ಮೀನುಗಾರರ ವಿವಿಧ ಬೇಡಿಕೆ ಈಡೇರಿಸಲು ರಾಜ್ಯ ಸರಕಾರಕ್ಕೆ ಮನವಿ
ಕುಂದಾಪುರ, ಜೂ.27: ಕರಾವಳಿ ತೀರದ ಮೀನುಗಾರರ ಬದುಕಿನ ಹಿತದೃಷ್ಟಿಯಿಂದ ಹಲವು ವಿಶೇಷ ಪ್ರಮುಖ ಬೇಡಿಕೆಗಳು ಹಾಗೂ ಮೀನುಗಾರರ ಬದುಕಿನ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೋರಿ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರ ಮೂಲಕ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಮತ್ಸ್ಯಾಶ್ರಯ ಯೋಜನೆಯಲ್ಲಿ ಮೀನುಗಾರರ ಮನೆ ನಿರ್ಮಾಣದ ಸಹಾಯಧನವನ್ನು 1,20,000ರೂ.ನಿಂದ 3,00,000 ರೂ.ಗೆ ಹೆಚ್ಚಿಸುವುದು. ಮಹಿಳಾ ಮೀನುಗಾರರ ಸ್ವಸಹಾಯ ಗುಂಪುಗಳ ಸಾಲಕ್ಕೆ ಸಕಾಲದಲ್ಲಿ ಬಡ್ಡಿ ಸಹಾಯಧನ ಮಂಜೂರು ಮಾಡುವುದು.
ಆಕಸ್ಮಿಕ ದೋಣಿ ಅಪಘಾತ ತಡೆಯಲು ಅಗತ್ಯ ಜೀವರಕ್ಷಕ ಜಾಕೆಟ್‌ಗಳನ್ನು ಇಲಾಖೆಯಿಂದ ಒದಗಿಸಬೇಕು. ಮೀನುಗಾರಿಕೆಯಲ್ಲಿ ಅಪಘಾತಕ್ಕೀಡಾಗಿ ಗಾಯಗೊಂಡ ಮೀನುಗಾರರಿಗೆ ತಕ್ಷಣದ ತುರ್ತು ಪರಿಹಾರ ನೀಡಬೇಕು. ಸಾಂಪ್ರದಾಯಿಕ ಮೀನುಗಾರಿಕೆಗೆ ಉತ್ತೇಜನ ಮಿನಿ ಕೈರಂಪಣಿ ಬಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಕರಾವಳಿಯ ಪರಂಪರೆಯನ್ನು ಉಳಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕರಿ ರಮೇಶ್ ಕಾಂಚನ್, ಹಿರಿಯ ಮೀನುಗಾರ ಸಂಘದ ಸದಸ್ಯರಾದ ರಾಮ ಕಾಂಚನ್ ಕೊರವಡಿ, ಯೋಗೀಶ್ ಕುಂದರ್, ರವೀಂದ್ರ ಬೀಜಾಡಿ ಮನೆ ಮತ್ತು ಅಶೋಕ್ ಪೂಜಾರಿ ಚಾತ್ರಬೆಟ್ಟು ಉಪಸ್ಥಿತರಿದ್ದರು.