತ್ಯವಿದೆ.

‘ಬಡವರ ರಾಜಕುಮಾರ’ ಕರ್ನಾಟಕದ ಇತಿಹಾಸದ ಪುಸ್ತಕ. ಟಿಪ್ಪುವಿನ ಕಾಲದಿಂದ ಹಿಡಿದು ನಮ್ಮ ಕಾಲದವರೆಗೆ ಘಟಿಸಿದ ವಿದ್ಯಮಾನಗಳು ಈ ಪುಸ್ತಕದಲ್ಲಿದೆ. ರಾಜ್ ಕುಮಾರ್ ಕಾಲಘಟ್ಟದಲ್ಲಿ ಸಿನೆಮಾ ಬೀರಿರುವ ಪರಿಣಾಮಗಳನ್ನು ಹೇಳುತ್ತಲೇ ಚಳವಳಿಗಳ ಇತಿಹಾಸವನ್ನು ಸರಳವಾಗಿ, ಕಣ್ಣಿಗೆ ಕಟ್ಟುವಂತೆ ಮಂಜುನಾಥ ಅದ್ದೆಯವರು ಪ್ರಸ್ತುತಪಡಿಸಿದ್ದಾರೆ. ಕೌದಿ ಪ್ರಕಾಶನದ ಮಮತಾ ಮುರಳಿ ಕಾಟಿಯವರು ಪುಸ್ತಕವನ್ನು ಒಪ್ಪ ಓರಣಗೊಳಿಸಿದ್ದಾರೆ. ಕರ್ನಾಟಕದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಇತಿಹಾಸದ ಬಗೆಗಿನ ಕುತೂಹಲಿಗಳು ಓದಲೇಬೇಕಾದ ಪುಸ್ತಕ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನವೀನ್ ಸೂರಿಂಜೆ

contributor

Similar News