×
Ad

ಪ್ರಕ್ಷುಬ್ಧ ಕಡಲು; ಮೀನುಗಾರರಿಗೆ ಎಚ್ಚರಿಕೆ

Update: 2026-06-05 21:29 IST

ಉಡುಪಿ, ಜೂ.5: ಮುಂದಿನ ಮೂರ್ನಾಲ್ಕು ದಿನಗಳ ಕಾಲ ಗಂಟೆಗೆ 45ರಿಂದ 55ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಇದರಿಂದ ಅರಬಿಸಮುದ್ರ ಪ್ರಕ್ಷುಬ್ಧವಾಗಿರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಈ ಅವಧಿಯಲ್ಲಿ ಕೇರಳ, ಕರ್ನಾಟಕ, ಗೋವಾ ಹಾಗೂ ದಕ್ಷಿಣ ಮಹಾರಾಷ್ಟ್ರದ ಕರಾವಳಿ ತೀರದಲ್ಲಿ ವೇಗದ ಗಾಳಿಯು ಬೀಸಲಿದ್ದು, ಜೂ.10ರವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ಇಂದು ಉಡುಪಿ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಿದೆ. ಬೆಳಗ್ಗೆ ಕುಂದಾಪುರ, ಬೈಂದೂರು ಸೇರಿದಂತೆ ಅನೇಕ ಕಡೆಗಳಲ್ಲಿ ಬಿರುಸಿನ ಮಳೆಯಾದರೆ ಬಳಿಕ ದಿನವಿಡೀ ಹನಿಮಳೆ ಮುಂದುವರಿಯಿತು. ಸಂಜೆಯ ವೇಳೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಿದ್ದರೂ, ಮುಂಗಾರು ಮಳೆಯ ಯಾವುದೇ ಲಕ್ಷಣ ಕಂಡುಬರಲಿಲ್ಲ. ದಿನವಿಡೀ ಮೋಡ ಕವಿದ ವಾತಾವರಣ ಜಿಲ್ಲೆಯಲ್ಲಿತ್ತು.

ಶುಕ್ರವಾರ ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 21.3ಮಿ.ಮೀ. ಮಳೆಯಾಗಿದೆ. ಕಾಪುವಲ್ಲಿ ಅತ್ಯಧಿಕ 34.7ಮಿ.ಮೀ. ಮಳೆಯಾದರೆ, ಬೈಂದೂರಿನಲ್ಲಿ 28.7, ಕುಂದಾಪುರದಲ್ಲಿ 21.3, ಕಾರ್ಕಳದಲ್ಲಿ 20.9, ಬ್ರಹ್ಮಾವರದಲ್ಲಿ 19.6, ಹೆಬ್ರಿಯಲ್ಲಿ 15.4 ಹಾಗೂ ಉಡುಪಿಯಲ್ಲಿ ಅತಿ ಕಡಿಮೆ 9.3ಮಿ.ಮೀ. ಮಳೆಯಾದ ವರದಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News