×
Ad

‘ಮಲಬಾರ್ ಟ್ರೀ ಟೋಡ್’ಗೆ ‘ರಾಜ್ಯ ಉಭಯಜೀವಿ’ ಗೌರವ!

ಶೀಘ್ರದಲ್ಲೇ ಅಧಿಕೃತ ಘೋಷಣೆ: ಅರಣ್ಯ ಇಲಾಖೆ ಮಹತ್ತರ ತೀರ್ಮಾನ

Update: 2026-05-25 19:27 IST

ಉಡುಪಿ, ಮೇ 25: ಕರ್ನಾಟಕದಲ್ಲಿ ರಾಜ್ಯ ಪ್ರಾಣಿ, ರಾಜ್ಯ ಪಕ್ಷಿ, ರಾಜ್ಯ ಮರ ಹಾಗೂ ರಾಜ್ಯ ಚಿಟ್ಟೆ ಇರುವಂತೆ ಕಪ್ಪೆಗೂ ರಾಜ್ಯ ಗೌರವ ಸಿಗುವ ನಿರೀಕ್ಷೆ ಮೂಡಿದೆ. ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡು ಬರುವ ಎಂಡೆಮಿಕ್ (ಸ್ಥಳೀಯ) ಮತ್ತು ಅತ್ಯಂತ ವಿಶಿಷ್ಟ ಕಪ್ಪೆ ಪ್ರಬೇಧ ‘ಮಲಬಾರ್ ಟ್ರೀ ಟೋಡ್’ನ್ನು ‘ರಾಜ್ಯ ಉಭಯಜೀವಿ’ ಎಂಬು ದಾಗಿ ಘೋಷಿಸಲು ರಾಜ್ಯ ಸರಕಾರ ಮಹತ್ತರ ತೀರ್ಮಾನ ಕೈಗೊಂಡಿದ್ದು, ಶೀಘ್ರವೇ ಅಧಿಕೃತ ಘೋಷಣೆ ಯಾಗುವ ಸಾಧ್ಯತೆ ಇದೆ.

‘ಮಲಬಾರ್ ಟ್ರೀ ಟೋಡ್’ನ್ನು ರಾಜ್ಯ ಕಪ್ಪೆಯಾಗಿ ಘೋಷಿಸುವಂತೆ ಶಿಫಾರಸ್ಸು ಮಾಡಿ, ಕಪ್ಪೆ ಸಂಶೋಧಕ ಡಾ.ಗುರುರಾಜ ಕೆ.ವಿ 2020ರ ಸೆಪ್ಟೆಂಬರ್ ತಿಂಗಳಲ್ಲಿ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅವರಿಗೆ ಪ್ರಸ್ತಾವ ಸಲ್ಲಿಸಿದ್ದರು. ಈ ಪ್ರಸ್ತಾಪ 2021ರ ಜನವರಿಯಲ್ಲಿ ರಾಜ್ಯ ವನ್ಯಜೀವಿ ಮಂಡಳಿಗೆ ಮುಂದೆ ಬಂದಿತ್ತು. ಆ ಬಗ್ಗೆ ಚರ್ಚೆಗಳು ನಡೆದಿದ್ದರೂ ಈವರೆಗೆ ಅಧಿಕೃತ ಘೋಷಣೆ ಆಗಿರಲಿಲ್ಲ. ಆದರೆ ಈಗ ಅರಣ್ಯ ಇಲಾಖೆ ಈ ಕುರಿತು ಮಹತ್ತರ ಹೆಜ್ಜೆ ಇಡಲು ಮುಂದಾಗಿದೆ.

