×
Ad

ಕೊಲ್ಲೂರು: ನಾಗೋಡಿ ಘಾಟಿಯಲ್ಲಿ ಹೆಚ್ಚಿದ ವಾಹನಗಳ ದಟ್ಟಣೆ

ಮಳೆಗಾಲಕ್ಕೂ ಮುನ್ನ ಅಗತ್ಯ ಸುರಕ್ಷಾ ಕ್ರಮಕ್ಕೆ ವಾಹನ ಸವಾರರ ಒತ್ತಾಯ

Update: 2026-05-26 20:08 IST

ಕುಂದಾಪುರ, ಮೇ 26: ರಾಜ್ಯದ ಕರಾವಳಿ ಹಾಗೂ ಮಲೆನಾಡನ್ನು ಸಂಪರ್ಕಿಸುವ ಪ್ರಮುಖ ಘಾಟಿಯಾದ ಬಾಳೆ ಬರೆ ಘಾಟಿಯಲ್ಲಿ ಅಗತ್ಯ ಕಾಮಗಾರಿ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು ಇದರಿಂದ ಕೊಲ್ಲೂರು ಸಮೀಪದ ನಾಗೋಡಿ (ನಿಟ್ಟೂರು) ಘಾಟಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿದೆ. ಇದರ ಪರಿಣಾಮ ಇಲ್ಲೂ ರಸ್ತೆಯ ಮೇಲೆ ಭಾರೀ ಒತ್ತಡ ಬೀಳುತ್ತಿದೆ.

ಸಕಾಲದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಮಳೆಗಾಲದಲ್ಲಿ ಈ ಘಾಟಿಯೂ ಅಪಾಯಕಾರಿಯಾ ಗುವ ಭೀತಿಯಿದೆ. ಕುಂದಾಪುರ- ಶಿವಮೊಗ್ಗ ರಾಜ್ಯ ಹೆದ್ದಾರಿಯ ತೀರ್ಥಹಳ್ಳಿ ಮತ್ತು ಕುಂದಾಪುರವನ್ನು ಸಂಪರ್ಕಿ ಸುವ ರಾಜ್ಯ ಹೆದ್ದಾರಿ-52ರ ಹುಲಿಕಲ್ ಘಾಟಿ (ಬಾಳೆಬರೆ ಘಾಟಿ) ರಸ್ತೆಯಲ್ಲಿ ಭೂಕುಸಿತ ಉಂಟಾಗಿರುವ ಹಿನ್ನೆಲೆ ಯಲ್ಲಿ, ಮುಂಜಾಗ್ರತ ಕ್ರಮವಾಗಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಉಡುಪಿ ಜಿಲ್ಲಾಡಳಿತ ಕಳೆದ ಎಪ್ರಿಲ್‌ನಲ್ಲಿ ಆದೇಶ ಹೊರಡಿಸಿತ್ತು.

ಇದರಿಂದ ಪರ್ಯಾಯ ಮಾರ್ಗವಾದ ನಾಗೋಡಿ (ಕೊಲ್ಲೂರು ಘಾಟಿ) ಹಾಗೂ ಆಗುಂಬೆ ಘಾಟಿಯನ್ನು ವಾಹನ ಸವಾರರು ಬಳಸುತ್ತಿದ್ದಾರೆ. ಆದರೆ ಆಗುಂಬೆ ಘಾಟಿಯಲ್ಲಿ ಘನ ವಾಹನಗಳು ಸಂಚರಿಸದ ಕಾರಣ, ಬಹುತೇಕ ಎಲ್ಲ ಟಿಪ್ಪರ್, ಟ್ಯಾಂಕರ್, ಕಲ್ಲಿದ್ದಲು ಸಾಗಾಟದ ಲಾರಿಗಳ ಸಹಿತ ಎಲ್ಲ ಘನ ವಾಹನಗಳು, ಶಿವಮೊಗ್ಗಕ್ಕೆ ತೆರಳುವ ಬಸ್‌ಗಳು, ಬೆಂಗಳೂರು ಸಹಿತ ಹೊರ ಜಿಲ್ಲೆಗಳಿಗೆ ಸಂಚರಿಸುವ ಬಸ್‌ಗಳು ಇದೇ ನಾಗೋಡಿ ಘಾಟಿಯಾಗಿ ಸಂಚರಿಸುತ್ತವೆ.

