×
Ad

ಅವಗಾಹ: ಕೃತಿ ವಿಮರ್ಶೆಯ ಅನುಕರಣಾರ್ಹ ಮಾದರಿ

Update: 2025-11-23 11:20 IST

ಡಾ. ಕೆ. ರಘುನಾಥ್ ಅವರು ಈ ಕಾಲದ ಮಹತ್ವದ ಕೃತಿಗಳನ್ನು ಓದಿ, ವಿಶ್ಲೇಷಿಸಿ, ಸಮೀಕ್ಷಿಸಿರುವ ತಮ್ಮ ಕೃತಿ ವಿಮರ್ಶೆಯ ಬರಹಗಳನ್ನು ‘ಅವಗಾಹ’ ಸಂಕಲನದಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ. ಈ ಸಂಕಲನವನ್ನು ಓದುವಾಗ ಓದುಗರಿಗೆ ಈ ಕಾಲಘಟ್ಟದಲ್ಲಿ ಕನ್ನಡ ಗ್ರಂಥ ಲೋಕ ಯಾವ ಬಗೆಯ ಕೃತಿಗಳನ್ನು ಸೇರಿಸಿಕೊಳ್ಳುತ್ತಿದೆ ಮತ್ತು ಈ ಕೃತಿಗಳ ಚಿಂತನೆಯ ಕ್ರಮವೇನು ಎನ್ನುವುದು ಗೊತ್ತಾಗುತ್ತದೆ.

ರಘುನಾಥ್ ಅವರು ಕೃತಿಗಳನ್ನು ವಿಶ್ಲೇಷಣೆ ಮತ್ತು ವರ್ಗೀಕರಣ ಮಾದರಿಗಳಲ್ಲಿ ಗ್ರಹಿಸುತ್ತಾರೆ. ಇದರಿಂದಾಗಿ ಆಯಾಯ ಕೃತಿಗಳ ಬಗ್ಗೆ ಖಚಿತವಾದ ಪರಿಚಯವು ಓದುಗರಿಗೆ ಸಿಗುವಂತಾಗುತ್ತದೆ. ನಂತರ ರಘುನಾಥ್ ಅವರು ಆ ಕೃತಿಗಳ ಸಾಧನೆ ಮತ್ತು ಮಿತಿಗಳು ಅಥವಾ ಅವುಗಳು ಗಮನಿಸಬಹುದಾಗಿದ್ದ ಇನ್ನೂ ಕೆಲವು ಅಂಶಗಳನ್ನು ತಾವು ಸೂಚಿಸುತ್ತಾರೆ.

ವರ್ಗೀಕರಣ ಮಾದರಿಯ ಬಗ್ಗೆ ರಘುನಾಥ್ ಅವರಿಗೆ ಇರುವ ಒಲವು ಈ ಕೃತಿಯ ಪರಿವಿಡಿಯಲ್ಲಿಯೇ ನಮ್ಮ ಗಮನಕ್ಕೆ ಬರುತ್ತದೆ. ಈ ಕೃತಿಯಲ್ಲಿರುವ ಲೇಖನಗಳನ್ನು ಅವರು ಹೀಗೆ ವರ್ಗೀಕರಣ ಮಾಡಿದ್ದಾರೆ:

ಸಂಶೋಧನೆ 1. ಪ್ಲೇಮಿಂಗ್ ಫೀಟ್ ರೂಪಕಗಳ ಮುಖಾಮುಖಿ: ಡಿ.ಆರ್. ನಾಗರಾಜ್ (ಗಾಂಧಿ ಮತ್ತು ಅಂಬೇಡ್ಕರ್): 2. ಬಿಳಿಮಲೆಯವರ ಕೃತಿಗಳು - ಅ. ಬಹುತ್ವದ ಭಾರತಕ್ಕೊಂದು ಭಾಷ್ಯ. ಬ. ಹುಡುಕಾಟ. ಕ. ವರ್ತಮಾನ ಭಾರತ, 3. ನೆನಪಿನ ಹಳ್ಳಿ: ಟಿ. ಆರ್. ಶಾಮಭಟ್ಟ, 4. ಮೈಸೂರು ಸಾಂಸ್ಕೃತಿಕ ಕಥನ: ಡಾ. ಬಿ. ಲೀಲಾ.

