ನವಜೀವನ ಲೇ ಕೌನ್ಸಿಲರ್ ತರಬೇತಿ ಕಾರ್ಯಾಗಾರ ಉದ್ಘಾಟನೆ
ಉಡುಪಿ, ಜೂ.1: ಉಡುಪಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ ಹಾಗೂ ಕಮಲ ಎ.ಬಾಳಿಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಒನ್ ಗುಡ್ ಸ್ಟೆಪ್ ಸಂಸ್ಥೆಯ ಸಹಯೋಗದಲ್ಲಿ ನವಜೀವನ ಲೇ ಕೌನ್ಸಿಲರ್ ತರಬೇತಿ ಕಾರ್ಯ ಕ್ರಮದ 9ನೇ ಬ್ಯಾಚ್‌ನ ಉದ್ಘಾಟನಾ ಸಮಾರಂಭವು ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ ಎ.ಬಾಳಿಗ ಸಭಾಂಗಣದಲ್ಲಿ ರವಿವಾರ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಲಯನ್ಸ್ ಕ್ಲಬ್ ಮಣಿಪಾಲ ಮಾಜಿ ಅಧ್ಯಕ್ಷ ಹಾಗೂ ಮಣಿಪಾಲ ಟೆಕ್ನಾಲಜೀಸ್‌ನ ಮುಖ್ಯ ವೈದ್ಯಕೀಯ ಸಲಹೆಗಾರ ಡಾ.ಎಚ್.ಗಣೇಶ್ ಪೈ ಮಾತನಾಡಿ, ಇಂದಿನ ಸಮಾಜದಲ್ಲಿ ಮಾನಸಿಕ ಆರೋಗ್ಯ ಸೇವೆಗಳ ಅಗತ್ಯತೆ ಹೆಚ್ಚುತಿದ್ದು, ಇಂತಹ ಸಂದರ್ಭ ದಲ್ಲಿ ತರಬೇತಿ ಪಡೆದ ಕೌನ್ಸಿಲರ್‌ಗಳ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಉಡುಪಿ ಡಾ.ಎ.ವಿ.ಬಾಳಿಗ ಸಮೂಹ ಸಂಸ್ಥೆಗಳ ನಿರ್ದೇಶಕ ಹಾಗೂ ಮನೋವೈದ್ಯ ಡಾ.ಪಿ.ವಿ. ಭಂಡಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಮನೋವೈದ್ಯ ಡಾ.ದೀಪಕ್ ಮಲ್ಯ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕಿ ಹಾಗೂ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿ, ಸಮಾಜದಲ್ಲಿ ಮಾನಸಿಕ ಆರೋಗ್ಯದ ಮಹತ್ವ ಹಾಗೂ ಲೇ ಕೌನ್ಸಿಲರ್‌ಗಳ ಪಾತ್ರದ ಕುರಿತು ಮಾತನಾಡಿದರು.
ಉದ್ಘಾಟನಾ ಸಮಾರಂಭದ ಬಳಿಕ ತರಬೇತಿ ಕಾರ್ಯಕ್ರಮದ ಶೈಕ್ಷಣಿಕ ಅಧಿವೇಶನಗಳು ಆರಂಭಗೊಂಡವು. ಮೊದಲ ಅಧಿವೇಶನದಲ್ಲಿ ಡಾ.ಪಿ. ವಿ.ಭಂಡಾರಿ ಮೆದುಳು ಮತ್ತು ಅದರ ಕಾರ್ಯಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಅವರು ಮೆದುಳಿನ ರಚನೆ, ವಿವಿಧ ಭಾಗಗಳ ಕಾರ್ಯವೈಖರಿ, ಭಾವನೆಗಳು, ಚಿಂತನೆ, ವರ್ತನೆ ಮತ್ತು ಮಾನಸಿಕ ಆರೋಗ್ಯದೊಂದಿಗೆ ಅದರ ಸಂಬಂಧವನ್ನು ವಿವರಿಸಿದರು.
ಎರಡನೇ ಅಧಿವೇಶನವನ್ನು ಸೌಜನ್ಯ ಶೆಟ್ಟಿ, ಕೌನ್ಸಿಲಿಂಗ್‌ನ ಮೂಲ ತತ್ವಗಳು ಎಂಬ ವಿಷಯದ ಕುರಿತು ಮಾತನಾಡಿ, ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಅಗತ್ಯವಾದ ಅನುಭೂತಿ, ಸಕ್ರಿಯ ಆಲಿಸುವಿಕೆ, ಗೌಪ್ಯತೆ, ನಿರ್ಣಯ ರಹಿತ ಮನೋಭಾವ ಹಾಗೂ ಪರಿಣಾಮಕಾರಿ ಸಂವಹನ ಕೌಶಲ್ಯಗಳ ಕುರಿತು ವಿವರಿಸಿದರು.