×
Ad

ಕಣ್ಣೀರು, ಕಿಡಿ ಮತ್ತು ಅಕ್ಷರ...

ಕೃತಿ: ಕುದಿವ ಕಣ್ಣೀರು ಲೇಖಕರು: ವಿಕಾಸ್ ಆರ್. ಮೌರ‌್ಯ ಮುಖಬೆಲೆ: 110 ರೂ. ಪ್ರಕಾಶಕರು: ಅಹರ್ನಿಶಿ ಪ್ರಕಾಶನ, ಜ್ಞಾನವಿಹಾರ ಬಡಾವಣೆ, ಕಂಟ್ರಿ ಕ್ಲಬ್ ಎದುರು, ವಿದ್ಯಾನಗರ, ಶಿವಮೊಗ್ಗ-577203 ಮೊ: 9449174662

Update: 2025-06-13 17:53 IST

ಇಲ್ಲಿನ ಕವಿತೆಗಳು ತರತಮದ ಪರಂಪರೆಯನ್ನು ಹೆಜ್ಜೆ ಹೆಜ್ಜೆಗೂ ಪ್ರಶ್ನಿಸುವ, ಅದರೊಳಗಿನ ಅಸಂಗತತೆಯನ್ನು ತೋರುವ ಬಗೆಯನ್ನು ಗಮನಿಸಬೇಕು. ಎದುರಿಗೆ ರಾಚುವಂತಿದ್ದರೂ ಕಾಣದ ಕುರುಡು, ಕೇಳದ ಕಿವುಡು, ಅಹಿಂಸೆಯ ಮರೆಯಲ್ಲಿ ಅಡಗಿರುವ ಹಿಂಸೆ ದಿಗ್ಭ್ರಾಂತಿಗೊಳಿಸುತ್ತದೆ. ಈ ಕಾರಣಕ್ಕೇ ಇಲ್ಲಿನ ಹಲವು ಕವಿತೆಗಳು ಎದುರಿಗಿರುವವರಿಗೆ ಪ್ರಶ್ನೆಗಳನ್ನು ಹಾಕುತ್ತವೆ. ತಮಗೇ ಹಾಕಿಕೊಳ್ಳುತ್ತವೆ. ‘ನಾವು ತಿನ್ನೋದು ಅನ್ನ, ನೀವು?’ ‘ನಾವು ಮನುಷ್ಯರು, ನೀವು?’ ‘ನಮ್ಮದು ನಾಲಿಗೆ, ನಿಮ್ಮದು?’... ಒಂದು ಕವಿತೆಯಂತೂ ‘ಮನುಷ್ಯರಾ ನೀವು?’ ಎಂದು ಕೊರಳಪಟ್ಟಿ ಹಿಡಿದು ಕೇಳುತ್ತದೆ. ‘ಯೋನಿ ನಮ್ಮ ಜನ್ಮಸ್ಥಳ’, ‘ಅವ್ವನೊಂದಿಗೆ ಉಸಿರಾಡಿ ಉಳಿದವರು’, ಹೀಗೆನ್ನುವುದರ ಮೂಲಕ ಕಟ್ಟಿಕೊಡಲಾದ ಜಾತಿವಾದಿ, ಪಿತೃಸಂಸ್ಕೃತಿಯ ಮಿಥ್‌ಗಳನ್ನು ಒಡೆಯುತ್ತಾ ಕವಿ ಮುಂದುವರಿದು ನೀವು ‘ನಮ್ಮ ಮುಟ್ಟಿ ಮನುಷ್ಯರಾಗಬಹುದು’ ಎನ್ನುತ್ತಾರೆ. ಮೈಲಿಗೆಯೆಂದು ದೂರ ಮಾಡಿ ಮನುಷ್ಯತ್ವವನ್ನೇ ಕಳೆದುಕೊಂಡವರು ಮರಳಿ ಮನುಷ್ಯರಾಗಬೇಕಾದರೆ ಮುಟ್ಟಬೇಕು ಎನ್ನುವ ಸಾಲು ಕಣ್ಣುತೆರೆಸುವಂಥದ್ದು.