ಅಂದರೆ ಈ ಭಾಗದಲ್ಲಿ ಆರು ಕೃತಿಗಳ ಪರಿಚಯ ಇದೆ. ಬಿಳಿಮಲೆಯವರದೇ ಮೂರು ಕೃತಿಗಳಿರುವುದರಿಂದ ಅವುಗಳನ್ನು ಅ, ಬ, ಕ ಎಂಬ ಉಪವಿಭಾಗಗಳಲ್ಲಿ ಕೊಟ್ಟಿದ್ದಾರೆ. ಉಳಿದ ವಿಭಾಗಗಳು ಹೀಗಿವೆ:

ವಿಮರ್ಶಾ ಲೋಕ (12 ಕೃತಿಗಳ ಪರಿಚಯ - ವಿಮರ್ಶೆ ಇವೆ): ಸಂಪಾದನೆ (8 ಲೇಖನಗಳು); ಕಾವ್ಯಲೋಕ (6 ಕೃತಿಗಳು): ಅನುಬಂಧ (4 ಲೇಖನಗಳು); ಕಥಾಲೋಕ (13 ಲೇಖನಗಳು); ಕಾದಂಬರಿ ಲೋಕ (15 ಲೇಖನಗಳು); ನಾಟಕ - ಸಿನೆಮಾ (6 ಲೇಖನಗಳು); ಪ್ರಬಂಧ (4 ಲೇಖನಗಳು): ಪ್ರವಾಸ (6 ಲೇಖನಗಳು); ಆತ್ಮಚರಿತ್ರೆ ಮತ್ತು ಜೀವನಚರಿತ್ರೆ (12 ಲೇಖನಗಳು): ಸಂಕೀರ್ಣ (6 ಲೇಖನಗಳು), ವಿಜಯಶಂಕರ್ ಅವರ ಕೃತಿಗಳು ಎಂಬ ಲೇಖನದಲ್ಲಿ ಅವರ ಮೂರು ಕೃತಿಗಳ ಸಮೀಕ್ಷೆಗಳಿವೆ. ಪ್ರಕಾಶ ಕಂಬತ್ತಳ್ಳಿಯವರ ನಾಟಕಗಳ ಕುರಿತಾದ ಬರಹದಲ್ಲಿ ಅವರ ಮೂರು ನಾಟಕಗಳ ಪರಿಚಯವಿದೆ. ಹೀಗಾಗಿ ಒಟ್ಟು 100ಕ್ಕಿಂತ ಹೆಚ್ಚು ಕೃತಿಗಳು ಈ ಸಂಕಲನದಲ್ಲಿ ಸಮೀಕ್ಷೆಗೆ ಒಳಪಟ್ಟಿವೆ. ಸಂಖ್ಯೆಯ ದೃಷ್ಟಿಯಿಂದಲೂ ಇಷ್ಟೊಂದು ದೊಡ್ಡ ಗಾತ್ರದ ಕೃತಿ ಸಮೀಕ್ಷೆಯ ಸಂಕಲನವು ಕನ್ನಡ ವಿಮರ್ಶೆಯ ಸಂದರ್ಭದಲ್ಲಿ ಪರಿಗಣಿಸಲೇಬೇಕಾದ ಕೃತಿಯಾಗಿ ಉಳಿಯಲಿದೆ.

ರಘುನಾಥ್ ಅವರು ಕೃತಿ ಸಮೀಕ್ಷೆ ಮಾಡುವ ಮಾದರಿಗೆ ಉದಾಹರಣೆಯಾಗಿ ಡಾ. ಪುರುಷೋತ್ತಮ ಬಿಳಿಮಲೆಯವರ ’ಕನ್ನಡ ಕಥನ’ವನ್ನು ಅವರು ವಿಶ್ಲೇಷಿಸಿರುವ ಪರಿಯನ್ನು ನೋಡಬಹುದು: 1. ಸಾಹಿತ್ಯಕ ನೆಲೆ. ಅದರಲ್ಲಿ ಅ) ರಾಮಾಯಣ ಮಹಾಭಾರತಗಳ ಬಹುರೂಪಗಳು. ಬ) ಹಳಗನ್ನಡ ಮತ್ತು ನಡುಗನ್ನಡದ ಶಿಷ್ಟ ಪಠ್ಯಗಳು ಯಕ್ಷಗಾನ, ಹರಿಕಥೆ, ಶಿಲ್ಪ ಇತ್ಯಾದಿ ಬಹುರೂಪಗಳನ್ನು ಪಡೆದು ವ್ಯಾಪಕತೆಯನ್ನು ಪಡೆದದ್ದು. ಕ) ಭಕ್ತಿ ಪರಂಪರೆ ಮತ್ತು ಜನಪದ, ಡ) ಎ.ಕೆ. ರಾಮಾನುಜನ್ ಅವರ ಭಾರತೀಯ ಜನಪದ ಕಥೆಗಳ ಪರಿಶೀಲನೆ.