ಕುಸಿತದ ಭೀತಿ: ಮಳೆಗಾಲಕ್ಕೂ ಮೊದಲು ಬಾಳೆಬರೆ ಘಾಟಿ ಸಂಚಾರ ನಿರ್ಬಂಧ ತೆರವಾಗದಿದ್ದರೆ, ನಾಗೋಡಿ ಘಾಟಿಯೂ ಕೂಡ ಅಲ್ಲಲ್ಲಿ ಕುಸಿಯುವ ಅಪಾಯವಿದೆ. ಕಳೆದ ಮಳೆಗಾಲದಲ್ಲೂ ಇಲ್ಲಿ ಒಂದೆರಡು ಕಡೆಗಳಲ್ಲಿ ಕುಸಿದು, ಸಂಚಾರಕ್ಕೆ ತೊಡಕಾಗಿತ್ತು. ಇದೀಗ ಮೂರು ಪಟ್ಟು ವಾಹನಗಳ ಹೆಚ್ಚಳ, ಬಾಳೆಬರೆ ಘಾಟಿಯಲ್ಲಿ ಸಂಚಾರ ನಿರ್ಬಂಧ ಆದ ನಂತರ, ಅದಕ್ಕೂ ಮೊದಲು ಸಿಗಂದೂರಿನಲ್ಲಿ ಹೊಸ ಸೇತುವೆ ಆದ ನಂತರ ಕೊಲ್ಲೂರಿನಿಂದ ಸಿಗಂದೂರು ಮೂಲಕ ಶಿವಮೊಗ್ಗ, ಸಾಗರ ಕಡೆಗೆ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ನಾಗೋಡಿ ಘಾಟಿ ಮಾರ್ಗವಾಗಿ ಹಿಂದೆ ಸಂಚರಿಸುವ ವಾಹನಗಳ ಸಂಖ್ಯೆಗಿಂತ ಈಗ ಮೂರು ಪಟ್ಟು ಹೆಚ್ಚಾಗಿದೆ.

ಬೇಸಗೆ ರಜೆ, ಕೊಲ್ಲೂರು, ಸಿಗಂದೂರು, ಶಿವಮೊಗ್ಗ ಭಾಗದಿಂದ ಕರಾವಳಿಗೆ ಬರುವವರ ಸಂಖ್ಯೆ ಹೆಚ್ಚಿರುವುದರಿಂದ ಘಾಟಿಯಲ್ಲಿ ನಿರಂತರ ವಾಹನ ದಟ್ಟಣೆ ಇದೆ. ಕಿರಿದಾದ ರಸ್ತೆಯಾಗಿರುವುದರಿಂದ ನಿರಂತರವಾಗಿ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಕೊಲ್ಲೂರಿನ ದಳಿಯಿಂದ ನಾಗೋಡಿ ಚೆಕ್‌ಪೋಸ್ಟ್‌ವರೆಗಿನ ಒಟ್ಟು 12 ಕಿ.ಮೀ. ದೂರದವರೆಗೆ ಘಾಟಿ ಪ್ರದೇಶವಿದೆ. ಇದೆಲ್ಲವೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿಯೇ ಬರುತ್ತದೆ. ಇಲ್ಲಿ ಒಟ್ಟು 12 ತಿರುವುಗಳಿವೆ. ಅಂತಹ ಅಪಾಯಕಾರಿ ತಿರುವುಗಳು ಅಲ್ಲದಿದ್ದರೂ, ಕಿರಿದಾದ ರಸ್ತೆಯಾಗಿರುವುದರಿಂದ ನಿರಂತರ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.

