×
Ad

ಮುಂಬೈ: ಸ್ನೇಹಿತ, ತಂದೆಯಿಂದಲೇ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿ ಗರ್ಭಿಣಿ; ಇಬ್ಬರ ಬಂಧನ

Update: 2023-06-24 15:07 IST

ಮುಂಬೈ : 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಆರೋಪದ ಮೇಲೆ ಬಾಲಕಿಯ ಸ್ನೇಹಿತ ಮತ್ತು ಆಕೆಯ ತಂದೆಯನ್ನು ಮುಂಬೈನಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಅಪ್ರಾಪ್ತ ವಯಸ್ಸಿನ ಬಾಲಕಿಯು ತಾನಿರುವ ಪ್ರದೇಶದಲ್ಲಿರುವ 32 ವರ್ಷದ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದಳು.

ಫೆಬ್ರವರಿ ಕೊನೆಯ ವಾರದಲ್ಲಿ ಮದುವೆಯಾಗುವುದಾಗಿ ಹೇಳಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ನಂತರ, ಆಕೆ 41 ವರ್ಷದ ತಂದೆಯಿಂದಲೇ ತನ್ನ ಸ್ವಂತ ಮನೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂದು ಚೆಂಬೂರಿನ ತಿಲಕ್ ನಗರ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಬಾಲಕಿ ಇತ್ತೀಚೆಗೆ ಹೊಟ್ಟೆ ನೋವೆಂದು ಹೇಳಿದ ನಂತರವಷ್ಟೇ ಅತ್ಯಾಚಾರ ಬೆಳಕಿಗೆ ಬಂದಿದ್ದು, ಆಕೆಯ ತಾಯಿ ಆಕೆಯನ್ನು ರಾಜವಾಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಅಪ್ರಾಪ್ತ ವಯಸ್ಸಿನ ಬಾಲಕಿ ಗರ್ಭಿಣಿ ಎಂದು ವೈದ್ಯರು ತಿಳಿಸಿದಾಗ ಬಾಲಕಿಯ ತಾಯಿ ದಿಗ್ಭ್ರಮೆಗೊಂಡರು. ಕೌನ್ಸೆಲಿಂಗ್ ನಂತರ, ತನ್ನ ತಂದೆ ಹಾಗೂ ಸ್ನೇಹಿತನಿಂದ ಅತ್ಯಾಚಾರಕ್ಕೊಳಗಾಗಿರುವುದಾಗಿ ವೈದ್ಯರಿಗೆ ತಿಳಿಸಿದ್ದಾಳೆ.

ಲೈಂಗಿಕ ದೌರ್ಜನ್ಯದ ಬಗ್ಗೆ ತಿಲಕ್ ನಗರ ಪೊಲೀಸರಿಗೆ ಆಸ್ಪತ್ರೆ ಮಾಹಿತಿ ನೀಡಿದ್ದು, ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳನ್ನು ಗುರುವಾರ ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯ ಇಬ್ಬರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News