2. ಸಂಸ್ಕೃತಿಯ ನೆಲೆ. 3. ನಾಗರಿಕ ನೆಲೆ. 4. ಸಂಶೋಧನಾತ್ಮಕ ನೆಲೆ.

ನಂತರ ‘ಸಾಧನೆಗಳು’ ಎನ್ನುವ ಉಪವಿಭಾಗವನ್ನು ಮಾಡಿಕೊಂಡು ‘ಕನ್ನಡ ಕಥನಗಳು’ ಕೃತಿಯ ವೈಶಿಷ್ಟ್ಯಗಳನ್ನು ಮೂರಂಶಗಳಲ್ಲಿ ಗುರುತಿಸಿದ್ದಾರೆ: ಮೊದಲ ಬಾರಿಗೆ ಏಕಘನಾಕೃತಿಯ ಚಿಂತನೆಗಳ ಅಪಾಯವನ್ನು ಗುರುತಿಸಿ ಅದಕ್ಕೆ ಪರ್ಯಾಯವಾದ ಬಹುತ್ವದ ಚಿಂತನೆಯನ್ನು ನಿರೂಪಿಸಿದ್ದಾರೆ.

‘‘ಅಧ್ಯಯನ ಮತ್ತು ಕ್ಷೇತ್ರಾಧ್ಯಯನಗಳ ಮೂಲಕ ಪ್ರತೀ ಪ್ರಬಂಧವನ್ನು ಸಮರ್ಥವಾಗಿ ಕಟ್ಟಿದ್ದಾರೆ.

ಪಿರಮಿಡ್ಡಿನ ಆಕಾರದ ಮೇಲ್ತುದಿಯ ಅಧ್ಯಯನದ ವಿಧಾನವನ್ನು (ಬ್ರಿಟಿಷ್ ಮತ್ತು ಮೇಲು ವರ್ಣದವರು ಆರಂಭಿಸಿದ) ಬಿಟ್ಟುಕೊಟ್ಟು ತಳದಿಂದ ಅಧ್ಯಯನ ಆರಂಭಿಸಬೇಕಾದ ಅಗತ್ಯವನ್ನು ಸಾಧಾರವಾಗಿ ಮಂಡಿಸಿದ್ದಾರೆ.’’(ಪುಟ 19)

ನಂತರ ‘ಮಿತಿಗಳು’ ಎಂಬ ವಿಭಾಗದಲ್ಲಿ ಕೆಲವು ಮಿತಿಗಳನ್ನು ಗುರುತಿಸಿದ್ದಾರೆ.

