×
Ad

ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಒಂದೂವರೆ ಮೀಟರ್ ಕಡಿಮೆ: ಹಿರಿಯ ಭೂವಿಜ್ಞಾನಿ ಡಾ.ದಿನಕರ ಶೆಟ್ಟಿ

ತಿಂಗಳ ಅಂಗಳ ಸಂವಾದ

Update: 2026-06-26 20:34 IST

ಉಡುಪಿ, ಜೂ.26: ಕರಾವಳಿಯಲ್ಲಿ ಈ ಬಾರಿ ಮಳೆಯ ಕೊರತೆ ಆಗಿರುವುದರಿಂದ ಕಳೆದ ವರ್ಷದ ಮೇ ಹಾಗೂ ಈ ವರ್ಷದ ಮೇ ತಿಂಗಳಿಗೆ ಹೋಲಿಕೆ ಮಾಡಿದರೆ ನಮ್ಮ ಅಂತರ್ಜಲ ಮಟ್ಟವು ಒಂದೂವರೆ ಮೀಟರ್‌ನಷ್ಟು ಕಡಿಮೆ ಯಾಗಿದೆ. ಜೂನ್ ತಿಂಗಳು ಕಳೆದರೂ ಇನ್ನೂ ಮಳೆ ಸರಿಯಾಗಿ ಬಾರದ ಕಾರಣ ಜೂನ್ ತಿಂಗಳಲ್ಲಿಯೂ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಒಂದೂವರೆ ಮೀಟರ್‌ಗಿಂತಲೂ ಅಂತರ್ಜಲ ಮಟ್ಟ ಕಡಿಮೆಯಾಗಿರುವ ಸಾಧ್ಯತೆ ಇದೆ ಎಂದು ಉಡುಪಿ ಅಂತರ್ಜಲ ನಿರ್ದೇಶನಾಲಯದ ಹಿರಿಯ ಭೂ ವಿಜ್ಞಾನಿ ಡಾ.ದಿನಕರ ಶೆಟ್ಟಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗ ದೊಂದಿಗೆ ಶುಕ್ರವಾರ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾದ ತಿಂಗಳ ಅಂಗಳ ಸಂವಾದ ಕಾರ್ಯಕ್ರಮ ದಲ್ಲಿ ಸನ್ಮತಿ ಪತ್ರಿಕೆಯ ಮೇ ತಿಂಗಳ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ನೀರು ನಮಗೆ ಪ್ರಕೃತಿ ಕೊಟ್ಟ ವರ. ಭೂಮಿಯ ಮುಕ್ಕಾಲು ಭಾಗ ನೀರಿನಿಂದ ಆವರಿಸಿದ್ದು, ಇದರಲ್ಲಿ ಶೇ.97 ಉಪ್ಪು ನೀರು, ಕೇವಲ ಶೇ.3ರಷ್ಟು ಮಾತ್ರ ಸಿಹಿ ನೀರು ಇದೆ. ಸಿಹಿ ನೀರಿನಲ್ಲಿ ಶೇ.2ರಷ್ಟು ನೀರು ಮಂಜುಗಡ್ಡೆ ರೂಪದಲ್ಲಿ ದ್ದರೆ ಕೇವಲ ಶೇ.1ರಷ್ಟು ನೀರು ಮಾತ್ರ ಅಂರ್ಜಲ, ಕೆರೆ, ಸರೋವರದಿಂದ ಪಡೆಯಲಾಗುತ್ತಿದೆ. ಇಷ್ಟು ಸಣ್ಣ ಪ್ರಮಾಣದಲ್ಲಿರುವ ನೀರನ್ನು ಕೂಡ ನಾವು ಕುಡಿಯಲು, ಕೃಷಿ, ಕೈಗಾರಿಕೆಗಳಿಗೆ ಅವೈಜ್ಞಾನಿಕವಾಗಿ ಮನಬಂದಂತೆ ಬಳಸುತ್ತಿದ್ದೇವೆ. ಇದರ ಪರಿಣಾಮ 4500ಮಿ.ಮೀ. ಮಳೆ ಬೀಳುವ ಕರಾವಳಿಯಲ್ಲೂ ನಾವು ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ ಎಂದರು.

ಭೂಮಿಗೆ ಮಳೆಯ ರೂಪದಲ್ಲಿ ಬಿದ್ದ ನೀರಿನ ಹೆಚ್ಚಿನ ಭಾಗ ಹರಿದು ಸಮುದ್ರ ಸೇರಿದರೆ, ಶೇ.8-10ರಷ್ಟು ನೀರು ಭೂಮಿಯ ಗುರುತ್ವಾಕರ್ಷ ಬಲದಿಂದ ಇಂಗಿ ಅಂತರ್ಜಲವಾಗುತ್ತದೆ. ಒಂದು ಪ್ರದೇಶದ ಅಂತರ್ಜಲದ ಲಭ್ಯತೆಯು ಅಲ್ಲಿನ ಮಳೆ, ವಾಯುಗುಣ, ಶಿಲಾರಚಣೆ ಯನ್ನು ಅವಲಂಬಿಸಿರುತ್ತದೆ ಎಂದು ಅವರು ಮಾಹಿತಿ ನೀಡಿದರು.

