ಹೊಸ ವರ್ಷಾಚರಣೆಯ ಶಾಂತಿಯುತ ವಾತಾವರಣ ನಿರ್ಮಾಣಕ್ಕೆ ಸಹಬಾಳ್ವೆ ಆಗ್ರಹ
ಡಿ.25ರಂದು ಕ್ರಿಸ್ತ ಜಯಂತಿಯ ಆಚರಣೆ ಸಮಾಪ್ತವಾಗಿ ಜನವರಿ 1ರ ಹೊಸ ವರ್ಷಾಚರಣೆಗೆ ನಾಡಿನ ಕ್ರೈಸ್ತ ಭಾಂದವರು ಸಜ್ಜುಗೊಳ್ಳುತ್ತಿದ್ದಾರೆ. ಆದರೆ ಅನಂದ ಉಲ್ಲಾಸಗಳಿಂದ ಹಬ್ಬವನ್ನು ಆಚರಿಸುವ ಸ್ಥಿತಿ ದೇಶದಲ್ಲಿ ಇರದಂತಹ ವಾತಾವರಣವನ್ನು ಸಂಘಪರಿವಾರದ ಸಂಘಟನೆಗಳು ನಿರ್ಮಾಣ ಮಾಡಿವೆ ಎಂದು ಸಹಬಾಳ್ವೆ ಉಡುಪಿ ಜಿಲ್ಲೆ ಟೀಕಿಸಿದೆ.
ಕೇರಳ, ದೆಹಲಿ, ಅಸ್ಸಾಮ್, ಒಡಿಸ್ಸಾ, ಉತ್ತರ ಪ್ರದೇಶ, ಛತ್ತೀಸ್ಗಡ ರಾಜ್ಯಗಳಲ್ಲಿ ಕ್ರಿಸ್ತ ಜಯಂತಿಯ ಆಚರಣೆಗಳ ಮೇಲೆ ಬಲಪಂಥೀಯ ಸಂಘಟನೆಗಳು ಪುಡಾಂಟಿಕೆ ನಡೆಸಿ, ಹಬ್ಬವನ್ನು ಆಚರಿಸುತ್ತಿದ್ದ ಕ್ರೈಸ್ತ ಭಾಂದವರ ಮೇಲೆ ಹಲ್ಲೆ ನಡೆಸಿದ್ದಾರೆ. ಒಂದು ಕಡೆ ದೇಶದ ಪ್ರಧಾನ ಮಂತ್ರಿಗಳು ಹಬ್ಬಾಚರಣೆಯಲ್ಲಿ ಭಾಗಿಯಾಗಿ ಶಾಂತಿ ಸಂದೇಶ ಸಾರಿದರೆ ಮತ್ತೊಂದು ಕಡೆ ಅವರ ಬಹುವಾಗಿ ಮೆಚ್ಚುವ ಸಂಘಪರಿವಾರಕ್ಕೆ ಸೇರಿದ ಸಂಘಟನೆಗಳು ಕಾನೂನು ಬಾಹೀರ ಧಾಂದಲೆಗಳನ್ನು ನಡೆಸಿವೆ. ಹಲ್ಲೆಕೋರರ ಮೇಲೆ ಗಂಭೀರ ಕಾನೂನು ಕ್ರಮಗಳನ್ನು ಕೈಗೊಳ್ಳಲು ಕಾನೂನು ಪಾಲಕರು ಮೀನಾಮೇಷ ಮಾಡುತ್ತಿದ್ದಾರೆ. ಈ ವಿದ್ಯಮಾನಗಳು, ಪ್ರಭುತ್ವವು ದೇಶದ ವೈವಿಧ್ಯಮಯ ಮತಾಚರಣೆಯ ಹಕ್ಕುಗಳನ್ನು ಗೌರವಿಸಿ ರಕ್ಷಿಸುವಲ್ಲಿ ಆಸಕ್ತಿ ಹೊಂದಿಲ್ಲ ಎಂಬುದನ್ನು ಸೂಚಿಸುತ್ತದೆ.
ಸಮಾಜದಲ್ಲಿ ಶಾಂತಿ ಸೌಹಾರ್ದ ಮನೋಭಾವ ರೂಢಿಸುವುದಕ್ಕಾಗಿ ದುಡಿಯುವ ಆಶಯವುಳ್ಳ ನಮ್ಮ ವೇದಿಕೆಯು, ಈ ಮತೀಯವಾದಿ ಹಲ್ಲೆಗಳನ್ನು ತೀವ್ರವಾಗಿ ಖಂಡಿಸುತ್ತದೆ. ಸರಕಾರಗಳು ತೋರಿಕೆಯ ಸಂದೇಶವನ್ನು ಮೀರಿ, ಎಲ್ಲರೂ ನಿರಾಂತಕದಿಂದ ಹೊಸವರ್ಷ ಆಚರಿಸುವಂತಹ ಕ್ರಮಗಳನ್ನು ಕೈಗೊಂಡು ತಮ್ಮ ಸಂವಿಧಾನಿಕ ಉತ್ತರದಾಯಿತ್ವವನ್ನು ನಿಭಾಯಿಸಬೇಕು ಎಂದು ಸಹಬಾಳ್ವೆ ಪ್ರಧಾನ ಸಂಚಾಲಕ ಕೆ.ಫಣಿರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.