ಈ ಪುಸ್ತಕದಲ್ಲಿ ನಮಗೆ ನೂರಾರು ಪುಸ್ತಕಗಳ ಪರಿಚಯವಾಗುವುದರ ಜತೆಗೆ ನೂರಾರು ಹೊಸ ವಿಚಾರಗಳು ತಿಳಿಯುತ್ತವೆ. ಉದಾಹರಣೆಗೆ ಪ್ರೊಫೆಸರ್ ಸಿ. (ಕ್ಲೋಸ್‌ಪೇಟೆ) ಡಿ. ನರಸಿಂಹಯ್ಯ ಕರ್ನಾಟಕದಲ್ಲಿ ಇಂಗ್ಲಿಷ್ ಸಾಹಿತ್ಯದ ಅಧ್ಯಯನಕ್ಕೆ ದಿಕ್ಕುದೆಸೆಗಳನ್ನು ಕೊಟ್ಟವರು; ಇಂಗ್ಲೆಂಡಿನ ಮಾದರಿಯಲ್ಲಿ ಮೈಸೂರಿನ ಇಂಗ್ಲಿಷ್ ವಿಭಾಗವನ್ನು ಕಟ್ಟಿದವರು. ಅವರ ಆತ್ಮಕಥಾನಕದ (‘ಎನ್ ಫಾರ್ ನೋಬಡಿ’) ಪರಿಚಯದ ಮೂಲಕ ಸಿ.ಡಿ.ಎನ್. ಅವರ ಸಾಧನೆಯ ಪರಿಚಯವೂ ಓದುಗನಿಗೆ ಆಗುತ್ತದೆ. ಡಾ. ರಘುನಾಥ್ ಅವರು ಈ ಕೃತಿಯನ್ನು ಕೂಡ ವಿಭಾಗಗಳನ್ನಾಗಿಸಿಕೊಂಡು ಪರಿಚಯಿಸುತ್ತಾರೆ. ಅವರು ಇಲ್ಲಿ ಮಾಡಿಕೊಳ್ಳುವ ವಿಭಾಗಗಳು: 1. ವಿದ್ಯಾರ್ಥಿಯಾಗಿ. 2. ಅಧ್ಯಾಪಕರಾಗಿ. 3. ಪ್ರಾಂಶುಪಾಲರಾಗಿ. 4. ಸಾಂಸ್ಕೃತಿಕ ಸಾಹಿತ್ಯ ರಾಯಭಾರಿಯಾಗಿ. 5. ಸಂಘಟಕರಾಗಿ. ‘ವಿದ್ಯಾರ್ಥಿಯಾಗಿ’ ಎಂಬ ವಿಭಾಗದಲ್ಲಿ - ಅ. ಬಾಲ್ಯದ ಶಿಕ್ಷಣ: ಬ. ಮೈಸೂರಿನಲ್ಲಿ ಪ್ರೌಢ ಶಿಕ್ಷಣ -ಎಂಬ ವಿಭಾಗಗಳನ್ನು ಮಾಡಿದ್ದಾರೆ.

ಕೊನೆಯಲ್ಲಿ ಸಿ.ಡಿ. ನರಸಿಂಹಯ್ಯನವರ ಜೀವನದ ಸಾಧನೆಗಳೆಂದು ಎಂಟು ಅಂಶಗಳನ್ನು ಪಟ್ಟಿಮಾಡಿದ್ದಾರೆ. ಅವರ ಮಿತಿಗಳೆಂದು ಎರಡು ಅಂಶಗಳನ್ನು ಗುರುತಿಸಿದ್ದಾರೆ. ಈ ಬಗೆಯಲ್ಲಿ ಒಂದು ಕೃತಿಯನ್ನು ಅಥವಾ ಅದು ಯಾರನ್ನು ಕುರಿತಿದೆಯೋ ಅವರ ಶಕ್ತಿ ಮತ್ತು ಮಿತಿಗಳನ್ನು ಖಚಿತವಾಗಿ ಗುರುತಿಸಿ ಪಟ್ಟಿಮಾಡಿ ಕೊಡುವ ವಿಮರ್ಶೆಯ ಕ್ರಮ ಡಾ. ರಘುನಾಥ್ ಅವರ ವೈಶಿಷ್ಟ್ಯವಾಗಿದೆ.

ಕೃತಿ ವಿಮರ್ಶೆಯನ್ನು ಇಷ್ಟು ಶಿಸ್ತುಬದ್ಧವಾಗಿ ಮತ್ತು ಗಂಭೀರವಾಗಿ ಮಾಡುವ ಕ್ರಮವನ್ನು ಸಾಹಿತ್ಯದ ವಿದ್ಯಾರ್ಥಿಗಳು ಡಾ. ರಘುನಾಥ್ ಅವರಿಂದ ಕಲಿಯಬಹುದಾಗಿದೆ.

ಇಂತಹ ಮಾದರಿ ಕೃತಿಯೊಂದನ್ನು ಕನ್ನಡಕ್ಕೆ ನೀಡಿ ಕೃತಿ ವಿಮರ್ಶೆಯ ಹೊಸ ದಾರಿಯೊಂದನ್ನು ತೋರಿಸಿದ ಡಾ. ಕೆ. ರಘುನಾಥ್ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಡಾ. ಬಿ. ಜನಾರ್ದನ ಭಟ್

contributor

Similar News