×
Ad

ಶಿರ್ವ: ಕಲ್ಲೊಟ್ಟು ಪಾಪನಾಶಿನಿ ಹೊಳೆಯಲ್ಲಿ ಜಾನುವಾರಿನ ಅವಶೇಷ ಪತ್ತೆ ಪ್ರಕರಣ: ಆರೋಪಿ ಅಶೋಕ್ ಬಂಧನ

Update: 2026-06-05 21:39 IST

ಶಿರ್ವ: ಶಿರ್ವ ಗ್ರಾಮದ ಕಲ್ಲೊಟ್ಟು ಸೇತುವೆ ಕೆಳಗೆ ಪಾಪನಾಶಿನಿ ಹೊಳೆಯಲ್ಲಿ ಜಾನುವಾರಿನ ಅವಶೇಷಗಳನ್ನು ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿರ್ವ ಪದವು ಬಬ್ಬು ಸ್ವಾಮಿ ದೈವಸ್ಥಾನ ಹತ್ತಿರದ ನಿವಾಸಿ ಅಶೋಕ ಕೊರಗ (52) ಬಂಧಿತ ಆರೋಪಿ.

ಜೂ.1ರಂದು ಪಾಪನಾಶಿನಿ ಹೊಳೆಯಲ್ಲಿ ಜಾನುವಾರಿನ ಅವಶೇಷ ಪತ್ತೆಯಾಗಿರುವ ಮಾಹಿತಿಯ ಮೇರೆಗೆ ಶಿರ್ವ ಪೊಲೀಸರು ಹಾಗೂ ಕಾಪು ಪಶು ವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಅಪರಾಧ ಪರಿಶೀಲನಾ ಅಧಿಕಾರಿಗಳ ಸಮಕ್ಷಮ ಮಹಜರು ನಡೆಸಿದ್ದು, ಜಾನುವಾರಿನ ಮೇಲ್ದವಡೆಯ ಭಾಗ, ಎರಡು ಗೆರಸುಗಳು ಮತ್ತು ಮಾಂಸ, ಹೊಟ್ಟೆಯ ಒಳಗಿನ ಭಾಗಗಳನ್ನು ವಶಪಡಿಸಿಕೊಂಡಿದ್ದರು, ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಸಂಘ ಪರಿವಾರದ ಸಂಘಟನೆಗಳು ಆರೋಪಿಯ ಬಂಧನಕ್ಕೆ ಒತ್ತಾಯಿಸಿದ್ದವು. ಅಲ್ಲದೆ ಆರೋಪಿಯ ಬಂಧನಕ್ಕೆ ಗಡುವು ವಿಧಿಸಿ ಪ್ರತಿಭಟನೆಯ ಎಚ್ಚರಿಕೆಯನ್ನು ಕೂಡ ನೀಡಿದ್ದವು.

ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಜಾನುವಾರನ್ನು ಕಡಿದು ಮಾಂಸ ಮಾಡಿ ಅವಶೇಷಗಳನ್ನು ಹೊಳೆಗೆ ಎಸೆದ ಆರೋಪಿ ಅಶೋಕನನ್ನು ಜೂ.5ರಂದು ಶಿರ್ವ ಗ್ರಾಮದ ಪದವು ಎಂಬಲ್ಲಿ ಬಂಧಿಸಿದ್ದಾರೆ.

ಆರೋಪಿಯಿಂದ ಜಾನುವಾರಿನ ಚರ್ಮ ಹಾಗೂ ಕೃತ್ಯಕ್ಕೆ ಬಳಸಿದ ಅಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಕಾರ್ಯಾಚರಣೆಯನ್ನು ಕಾರ್ಕಳ ಪೊಲೀಸ್ ಉಪಾಧೀಕ್ಷಕ ವಿಜಯ ಪ್ರಸಾದ್‌ ಹಾಗೂ ಕಾಪು ಪೊಲೀಸ್ ನಿರೀಕ್ಷಕ ಅಝ್ಮತ್‌ ಅಲಿ ನೇತೃತ್ವದಲ್ಲಿ ಶಿರ್ವ ಠಾಣಾ ಉಪ ನಿರೀಕ್ಷಕರಾದ ಮಂಜುನಾಥ ಮರಬದ, ಲೋಹಿತ್ ಕುಮಾರ್ ಸಿ ಎಸ್, ಶಿರ್ವ ಪೊಲೀಸ್‌ ಠಾಣಾ ಸಿಬ್ಬಂದಿ ಮಂಜುನಾಥ ಅಡಿಗ, ಕಿರಣ್‌, ಯಲ್ಲಾಲಿಂಗ, ಕಾಪು ಪೊಲೀಸ್‌ ಠಾಣೆಯ ರಘು ಹಾಗೂ ಪಡುಬಿದ್ರಿ ಪೊಲೀಸ್‌ ಠಾಣಾ ಸಿಬ್ಬಂದಿ ರಹಿಮಾನ್‌, ಸಂದೇಶ್‌ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News