ತಂಬಾಕು ಸೇವನೆಯಿಂದ ಯುವ ವಯಸ್ಸಿನಲ್ಲೇ ಹೃದಯಾಘಾತ: ಡಾ.ಹೇಮಂತ್ ಕುಮಾರ್
ಉಡುಪಿ, ಜೂ.1: ಐಎಂಎ ಉಡುಪಿ ಕರಾವಳಿ, ಆಶ್ರಯದಾತ ಆಟೋ ಯೂನಿಯನ್, ಮಣಿಪಾಲ ಆಟೋ ಚಾಲಕರ ಮತ್ತು ಮಾಲೀಕರ ಸಂಘ, ಡಾ.ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಹಾಗೂ ಕಮಲ ಎ.ಬಾಳಿಗ ಚಾರಿಟೇಬಲ್ ಟ್ರಸ್ಟ್ ಮತ್ತು ಇತರ ಸಹಭಾಗಿ ಸಂಘಟನೆಗಳ ಜಂಟಿ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ, ತಂಬಾಕು ಮತ್ತು ನಿಕೋಟಿನ್ ವ್ಯಸನದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಇಎಸ್‌ಐ ಆಸ್ಪತ್ರೆಯ ಆಡಳಿತ ವಿಮಾ ವೈದ್ಯ ಅಧಿಕಾರಿ ಡಾ.ಹೇಮಂತ್ ಕುಮಾರ್, ತಂಬಾಕು ಸೇವನೆಯಿಂದ ದೇಹದ ವಿವಿಧ ಅಂಗಾಂಗಗಳ ಮೇಲಾಗುವ ಗಂಭೀರ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ತಂಬಾಕು ಸೇವನೆ ಯಿಂದ ಯುವ ವಯಸ್ಸಿನಲ್ಲೇ ಹೃದಯಾ ಘಾತ, ರಕ್ತದೊತ್ತಡ ಹೆಚ್ಚಳ, ಕೊರೊನರಿ ಧಮನಿಗಳ ತಡೆ ಹಾಗೂ ಕಾಲುಗಳ ರಕ್ತನಾಳಗಳ ಹಾನಿ, ಗಾಯಗಳು ಮತ್ತು ಗ್ಯಾಂಗ್ರೀನ್ ಸಾಧ್ಯತೆ ಹೆಚ್ಚಾಗಿದೆ ಎಂದರು.
ಶ್ವಾಸಕೋಶದ ಕಾಯಿಲೆಗಳು, ಮಧುಮೇಹ ನಿಯಂತ್ರಣದಲ್ಲಿ ಅಡಚಣೆ, ಮೂಳೆಗಳ ಸಾಂದ್ರತೆ ಕಡಿಮೆಯಾಗು ವುದು, ಸಂತಾನೋತ್ಪತ್ತಿ ಸಮಸ್ಯೆಗಳು, ಬಂಜೆತನ, ಗರ್ಭಪಾತ ಹಾಗೂ ಕಡಿಮೆ ತೂಕದ ಶಿಶುಗಳ ಜನನ ಸೇರಿ ದಂತೆ ಹಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಧೂಮಪಾನ ಮಾಡದಿದ್ದರೂ, ಅದರ ಹೊಗೆಯನ್ನು ಆಘ್ರಾಣಿಸುವುದರಿಂದ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಕುಟುಂಬದ ಇತರ ಸದಸ್ಯರಿಗೆ ಉಂಟಾಗುವ ಅಪಾಯ ಗಳು ಬಹಳಷ್ಟು ಗಂಭೀರವಾಗಿದೆ ಎಂದು ಅವರು ಹೇಳಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ, ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ತಂಬಾಕು ಬಳಕೆ ಕೇವಲ ಒಂದು ಸಾಮಾನ್ಯ ಅಭ್ಯಾಸವಲ್ಲ, ಅದು ಗಂಭೀರವಾದ ನಿಕೋಟಿನ್ ವ್ಯಸನವಾಗಿದೆ. ಇದು ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ. ತಂಬಾಕು ಸೇವನೆಯಿಂದ ತಾತ್ಕಾಲಿಕ ಸಂತೋಷ ಅಥವಾ ಒತ್ತಡ ನಿವಾರಣೆಯ ಭಾವನೆ ದೊರಕಿದರೂ, ದೀರ್ಘಾವಧಿಯಲ್ಲಿ ಅದು ಆತಂಕ, ಖಿನ್ನತೆ, ತೀವ್ರ ಅವಲಂಬನೆ ಹಾಗೂ ಹಿಂತೆಗೆತ ಲಕ್ಷಣಗಳ ದುಷ್ಟಚಕ್ರಕ್ಕೆ ಕಾರಣವಾಗುತ್ತದೆ ಎಂದರು.
ಹೊಸ ತಲೆಮಾರಿನ ಉತ್ಪನ್ನಗಳ ಕುರಿತು ಎಚ್ಚರಿಕೆ ವಹಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಕರನ್ನು ಗುರಿಯಾಗಿಸಿಕೊಂಡು ಮಾರಾಟ ವಾಗುತ್ತಿರುವ ವೇಪ್‌ಗಳು, ಫ್ಲೇವರ್ಡ್ ತಂಬಾಕು ಉತ್ಪನ್ನಗಳು, ಗುಟ್ಕಾ, ಸಿಗರೇಟ್‌ಗಳು ಹಾಗೂ ಬೀಡಿಗಳು ಕೂಡ ಆರೋಗ್ಯಕ್ಕೆ ಸಮಾನವಾಗಿ ಹಾನಿಕಾರಕವಾಗಿವೆ ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಆಶ್ರಯದಾತ ಆಟೋ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡುಬೆಟ್ಟು, ಅಧ್ಯಕ್ಷರು, ಮಣಿಪಾಲ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಗಣೇಶ್ ಪ್ರಭು, ಮನೋವೈದ್ಯರುಗಳಾದ ಡಾ.ವಿರೂಪಾಕ್ಷ ದೇವರಮನೆ, ಡಾ.ದೀಪಕ್ ಮಲ್ಯ, ಡಾ.ಮಾನಸ್ ಇ.ಆರ್., ಐಎಂಎ ಉಡುಪಿ ಕರಾವಳಿಯ ಗೌರವ ಕಾರ್ಯದರ್ಶಿ ಹಾಗೂ ಆಯುರ್ವೇದ ತಜ್ಞ ಡಾ.ಸುನಿಲ್ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಉಪಸ್ಥಿತರಿದ್ದರು.