ಕಿದಿಯೂರು ಮಧುಶ್ರೀ ಪ್ರಕಾಶನದ 40 ವರ್ಷದ ಸಂಭ್ರಮಕ್ಕೆ ಚಾಲನೆ
ಉಡುಪಿ: ತುಳುಕೂಟ ಉಡುಪಿ ಮತ್ತು ವಿಶ್ವಪ್ರಭ ಪ್ರತಿಷ್ಠಾನ ಜಂಟಿ ಸಹಯೋಗದಲ್ಲಿ ಮಧುಶ್ರೀ ಪ್ರಕಾಶನ ಕಿದಿಯೂರು ಇದರ ವತಿಯಿಂದ ಮಧುಶ್ರೀ ಪ್ರಕಾಶನದ ನಲ್ವತ್ತನೇ ವರ್ಷದ ಸಂಭ್ರಮಕ್ಕೆ ರವಿವಾರ ಉಡುಪಿ ಕಿದಿಯೂರು ಹೋಟೇಲಿನ ಅನಂತಶಯನ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಉದ್ಯಮಿ ಯು. ವಿಶ್ವನಾಥ ಶೆಣೈ ಮುಖ್ಯ ಅತಿಥಿಯಾಗಿದ್ದರು. ಮೀರ್ಮಾರ ಗೋವಾದ ನಿವೃತ್ತ ಉಪಪ್ರಾಂಶುಪಾಲ ಎಸ್.ಎನ್.ಡಿ. ಪೂಜಾರಿ ಬರೆದಿರುವ ’ತುಳುವ ದೈವ ಸಂಪ್ರದಾಯ’ ಅಧ್ಯಯನ ಗ್ರಂಥವನ್ನು ಉಡುಪಿ ತುಳುಕೂಟದ ಸ್ಥಾಪಕಾಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್ ಬಿಡುಗಡೆ ಮಾಡಿದರು. ಜಾನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರ್ ಪುಸ್ತಕ ಪರಿಚಯ ಮಾಡಿದರು.
ತುಳುಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಮಧುಶ್ರೀ ಪ್ರಕಾಶನದ ಮುಖ್ಯಸ್ಥ, ಸಾಹಿತಿ ಗಂಗಾಧರ ಕಿದಿಯೂರು ಬರೆದಿರುವ ’ಪಿಂಗಾರದ ಬಾಲೆ ಸಿರಿ’ ತುಳು ನಾಟಕದ ಕೃತಿಯ ಇಂಗ್ಲಿಷ್ ಆವೃತ್ತಿಯನ್ನು ಜಾನಪದ ವಿದ್ವಾಂಸ ಡಾ.ಗಣೇಶ್ ಅಮಿನ್ ಸಂಕಮಾರ್ ಬಿಡುಗಡೆಗೊಳಿಸಿದರು. ಲೇಖಕಿ ಡಾ.ಪಾರ್ವತಿ ಜಿ.ಐತಾಳ್ ಪುಸ್ತಕ ಪರಿಚಯ ಮಾಡಿದರು.
ಇದೇ ವೇಳೆ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಎಲ್.ಸಾಮಗ, ನಿವೃತ್ತ ಶಿಕ್ಷಕರಾದ ಸರಳಾ ಶೆಟ್ಟಿ, ಧನಲಕ್ಷ್ಮೀ, ಮುತ್ತಕ್ಕ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಾದ ತನುಶ್ರೀ ಪಿತ್ರೋಡಿ, ಸಂಹಿತಾ ಜಿ.ಪಿ., ಯಶಸ್ ಪಿ.ಸುವರ್ಣ ಕಟಪಾಡಿ, ಶಾರ್ವರಿ ಯು.ಅಂಚನ್, ಆದ್ಯ ಶ್ರೀನಾಥ್, ಅದಿತಿ ಶ್ರೀನಾಥ್, ಸಮರ್ಥ ಎಂ.ಸಿ, ತನ್ವಿ ಎಂ.ಕಿದಿಯೂರು, ವೈಷ್ಣವಿ ವಿಶ್ವನಾಥ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಇದೇ ಸಂದರ್ಭದಲ್ಲಿ ರಂಗಭೂಮಿ ಉಡುಪಿ, ಸುಮನಸಾ ಕೊಡವೂರು, ಕಲಾಕಿರಣ್ ಕ್ಲಬ್ ಬೈಲೂರು, ನವಸುಮ ರಂಗಮಂಚ ಕೊಡವೂರು, ಯೂತ್ ಸ್ಪೋರ್ಟ್ಸ್ ಅಂಡ್ ಕಲ್ಬರಲ್ ಕ್ಲಬ್ ಅಂಬಲಪಾಡಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ, ವಿಠೋಬ ಭಜನಾ ಮಂದಿರ ಅಂಬಲಪಾಡಿ, ತುಳುಕೂಟ ಉಡುಪಿ, ನಂದಗೋಕುಲ ಯುವಕ ಮಂಡಲ ಮಾರ್ಪಳ್ಳಿ, ಬೈದಶ್ರೀ ಸಂಶೋಧನಾ ಕೇಂದ್ರ ಆದಿಉಡುಪಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಮಧುಶ್ರೀ ಪ್ರಕಾಶನದ ಮುಖ್ಯಸ್ಥ ಗಂಗಾಧರ ಕಿದಿಯೂರು ಸ್ವಾಗತಿಸಿದರು. ಪ್ರಭಾಕರ ತುಮುರಿ ಕಾರ್ಯಕ್ರಮ ನಿರೂಪಿಸಿದರು.