ಕಾರ್ಕಳ: ನಾರಿಶಕ್ತಿ ಜಾಗೃತಿ ಸಮಾವೇಶ, ಸಾಧಕಿಯರಿಗೆ ಸನ್ಮಾನ
ಕಾರ್ಕಳ: ಮಹಿಳಾ ಸಬಲೀಕರಣ ಎಂದರೆ ಕೇವಲ ಹಕ್ಕುಗಳಿಗಾಗಿ ಸದ್ದು ಮಾಡುವುದಲ್ಲ. ಬದಲಿಗೆ, ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯಯುತ ಅವಕಾಶಗಳನ್ನು ಪಡೆದುಕೊಳ್ಳುತ್ತಲೇ, ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿ ಮುನ್ನಡೆಯುವುದಾಗಿದೆ ಎಂದು ಸುರಭಿ ಹೊಡಿಗೆರೆ ಹೇಳಿದರು.
ಮಂಜುನಾಥ ಪೈ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ನಾರಿಶಕ್ತಿ ಸಾಧಕ ಮಹಿಳೆಯರ ಅಭಿನಂದನಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.
ಆಧುನಿಕ ಸಮಾಜದಲ್ಲಿ ಮಹಿಳೆಗೆ ಕೇವಲ ಸುರಕ್ಷತೆ ಅಥವಾ ರಕ್ಷಣೆ ನೀಡಿದರೆ ಸಾಲದು. ಅದಕ್ಕಿಂತ ಹೆಚ್ಚಾಗಿ ಆಕೆಗೆ ಸ್ವತಂತ್ರವಾಗಿ ಮತ್ತು ಮುಕ್ತವಾಗಿ ಬೆಳೆಯುವ ಪೂರಕ ವಾತಾವರಣ ಹಾಗೂ ಸಮಾನ ನ್ಯಾಯದ ಅಗತ್ಯವಿದೆ. ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತಮ್ಮ ಕಾಲಿನ ಮೇಲೆ ತಾವು ನಿಂತು ಸ್ವಾವಲಂಬಿಗಳಾದಾಗ ಮಾತ್ರ ದೇಶದ ನೈಜ ಅಭಿವೃದ್ಧಿ ಸಾಧ್ಯ. ಪ್ರತಿಯೊಬ್ಬ ಮಹಿಳೆಯೂ ತನ್ನ ಸೌಮ್ಯತೆಯ ಹಿಂದಿರುವ ನಾರಿಶಕ್ತಿಯನ್ನು ಜಾಗೃತಗೊಳಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಒಡಿಯೂರು ಸಾಧ್ವಿ ಮಾತಾನಂದಮಯೀ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಮಹಿಳೆಯರು ಜನ್ಮತಃ ತ್ಯಾಗಮಯಿಗಳು ಮತ್ತು ಆದರ್ಶ ಜೀವನ ನಡೆಸುವವರು. ಇಂದು ಮಹಿಳೆಯರು ಕೇವಲ ನಾಲ್ಕು ಗೋಡೆಗಳ ಮಧ್ಯೆ ಮುದುಡಿ ಕೂರದೆ ಶಿಕ್ಷಣ, ವಿಜ್ಞಾನ, ಕ್ರೀಡೆ, ರಾಜಕೀಯ ಮತ್ತು ಸಮಾಜಸೇವೆಯಲ್ಲಿ ಅಪೂರ್ವ ಸಾಧನೆ ಮಾಡುವ ಮೂಲಕ ಹೊಸ ಇತಿಹಾಸ ಬರೆಯುತ್ತಿದ್ದಾರೆ. ಇಂತಹ ಸಾಧಕಿಯರನ್ನು ಗೌರವಿಸುವುದು ಇಡೀ ಸಮಾಜಕ್ಕೆ ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.
ವೇದಿಕೆಯಲ್ಲಿ ಪ್ರಾಧ್ಯಾಪಕಿ ಡಾ. ಸಬಿತಾ ಕೊರಗ ಉಪಸ್ಥಿತರಿದ್ದರು. ಮಹಿಳಾ ಆಯೋಗ ಮಾಜಿ ಸದಸ್ಯೆ ಶ್ಯಾಮಲ ಕುಂದರ್, ಶಿಕ್ಷಣ ಕ್ಷೇತ್ರದ ಸಾವಿತ್ರಿ ಮನೋಹರ್, ಧಾರ್ಮಿಕ ಕ್ಷೇತ್ರದ ಜ್ಯೋತಿ ಪೈ ಸಾಮಾಜಿಕ ಕ್ಷೇತ್ರದ ತನುಲ, ಸಾಹಿತ್ಯ ಕ್ಷೇತ್ರದ ಪ್ರೇಮ ಸುರಿಗ ಅಜೆಕಾರು, ಕ್ರೀಡಾ ಕ್ಷೇತ್ರದ ಅಪ್ಸರಾ ಕಟೀಲ್, ಸಮಾಜಸೇವೆಗಾಗಿ ಆಯೇಷಾ ಬಾನು, ಆರೋಗ್ಯ ಸೇವೆಗಾಗಿ ಲೈಲಾ ಥೋಮಸ್ ಹಾಗೂ ಬಾಲ ಪ್ರತಿಭೆಗಳಾದ ಭೂಮಿ, ಅನ್ವಿ ಹೆಚ್. ಅಂಚನ್, ಸುಧಾನ್ಯ, ಪ್ರಣತಿ ಬಿ. ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ಅಜೆಕಾರು ಸಿ.ಎ ಬ್ಯಾಂಕು ನಿರ್ದೆಶಕಿ ಜಲಜ ಸ್ವಾಗತಿಸಿದರು, ವಿನಯ ಡಿ. ಬಂಗೇರ ಪ್ರಸ್ತಾವನೆಗೈದರು. ಜ್ಯೋತಿರಮೇಶ್ ನಿರೂಪಿಸಿದರು. ಪ್ರಮೀಳಾ ಪ್ರಾರ್ಥಿಸಿದರು.