ಮಲಬಾರ್ ಟ್ರೀ ಟೋಡ್’ನ್ನು ‘ರಾಜ್ಯ ಉಭಯಜೀವಿ’ ಎಂಬುದಾಗಿ ಕರ್ನಾಟಕ ಸರಕಾರ ಘೋಷಣೆ ಮಾಡಿದಲ್ಲಿ ಇಡೀ ದೇಶದಲ್ಲೇ ರಾಜ್ಯ ಉಭಯಜೀವಿ ಘೋಷಿಸಿರುವ ಮೊದಲ ರಾಜ್ಯ, ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಭಾರತದ ಯಾವುದೇ ರಾಜ್ಯದಲ್ಲೂ ರಾಜ್ಯ ಕಪ್ಪೆಯಾಗಲಿ, ಉಭಯಜೀವಿ ಎಂಬುದು ಇಲ್ಲ. ಈಗಾಗಲೇ ಕೇರಳ ರಾಜ್ಯದಲ್ಲಿ ಪರ್ಪಲ್ ಪ್ರಾಗ್‌ನ್ನು ರಾಜ್ಯ ಕಪ್ಪೆಯಾಗಿ ಘೋಷಿಸುವಂತೆ ಶಿಫಾರಸ್ಸು ಮಾಡಲಾಗಿದೆ. ಆದರೆ ಬೇರೆ ದೇಶಗಳು ಈಗಾಗಲೇ ಈ ರೀತಿಯ ಘೋಷಣೆ ಮಾಡಿದೆ.

ಮಲಬಾರ್ ಟ್ರೀಟೋಡ್ ಯಾಕೆ?: ಕರ್ನಾಟಕದಲ್ಲಿ ಈವರೆಗೆ ಒಟ್ಟು 116 ಕಪ್ಪೆ ಪ್ರಬೇಧಗಳನ್ನು ಗುರುತಿಸ ಲಾಗಿದೆ. ಕರ್ನಾಟಕದಲ್ಲಿ 80 ಸೇರಿದಂತೆ ಒಟ್ಟಾರೆ ಪಶ್ಚಿಮ ಘಟ್ಟದಲ್ಲಿ 280ಕ್ಕಿಂತ ಅಧಿಕ ಕಪ್ಪೆಗಳನ್ನು ಗುರುತಿಸಲಾಗಿದೆ.

ಅಳಿವಿನಂಚಿನಲ್ಲಿರುವ ಪ್ರಬೇಧ ಎಂದೇ ಘೋಷಿಸಲಾಗಿದ್ದ ಈ ಕಪ್ಪೆ ಬಗ್ಗೆ 2015ರಲ್ಲಿ ಮ್ಯಾಪಿಂಗ್ ಮಲಬಾರ್ ಟ್ರೀ ಟೋಡ್ ಎಂಬ ಅಭಿಯಾನವನ್ನು ಆರಂಭಿಸಲಾಯಿತು. ಈ ಕಪ್ಪೆ ನೋಡಿದವರು, ಪೋರ್ಟಲ್‌ನಲ್ಲಿ ವರದಿ ಮಾಡುವಂತೆ ಸೂಚಿಸಲಾಗಿತ್ತು. ಹೀಗೆ ದೇಶಾದ್ಯಂತ ನೂರಾರು ಕಡೆಗಳಲ್ಲಿ ಈ ಕಪ್ಪೆ ಕಂಡುಬಂದಿರುವ ಬಗ್ಗೆ ವರದಿಯಾಯಿತು. ಇದರಿಂದ ಈ ಕಪ್ಪೆ ಭಾರತದ ಪಶ್ಚಿಮ ಘಟ್ಟಗಳ ಎಲ್ಲ ಕಡೆ ಹರಡಿಕೊಂಡಿರುವುದು ದೃಢಪಟ್ಟಿತು.

ಅಳಿವಿನಂಚಿನಲ್ಲಿರುವ ಕಪ್ಪೆ ಎಂದೇ ಭಾವಿಸಿದ್ದ ಮಲಬಾರ್ ಟ್ರೀ ಟೋಡ್ ಎಲ್ಲ ಕಡೆ ಹರಡಿಕೊಂಡಿದೆ ಎಂಬುದನ್ನು ಗುರುತಿಸಿರುವುದೇ ಜನರು. ಹಾಗಾಗಿ ಇದನ್ನು ಶಿಫಾರಸ್ಸು ಮಾಡಿದರೆ ಅದು ಪ್ರಜಾಪ್ರಭುತ್ವ ನೆಲೆಯಲ್ಲಿ ಇರುತ್ತದೆ. ಹಾಗಾಗಿ ರಾಜ್ಯದಲ್ಲಿ ನೂರಾರು ಕಪ್ಪೆ ಪ್ರಬೇಧಗಳಿ ದ್ದರೂ ಇದನ್ನೇ ಶಿಫಾರಸ್ಸು ಮಾಡಲಾಗಿದೆ ಎಂದು ಕಪ್ಪೆ ಸಂಶೋಧಕ ಗುರುರಾಜ್ ಕೆ.ವಿ. ತಿಳಿಸಿದ್ದಾರೆ.

