ಇಂದಿಗೂ ಪ್ರಸ್ತುತವಾಗಿರುವ ‘ಸಿಂಹ ಸೇನಾಪತಿ’

Update: 2024-03-04 07:39 GMT

ಹಿಂದಿ ಭಾಷೆಯ ಖ್ಯಾತ ಲೇಖಕ, ದಾರ್ಶನಿಕ, ವ್ಯಾಕರಣ ಹಾಗೂ ನಿಘಂಟು ತಜ್ಞ, ಜಾನಪದ ತಜ್ಞ, ಬಹು ಭಾಷಾ ನಿಪುಣ, ಪ್ರವಾಸಿ, ಸಮಾಜ ಶಾಸ್ತ್ರಜ್ಞ ಹಾಗೂ ಮಹಾ ಪಂಡಿತರೆಂದೇ ಹೆಸರಾಗಿದ್ದ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಸಾಹಿತಿ ‘ರಾಹುಲ್ ಸಾಂಕೃತಾಯನ’ರ (ಕೇದಾರನಾಥ ಪಾಂಡೆ -1893-1963), ಕಳೆದ ಎಂಟು ಸಾವಿರ ವರ್ಷಗಳ ‘ಮಾನವ ವಿಕಾಸ’ದ ಇತಿಹಾಸದ ಮೇಲೆ ಅಧಿಕೃತ ಮಾಹಿತಿಗಳ ಆಧಾರದಲ್ಲಿ ಬೆಳಕು ಚೆಲ್ಲುವ ಮಹತ್ವದ ಕೃತಿಯಾದ ‘ವೋಲ್ಗಾ ಗಂಗಾ’ (ಹಿಂದಿ ಮೂಲ-ವೋಲ್ಗಾ ಸೆ ಗಂಗಾ ತಕ್)ವನ್ನು 1989-90 ರಲ್ಲಿ ನಾನು ‘ನೀನಾಸಂ’ ವಿದ್ಯಾರ್ಥಿಯಾಗಿದ್ದಾಗ ಓದಿದ್ದೆ. ಅದರಿಂದ ಬಹಳ ಪ್ರಭಾವಿತನಾಗಿದ್ದ ನಾನು, ಅವರ ಇನ್ನಿತರ ಕೃತಿಗಳನ್ನು ಓದಬೇಕೆಂಬ ಹಂಬಲ ಹೊಂದಿದ್ದೆ. ಆದರೆ ಕಾರಣಾಂತರಗಳಿಂದ ಅದು ಕೈಗೂಡಿರಲಿಲ್ಲ. ಈಗ ರಾಹುಲರ ಇನ್ನೊಂದು ಮಹತ್ವದ ಐತಿಹಾಸಿಕ ಕಾದಂಬರಿ ‘ಸಿಂಹ ಸೇನಾಪತಿ’ ಓದುವ ಅವಕಾಶ ದೊರೆಯಿತು.

