ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಮಹಿಳಾ ದಿನಾಚರಣೆ: ಸಾಧಕರಿಗೆ ಸನ್ಮಾನ
ಉಡುಪಿ, ಮಾ.8: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಉಡುಪಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ರವಿವಾರ ಉಡುಪಿ ಶಾಖೆಯಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರಾದ ಕರಾವಳಿ ಕಾವಲು ಪೊಲೀಸ್ ಮಲ್ಪೆ ಠಾಣೆಯ ಉಪನಿರೀಕ್ಷಕಿ ವೈಲೆಟ್ ಫೆಮಿನಾ, ಉಡುಪಿ ನಗರಸಭೆ ಸಿಬ್ಬಂಗದಿ ಚಿತ್ರಲೇಖ ಚೌಡವ್ವನರು, ಉದ್ಯಮಿ ವಿದ್ಯಾಲತಾ ಯು. ಶೆಟ್ಟಿ, ಸಮಾಜ ಸೇವಕಿ ಅನಿತಾ ಡಿಸೋಜ ಬೆಳ್ಮಣ್, ಹೂಡೆ ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸಬೀನ, ನಾಗಿ ಕುಲಾಲ್, ಮಾಯ ಕಾಮತ್ ಅವರನ್ನು ಸನ್ಮಾನಿಸ ಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉಪನಿರೀಕ್ಷಕಿ ವೈಲೆಟ್ ಫೆಮಿನಾ, ಮಹಿಳೆಯರು ತಮಗೆ ಅನ್ಯಾಯವಾದಾಗ, ಅಸಹಾಯಕರಾದಾಗ ಕೂಡಲೇ ಪೊಲೀಸ್ ಕಂಟ್ರೋಲ್ ರೂಂನ್ನು ಸಂಪರ್ಕಿಸಬೇಕು. ಪೊಲೀಸ್ ಇಲಾಖೆ ಯಾವತ್ತೂ ಮಹಿಳೆಯ ನೆರವಿಗೆ ಬರುತ್ತದೆ. ನಮ್ಮ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದರೆ ನಾವು ಕಾನೂನು ಪಾಲನೆ ಮಾಡಲೇ ಬೇಕು ಎಂದು ಹೇಳಿದರು.
ಮಲ್ಪೆ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಮಾತನಾಡಿ, ಮಲಬಾರ್ ಗೋಲ್ಡ್ ಮಹಿಳೆಯರನ್ನು ಗುರುತಿಸಿ ಗೌರವಿಸುವ ಉತ್ತಮ ಕಾರ್ಯಕ್ರಮ ನಡೆಸಿದೆ. ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಈ ಸಂಸ್ಥೆಯ ಬೆಳವಣಿಗೆಗೆ ಪ್ರತಿಯೊಬ್ಬರು ಕೂಡ ಕೈಜೋಡಿಸ ಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಥೆರಫಿಸ್ಟ್ ತನುಜಾ ಮಾಬೆನ್, ರೂಪದರ್ಶಿ ವಿದ್ಯಾ ಸರಸ್ವತಿ ಮಾತನಾಡಿದರು. ಈ ಸಂದರ್ಭ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಉಡುಪಿ ಶಾಖೆಯ ಮಹಿಳಾ ಸಿಬ್ಬಂದಿಗಳಿಗೆ ಹೂವು ಕೊಟ್ಟು ಶುಭ ಕೋರಲಾಯಿತು.
ಶಾಖಾ ವ್ಯವಸ್ಥಾಪಕರಾದ ಪುರಂದರ ತಿಂಗಳಾಯ, ಮುಸ್ತಫಾ ಏ.ಕೆ., ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ, ವಿಘ್ನೇಶ್ ಮೊದಲಾದವರು ಉಪಸ್ಥಿತರಿದ್ದರು. ನಿವೃತ್ತ ಉಪನ್ಯಾಸಕ ದಯಾನಂದ ಕಾರ್ಯಕ್ರಮ ನಿರೂಪಿಸಿದರು.