ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ; ಕೋರ್ಟ್‌ಗೆ ಹಾಜರಾಗಿ ಸಾಕ್ಷ್ಯ ದಾಖಲಿಸಿದ ನಟಿ ರಮ್ಯಾ
ನಟಿ ರಮ್ಯಾ (Photo credit: instagram/divyaspandana)
ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿ, ಅತ್ಯಾಚಾರ ಹಾಗೂ ಜೀವ ಬೆದರಿಕೆಯೊಡ್ಡಿದವರ ವಿರುದ್ಧ ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ನಟಿ ರಮ್ಯಾ ಮಂಗಳವಾರ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ದಾಖಲಿಸಿದರು.
ನಟಿ, ಮಾಜಿ ಸಂಸದೆ ರಮ್ಯಾ ದಾಖಲಿಸಿರುವ ಪ್ರಕರಣ ಕುರಿತು ಮಂಗಳವಾರ ನಗರದ 46ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರಾಜೀವ್ ಗೌಡ ಅವರು ವಿಚಾರಣೆ ನಡೆಸಿದರು.
ಪ್ರಕರಣ ಸಂಬಂಧ ಸಾಕ್ಷ್ಯ ನುಡಿಯಲು ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ನಟಿ ರಮ್ಯಾ ಕೋರ್ಟ್‌ಗೆ ಹಾಜರಾಗಿದ್ದರು. ಜತೆಗೆ ಪ್ರಕರಣದ 12 ಆರೋಪಿಗಳು ಸಹ ವಿಚಾರಣೆಗೆ ಹಾಜರಾಗಿದ್ದರು.
ಆರೋಪಿಗಳು ಅತ್ಯಾಚಾರ ಮತ್ತು ಜೀವ ಬೆದರಿಕೆ ಒಡ್ಡಿರುವ ಹಿನ್ನೆಲೆಯಲ್ಲಿ ಇನ್-ಕ್ಯಾಮರಾ ಪ್ರೊಸಿಡಿಂಗ್ಸ್ (ಗೌಪ್ಯ ವಿಚಾರಣೆ) ನಡೆಸಲು ನ್ಯಾಯಾಧೀಶರು ನಿರ್ಧರಿಸಿದರು. ಅದರಂತೆ, ರಮ್ಯಾ ಹಾಗೂ ಆರೋಪಿಗಳು ಮತ್ತು ಅವರ ವಕೀಲರನ್ನು ಹೊರತುಪಡಿಸಿ ಉಳಿದವರನ್ನು ಕೋರ್ಟ್‌ನಿಂದ ಹೊರಗೆ ಕಳುಹಿಸಿ, ರಮ್ಯಾ ಅವರ ಸಾಕ್ಷ್ಯ ದಾಖಲಿಸಿಕೊಳ್ಳಲಾಯಿತು.
ರಮ್ಯಾ ಅವರ ಹೇಳಿಕೆ ದಾಖಲಿಸಿಕೊಂಡ ನ್ಯಾಯಾಧೀಶರು, ವಿಚಾರಣೆಯನ್ನು ಮಾರ್ಚ್ 26ಕ್ಕೆ ಮುಂದೂಡಿತು.
ಕೇಸ್ ಮುಂದುವರಿಸುತ್ತೇನೆ:
ವಿಚಾರಣೆ ನಂತರ ಕೋರ್ಟ್ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯಾ, ಇಂದು ನನ್ನ ಸಾಕ್ಷ್ಯ ದಾಖಲಿಸಬೇಕಿತ್ತು. ಅದಕ್ಕಾಗಿ ಕೋರ್ಟ್‌ಗೆ ಹಾಜರಾಗಿ ಸಾಕ್ಷ್ಯ ದಾಖಲಿಸಿದೆ. ಆರೋಪಿಗಳನ್ನು ನೋಡಿದರೆ ಬೇಸರ ಆಗುತ್ತದೆ. ಹೆಣ್ಣು ಮಕ್ಕಳ ವಿಚಾರದಲ್ಲಿ ಎಲ್ಲರೂ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕು. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಬೆದರಿಕೆ ಹಾಕುವವರಿಗೆ ಭಯ ಬರಬೇಕು ಎಂಬ ಕಾರಣಕ್ಕೆ ದೂರು ದಾಖಲಿಸಿದೆ. ಇಂಥ ವಿಚಾರ ಸುಮ್ಮನೆ ಬಿಟ್ಟರೆ ಮುಂದೆ ಅದೇ ಚಾಳಿ ಮುಂದುವರಿಸುತ್ತಾರೆ. ಇಂಥ ಬೆಳವಣಿಗೆ ತಡೆಯಲು ನಾನು ಎಲ್ಲ ಹೆಣ್ಣು ಮಕ್ಕಳ ಪರವಾಗಿ ಕೇಸ್ ಮುಂದುವರಿಸುತ್ತೇನೆ ಎಂದರು.
ಪ್ರಕರಣದ ಹಿನ್ನೆಲೆ:
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಮತ್ತು ಬೆದರಿಕೆ ಹಾಕಿದ ಆರೋಪ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ರಮ್ಯಾ 2025ರಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಬೆಂಗಳೂರಿನ ಸೈಬರ್ ಪೊಲೀಸರು 11 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆ ಎಲ್ಲ ಆರೋಪಿಗಳ ವಿರುದ್ಧ ಆರೋಪ ರಚಿಸಿದ್ದ ನ್ಯಾಯಾಲಯ, ಪ್ರಕರಣ ಕುರಿತು ಸಾಕ್ಷ್ಯ ದಾಖಲಿಸಲು ಸೂಚಿಸಿ ರಮ್ಯಾಗೆ ಸಮನ್ಸ್ ಜಾರಿ ಮಾಡಿತ್ತು. ಇದರಿಂದ, ರಮ್ಯಾ ಮಂಗಳವಾರ ಕೋರ್ಟ್‌ಗೆ ಹಾಜರಾಗಿ ಸಾಕ್ಷ್ಯ ದಾಖಲಿಸಿದ್ದಾರೆ.