ಇಂದು ನಮ್ಮ ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಮೂಡಿಬರುತ್ತಿರುವ ದಲಿತ ಸಾಹಿತ್ಯ, ಚಿಂತನೆ ಮತ್ತು ಕಲೆ ಹೊಸ ಆಯಾಮಗಳನ್ನು ಪಡೆದು ಸೃಜನಶೀಲವಾಗಿ ಹೊರಹೊಮ್ಮುತ್ತಿವೆ. ದಲಿತ ಬದುಕಿನ ಸಂಕಟ, ಅಸಹಾಯಕತೆಗಳ ಜೊತೆಗೆ ಗಾಢ ಜೀವನಪ್ರೀತಿ, ಎಲ್ಲರನ್ನೂ ಆತುಕೊಳ್ಳುವ ಗುಣ, ಸೃಜನಶೀಲತೆಯ ಬಗ್ಗೆ ಮಾತಾಡುತ್ತಿವೆ. ತಾರತಮ್ಯ ಬಿಟ್ಟು ‘ಮನುಷ್ಯರಾಗಲು ಒಳಬನ್ನಿ’ ಎನ್ನುವ ‘ಹೊಲೆ ಮಾದಿಗರ ಹೋಟೆಲ್’ ಅಂತಹದ್ದನ್ನು ಕಾಣಿಸುವ ಕವಿತೆ. ನೈಜ ಪ್ರೀತಿಗೆ ತೋಳು ಚಾಚಿದ್ದು ಹೌದು, ಆದರೆ ಬೂಟಾಟಿಕೆ ಬೇಡ ಎನ್ನುವ ಇನ್ನೊಂದು ಕವಿತೆ ‘ಹೋಗಿ... ಮತ್ತೆ ಬರಬೇಡಿ’. ಇವುಗಳ ಜೊತೆಗೆ ಇಂದಿನ ಪೀಳಿಗೆ ಹಳೆ ತಲೆಮಾರಿಗೆ ಹಾಕುತ್ತಿರುವ ಪ್ರಶ್ನೆ ಎಂಥದ್ದು, ಸಾಗಿ ಬಂದ ದಾರಿಯನ್ನು ಪರಿಭಾವಿಸುತ್ತಿರುವ ರೀತಿ ಯಾವ ಬಗೆಯದು ಎಂಬುದೂ ಬಹಳ ಮುಖ್ಯ.

ಮೊದಲನೇ ಮತ್ತು ಎರಡನೇ ತಲೆಮಾರಿನ ದಲಿತ ಕಾವ್ಯದ ಕೇಂದ್ರ ಆಕ್ರೋಶ ಎಂದು ಗುರುತಿಸಲಾಗುತ್ತದೆ. ಈ ಹೊತ್ತಿಗೂ ಆಕ್ರೋಶವೇ ಕೇಂದ್ರಭಾವವಾಗಿರುವುದು ಹೆಚ್ಚೇನೂ ಬದಲಾಗದ ವಾಸ್ತವವನ್ನು ತೋರಿಸುತ್ತದೆ. ಕೋಮುವಾದ, ಬಂಡವಾಳಶಾಹಿಯ ನಂಟು ಶೋಷಣೆಯನ್ನು ಬಹುರೂಪಿಯಾಗಿಸಿದೆ. ಇದನ್ನು ಗುರುತಿಸುವುದು, ತೆರೆದು ತೋರುವುದು ತುಂಬಾ ಮುಖ್ಯವಾಗಿ ಮಾಡಬೇಕಾದ ಕೆಲಸವಾಗಿದೆ. ಇಲ್ಲಿನ ಕವಿತೆಗಳು ಒಡಲೊಳಗಿನ ನೋವು, ಆಕ್ರೋಶವನ್ನು ಹೊರಗೆ ಹಾಕದೇ ಬಿಡುಗಡೆಯಿಲ್ಲ ಎಂಬ ಒತ್ತಡದಲ್ಲಿ ಮೂಡಿವೆ. ಈ ಒತ್ತಡ ಕೆಲವೊಮ್ಮೆ ಅಭಿವ್ಯಕ್ತಿಯನ್ನು ಸರಳೀಕರಿಸುತ್ತದೆ. ಜೊತೆಗೆ ಈ ತುರ್ತಿನಲ್ಲಿ ಭಾವಕೋಶದ ಇತರ ಸಂಗತಿಗಳು ನುಸುಳಿ ಹೋಗಿಬಿಡಬಹುದಾದ ಅಪಾಯವಿದೆ. ಅಸಹನೀಯ ನೋವು, ಸಂಘರ್ಷಗಳ ಜೊತೆಗೇ ಬದುಕಿನ ಆರ್ದ್ರತೆ, ಸಂಕೀರ್ಣತೆ, ಸಂದಿಗ್ಧತೆ, ಸೊಗಸುಗಳಿಗೆ ನಾವು ಒಡ್ಡಿಕೊಳ್ಳುತ್ತಲೇ ಇರುತ್ತೇವೆ. ಆದರೆ ಇವು ಇಲ್ಲಿ ಕೇವಲ ಮಿಂಚಿ ಮಾಯವಾಗುತ್ತವೆ. ಈ ಕವಿತೆಗಳು ‘ಓದು ಕವಿತೆ’ಗಳು ಎನ್ನುವುದಕ್ಕಿಂತ ಹೆಚ್ಚಾಗಿ ‘ಕೇಳು’ ಕವಿತೆಗಳಾಗಿ ವಿಶೇಷ ಪರಿಣಾಮ ಉಂಟುಮಾಡುತ್ತವೆ.

(ಮುನ್ನುಡಿಯಿಂದ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಭಾರತಿದೇವಿ ಪಿ.

contributor

Similar News