ಇದು ಸುಮಾರು 2,500 ವರ್ಷಗಳ ಹಿಂದೆ ವೈಶಾಲಿ ‘ಗಣರಾಜ್ಯದ’ ಸೇನಾಪತಿಯಾಗಿದ್ದ, ‘ಸಿಂಹ’ (ಸೀಹ)ನ ಕಥೆ. ‘ಆತ್ಮ ಕಥೆ’ ಎನ್ನುವುದೇ ಸೂಕ್ತ. ಕಾರಣ ಪುರಾತತ್ವ ಶಾಸ್ತ್ರದಲ್ಲೂ ಅಪಾರ ಆಸಕ್ತಿ ಹೊಂದಿದ್ದ ರಾಹುಲರು ಒಮ್ಮೆ ಅವರ ಗೆಳೆಯರ ಜೊತೆ ತಂಗಿದ್ದಾಗ, ಅವರ ಗೆಳೆಯರು ಹೊಲ ಮಾಡಬೇಕೆಂದಿದ್ದ ಬಂಜರು ಭೂಮಿಯಲ್ಲಿ ವ್ಯಾಯಾಮಕ್ಕಾಗಿ ನೆಲ ಅಗೆಯುತ್ತಿದ್ದರು. ಆ ಜಾಗ ಹಿಂದೆ ‘ಮಹೀ’ ನದಿ ಎಂದು ಕರೆಯಲ್ಪಡುತ್ತಿದ್ದ ಇಂದಿನ ‘ಗಂಡಕೀ’ ನದಿ ಸಹಸ್ರಾರು ವರ್ಷಗಳ ಹಿಂದೆ ಹರಿಯುತ್ತಿದ್ದ ಜಾಗವಾಗಿತ್ತು. ಮೂರ್ನಾಲ್ಕು ಅಡಿ ಗುಂಡಿ ತೆಗೆಯುವಷ್ಟರಲ್ಲಿ ಎರಡು-ಮೂರು ಶತಮಾನಗಳ ಹಿಂದಿನ ಮಡಿಕೆಯ ಚೂರುಗಳು ದೊರೆತದ್ದರಿಂದ ಅದು ಹಿಂದೆ ಜನ ವಸತಿ ಇದ್ದ ಜಾಗವಾಗಿತ್ತೆಂಬುದು ರಾಹುಲರಿಗೆ ಖಾತ್ರಿಯಾಗಿ ಇನ್ನೂ ಆಳವಾಗಿ ಅಗೆದಾಗ ಸಿಕ್ಕ 1,600 ಇಟ್ಟಿಗೆಗಳ (ಇಟ್ಟಿಗೆ ಪುಸ್ತಕದ!) ಮೇಲೆ ಸುಮಾರು 2,500 ವರ್ಷಗಳ ಹಿಂದೆ ವೈಶಾಲಿ ಗಣರಾಜ್ಯದ ಸೇನಾಪತಿಯಾಗಿದ್ದ ‘ಸಿಂಹ’(ಸೀಹ) ತಾನೇ ಕೆತ್ತಿದ ಅಥವಾ ಇನ್ಯಾರಿಂದಲೋ ಒಂದು ಇಟ್ಟಿಗೆಯ ಮೇಲೆ 15 ಶ್ಲೋಕಗಳಂತೆ ಕೆತ್ತಿಸಿದ ಬ್ರಾಹ್ಮೀ ಲಿಪಿಯಲ್ಲಿದ್ದ ಶ್ಲೋಕಗಳ ಆಧಾರದಲ್ಲಿ ರಾಹುಲರು ರಚಿಸಿದ ಕಾದಂಬರಿ ಇದು! ಹಾಗಾಗಿ ಈ ಕಾದಂಬರಿ ಕೇವಲ ಕಾಲ್ಪನಿಕ ಕಥೆ ಅಲ್ಲ. ಕಾದಂಬರಿಯ ರೂಪದಲ್ಲಿರುವ ಇತಿಹಾಸ! (ಈ ಇಟ್ಟಿಗೆಗಳು ಈಗ ಪಾಟ್ನಾ ವಸ್ತು ಸಂಗ್ರಹಾಲಯದಲ್ಲಿವೆ)

