ಮಧ್ಯಪ್ರಾಚ್ಯದಲ್ಲಿ ಯುದ್ದದ ಉದ್ವಿಗ್ನತೆ ಉಡುಪಿ ಧರ್ಮಪ್ರಾಂತ್ಯದಲ್ಲಿ ಶಾಂತಿಗಾಗಿ ವಿಶೇಷ ಪ್ರಾರ್ಥನೆ
ಉಡುಪಿ, ಮಾ.8: ಮಧ್ಯಪ್ರಾಚ್ಯ ಪ್ರದೇಶದಲ್ಲಿ, ವಿಶೇಷವಾಗಿ ಇರಾನ್ ಹಾಗೂ ನೆರೆಯ ರಾಷ್ಟ್ರಗಳನ್ನು ಒಳಗೊಂಡ ಇತ್ತೀಚಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಲ್ಲಿ ರವಿವಾರ ಶಾಂತಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಬೆಳಗ್ಗಿನ ಬಲಿಪೂಜೆಯ ವೇಳೆ ಧರ್ಮಪ್ರಾಂತ್ಯ ವ್ಯಾಪ್ತಿಯ ಚರ್ಚುಗಳಲ್ಲಿ ಧರ್ಮಗುರುಗಳು ಶಾಂತಿಗಾಗಿ ವಿಶೇಷ ಪ್ರಾರ್ಥನೆಯನ್ನು ಮಾಡಿದರು. ವಿವಿಧ ಚರ್ಚುಗಳಲ್ಲಿ ಬಲಿಪೂಜೆಗೂ ಮುನ್ನ ಪರಮಪ್ರಸಾದದ ಆರಾಧನೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಯುದ್ದದ ಭೀತಿ ಕಡಿಮೆಯಾಗಿ ಮಧ್ಯಪ್ರಾಚ್ಯ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಶಾಂತಿ ನೆಲೆಸಲು ಜಗತ್ತಿನ ಮುಖಂಡರಿಗೆ ದೇವರು ಬೆಳಕಾಗಲಿ ಎಂದು ಪ್ರಾರ್ಥಿಸಿದರು.
ಯುದ್ದಗಳಿಂದಾಗಿ ಆಮಾಯಕರು ತಮ್ಮ ಪ್ರಾಣವನ್ನು ಅರ್ಪಿಸ ಬೇಕಾಗಿದ್ದು ಇದರಿಂದಾಗಿ ಅವರ ಕುಟುಂಬವರ್ಗಕ್ಕೆ ಮರೆಯಲಾಗದ ನೋವು ತಂದಿಡುತ್ತದೆ. ಯುದ್ದ ಪೀಡಿತ ಪ್ರದೇಶದಲ್ಲಿ ಉಪಯೋಗಿಸುವ ಸ್ಪೋಟಕಗಳಿಂದಾಗಿ ಪರಿಸರದ ವಿನಾಶಕ್ಕೂ ಅವಕಾಶ ಮಾಡಿ ಕೊಟ್ಟಂತಾಗುತ್ತದೆ. ವಿಶ್ವದ ನಾಯಕರು ಯುದ್ದದ ಬದಲು ಸಂವಾದದ ಮೂಲಕ ಶಾಂತಿಯ ಮಂತ್ರವನ್ನು ಪಠಿಸುವ ಅಗತ್ಯತೆ ಇದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯಪ್ರವೃತ್ತರಾಗಲಿ ಎಂದು ಧರ್ಮಗುರುಗಳು ತಮ್ಮ ಸಂದೇಶದಲ್ಲಿ ಪ್ರಾರ್ಥೀಸಿದರು.
