ಮೈಸೂರು ಸಂಸ್ಥಾನದಲ್ಲಿ ಶಿಕ್ಷಣ ಪಡೆದ ಪ್ರಥಮ ತಲೆಮಾರಿನ ದಲಿತರ ಸಾಧನೆಯ ಕುರಿತು...

Update: 2024-02-15 10:08 GMT

ದೇವಾಲಯದ ಮೂಲಕ ಧರ್ಮರಾಜಕಾರಣವೇ ಮಾತನಾಡುತ್ತಿದ್ದ ಸಂದರ್ಭವನ್ನು ಬದಿಗೆ ಸರಿಸಿ, ಧರ್ಮ ಹಾಗೂ ಜಾತಿ ರಹಿತ ಜನ ಕೇಂದ್ರಿತ ರಾಜಕಾರಣವನ್ನು ಆರಂಭಿಸಿದವರು ಮೈಸೂರು ಸಂಸ್ಥಾನದ ಅರಸರಾಗಿದ್ದ 10ನೇ ಚಾಮರಾಜ ಒಡೆಯರ್ ಅವರು. ಇಂಗ್ಲಿಷ್ ಶಿಕ್ಷಣವನ್ನು ಪಡೆದಿದ್ದ ಅವರು ಧರ್ಮಕೇಂದ್ರಿತ ಸಂವಿಧಾನವನ್ನು ಬದಿಗೆ ಸರಿಸಿ ಪ್ರಜಾಪ್ರಭುತ್ವ ಮಾದರಿಯ ಸಂವಿಧಾನವನ್ನು ಜಾರಿಗೆ ತರಲು ಪ್ರಯತ್ನಗಳನ್ನು ನಡೆಸಿದರು. ‘ಮನೆ ಮನೆ ದೀಪ’ ಎಂದೇ ಹೆಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಆಡಳಿತದಲ್ಲಿ ಜನಪರವಾದ, ಶೋಷಿತರ ಪರವಾದ ಹಲವಾರು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದರು.

ಧಾರ್ಮಿಕ ಹಿನ್ನೆಲೆಯ ಸಾಮಾಜಿಕ ಸಂಕೋಲೆಯಲ್ಲಿ ಸಿಲುಕಿದ್ದ ಅಸ್ಪಶ್ಯ ಜನಾಂಗವನ್ನು ಬಿಡಿಸಿ ಮುಕ್ತ ಸಾಂಸ್ಕೃತಿಕ ಸಂಚಾರಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅವಕಾಶ ಮಾಡಿಕೊಟ್ಟರು ಎಂದು ತಮ್ಮ ಕೃತಿ ‘ಮೈಸೂರು ಸಂಸ್ಥಾನದಲ್ಲಿ ಶಿಕ್ಷಣ ಪಡೆದ ಪ್ರಥಮ ತಲೆಮಾರಿನ ದಲಿತರು ಚಾರಿತ್ರಿಕ ನೋಟ’ದಲ್ಲಿ ಉಲ್ಲೇಖಿಸಿರುವ ಹಿರಿಯ ಲೇಖಕ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆಯವರು ನಾಲ್ವಡಿಯವರ ಆಳ್ವಿಕೆಯಲ್ಲಿ ಅಸ್ಪಶ್ಯರಿಗೆ ದೇವಾಲಯಗಳಿಗೆ ಮುಕ್ತ ಪ್ರವೇಶ, ಅಸ್ಪಶ್ಯತೆಯ ಆಚರಣೆ ವಿರುದ್ಧ ಕಠಿಣ ಕ್ರಮ, ದೇವದಾಸಿ ಪದ್ಧತಿ ನಿರ್ಮೂಲನೆ, ಮಹಿಳೆ ಮತ್ತು ಪುರುಷರಿಗೆ ಸಮಾನ ಹಕ್ಕುಗಳ ನೀಡಿಕೆ, ವಿಧವಾ ವಿವಾಹಗಳಿಗೆ ಅವಕಾಶ ಮಾಡಿಕೊಡುವುದರ ಮೂಲಕ ದೇವರು, ಧರ್ಮ ಹಾಗೂ ಸಾಮಾಜಿಕ ಶ್ರೇಣೀಕೃತ ಹಿನ್ನೆಲೆಯಿಂದ ಆಚರಣೆ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸುವ ರಾಜಾಜ್ಞೆಯನ್ನು ಜಾರಿಗೆ ತಂದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ತಮ್ಮ ನಾಡಿನಲ್ಲಿ ಶತಶತಮಾನಗಳಿಂದ ತೀರ್ಥ ಹಾಗೂ ಬೆವರಿನ ನಡುವಿನ ಅಜಗಜಾಂತರದ ಅರಿವಿತ್ತು. ಈ ಅರಿವಿನ ಆಧಾರದ ಮೇಲೆ ಸಕಲ ಶೈಕ್ಷಣಿಕ ಸೌಲಭ್ಯಗಳನ್ನು ನೀಡಿ ಮಾದರಿ ಶಾಲೆಯ ರೂಪದಲ್ಲಿ ಪಂಚಮಶಾಲೆಗಳನ್ನು ಸ್ಥಾಪಿಸಿ ಆ ಮೂಲಕ ಅಸ್ಪಶ್ಯರಿಗೆ ಅಕ್ಷರ ದೀಕ್ಷೆ ಕೊಡುವ ಕಾರ್ಯಕ್ಕೆ ಮುಂದಾದರು ಎಂದು ಕೃತಿಯಲ್ಲಿ ವಿವರಿಸಿದ್ದಾರೆ.

