×
Ad

ತುಳು ಅಭಿವೃದ್ಧಿ ನಿಗಮ, ತುಳು ಭವನ ನಿರ್ಮಾಣಕ್ಕೆ ಸಿಎಂಗೆ ಮನವಿ

Update: 2026-06-13 17:46 IST

ಉಡುಪಿ, ಜೂ.13: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸುವ ದೃಷ್ಟಿಯಿಂದ ರಾಜ್ಯ ಸರಕಾರ ತುಳು ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಹಾಗೂ ಕಾರ್ಕಳದಲ್ಲಿ ಸುಸಜ್ಜಿತ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮುನಿಯಾಲ್ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ಈಗಾಗಲೇ ಯುನೆಸ್ಕೋ ಸಹ ತುಳು ಭಾಷೆಯನ್ನು ಸಂರಕ್ಷಿಸಬೇಕಾದ ಭಾಷೆಗಳ ಪೈಕಿ ಪರಿಗಣಿಸಿರುವ ಹಿನ್ನೆಲೆ ಯಲ್ಲಿ, ತುಳು ಭಾಷೆಯ ಉಳಿವು ಮತ್ತು ಬೆಳವಣಿಗೆಗಾಗಿ ವಿಶೇಷ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ವಾಗಿದೆ. ಆದ್ದರಿಂದ ತುಳು ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ ತುಳು ಭಾಷೆಯ ಸಂರಕ್ಷಣೆ ಮತ್ತು ಪ್ರಚಾರ, ತುಳು ಸಾಹಿತ್ಯ, ಸಂಶೋಧನೆ ಹಾಗೂ ಪ್ರಕಟಣೆಗಳಿಗೆ ಉತ್ತೇಜನ, ಶಾಲೆ ಮತ್ತು ಕಾಲೇಜುಗಳಲ್ಲಿ ತುಳು ಅಧ್ಯಯನಕ್ಕೆ ಹೆಚ್ಚಿನ ಪ್ರೋತ್ಸಾಹ, ತುಳು ಜಾನಪದ ಕಲೆ, ಯಕ್ಷಗಾನ, ಭೂತಾರಾಧನೆ ಹಾಗೂ ಇತರ ಸಾಂಸ್ಕೃತಿಕ ಪರಂಪರೆಗಳ ಸಂರಕ್ಷಣೆ, ತುಳು ಭಾಷೆಗೆ ಸಂವಿಧಾನಿಕ ಹಾಗೂ ಶೈಕ್ಷಣಿಕ ಮಾನ್ಯತೆ ದೊರಕುವಂತೆ ಕ್ರಮ ಕೈಗೊಳ್ಳುವುದು, ತುಳುನಾಡಿನ ಸಾಂಸ್ಕೃತಿಕ ಕೇಂದ್ರಗಳ ಅಭಿವೃದ್ಧಿಗೆ ನೆರವು ನೀಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ತುಳು ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸುಸಜ್ಜಿತ ತುಳು ಭವನ ನಿರ್ಮಾಣ ಅಗತ್ಯವಾಗಿದೆ. ಕಾರ್ಕಳವು ತುಳುನಾಡಿನ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾ ಗಿದ್ದು, ಇಲ್ಲಿ ತುಳು ಭಾಷೆ, ಯಕ್ಷಗಾನ, ಭೂತಾರಾಧನೆ, ನಾಗಾರಾಧನೆ ಹಾಗೂ ಇತರ ಜನಪದ ಕಲೆಗಳು ಇಂದಿಗೂ ಜೀವಂತವಾಗಿವೆ. ತುಳು ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆ, ಅಧ್ಯಯನ ಮತ್ತು ಪ್ರಚಾರಕ್ಕಾಗಿ ಕಾರ್ಕಳದಲ್ಲಿ ತುಳು ಭವನದ ಅಗತ್ಯವಿದೆ.

ಪ್ರಸ್ತಾವಿತ ತುಳು ಭವನದಲ್ಲಿ ಗ್ರಂಥಾಲಯ, ಸಂಶೋಧನಾ ಕೇಂದ್ರ, ಸಭಾಂಗಣ, ವಸ್ತುಸಂಗ್ರಹಾಲಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳಿಗಾಗಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬಹುದಾಗಿದೆ. ಇದರಿಂದ ತುಳು ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ. ಆದುದರಿಂದ ಕಾರ್ಕಳ ತಾಲ್ಲೂಕಿನಲ್ಲಿ ಸರಕಾರದಿಂದ ಸೂಕ್ತ ಜಾಗವನ್ನು ಗುರುತಿಸಿ, ಅಗತ್ಯ ಅನುದಾನವನ್ನು ಮಂಜೂರು ಮಾಡಿ ಶೀಘ್ರದಲ್ಲೇ ತುಳು ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಉದಯ್ ಶೆಟ್ಟಿ ಮುನಿಯಾಲ್ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News