ಧರ್ಮಸ್ಥಳ ಪ್ರಕರಣ| ಎಸ್‌ಐಟಿ ಇನ್ನೂ ಆಯೋಗಕ್ಕೆ ತನಿಖಾ ವರದಿ ಸಲ್ಲಿಸಿಲ್ಲ: ಡಾ.ನಾಗಲಕ್ಷ್ಮೀ ಚೌಧರಿ
ಉಡುಪಿ, ಮೇ 26: ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮಹಿಳೆಯರ ಅಸಹಜ ಸಾವು ಹಾಗೂ ನಾಪತ್ತೆ ಪ್ರಕರಣಗಳ ತನಿಖೆಯ ವರದಿಯನ್ನು ವಿಶೇಷ ತನಿಖಾ ತಂಡ ಆಯೋಗಕ್ಕೆ ಇನ್ನೂ ಸಲ್ಲಿಸಿಲ್ಲ. ಆದರೆ ಅದರ ತನಿಖೆ ಮುಂದುವರೆಯುತ್ತದೆ ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರಿನ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಕೊಟ್ಟಿರುವ ತೀರ್ಮಾನದ ಬಗ್ಗೆ ನನಗೆ ಶಾಕ್ ಆಗಿದೆ. ಸಂತ್ರಸ್ತೆಗೆ ಕೇವಲ ಪರಿಹಾರ ನೀಡುವುದರಿಂದ ನ್ಯಾಯ ಸಿಗಲು ಸಾಧ್ಯವಿಲ್ಲ. ನ್ಯಾಯಾಲಯದ ತೀರ್ಮಾನದ ಬಗ್ಗೆ ಮತ್ತೆ ಮೇಲ್ಮನವಿ ಸಲ್ಲಿಸಬೇಕಾಗಿದೆ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್‌ಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ನಾವು ಎಲ್ಲ ಹಂತದಲ್ಲೂ ಸಂತ್ರಸ್ತೆಯ ಪರವಾಗಿ ನಿಲ್ಲುತ್ತೇವೆ ಎಂದರು.
ನಗರದಲ್ಲಿರುವ ಮಹಿಳಾ ಪೊಲೀಸ್ ಠಾಣೆಯನ್ನು ಬೇರೆ ಜಾಗಕ್ಕೆ ಸ್ಥಳಾಂತರಿಸುವಂತೆ ತಿಳಿಸಲಾಗಿದೆ. ಈಗ ಇರುವ ಠಾಣೆಯಲ್ಲಿ ಸರಿಯಾದ ಜಾಗ ಹಾಗೂ ವ್ಯವಸ್ಥೆಗಳಿಲ್ಲ. ಮುಂದೆ ಮಹಿಳೆಯರಿಗೆ ಅನುಕೂಲವಾಗುವ ಜಾಗದಲ್ಲಿ ಠಾಣೆಯನ್ನು ಸ್ಥಾಪಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ವಿದೇಶಿ ಮಾದರಿಯಲ್ಲಿ ನಿರ್ಮಿಸಲಾಗಿದ್ದು, ಇದರಿಂದ ಇದರ ನಿರ್ವಹಣೆ ತುಂಬಾ ಕಷ್ಟವಾಗಿದೆ. ವಿದ್ಯುತ್ ಕೈಕೊಟ್ಟರೆ ಜನರೇಟರ್‌ಗೆ ಗಂಟೆಗೆ 50 ಲೀಟರ್ ಡಿಸೇಲ್ ಹಾಕಬೇಕು. ಈ ವಿಚಾರವನ್ನು ರಾಜ್ಯ ಸರಕಾರದ ಗಮನಕ್ಕೆ ತರಲಾಗುವುದು ಎಂದು ಡಾ.ನಾಗಲಕ್ಷ್ಮೀ ಚೌಧರಿ ತಿಳಿಸಿದರು.