ಮೈಸೂರು ಸಂಸ್ಥಾನ ಆರಂಭಿಸಿದ ಪಂಚಮ ಶಾಲೆಗಳಿಂದ 1912-1913ರ ವೇಳೆಗೆ ಇಡೀ ಮೈಸೂರು ಸಂಸ್ಥಾನಕ್ಕೆ ಐದು ಜನ ವಿದ್ಯಾರ್ಥಿಗಳು ಕನ್ನಡ ಲೋಯರ್ ಸೆಕೆಂಡರಿ (ಎಸೆಸೆಲ್ಸಿ) ಪರೀಕ್ಷೆಯಲ್ಲಿ ತೇರ್ಗಡೆಯಾದರು. ಅವರುಗಳೆಂದರೆ, ಮೈಸೂರು ಜಿಲ್ಲೆಯ ಸೋಸಲೆ ಗ್ರಾಮದ ಬಿ. ರಾಚಪ್ಪ, ಕುಣಿಗಲ್‌ನ ಚಲುವಯ್ಯ, ಶಿರಾದ ವಿ. ಕದರಪ್ಪ, ಬೆಳ್ಳಾವಿಯ ಕೆಂಪಹನುಮಯ್ಯ, ಮಳವಳ್ಳಿಯ ಲಿಂಗಯ್ಯ. ವಿದ್ಯಾವಂತರಾದ ಇವರುಗಳು ಆನಂತರ ಗಳಿಸಿದ ವಿದ್ಯಾರ್ಹತೆ, ಗಳಿಸಿದ ಸ್ಥಾನಮಾನಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಕೃತಿಯಲ್ಲಿ ದಾಖಲಿಸಲಾಗಿದೆ.

