×
Ad

ಸಾರ್ವಜನಿಕರ ಕೆಲಸಗಳಿಗೆ ವಿಳಂಬ ಆರೋಪ: ಹೆಬ್ರಿ ತಾಲೂಕು ಕಚೇರಿ ಎದುರು ಸಾರ್ವಜನಿಕರ ಪ್ರತಿಭಟನೆ

Update: 2026-05-26 20:10 IST

ಹೆಬ್ರಿ, ಮೇ 26: ಸಾರ್ವಜನಿಕರ ಕೆಲಸಗಳ ಕುರಿತಂತೆ ಅಸಡ್ಡೆ ಹಾಗೂ ವಿಳಂಬ ಧೋರಣೆ ಅನುಸರಿಸುತ್ತಿರುವ ತಾಲೂಕು ಕಚೇರಿ ಅಧಿಕಾರಿಗಳ ವಿರುದ್ಧ ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಟ್ರಸ್ಟ್ ವತಿಯಿಂದ ಹೆಬ್ರಿಯ ಸಾರ್ವಜನಿಕರು ಸಾಮಾಜಿಕ ಹೋರಾಟಗಾರ ನೀರೆ ಕೃಷ್ಣ ಶೆಟ್ಟಿ ನೇತೃತ್ವದಲ್ಲಿ ಸೋಮವಾರ ಹೆಬ್ರಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷರೂ ಆದ ನೀರೆ ಕೃಷ್ಣ ಶೆಟ್ಟಿ, ನಾವು ನಿರಂತರ ಹೋರಾಟ ಮಾಡಿ ಹೆಬ್ರಿಯನ್ನು ತಾಲೂಕು ಮಾಡಿಸಿದ್ದೇವೆ. ಆದರೆ ಈಗ ಅದೇ ನಮ್ಮ ತಾಲೂಕಿನಲ್ಲಿ ನಮ್ಮ ಜನರ ಕೆಲಸಗಳಿಗೆ ಅಲೆದಾಡಬೇಕಾಗಿದೆ. ಕೆಳಹಂತದ ಅಧಿಕಾರಿಗಳು ಮತ್ತು ನೌಕರರು ಸಾರ್ವಜನಿಕರನ್ನು ನಿರ್ಲಕ್ಷ್ಯ ಮಾಡಿ ಕಚೇರಿ ಕೆಲಸಗಳಿಗೆ ಅಲೆದಾಡಿಸಿ ವಿಳಂಬ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆಬ್ರಿ ತಾಲೂಕು ಕಚೇರಿಯಲ್ಲಿ ಜನತೆಗೆ ಸಿಗುವ ಸೌಲಭ್ಯಗಳನ್ನು ಆದ್ಯತೆ ಯಲ್ಲಿ ನೀಡಿ, ಜನರ ಕಡತಗಳನ್ನು ವಿಲೇವಾರಿ ಮಾಡಿ. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಕಾರ್ಯವನ್ನು ಕೂಡಲೇ ಮುಗಿಸಿದಾಗ ಅಕ್ರಮ-ಸಕ್ರಮ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಒತ್ತಾಯಿಸಿದರು.

ಕಚೇರಿಯಲ್ಲಿ ನೌಕರರ ಅಸಹಕಾರದಿಂದ ತಾಲೂಕು ಆಡಳಿತಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸಿಬ್ಬಂದಿಗಳು ಜನರಿಗಾಗಿ ಕೆಲಸ ಮಾಡಿ. ಜನರನ್ನು ಕಚೇರಿಗೆ ಅಲೆದಾಡಿಸದೇ, ಕೆಲಸಗಳನ್ನು ಶೀಘ್ರವಾಗಿ ಮಾಡಿಸಿಕೊಡಿ ಎಂದು ನೀರೆ ಕೃಷ್ಣ ಶೆಟ್ಟಿ ಹೇಳಿದರು.

ಅಕ್ರಮ-ಸಕ್ರಮ ಸಮಿತಿಯ ಸದಸ್ಯ ನವೀನ್ ಕೆ ಅಡ್ಯಂತಾಯ ಮಾತನಾಡಿ, ಕೂಡಲೇ ಅಕ್ರಮ-ಸಕ್ರಮ ಸಮಿತಿಯ ಮೀಟಿಂಗ್ ನಡೆಸಿ ಹಕ್ಕುಪತ್ರಗಳನ್ನು ನೀಡಲು ಬಾಕಿಯಿರುವ ಅರ್ಜಿಗಳನ್ನು ವಿಲೇವಾರಿ ಎಂದು ಒತ್ತಾಯಿಸಿದರು.

ಹೆಬ್ರಿ ಬಿಜೆಪಿ ಶಕ್ತಿಕೇಂದ್ರವು ಪ್ರತಿಭಟನೆಗೆ ಬೆಂಬಲ ನೀಡಿತ್ತು. ಪ್ರತಿಭಟನೆಯ ಸಮಯದಲ್ಲಿ ಅರ್ಜಿ ಹಿಡಿದುಕೊಂಡು ಬಂದ ಹಲವರನ್ನು ತಹಶೀಲ್ಧಾರ್ ಎಸ್.ಎ.ಪ್ರಸಾದ್ ತನ್ನ ಕೊಠಡಿಗೆ ಕರೆದೊಯ್ದು ಅಧಿಕಾರಿ ಗಳನ್ನು ಕರೆಸಿಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಟ್ಟರು.