ವೈಶಾಲಿ ಗಣರಾಜ್ಯದ (ಇಂದಿನ ಬಿಹಾರ ರಾಜ್ಯದಲ್ಲಿನ ಒಂದು ಪ್ರದೇಶ) ಯುವಕ ‘ಸಿಂಹ’ ಪೂರ್ವ ಗಂಧಾರದ ತಕ್ಷಶಿಲೆಯಲ್ಲಿ (ಈಗ ಪಾಕಿಸ್ತಾನದಲ್ಲಿರುವ ಪಂಜಾಬ್ ಪ್ರಾಂತದ ರಾವಲ್ಪಿಂಡಿ ಪ್ರದೇಶ) ವಿದ್ಯಾಭ್ಯಾಸಕ್ಕೆ ಹೋದವನು ಹತ್ತು ವರ್ಷಗಳ ವಿದ್ಯಾಭ್ಯಾಸದ ನಂತರ ತನಗೆ ವಿದ್ಯೆ ಕಲಿಸಿದ ಆಚಾರ್ಯರ ಮಗಳು ರೋಹಿಣಿಯನ್ನು ವಿವಾಹವಾಗಿ, ಅವಳೊಡನೆ ಮರಳಿ ವೈಶಾಲಿಗೆ ಬಂದು, ವೈಶಾಲಿ ಗಣರಾಜ್ಯದ ಉಪ ಸೇನಾಪತಿ ಹಾಗೂ ಸೇನಾಪತಿಯಾಗಿ ಪಕ್ಕದ ಮಗಧ ರಾಜ್ಯದ ರಾಜ ಬಿಂಬಿಸಾರನ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸುತ್ತಾನೆ. ಇದು ಈ ಕಾದಂಬರಿಯ ಸ್ಥೂಲವಾದ ಕಥೆ. ಆಗ ಸಿಂಧೂ ನದಿ ತೀರದ ಆಸುಪಾಸಿನಿಂದ ಪೂರ್ವದ ವೈಶಾಲಿ ಗಣರಾಜ್ಯದವರೆಗೆ ಹರಡಿಕೊಂಡಿದ್ದ ಜನ ಸಮುದಾಯಗಳ, ಗಣರಾಜ್ಯಗಳ, ರಾಜ ಪ್ರಭುತ್ವದ ಅಡಿಯಲ್ಲಿದ್ದ ಜನಗಳ ಆಹಾರ,ಉಡುಗೆ-ತೊಡುಗೆ, ದೈನಂದಿನ ಬದುಕು,ವ್ಯಾಪಾರ-ವ್ಯವಹಾರ, ಯುದ್ಧ-ಸಂಘರ್ಷ, ಧಾರ್ಮಿಕ ನಂಬಿಕೆಗಳ ಮನೋಜ್ಞ ಚಿತ್ರಣ ಈ ಕಾದಂಬರಿಯಲ್ಲಿದೆ. ಹಾಗೆಯೇ ಮೊದಲು ಅಲೆಮಾರಿಗಳಾಗಿದ್ದು ಆಹಾರ ಧಾನ್ಯಗಳ ಕೃಷಿಯಿಂದಾಗಿ ನಗರ, ಪಟ್ಟಣಗಳನ್ನು ನಿರ್ಮಿಸಿಕೊಂಡು ನೆಲೆನಿಂತಿದ್ದ ಆರ್ಯರ, ದಟ್ಟಾರಣ್ಯಗಳಲ್ಲಿ ಇನ್ನೂ ಕೇವಲ ಬೇಟೆ-ಸಂಗ್ರಹದ ಮೂಲಕ ಜೀವಿಸುತ್ತಿದ್ದ ಜನ ಸಮುದಾಯಗಳ ಹಾಗೂ ರಾಜ ಪ್ರಭುತ್ವ ಸ್ಥಾಪನೆಗೊಂಡ ಪ್ರದೇಶಗಳ ಜನ ಜೀವನದಲ್ಲಿ ಇದ್ದ ಭಿನ್ನತೆ ಗಾಢವಾಗಿ ಮೂಡಿಬಂದಿದೆ.