ಈ ಪಂಚಮ ಶಾಲೆಗಳಲ್ಲಿ ಕಲಿತ ಪ್ರಥಮ ತಲೆಮಾರಿನ ಅಕ್ಷರಸ್ಥರಾದ ದಲಿತ ಜನಾಂಗದ ಮೊದಲ ಕವಿ ಸೋಸಲೆ ಎಸ್. ಸಿದ್ದಪ್ಪ, ಮೊದಲ ಪದವಿ ಪಡೆದ ಸೋಸಲೆ ಬಿ. ರಾಚಪ್ಪ, ಐಎಎಸ್ ದರ್ಜೆಗೇರಿದ ಮೊದಲ ದಲಿತ ಅಧಿಕಾರಿ ಆರ್.ಭರಣಯ್ಯ, ಮಾಜಿ ಲೋಕಸಭಾ ಸದಸ್ಯರಾದ ಸೋಸಲೆ ಎಸ್.ಎಂ. ಸಿದ್ದಯ್ಯ, ಮಾಜಿ ಮಂತ್ರಿಗಳು ಮತ್ತು ಕೇರಳದ ರಾಜ್ಯಪಾಲರಾಗಿದ್ದ ಆಲೂರು ಬಿ. ರಾಚಯ್ಯ, ಗೌರಿಬಿದನೂರು ತಾಲೂಕು ಗಂಗಸಂದ್ರದ ಗೌರಮ್ಮ ಸೇರಿದಂತೆ 36 ಜನ ಮೊದಲ ತಲೆಮಾರಿನ ದಲಿತ ಸಾಕ್ಷರರ ವಿವರಗಳನ್ನು ಲೇಖಕರು ಈ ಕೃತಿಯಲ್ಲಿ ಅಂಕಿ ಅಂಶಗಳ ಸಮೇತ ದಾಖಲಿಸಿದ್ದಾರೆ.

ತಮ್ಮ ಕ್ರಾಂತಿಕಾರ ನಿಲುವುಗಳ ಮೂಲಕ ಜನಸಾಮಾನ್ಯರಿಂದ ‘ನಾಲ್ವಡಿ ಭೂಪ ಮನೆ ಮನೆ ದೀಪ’ ಎಂದು ಪ್ರೀತಿಯಿಂದ ಕರೆಯಿಸಿಕೊಂಡ ಮೈಸೂರು ಸಂಸ್ಥಾನದ 24ನೇ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದಲ್ಲಿ ಪಶುಗಳಿಗಿಂತಲೂ ಕೀಳುಜೀವನ ಸಾಗಿಸುತ್ತಿದ್ದಂತಹ ಅಸ್ಪಶ್ಯರಿಗೆ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರಲು ಕಂಕಣಬದ್ಧರಾಗಿ ನಿಂತರು. ನಾಲ್ವಡಿಯವರಿಂದ ಸ್ಫೂರ್ತಿ ಪಡೆದ ಗೋಪಾಲಸ್ವಾಮಿ ಅಯ್ಯರ್ ಅವರು ಪಂಚಮರಿಗಾಗಿ ವಸತಿ ಶಾಲೆಗಳನ್ನು ಆರಂಭಿಸಿ ಶಿಕ್ಷಣ ನೀಡಲು ಶ್ರಮಿಸಿದರು. ತಲಕಾಡು ರಂಗೇಗೌಡರು ಹಾಗೂ ವರದರಾಜ ಅಯ್ಯಂಗಾರ್ ಅವರಂತಹ ದಲಿತೇತರ ಗುರುಗಳ ಪ್ರೀತಿ ಮತ್ತು ಸಹಕಾರದಿಂದಾಗಿ ದಲಿತರಲ್ಲಿ ಕೆಲವರು ಮರಳಿನ ಮೇಲೆ ಅಕ್ಷರ ಕಲಿತರು.

ದಲಿತ ಮಕ್ಕಳಿಗೆ ಅಕ್ಷರ ಕಲಿಸಲು ಯಾರೂ ಮುಂದೆ ಬರದೇ ಇದ್ದಾಗ ಪಂಚಮ ವಿದ್ಯಾರ್ಥಿಗಳಿಗೆ ತಲಕಾಡಿನ ಆರ್. ರಂಗೇಗೌಡರು ಕನ್ನಡ ವಿದ್ಯೆ ಹೇಳಿಕೊಡಲು ಮುಂದೆ ಬಂದು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ದರಿಂದಾಗಿ ಹಲವಾರು ದಲಿತ ವಿದ್ಯಾರ್ಥಿಗಳು ಶಿಕ್ಷಣ ಪಡೆದರು. ಇವರ ನಿಸ್ವಾರ್ಥ ಸೇವೆಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನ್ ಮಿರ್ಝಾ ಇಸ್ಮಾಯೀಲ್ ಮತ್ತು ಗೋಪಾಲಸ್ವಾಮಿ ಅಯ್ಯರ್ ಅವರುಗಳು ಅವರಿಗೆ ‘ಮೈಸೂರು ಸಂಸ್ಥಾನದ ಆದಿಕರ್ನಾಟಕದ ಪ್ರಥಮ ವಿದ್ಯಾಗುರು’ ಎಂದು ಗೌರವಿಸಿದ್ದನ್ನು ಕೃತಿಯಲ್ಲಿ ದಾಖಲಿಸಲಾಗಿದೆ. ನಂತರದ ದಿನಗಳಲ್ಲಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪನೆಯಾದ ಯುವರಾಜರ ಹೆಸರಿನ ನರಸಿಂಹರಾಜ ವಿದ್ಯಾರ್ಥಿ ನಿಲಯ, ಪಂಚಮರ ವಸತಿ ಶಾಲೆಗಳು, ಅನುದಾನಿತ ಆದಿಕರ್ನಾಟಕ ವಸತಿ ಶಾಲೆಗಳಲ್ಲಿ ಸಾವಿರಾರು ದಲಿತ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಕನ್ನಡನಾಡಿಗೆ ತಮ್ಮದೇ ಆದ ವಿಶಿಷ್ಟ ಕಾಣಿಕೆ ನೀಡಿದ್ದನ್ನು ಕೃತಿಯಲ್ಲಿ ಸ್ಮರಿಸಲಾಗಿದೆ.

ಕರ್ನಾಟಕದಾದ್ಯಂತ ಸಂಚರಿಸಿ ಸಂಪೂರ್ಣ ಕ್ಷೇತ್ರ ಕಾರ್ಯದ ಮೂಲಕ ಮಾಹಿತಿಗಳನ್ನು ಸಂಗ್ರಹಿಸಿ ಈ ಕೃತಿಯಲ್ಲಿ ದಾಖಲಿಸಲಾಗಿದೆ ಎಂದು ಲೇಖಕರು ತಮ್ಮ ಲೇಖಕರ ಮಾತುಗಳಲ್ಲಿ ಹೇಳಿದ್ದಾರೆ. ಕೃತಿಯನ್ನು ಸಂಪೂರ್ಣವಾಗಿ ಓದಿದರೆ ಕೃತಿಯಲ್ಲಿ ದಾಖಲಿಸಿರುವ ಅಂಶಗಳನ್ನು ಗಮನಿಸಿದರೆ ಈ ಎಲ್ಲಾ ಸಾಧಕರ ವಿವರಗಳನ್ನು ಅವರ ಮಕ್ಕಳು, ಮೊಮ್ಮಕ್ಕಳು ಹಾಗೂ ವಂಶಸ್ಥರಿಂದ ಸಂಗ್ರಹಿಸಿ ಸಿಕ್ಕಷ್ಟು ಮಾಹಿತಿಯನ್ನು ವಸ್ತುನಿಷ್ಠವಾಗಿ ಲೇಖಕರು ದಾಖಲಿಸುವ ಶ್ರೇಷ್ಠ ಕೆಲಸವನ್ನು ಮಾಡಿದ್ದಾರೆ ಎಂಬುದು ಅರಿವಿಗೆ ಬರುತ್ತದೆ. ಮೈಸೂರು ಸಂಸ್ಥಾನದ ಅರಸರು ಅಸ್ಪಶ್ಯರಿಗೆ ಶಿಕ್ಷಣ ನೀಡಲು ಮಾಡಿದ ಪ್ರಯತ್ನಗಳು ಮತ್ತು ಇದರಿಂದ ಅಕ್ಷರಸ್ಥರಾಗಿ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಗಳಿಸಿ ಅದನ್ನು ವಿವಿಧ ಸಮಾಜ ಕಾರ್ಯಗಳ ಮೂಲಕ ಮತ್ತೆ ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಅಂದಿನ ಕಾಲಘಟ್ಟದ ದಲಿತ ನೇತಾರರು, ಕವಿಗಳು, ರಾಜಕಾರಣಿಗಳು, ಸಮಾಜ ಸೇವಕರ ಕುರಿತು ಮಾಹಿತಿಯನ್ನು ಈ ಕೃತಿ ನೀಡುವುದರಿಂದ ಇದೊಂದು ಉತ್ತಮ ಪರಾಮರ್ಶನ ಗ್ರಂಥ ಕೂಡ ಆಗಿದೆ.

