×
Ad

ಕೊಂಕಣ ರೈಲ್ವೆಯಲ್ಲಿ ಮಾನ್ಸೂನ್ ಗಸ್ತು ಬಗ್ಗೆ ಪ್ರಾತ್ಯಕ್ಷಿಕೆ

Update: 2026-06-05 21:32 IST

ಉಡುಪಿ, ಜೂ.5: ಕೊಂಕಣ ವಲಯದಲ್ಲಿ ಮುಂಗಾರು ಪ್ರವೇಶಕ್ಕೆ ಸಜ್ಜಾಗುತ್ತಿರುವಂತೆ ಕೊಂಕಣ ರೈಲ್ವೆ ನಿಗಮವು ಈ ಸಂದರ್ಭದಲ್ಲಿ ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳಲ್ಲಿ ರಾತ್ರಿಯ ಗಸ್ತು ಪ್ರಾರಂಭಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಂಡಿದೆ.

ಪಶ್ಚಿಮಘಟ್ಟದಲ್ಲಿ ಧಾರಾಕಾರ ಮಳೆಗೆ ಗುಡ್ಡಕುಸಿಯುವ ಸಾಧ್ಯತೆ ಇರುವ ಪ್ರದೇಶಗಳನ್ನು ಈಗಾಗಲೇ ಗುರುತಿಸಿದ್ದು ಅಲ್ಲಿ ದಿನದ 24 ಗಂಟೆಯೂ ಕಾರ್ಯಾಚರಿಸುವ ವಾಚ್‌ಮೆನ್‌ಗಳನ್ನು ನಿಯೋಜಿಸಿದೆ. ಇವರಿಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆಯ ಕಾರ್ಯಕ್ರಮವೊಂದನ್ನು ಕೆಆರ್‌ಸಿಎಲ್‌ನ ಸುರಕ್ಷಿತಾ ವಿಭಾಗ ರತ್ನಗಿರಿಯಲ್ಲಿ ಬುಧವಾರ ಆಯೋಜಿಸಿತ್ತು.

ಈ ಭಾಗಗಳಲ್ಲಿ ಕೊಂಕಣ ರೈಲ್ವೆ ಇದೇ ಮೊದಲ ಬಾರಿಗೆ ರಾತ್ರಿ ಗಸ್ತನ್ನು ಪರಿಚಯಿಸುತ್ತಿದೆ. ಇವರು ಸೂರ್ಯ ಮುಳುಗುವ ಸಮಯದಿಂದ ಮರುದಿನ ಸೂರ್ಯ ಉದಯಿಸುವ ಸಮಯದವರೆಗೆ ಇಂಥ ಪ್ರದೇಶಗಳಲ್ಲಿ ಕಾರ್ಯಾ ಚರಿಸಲಿದ್ದಾರೆ. ಇವರು ಕಾಲ್ನಡಿಗೆಯಲ್ಲಿ ಇಂಥ ಪ್ರದೇಶಗಳಲ್ಲಿ ಸಂಚರಿಸಿ ರೈಲು ಹಳಿಗೆ ಭೂಕುಸಿತ, ಬಂಡೆ ಜಾರಿ ಬೀಳುವುದು, ಹಠಾತ್ ಪ್ರವಾಹಕ್ಕೆ ಹಳಿ ನೀರಿನಲ್ಲಿ ಮುಳುಗುವುದು ಸೇರಿದಂತೆ ಯಾವುದೇ ಅಪಾಯ ಎದುರಾಗುವ ಬಗ್ಗೆ ನಿಗಾ ವಹಿಸಲಿದ್ದಾರೆ.

ಇಂಥ ಯಾವುದೇ ಸಂಭವನೀಯ ಸಾಧ್ಯತೆ ಕಂಡುಬಂದರೆ ಇವರು ತಕ್ಷಣ ಸಮೀಪದ ಸ್ಟೇಶನ್ ಮಾಸ್ಟರ್‌ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಇಂಥ ಪ್ರತಿಯೊಬ್ಬ ಗಸ್ತುದಾರಿಗೂ ಐದು ಕಿ.ಮೀ.ವರೆಗಿನ ವ್ಯಾಪ್ತಿಯನ್ನು ನೀಡಲಾ ಗುತ್ತದೆ. ಇವರು ಪೆಟ್ರೋಲ್ ಡೈರಿಯನ್ನು ಪಕ್ಕದ ಗಸ್ತುದಾರಿಯೊಂದಿಗೆ ವಿನಿಮಯ ಮಾಡಿಕೊಳ್ಳಬೇಕಾ ಗುತ್ತದೆ. ಈ ಮೂಲಕ ರೈಲು ಮಾರ್ಗ ಸಂಚಾರಕ್ಕೆ ಸುರಕ್ಷಿತವಾಗಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲಾಗುತ್ತದೆ.

ಪೆಟ್ರೋಲ್ ಡೈರಿಯ ವಿನಿಮಯ ಸೇರಿದಂತೆ ರಾತ್ರಿ ಗಸ್ತಿನ ಸಮಗ್ರ ಮಾಹಿತಿಯನ್ನು ಪ್ರಾತ್ಯಕ್ಷಿಕೆಯಲ್ಲಿ ಪ್ರದರ್ಶಿಸಲಾ ಯಿತು. ವಿವಿಧ ತುರ್ತು ಸಂದರ್ಭಗಳಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ವಿವರವಾಗಿ ಅವರಿಗೆ ತಿಳಿಸಿಕೊಡಲಾಯಿತು.

ಕೆಆರ್‌ಸಿಎಲ್‌ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಂತೋಷ್ ಕುಮಾರ್ ಝಾ ಅವರ ಅಧ್ಯಕ್ಷತೆಯಲ್ಲಿ ಈ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಸುರಕ್ಷತಾ ವಿಭಾಗದ ರಾಜೀವ್ ಕುಮಾರ್ ಮಿಶ್ರಾ ಅವರು ಮಳೆಗಾಲದ ಸಂದರ್ಭದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಮಾಹಿತಿಗಳನ್ನು ನೀಡಿದರು.

ಈ ಸೆಮಿನಾರ್‌ನಲ್ಲಿ ಕೆಆರ್‌ಸಿಎಲ್‌ನ ಹಿರಿಯ ಅಧಿಕಾರಿಗಳೊಂದಿಗೆ 175 ಮಂದಿ ಗಸ್ತುದಾರಿಗಳು, ಟ್ರ್ಯಾಕ್‌ಮೆನ್, ವಾಚ್‌ಮೆನ್, ಸ್ಟೇಶನ್ ಮಾಸ್ಟರ್ಸ್‌ ಹಾಗೂ ತಾಂತ್ರಿಕ ವಿಭಾಗ ಮೇಲ್ವಿಚಾರಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News