ಸಾಮಾನ್ಯ ನೆಲಗಪ್ಪೆಗಳು ಭೂಮಿಯಲ್ಲಿ ವಾಸಿಸಿ, ನೀರಿನ ಕೊಳಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಆದರೆ ‘ಮಲಬಾರ್ ಟ್ರೀ ಟೋಡ್’ ನೆಲಗಪ್ಪೆ ಜಾತಿಗೆ ಸೇರಿದ್ದರೂ ಮರಗಳ ಮೇಲೆ ವಾಸಿಸುತ್ತವೆ. ಹೊಳೆಗಳಲ್ಲಿ ಅಥವಾ ನೀರಿನಿಂದ ತುಂಬಿದ ಮರದ ಕುಳಿಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಇವುಗಳು ಮಳೆ ಬಿದ್ದ ಕೆಲವೇ ವಾರಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ನಂತರ ಕಣ್ಮರೆಯಾಗುತ್ತವೆ ಎನ್ನುತ್ತಾರೆ ಸಂಶೋಧಕ ಡಾ.ಗುರುರಾಜ್.

ತುಡುವೆ ಜೇನಿಗೆ ‘ರಾಜ್ಯ ಕೀಟ’ ಮಾನ್ಯತೆ!

ಪರಿಸರದಲ್ಲಿ ಪರಾಗಸ್ಪರ್ಶದ ಮೂಲಕ ಕೃಷಿ ಮತ್ತು ಜೀವ ವೈವಿಧ್ಯತೆಗೆ ಮಹತ್ವದ ಕೊಡುಗೆ ನೀಡುತ್ತಿರುವ ತುಡುವೆ ಜೇನು ಪ್ರಬೇಧವನ್ನು ರಾಜ್ಯ ಕೀಟ ಎಂಬುದಾಗಿ ಘೋಷಿಸುವ ತೀರ್ಮಾನ ವನ್ನು ಕೂಡ ಅರಣ್ಯ ಇಲಾಖೆ ತೆಗೆದುಕೊಳ್ಳಲಿದೆ.

ಇದರ ವೈಜ್ಞಾನಿಕ ಹೆಸರು ಅಪಿಸ್ ಸೆರೆನಾ. ಇದು ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ಎಲ್ಲ ಭಾಗದಲ್ಲೂ ಕಂಡುಬರುತ್ತದೆ. ತೋಟಗಾರಿಕೆ ಬೆಳೆ, ಕೃಷಿಯಲ್ಲಿನ ಪರಾಗಸ್ಪರ್ಶ ಕ್ರಿಯೆಯಲ್ಲಿ ತುಡುವೆ ಜೇನಿನ ಪಾತ್ರ ಬಹುಮುಖ್ಯ. ಸರಕಾರ ಈ ಜೀನಿಗೆ ರಾಜ್ಯ ಕೀಟ’ ಗೌರವ ನೀಡಲು ಮುಂದಾಗಿದೆ.

ಪಶ್ಚಿಮಘಟ್ಟಗಳಲ್ಲಿ ಕಂಡುಬರುವ ವಿಶಿಷ್ಟ ಪ್ರಬೇಧದ ಕಪ್ಪೆ ‘ಮಲಬಾರ್ ಟ್ರೀ ಟೋಡ್’ನ್ನು ‘ರಾಜ್ಯ ಉಭಯ ಜೀವಿ’ ಹಾಗೂ ತುಡುವೆ ಜೇನಿಗೆ ‘ರಾಜ್ಯ ಕೀಟ’ ಎಂಬುದಾಗಿ ಘೋಷಿಸುವ ಬಗ್ಗೆ ಪ್ರಸ್ತಾಪ ಸರಕಾರದ ಮುಂದೆ ಇದ್ದು, ಈ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು’

-ಈಶ್ವರ ಬಿ.ಖಂಡ್ರೆ, ರಾಜ್ಯ ಅರಣ್ಯ ಸಚಿವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News