ಗುರಿ ನಿಗದಿ ಮಾಡಿಕೊಂಡು ಎಲ್ಲಾ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವುದು, ಜನರ ಕೆಲಸಗಳಿಗೆ ನಿರ್ಲಕ್ಷ್ಯ ಮಾಡದಂತೆ ತಹಶೀಲ್ಧಾರ್ ಪ್ರಸಾದ್, ಕೆಳಹಂತದ ಅಧಿಕಾರಿಗಳು ಹಾಗೂ ಸಿಬಂದಿಗಳಿಗೆ ಸೂಚಿಸಿ ಸಾರ್ವಜನಿಕರಿಂದ ಯಾವುದೇ ದೂರುಗಳು ಬರದಂತೆ ಕರ್ತವ್ಯ ಮಾಡುವಂತೆ ಸೂಚಿಸಿದರು.

ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಟ್ರಸ್ಟ್ ಪದಾಧಿಕಾರಿಗಳು, ಮುಖಂಡರಾದ ಹೆಬ್ರಿ ಪ್ರವೀಣ್ ಬಲ್ಲಾಳ್, ವಾದಿರಾಜ ಶೆಟ್ಟಿ, ವರಂಗ ಲಕ್ಷ್ಮಣ ಆಚಾರ್, ಕಿರಣ್ ತೋಳಾರ್, ಭೋಜ ಕುಲಾಲ್, ಎಚ್. ಜನಾರ್ಧನ್, ಅಣ್ಣಪ್ಪ ಕುಲಾಲ್, ಮುರ್ಸಾಲು ಮೋಹನದಾಸ ನಾಯಕ್, ಶಶಿಕಲಾ ಡಿ.ಪೂಜಾರಿ ಮುದ್ರಾಡಿ, ಸಂತೋಷ ನಾಯಕ್ ಕನ್ಯಾನ, ನಿತೀಶ್ ಎಸ್ ಪಿ, ಹರೀಶ ಶೆಟ್ಟಿ ನಾಡ್ಪಾಲು, ಬಿಜೆಪಿ ಹೆಬ್ರಿ ಶಕ್ತಿಕೇಂದ್ರದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯಕ್, ಕಾರ್ಕಳ ಮಂಡಲದ ಪ್ರಧಾನ ಕಾರ್ಯದರ್ಶಿ ಶಿವಪುರ ಸುರೇಶ ಶೆಟ್ಟಿ, ಬಿಜೆಪಿ ಪ್ರಮುಖರಾದ ಜ್ಯೋತಿ ಹರೀಶ ಪೂಜಾರಿ, ಅಮೃತ್ ಕುಮಾರ್ ಶೆಟ್ಟಿ, ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ, ಸುಧಾಕರ ಹೆಗ್ಡೆ, ರಮೇಶ ಕುಮಾರ್ ಶಿವಪುರ ಸೇರಿದಂತೆ ವಿವಿಧ ಪ್ರಮುಖರು, ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

ಆದ್ಯತೆಯಲ್ಲಿ ಜನರ ಕೆಲಸ ಮಾಡುತ್ತಿದ್ದೇವೆ: ತಹಶೀಲ್ಧಾರ್

ಹೆಬ್ರಿ ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಕೊರತೆಯ ನಡುವೆಯೂ ಇರುವ ಅಧಿಕಾರಿ, ನೌಕರರ ಮೂಲಕ ಜನರ ಕೆಲಸಗಳನ್ನು ಮಾಡಿಕೊಡುತ್ತಿದ್ದೇವೆ. ಅರ್ಹ ಅರ್ಜಿಗಳನ್ನು ಹಂತಹಂತವಾಗಿ ವಿಲೇವಾರಿ ಮಾಡುತ್ತಿದ್ದೇವೆ. ಸರಕಾರ ಗುರಿ ನಿಗದಿ ಪಡಿಸಿದ ಎಲ್ಲಾ ಕೆಲಸಗಳ ನಡುವೆಯೂ ಡೀಮ್ಡ್ ಫಾರೆಸ್ಟ್ ಜಂಟಿ ಸರ್ವೆ ಕಾರ್ಯವನ್ನು ನಡೆಸುತ್ತಿದ್ದೇವೆ. ಅದು ಕೂಡ ಶೀಘ್ರವಾಗಿ ಮುಕ್ತಾಯ ಗೊಳ್ಳಲಿದೆ. ಜನರ ಕೆಲಸಗಳಿಗೆ ಯಾವುದೇ ವಿಳಂಬ ಮಾಡುತ್ತಿಲ್ಲ ಎಂದು ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿ ಹೆಬ್ರಿ ತಹಶೀಲ್ಧಾರ್ ಎಸ್.ಎ.ಪ್ರಸಾದ್ ಹೇಳಿದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News