×
Ad

ಕಾಂಗ್ರೆಸ್ ಸೇರ್ಪಡೆ ಸುದ್ದಿ ಸಂಪೂರ್ಣ ಆಧಾರರಹಿತ: ಪ್ರಮೋದ್ ಮಧ್ವರಾಜ್ ಸ್ಪಷ್ಟನೆ

Update: 2026-06-13 17:41 IST

ಉಡುಪಿ, ಜೂ.13: ‘ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇನೆ ಎಂಬುದಾಗಿ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣವಾಗಿ ಆಧಾರರಹಿತವಾಗಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟಪಡಿಸಿದ್ದಾರೆ.

ನಾನು ಬಿಜೆಪಿಯನ್ನು ಅಧಿಕಾರಕ್ಕಾಗಿ ಸೇರಿಲ್ಲ, ಜನಸೇವೆಯ ಉದ್ದೇಶದಿಂದ ಸೇರಿದ್ದೇನೆ. ಅಧಿಕಾರ ಅಥವಾ ಹುದ್ದೆಗಳು ಬಂದರೆ ಅದು ಹೆಚ್ಚುವರಿ ಜವಾಬ್ದಾರಿಯಷ್ಟೇ. ಆದರೆ ನನ್ನ ರಾಜಕೀಯ ಜೀವನದ ಮೂಲ ಉದ್ದೇಶ ಜನರ ಸೇವೆ ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾನು ಯಾವುದೇ ಅಧಿಕಾರ ಅಥವಾ ಹುದ್ದೆಗಾಗಿ ಪರಿತಪಿಸುತ್ತಿಲ್ಲ. ಹುದ್ದೆಗಳು ವ್ಯಕ್ತಿಯನ್ನು ದೊಡ್ಡವನನ್ನಾಗಿಸು ವುದಿಲ್ಲ; ಜನರ ವಿಶ್ವಾಸ ಮತ್ತು ಸೇವೆಯೇ ವ್ಯಕ್ತಿಯ ನಿಜವಾದ ಶಕ್ತಿಯಾಗಿದೆ ಎಂಬ ನಂಬಿಕೆ ನನ್ನದು. ನನಗೆ ಅಧಿಕಾರ ಸಿಕ್ಕರೆ ಅದು ಕೇವಲ ಜನರ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಮಾತ್ರ. ಅಧಿಕಾರ ಎನ್ನುವುದು ನನ್ನ ಪಾಲಿಗೆ ಗೌರವ ಅಥವಾ ಸ್ಥಾನಮಾನವಲ್ಲ, ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಪಕ್ಷ ನನಗೆ ಯಾವುದೇ ಜವಾಬ್ದಾರಿ ನೀಡಿದರೆ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಜವಾಬ್ದಾರಿ ಸಿಗದಿ ದ್ದರೂ ಪಕ್ಷದ ಸಾಮಾನ್ಯ ಕಾರ್ಯ ಕರ್ತನಾಗಿ ಜನರ ಮಧ್ಯೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷದ ನಾಯಕರುಗಳು ನನ್ನ ಕಾರ್ಯ, ಪಕ್ಷದ ಮೇಲಿನ ನಿಷ್ಠೆ ಹಾಗೂ ಜನಸೇವೆಯ ಬದ್ಧತೆ ಯನ್ನು ಖಂಡಿತವಾಗಿಯೂ ಗುರುತಿಸಿ ಸೂಕ್ತ ಹಾಗೂ ಉತ್ತಮ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಅವರು ತಿಳಿಸಿದ್ದಾರೆ.

ನನ್ನ ರಾಜಕೀಯ ಪಯಣದಲ್ಲಿ ನನ್ನ ಮೇಲೆ ವಿಶ್ವಾಸವಿಟ್ಟು ಬೆಂಬಲ ನೀಡುತ್ತಿರುವ ಕಾರ್ಯಕರ್ತರು, ಅಭಿಮಾನಿ ಗಳು ಹಾಗೂ ಜನತೆಗೆ ನಾನು ಸದಾ ಚಿರಋಣಿಯಾಗಿದ್ದೇನೆ. ಅವರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ನನಗೆ ಮತ್ತಷ್ಟು ಶಕ್ತಿಯನ್ನು ನೀಡುತ್ತಿದೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ ಮತ್ತು ವದಂತಿಗಳಿಗೆ ಕಿವಿಗೊಡದೆ, ಅಧಿಕೃತ ಮಾಹಿತಿಯನ್ನಷ್ಟೇ ನಂಬಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಅಧಿಕಾರ ನನ್ನ ಗುರಿಯಲ್ಲ ಜನಸೇವೆಯೇ ನನ್ನ ಧ್ಯೇಯ. ಅಧಿಕಾರ ಸಿಕ್ಕರೆ ಜನರ ಸೇವೆಗೆ ಬಳಸುತ್ತೇನೆ, ಸಿಗದಿದ್ದರೂ ಜನರ ಸೇವೆಯನ್ನು ನಿಲ್ಲಿಸುವುದಿಲ್ಲ’

-ಪ್ರಮೋದ್ ಮಧ್ವರಾಜ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News