ಇನ್ನು ಮಳೆಗಾಲ ಪ್ರಾರಂಭವಾದರೆ ಕೆಲವೆಡೆಗಳಲ್ಲಿ ಕುಸಿತದ ಭೀತಿಯೂ ಇದೆ. ಘಾಟಿಯಲ್ಲಿ ಎಲ್ಲೂ ಅಂತಹ ಜನ ವಸತಿ ಪ್ರದೇಶಗಳಿಲ್ಲ. ಯಾವುದೇ ಮೊಬೈಲ್ ನೆಟ್ವರ್ಕ್ ಕೂಡ ಇಲ್ಲ. ಏನಾದರೂ ಅವಘಡ ಸಂಭವಿಸಿದರೂ, ತುರ್ತು ಸಂದರ್ಭಗಳಲ್ಲಿ ತುಂಬಾ ತೊಂದರೆಯಾಗಲಿದೆ. ಅದಕ್ಕಾಗಿ ಉಡುಪಿ ಹಾಗೂ ಶಿವಮೊಗ್ಗ ಜಿಲ್ಲಾಡಳಿತಗಳು ಮರು ಡಾಮರೀಕರಣ ಸಹಿತ, ಜನರ ಸುರಕ್ಷತಾ ದೃಷ್ಟಿಯಿಂದ ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತ ಗಳನ್ನು ತಡೆಯುವ ನಿಟ್ಟಿನಲ್ಲಿ ತುರ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು, ಈ ರಸ್ತೆ ಬಳಕೆದಾರರು ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆ ತೊಡಕು: ಈ ಘಾಟಿಯ ಮೂಲಕವೇ ಬೈಂದೂರು- ರಾಣೆಬೆನ್ನೂರು 766 ಸಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುತ್ತದೆ. ಸದ್ಯ ಈ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಬೈಂದೂರಿನಿಂದ ಗೋಳಿಹೊಳೆ ಯವರೆಗೆ ವೇಗವಾಗಿ ಕೆಲಸ ನಡೆಯುತ್ತಿದೆ. ಆದರೆ ಘಾಟಿ ಪ್ರದೇಶದ 12 ಕಿ.ಮೀ. ವನ್ಯಜೀವಿ ಅರಣ್ಯ ಪ್ರದೇಶ ಆಗಿರುವು ದರಿಂದ ಅರಣ್ಯ ಇಲಾಖೆ ಅನುಮತಿ ಸಿಗದ ಹಿನ್ನೆಲೆ ಅಗಲೀಕರಣಕ್ಕೆ ಅಡ್ಡಿಯಾಗಿದೆ. ಇದರಿಂದ ಸದ್ಯಕ್ಕಂತೂ ಈ ಕಿರಿದಾದ ರಸ್ತೆ ಅಗಲೀಕರಣ ಕಷ್ಟಸಾಧ್ಯ ಎನ್ನಲಾಗಿದೆ.

‘ಬಾಳೆಬರೆ ಘಾಟಿ ಅಭಿವೃದ್ಧಿ ಕಾಮಗಾರಿ ಲೋಕೋಪಯೋಗಿ ಇಲಾಖೆ ಯಿಂದ ಅಂದಾಜು 6 ಕೋ.ರೂ. ಅನುದಾನದಲ್ಲಿ ನಡೆಯುತ್ತಿದೆ. ಮಳೆಗಾಲಕ್ಕೂ ಮೊದಲು ಕಾಮಗಾರಿ ಪೂರ್ಣಗೊಳ್ಳುವುದು ಕಷ್ಟ. ತ್ವರಿತ ಗತಿಯ ಕಾಮಗಾರಿಗೆ ಸೂಚನೆ ನೀಡಲಾಗಿದೆ. ಇನ್ನು ನಾಗೋಡಿ ಘಾಟಿ ಕಾಂಕ್ರೀಟಿಕರಣ, ತಡೆಗೋಡೆ ರಚನೆ ಇನ್ನಿತರ ಕಾಮಗಾರಿ ಆಗಬೇಕಾಗಿದೆ. ಅಗಲೀಕರಣಕ್ಕೆ ಅರಣ್ಯ ಇಲಾಖೆ ತೊಡಕಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಳೆಗಾಲದಲ್ಲಿ ಘನ ವಾಹನ ಸಂಚಾರದಲ್ಲಿ ಬದಲಾವಣೆ ಬಗ್ಗೆ ಉಡುಪಿ ಹಾಗೂ ಶಿವಮೊಗ್ಗ ಎರಡೂ ಜಿಲ್ಲಾಧಿಕಾರಿಗಳಿಗೂ ನಿರ್ದೇಶನ ನೀಡಲಾಗುವುದು.

-ಬಿ.ವೈ.ರಾಘವೇಂದ್ರ, ಶಿವಮೊಗ್ಗ ಕ್ಷೇತ್ರದ ಲೋಕಸಭಾ ಸದಸ್ಯ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News