ಗೋಪಾಲಸ್ವಾಮಿ ಅಯ್ಯರ್ ಅವರ ಪ್ರಭಾವದಿಂದ ಮತ್ತು ಅವರ ಬಲವಂತದಿಂದ ಶಿಕ್ಷಣ ಪಡೆದ ಸಾವಿರಾರು ಜನ ಅವರ ಶಿಷ್ಯರು ಪ್ರಾಥಮಿಕ ಶಾಲಾ ಶಿಕ್ಷಕರುಗಳಾಗಿ, ಜವಾನರಾಗಿ, ಪೊಲೀಸರಾಗಿ, ಅರಣ್ಯ ಇಲಾಖೆಯಲ್ಲಿ ಕಿರಿಯ ದರ್ಜೆ ಅಧಿಕಾರಿಗಳಾಗಿ ಸರಕಾರಿ ನೌಕರಿಗೆ ಸೇರಿ ಸಮಾಜದ ಮುಖ್ಯವಾಹಿನಿಗೆ ಬಂದು ಎಲ್ಲರಂತೆ ಬದುಕನ್ನು ರೂಪಿಸಿಕೊಂಡರು. ಕೃತಿಯ ಕೊನೆಯ ಅಧ್ಯಾಯದ ಕೊನೆಯ ಸಾಲುಗಳಲ್ಲಿ ಲೇಖಕರು ‘ಶಿಕ್ಷಣವೇ ನಮ್ಮೆಲ್ಲರ ಮೂಲಮಂತ್ರವಾಗಬೇಕು’ ಎಂದು ಎಚ್ಚರಿಸಿದ ಭಾರತರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಎಚ್ಚರದ ನಡುವೆಯೇ ನಮ್ಮ ಬದುಕಿನ ದಾರಿದೀಪವೆಂದು ತಿಳಿದು ಬದುಕಿ-ಸಾಧಿಸಿದ ಎಲ್ಲರನ್ನೂ ಸ್ಮರಿಸುವುದು ಈ ಕೃತಿಯ ಮುಖ್ಯ ಉದ್ದೇಶ ಎಂದು ಬರೆಯುವ ಮೂಲಕ ಶಿಕ್ಷಣದ ಮಹತ್ವವನ್ನು ತಿಳಿಸಿದ್ದಾರೆ.

1881 ರಿಂದ 1947ರವರೆಗೂ ಮೈಸೂರು ಸಂಸ್ಥಾನದಲ್ಲಿ ಶಿಕ್ಷಣ ಪಡೆದ ಮೊದಲ ತಲೆಮಾರಿನ ದಲಿತ ಶಿಕ್ಷಣವಂತರ ಚಾರಿತ್ರಿಕ ಮತ್ತು ಸಾಂಸ್ಕೃತಿಕ ವಿವರಗಳನ್ನು ಪರಿಚಯಿಸುವ ಈ ಕೃತಿ ಎಲ್ಲರೂ ಓದಲೇಬೇಕಾದ ಮಹತ್ವದ ಮತ್ತು ಮೌಲಿಕ ಕೃತಿಯಾಗಿದೆ. 148 ಪುಟಗಳ ಈ ಕೃತಿಯನ್ನು ಹೊಸಪೇಟೆಯ ಯಾಜಿ ಪ್ರಕಾಶನ ಹೊರತಂದಿದ್ದು ಮುಖಬೆಲೆ 220 ರೂ.ಗಳು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಅಮ್ಮಸಂದ್ರ ಸುರೇಶ್

contributor

Similar News