ಹಾವಂಜೆ: ವಿಶ್ವ ಕಲಾಸಿಂಧು - ಭಾವನಾ ಪುರಸ್ಕಾರ ಪ್ರದಾನ
ಉಡುಪಿ, ಮೇ 18: ಭಾವನಾ ಪೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಗಾ್ರುೀಣ ಭಾಗದಲ್ಲಿ ಸಂಯೋಜಿಸಿದ ಬಾಲ ಲೀಲಾ ಚಿಣ್ಣರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಹಾವಂಜೆಯ ಶ್ರೀಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಶಿಲ್ಪಕಲಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ ವಿಶ್ವ ಕಲಾ ಸಿಂಧು ಪುರಸ್ಕಾರವನ್ನು ಕಲಾವಿದ ವೆಂಕಟರಮಣ ಭಟ್ ಅವರಿಗೆ ಪ್ರದಾನ ಮಾಡಲಾಯಿತು. ಬಳಿಕ ಮಾತನಾಡಿದ ಅವರು, ಮನೆಗೊಂದು ಒಲೆ, ಮನಕೊಂದು ಕಲೆ ಎಂಬಂತೆ ಚಿತ್ರಕಲೆ ಮಕ್ಕಳ ಮನಸ್ಸನ್ನು ಹದಗೊಳಿಸಲು ಬಹು ಮುಖ್ಯವಾದ ಕಲಾಪ್ರಕಾರವಾದುದು. ಅಂತೆಯೇ ಚಿಣ್ಣರು ಸೃಜನಶೀಲರಾಗಿರ ಬೇಕಾ ದುದೂ ಮುಖ್ಯ. ಗ್ರಾಮೀಣ ಭಾಗದಲ್ಲಿ ಈ ತೆರನಾದ ಚಟುವಟಿಕೆಗಳು ಇಂದಿಗೆ ಅತ್ಯವಶ್ಯಕ ಎಂದರು.
ಇದೇ ಸಂದರ್ಭದಲ್ಲಿ ಭಾವನಾ ಪುರಸ್ಕಾರವನ್ನು ಪಾಕಶಾಸ್ತ್ರ ಪ್ರವೀಣ ವಿನೋದ್‌ರಾಜ್ ಭಟ್ ಅವರಿಗೆ ಪ್ರದಾನ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಕರ್ಣಾಟಕ ಬ್ಯಾಂಕ್ ಉಡುಪಿ ವಿಭಾಗದ ಎಜಿಎಂ ರಮೇಶ್ ವೈದ್ಯ ವಿವಿಧ ಉದ್ದೇಶಗಳಿಗಾಗಿ ಫೌಂಡೇಶನ್‌ಗೆ ನೀಡಿದ ಪ್ರೊಜೆಕ್ಟರ್ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಯಕ್ಷಗುರು ಹಾವಂಜೆ ಮಂಜುನಾಥ ರಾವ್ ವಹಿಸಿದ್ದರು. ಅತಿಥಿಗಳಾಗಿ ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕ ಮುಕ್ತಾ ಬಾಯಿ, ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರತ್ನಾಕರ ಮೊಗವೀರ, ಬಾಳೆಬೈಲು ಸರಕಾರಿ ಪ್ರಾಥಮಿಕ ಶಾಲೆಯ ಉಪನ್ಯಾಸಕಿ ಶಾರದಾ ನಾಯಕ್ ಉಪಸ್ಥಿತರಿದ್ದರು.
ಶಿಬಿರ ಸಂಯೋಜಕ ಡಾ.ಜನಾರ್ದನ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ವಿದುಷಿ ಅಕ್ಷತಾ ವಿಶು ರಾವ್ ಸನ್ಮಾನಪತ್ರ ವಾಚಿಸಿ, ಶುರಾವ್ ಹಾವಂಜೆ ವಂದಿಸಿದರು.