‘ಕುಟುಂಬ’ ವ್ಯವಸ್ಥೆಯಲ್ಲೇ ಬೆಳೆದು ಬಂದ ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲದ, ಕುಟುಂಬದ ಪರಿಕಲ್ಪನೆಯೇ ಇರದಿದ್ದ, ಸಮುದಾಯದ ಎಲ್ಲಾ ಸ್ತ್ರೀಯರು ಎಲ್ಲಾ ಪುರುಷರಿಗೂ ಎಲ್ಲಾ ಪುರುಷರು ಎಲ್ಲಾ ಸ್ತ್ರೀಯರಿಗೂ ‘ಸತಿ-ಪತಿಗಳಾಗಿ’ ಹುಟ್ಟುವ ಮಕ್ಕಳು ಸಮುದಾಯದ ಮಕ್ಕಳಾಗಿ, ಬೇಟೆಯಾಡಿ ಸಿಕ್ಕಿದ್ದನ್ನು ಸಾಮೂಹಿಕವಾಗಿ ತಿಂದು ನೆಮ್ಮದಿಯ, ಸಂತಸದ ಜೀವನ ನಡೆಸುತ್ತಿದ್ದ ಜನಗಳ ‘ಸಾಮುದಾಯಿಕ’ ಜೀವನ ಒಂದೆಡೆಯಾದರೆ, ಮೇಲು-ಕೀಳು ಭೇದಭಾವವಿಲ್ಲದ, ಗಣನಾಯಕರು, ಧಣಿಗಳು, ಕರ್ಮಚಾರಿಗಳು, ಸ್ತ್ರೀಯರು, ಪುರುಷರು ಕೊನೆಗೆ ದಾಸರು ಎಲ್ಲರನ್ನೂ ಸಮಾನವಾಗಿ ಕಾಣುವ, ಒಟ್ಟಿಗೇ ಹೊಲಗಳಲ್ಲಿ ದುಡಿಯುವ, ಬೇಟೆಯಾಡುವ, ಕುಳಿತು ಉಣ್ಣುವ, ಹಾಡುವ, ಕುಣಿಯುವ ವ್ಯಕ್ತಿ ಸ್ವಾತಂತ್ರ್ಯವಿದ್ದ ಆರ್ಯ ಜನಾಂಗದ ‘ಗಣರಾಜ್ಯ’ಗಳು ಹಾಗೂ ವರ್ಣಸಂಕರದ ನೆವದಿಂದ ಸ್ಥಾಪಿತ ಹಿತಾಸಕ್ತಿಗಳು ಜಾರಿಗೆ ತಂದ ಶ್ರೇಣೀಕೃತ ಜಾತಿ ವ್ಯವಸ್ಥೆ ಜಾರಿಯಲ್ಲಿದ್ದ, ದಾಸ-ದಾಸಿಯರನ್ನು ತುಚ್ಛವಾಗಿ ಕಂಡು ದೌರ್ಜನ್ಯ ನಡೆಸುತ್ತಿದ್ದ ನಿರಂಕುಶಾಧಿಕಾರಿ ‘ರಾಜ್ಯಶಾಹಿ’ಗಳ ತುಲನೆ ಇಲ್ಲಿದೆ. ಹೇಗೆ ಸ್ವಾತಂತ್ರ್ಯ, ಸಮಾನತೆ, ಸಹೋದರತೆಗಳಿಂದ ಕೂಡಿದ ‘ಗಣತಂತ್ರ’ (ಪ್ರಜಾಪ್ರಭುತ್ವ) ನಿರಂಕುಶಾಧಿಕಾರಕ್ಕಿಂತ ಒಳ್ಳೆಯ ವ್ಯವಸ್ಥೆ ಎಂಬ ವಿವರಣೆ ಮನ ಮುಟ್ಟುವಂತಿದೆ. ಆದ್ದರಿಂದ ಇಂದು ಪ್ರಜಾಪ್ರಭುತ್ವದಿಂದ ನಿರಂಕುಶಾಧಿಕಾರದತ್ತ ಸಾಗುತ್ತಿರುವ ನಮ್ಮ ದೇಶದ ಎಲ್ಲಾ ಪ್ರಜಾಪ್ರಭುತ್ವವಾದಿ ಜನ ಸಾಮಾನ್ಯರು ಓದಿ ಅರ್ಥೈಸಿಕೊಳ್ಳಬೇಕಾದ ಮಹತ್ವದ ಕೃತಿ ಇದು. ಅಂತೆಯೇ ದೇಹ-ಆತ್ಮ, ಜನ್ಮ-ಪುನರ್ಜನ್ಮ, ಪಾಪ ಕ್ರಿಯೆ-ದೇಹ ದಂಡನೆ ಮುಂತಾದ ವಿಷಯಗಳ ಕುರಿತು ‘ಸನಾತನ’, ‘ಜೈನ’ ಧರ್ಮಕ್ಕೂ ಹಾಗೂ ‘ಬೌದ್ಧ’ ಧರ್ಮಕ್ಕೂ ಇರುವ ವ್ಯತ್ಯಾಸವನ್ನು ರಾಹುಲರು ಬಹಳ ಸರಳ ಭಾಷೆಯಲ್ಲಿ ಮನಮುಟ್ಟುವಂತೆ ವಿವರಿಸಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಭವಿಷ್ಯವಾಣಿಯಂತಿರುವ ಮಗಧದ ರಾಜ ಬಿಂಬಿಸಾರನ ಕುರಿತಾದ ಬಿಂಬಿಸಾರ ಒಂದೆಡೆ ಕುಟದಂತನಂತಹ ಬ್ರಾಹ್ಮಣ ಧನಿಕರಿಗೆ ದೊಡ್ಡ ದೊಡ್ಡ ಉಂಬಳಿ ಮತ್ತು ಸಮ್ಮಾನ ನೀಡಿ ತನ್ನ ಕಡೆ ಸೇರಿಕೊಂಡಿರುವುದಲ್ಲದೆ, ಇನ್ನೊಂದು ಕಡೆ ಭದ್ದಿಯಾ (ಅಂಗದ) ಮೇಂಡಕ ಗೃಹಪತಿಯಂತಹ ವರ್ತಕರೂ ಬಿಂಬಿಸಾರನ ಯಶೋಗಾನಕ್ಕೆ ತೊಡಗಿದ್ದಾರೆ; ಬಿಂಬಿಸಾರ ತಾನು ಗೌತಮರ ಶಿಷ್ಯನೆಂದು ಹೇಳಿಕೊಳ್ಳುತ್ತ ತನ್ನ ಪ್ರಜೆಗಳಲ್ಲಿ ತಾನು ಧರ್ಮರಾಜನಾಗಿರುವ ಭಾರೀ ಖ್ಯಾತಿ ಹರಡಿಸುತ್ತಿದ್ದಾನೆ; ಆತ ರಾಜಗೃಹದಲ್ಲಿ ತನ್ನ ರಾಜೋದ್ಯಾನ-ವೇಣುವನವನ್ನು ಗೌತಮರಿಗರ್ಪಿಸಿ ಯಶಸ್ಸು ಗಳಿಸಿದ; ಶ್ರಮಣ ಗೌತಮರು ಗೃಧ್ರಕೂಟ ಪರ್ವತದಲ್ಲಿ ನೆಲಸಿರುತ್ತಿದ್ದಾಗ ಈ ಬೆಟ್ಟದ ಬುಡದಿಂದಲೇ ಕಾಲ್ನಡಿಗೆಯಲ್ಲಿ ಮೇಲೇರಿ ದರ್ಶನ ಮಾಡುತ್ತಾನೆ; ಇದು ಸಾಮಾನ್ಯ ಧಾರ್ಮಿಕ ಶ್ರದ್ಧೆಯಂತೆ ಕಾಣಿಸಿದರೂ, ಇದರಿಂದಾಗಿ ಬಿಂಬಿಸಾರ ಪ್ರಜಾರಂಜನೆ ಮಾಡುವುದರಲ್ಲಿ ಸಫಲತೆ ಪಡೆದಿದ್ದಾನೆ ಎಂಬ ಮಾತುಗಳು ನನಗೆ ಇತಿಹಾಸ ಮರುಕಳಿಸುತ್ತದೆ ಎಂಬ ಅನುಭವದ ನುಡಿಯನ್ನು ನೆನಪಿಸಿತು! ಈಗಲೂ ನಮ್ಮ ದೇಶದ ಆಡಳಿತ ಪಕ್ಷದ ಸರ್ವೋಚ್ಚ ನಾಯಕ ಮುಗ್ಧ ಆಸ್ತಿಕ ಜನರ ಮನ ಗೆಲ್ಲುವ ಸಲುವಾಗಿ ಗವಿಯಲ್ಲಿ ಕುಳಿತು ತಪಸ್ಸು ಮಾಡುವುದು, ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗಾಗಿ ಉಪವಾಸವಿರುವುದು ಕೊನೆಗೆ ‘ದೇವರ ನಾಡಿ’ನ ದರ್ಶನಕ್ಕಾಗಿ ಸಮುದ್ರದಲ್ಲಿ ಸ್ಕೂಬಾ ಡೈವ್ ಮಾಡುವುದು