ಉಡುಪಿ ಶೋಕಮಾತಾ ದೇವಾಲಯದಲ್ಲಿ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಧರ್ಮಗುರು ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಂದಾಪುರದ ಹೋಲಿ ರೋಜರಿ ಚರ್ಚಿನಲ್ಲಿ ವಂ.ಪಾವ್ಲ್ ರೇಗೊ, ಕಾರ್ಕಳ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ವಂ.ಆಲ್ಬನ್ ಡಿಸೋಜ ಸೇರಿದಂತೆ ವಿವಿಧ ಚರ್ಚುಗಳಲ್ಲಿ ಶಾಂತಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ತಮ್ಮ ಸಂದೇಶದಲ್ಲಿ ಪ್ರತಿಯೊಂದು ಬಿಕ್ಕಟ್ಟುಗಳಿಗೆ ಯುದ್ದವೊಂದೇ ಪರಿಹಾರವಲ್ಲ ಯುದ್ಧ ಮತ್ತು ಅಸ್ಥಿರತೆಯಿಂದ ಉಂಟಾಗುತ್ತಿರುವ ಮಾನವೀಯ ದುಃಖವು ವಿಶ್ವಮಾನವ ಕುಟುಂಬಕ್ಕೆ ಆಳವಾದ ಗಾಯವನ್ನುಂಟು ಮಾಡುತ್ತಿದೆ. ಮಧ್ಯಪ್ರಾಚ್ಯದ ಹಲವು ದೇಶಗಳಲ್ಲಿ ಕೆಲಸ ಮಾಡುತ್ತಿರುವ ಮತ್ತು ವಾಸಿಸುತ್ತಿರುವ ಭಾರತದ ಸಹೋದರ-ಸಹೋದರಿಯರ ಸುರಕ್ಷತೆ ಕುರಿತು ಚಿಂತಿಸಬೇಕಾಗಿದೆ ಎಂದು ತಿಳಿಸಿದರು.
ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ತಮ್ಮ ಪ್ರವಚನದಲ್ಲಿ ಪ್ರತಿಯೊಬ್ಬ ಮಾನವ ತನ್ನ ಜೀವನದಲ್ಲಿ ಸದಾ ಬಯಸುವುದು ಶಾಂತಿ ಸಮಾಧಾನ ಮತ್ತು ಸಂತೋಷ. ಕಳೆದ ಹತ್ತಾರು ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ದ ಭೀತಿಯಿಂದಾಗಿ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ನಮ್ಮ ಸಹೋದರ ಸಹೋದರಿಯರಿರಲ್ಲಿ ಆತಂಕದ ವಾತಾವರಣ ಸೃಷ್ಠಿ ಮಾಡಿದೆ. ಪವಿತ್ರ ಪೂಜಾ ವಿಧಿಯಲ್ಲಿ ಶಾಂತಿ ಸಮಾಧಾನದ ಕುರಿತು ಉಲ್ಲೇಖಿಸುವುದರೊಂದಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗಿದೆ ಎಂದರು.
ಮಾ.8ರಿಂದ 14ರವರೆಗೆ ಪ್ರತಿದಿನವೂ ಶಾಂತಿಗಾಗಿ ವಿಶೇಷವಾಗಿ ಪವಿತ್ರ ಜಪಸರ ಪ್ರಾರ್ಥನೆ ಮಾಡುವಂತೆ ಮನವಿ ಮಾಡಲಾಗಿದೆ. ಮಾರ್ಚ್ 13ರಂದು ಶುಕ್ರವಾರ ಉಪವಾಸ ಮತ್ತು ಪ್ರಾರ್ಥನಾ ದಿನವಾಗಿ ಆಚರಿಸಿ, ವಿಶ್ವಶಾಂತಿ ಹಾಗೂ ಹಿಂಸಾಚಾರದಿಂದ ಬಳಲುತ್ತಿರುವ ಎಲ್ಲರ ಸುರಕ್ಷತೆಗೆ ತ್ಯಾಗ ಸಮರ್ಪಿಸಲು ಕೋರಲಾಗಿದೆ. ಈ ಮೂಲಕ ದ್ವೇಷದ ಮನೋ ಭಾವಗಳು ದೂರವಾಗಿ, ಹಿಂಸಾಚಾರ ನಿಂತು, ವಿಶ್ವದಲ್ಲಿ ಶಾಂತಿ ನೆಲೆಸಲೆಂದು ಕ್ರೈಸ್ತ ಧರ್ಮಸಭೆ ಆಶಿಸಿದೆ.
‘ದೂರದೇಶದಲ್ಲಿ ದುಡಿದು ತಮ್ಮ ಕುಟುಂಬಗಳನ್ನು ಪೋಷಿಸುತ್ತಿರುವ ಅವರು ಧರ್ಮಸಭೆ ಮತ್ತು ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಈ ಅನಿಶ್ಚಿತ ಸಮಯದಲ್ಲಿ ಅವರ ಸುರಕ್ಷತೆ, ಭದ್ರತೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿರುವುದು ಆಡಳಿತ ವರ್ಗದ ಜವಾಬ್ದಾರಿ ಯಾಗಿದ್ದು ಈ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಲು ದೇವರು ವಿಶ್ವದ ನಾಯಕರಿಗೆ ಪ್ರೇರಣೆ ನೀಡಲಿ’
-ವಂ.ಜೆರಾಲ್ಡ್ ಐಸಾಕ್ ಲೋಬೊ,
ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