×
Ad

ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ಸಾಮಾನ್ಯ ಮಳೆ; ಹವಾಮಾನ ಇಲಾಖೆಯಿಂದ ಭಾರೀ ಮಳೆಯ ಮುನ್ಸೂಚನೆ

Update: 2026-06-26 20:32 IST

ಉಡುಪಿ, ಜೂ.26: ಈ ಬಾರಿಯ ಮುಂಗಾರು ಜಿಲ್ಲೆಗೆ ಅಧಿಕೃತವಾಗಿ ಕಾಲಿಟ್ಟ ಬಳಿಕ ಸತತವಾಗಿ ಸಾಮಾನ್ಯ ಪ್ರಮಾಣದಲ್ಲಿ ಮಳೆಯಾಗುತಿದ್ದರೂ, ಹವಾಮಾನ ಇಲಾಖೆ ಮಾತ್ರ ಕರಾವಳಿ ಜಿಲ್ಲೆಗಳಿಗೆ ಬಾರೀ ಮಳೆಯ ಮುನ್ಸೂಚನೆಯನ್ನು ನೀಡುತ್ತಾ ಬಂದಿದೆ. ಇದೀಗ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಗಾಳಿಯೊಂದಿಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಅದು ನೀಡಿದೆ.

ಜೂ.27ರಿಂದ 30ರವರೆಗೆ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡಂತೆ ಕರಾವಳಿ ಭಾಗದಲ್ಲಿ ಗಂಟೆಗೆ 30ರಿಂದ 40ಕಿ.ಮೀ. ವೇಗದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಬೆಂಗಳೂರಿನ ಹವಾಮಾನ ಕೇಂದ್ರವು ನೀಡಿದೆ.

ಆದರೆ ಪ್ರಾಥಮಿಕ ವರದಿಗಳಂತೆ ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯ ಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 20.1 ಮಿ.ಮೀ. ಮಳೆಯಾಗಿದೆ. ಬೈಂದೂರಿನಲ್ಲಿ ಅತ್ಯಧಿಕ 24.2ಮಿ.ಮೀ. ಮಳೆ ಯಾಗಿದೆ. ಉಳಿದಂತೆ ಕಾಪುವಿನಲ್ಲಿ 22.1, ಕುಂದಾಪುರದಲ್ಲಿ 20.3, ಕಾರ್ಕಳದಲ್ಲಿ 19.7, ಉಡುಪಿಯಲ್ಲಿ 18.9, ಬ್ರಹ್ಮಾವರದಲ್ಲಿ 17.7 ಹಾಗೂ ಹೆಬ್ರಿಯಲ್ಲಿ 17.2ಮಿ.ಮೀ. ಮಳೆಯಾಗಿದೆ.

ಬೈಂದೂರು ತಾಲೂಕಿನ ಶಿರೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಗೋಡೆ ಮಳೆ ಯಿಂದ ಬುಧವಾರ ಕುಸಿದು ಬಿದ್ದಿದೆ. ಆದರೆ ಯಾರಿಗೂ ಅಪಾಯವಾಗಿಲ್ಲ ಎಂದು ಇಲ್ಲಿಗೆ ಬಂದಿರುವ ಮಾಹಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News