ಮುಂತಾದ ಕಸರತ್ತುಗಳನ್ನು ಮಾಡುತ್ತಿದ್ದಾರೆ! ಹಾಗೂ ಇಂತಹ ಕಾರ್ಯಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿದೆ! ಜೊತೆಗೆ ಕಾರ್ಪೊರೇಟ್ ಕುಳಗಳಿಗೆ ಅನುಕೂಲವಾಗುವ ಕಾರ್ಮಿಕ ಕಾಯ್ದೆಗಳನ್ನು ರೂಪಿಸಿ, ಅತಿ ಕಡಿಮೆ ದರದಲ್ಲಿ ನೆಲ, ಜಲ, ವಿದ್ಯುತ್ ನೀಡಿ, ಕಾರ್ಪೊರೇಟ್ ತೆರಿಗೆ ಕಡಿಮೆಗೊಳಿಸಿ ಅವರ ಸಂಪೂರ್ಣ ಬೆಂಬಲ ಗಳಿಸಿ ತಮ್ಮ ಕಾರ್ಯಸೂಚಿಗನುಸಾರವಾಗಿ ಅಧಿಕಾರ ನಡೆಸುತ್ತಿರುವ ವಿದ್ಯಮಾನ ನಮ್ಮ ಕಣ್ಣ ಮುಂದಿದೆ! ಅಂತೆಯೇ 2,500 ವರ್ಷಗಳ ಹಿಂದೆಯೇ ಮಹಿಳೆಯರು ಸೈನ್ಯಕ್ಕೆ ಸೇರುವ ಅವಕಾಶಕ್ಕಾಗಿ ಹಕ್ಕೊತ್ತಾಯ ಮಂಡಿಸಿ ಸಫಲರಾಗುವುದು ಈಗ ನಮ್ಮ ದೇಶದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಮಹಿಳೆಯರಿಗೆ ಭೂ ಸೇನೆ, ನೌಕಾ ಸೇನೆ ಹಾಗೂ ವಾಯು ಸೇನೆಯಲ್ಲಿ ಅವಕಾಶ ಸಿಕ್ಕಿರುವುದನ್ನು ನೆನಪಿಸಿತು! ಹಾಗಾಗಿ 1944ರಲ್ಲಿ ಇಂತಹ ಯಾವುದೇ ವಿದ್ಯಮಾನಗಳು ನಡೆಯದಿದ್ದ ಸಂದರ್ಭದಲ್ಲಿ ರಾಹುಲ ಸಾಂಕೃತಾಯನರು ರಚಿಸಿದ ಈ ಕಾದಂಬರಿ ಇಂದಿಗೂ ಪ್ರಸ್ತುತವಾಗಿದೆ.

ಈ ಕಾದಂಬರಿಯನ್ನು ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದವರು ಪುತ್ತೂರಿನ ಶಾಲೆಯೊಂದರಲ್ಲಿ ಕನ್ನಡ ಅಧ್ಯಾಪಕರಾಗಿದ್ದು ಹಿಂದಿ ಮತ್ತು ಸಂಸ್ಕೃತ ಭಾಷೆಗಳನ್ನು ಚೆನ್ನಾಗಿ ಬಲ್ಲವರಾಗಿದ್ದ ದಿ. ಬಿ.ಎಂ. ಶರ್ಮಾ.

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಶನ್

ಪುಟಗಳು: 272

ಎರಡನೇ ಮುದ್ರಣ 2023

ಬೆಲೆ : 290 ರೂಪಾಯಿಗಳು

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಎಚ್.ಎಸ್. ನಂದಕುಮಾರ್, ಮಂಗಳೂರು

contributor

Similar News