ಹಿಂಗಾರು ಮಳೆ ಮುಖ್ಯ: ಕರಾವಳಿ ಪರಿಸರದಲ್ಲಿ ವಾಡಿಕೆ ಮಳೆ 4500ಮಿ.ಮೀ. ಆಗಿರುತ್ತದೆ. ಕಳೆದ ವರ್ಷ ವಾಡಿಕೆ ಮಳೆಗಿಂತ 900ಮಿ.ಮೀ. ಮಳೆ ಜಾಸ್ತಿ ಬಿದ್ದಿದೆ. ಆದರೆ ಇಲ್ಲಿನ ಭೌಗೋಳಿಕ ಲಕ್ಷಣಕ್ಕೆ ಮಳೆಯ ತೀವ್ರತೆಗಿಂತ ಮಳೆಯ ಅವಧಿ ಜಾಸ್ತಿಯಾಗಬೇಕಾಗಿದೆ ಎಂದು ಅವರು ತಿಳಿಸಿದರು.

ನಮಗೆ ಮುಂಗಾರು ಮಳೆ ಕಡಿಮೆ ಅವಧಿಯಲ್ಲಿ ಶೇ.80-85ರಷ್ಟು ಮಳೆಯಾಗಿ, ಹಿಂಗಾರಿನಲ್ಲಿ ಮಳೆ ಕಡಿಮೆಯಾಗು ತ್ತಿರುವುದರಿಂದ ನೀರಿನ ಕೊರತೆ ಆಗುತ್ತಿದೆ. ಇಲ್ಲಿ ಭೂಮಿಯ ಮೇಲ್ಮೈಯಲ್ಲಿ ಲ್ಯಾಟರೈಟ್ ಇರುವುದರಿಂದ ನೀರು ಹೀರುಕೊಳ್ಳುವುದು ಬೇಗ ಮತ್ತು ಬಿಟ್ಟು ಕೊಡುವುದು ಕೂಡ ಬೇಗ. ಹಾಗಾಗಿ ನಮಗೆ ಹಿಂಗಾರು ಮಳೆ ಉತ್ತಮ ವಾದರೆ ಮುಂಗಾರು ಮಳೆ ಕಡಿಮೆಯಾದರೂ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

ನಾವು ನೀರನ್ನು ಮಿತವಾಗಿ ಬಳಸಬೇಕು ಮತ್ತು ಅದರ ಮರು ಬಳಕೆ ಮಾಡಬೇಕು. ಸೃಷ್ಠಿಸಲಾರದ ನೈಸರ್ಗಿಕ ಸಂಪತ್ತು ನೀರಿನ ಮರುಪೂರಣ ಅತೀ ಅಗತ್ಯವಾಗಿದೆ. ಮುಖ್ಯವಾಗಿ ನಾವು ನೀರಿಗೆ ಗೌರವ ಕೊಡುವ ಮನೋ ಭಾವ ಬೆಳೆಸಿಕೊಳ್ಳಬೇಕು. ಈ ರೀತಿ ಮಾಡಿದರೆ ನಮಗೆ ನೀರಿನ ಸಮಸ್ಯೆ ಎದುರಾಗಲು ಸಾಧ್ಯ ಇಲ್ಲ ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ವಹಿಸಿದ್ದರು. ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಂಕಿತ್ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕಾರ್ಯದರ್ಶಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತ ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

ಎಲ್‌ನಿನೋನಿಂದ ಮುಂಗಾರು ದುರ್ಬಲ

ಫೆಸಿಪಿಕ್‌ನ ಮಧ್ಯ ಮತ್ತು ಪೂರ್ವಭಾಗದಲ್ಲಿ ಉಂಟಾಗುವ ಎಲ್‌ನಿನೋ ಕಳೆದ 1950ರಿಂದ 2025ರವರೆಗೆ 22 ಬಾರಿ ಸಂಭವಿಸಿದೆ. ನಾಲ್ಕು ಬಾರಿ ಪ್ರಬಲವಾಗಿ ಸಾಕಷ್ಟು ಪರಿಣಾಮ ಉಂಟು ಮಾಡಿತ್ತು. ಈ ಎಲ್‌ನಿನೋ ದಿಂದ ಟ್ರೇಡ್ ವಿಂಡ್ ದುರ್ಬಲವಾಗುತ್ತದೆ. ಟ್ರೇಡ್ ವಿಂಡ್ ಮುಂಗಾರಿಗೆ ಬೂಸ್ಟ್ ಇದ್ದಾಗೆ. ಅದು ದುರ್ಬಲವಾಗಿರುವುದ ರಿಂದ ವಿಶ್ವದ ಕೆಲವೊಂದು ಭಾಗದಲ್ಲಿ ಮಳೆ ಜಾಸ್ತಿಯಾಗಬಹುದು ಮತ್ತು ಕೆಲವೊಂದು ಭಾಗದಲ್ಲಿ ಮಳೆ ಕಡಿಮೆ ಆಗಬಹುದು. ಇದರಿಂದ ಅಂತಜರ್ಲ ಮಟ್ಟ ಕಡಿಮೆಯಾಗುತ್ತದೆ. ಹೀಗೆ ಎಲ್‌ನಿನೋದಿಂದ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ಹಿರಿಯ ಭೂ ವಿಜ್ಞಾನಿ ಡಾ.ದಿನಕರ ಶೆಟ್ಟಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News