×
Ad

ಮತ್ತೆ ಉಡುಪಿ ಕೋರ್ಟ್ ಸಂಕೀರ್ಣದಲ್ಲಿ ಹುಸಿ ಬಾಂಬ್ ಬೆದರಿಕೆ: ತೀವ್ರ ಶೋಧ

Update: 2026-06-27 20:58 IST

ಉಡುಪಿ, ಜೂ.27: ಉಡುಪಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಮತ್ತೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇಮೇಲ್ ಸಂದೇಶ ಬಂದಿದ್ದು ಈ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಕೋರ್ಟ್ ಆವರಣದಲ್ಲಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದರು. ಬಳಿಕ ಇದೊಂದು ಹುಸಿ ಬೆದರಿಕೆ ಎಂಬುದು ದೃಢಪಟ್ಟಿತು.

ಜೂ.26ರಂದು ರಾತ್ರಿ ವೇಳೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಇಮೇಲ್ ಸಂದೇಶ ಬಂದಿದ್ದು, ಅದರಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಕೋರ್ಟ್‌ನ ಕೋಣೆಯಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಕೆ ಹಾಕಲಾಗಿತ್ತು. ಇಂದು ಬೆಳಗ್ಗೆ ನ್ಯಾಯಾಲಯದ ಇಮೇಲ್ ಪರಿಶೀಲಿಸಿದಾಗ ಈ ಸಂದೇಶ ಕಂಡುಬಂತು.

ಕೂಡಲೇ ಈ ಬಗ್ಗೆ ಉಡುಪಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳ, ಕೋರ್ಟ್ ಹಾಲ್, ಎಲ್ಲಾ ಕೋಣೆಗಳನ್ನು ಮತ್ತು ಶೌಚಾಲಯಗಳನ್ನು ತಪಾಸಣೆ ನಡೆಸಿತು. ಅದೇ ರೀತಿ ನ್ಯಾಯಾಲಯದ ಆವರಣ ಹೊರಗೂ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಯಿತು.

ಎಲ್ಲೂ ಯಾವುದೇ ಸಂಶಯಾಸ್ಪದ ಸೊತ್ತುಗಳು ಕಂಡು ಬಾರದ ಕಾರಣ, ಇದೊಂದು ಹುಸಿ ಕರೆ ಎಂಬುದು ದೃಢಪಟ್ಟಿತು. ಈ ಮಧ್ಯೆ ನ್ಯಾಯಾ ಲಯದ ಕಲಾಪಗಳು ನಡೆಯುತ್ತಿದ್ದವು. ಈ ಹುಸಿ ಬಾಂಬ್ ಇಮೇಲ್ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜೂ.21ರಂದು ಸಂಜೆ ಕೂಡ ಇದೇ ರೀತಿಯ ಸಂದೇಶ ಬಂದಿತ್ತು. ಜೂ.22ರಂದು ಶೋಧ ಕಾರ್ಯ ನಡೆಸಿದ ಬಳಿಕ ಇದೊಂದು ಹುಸಿ ಕರೆ ಎಂಬುದು ದೃಢಪಟ್ಟಿತ್ತು. ಪದೇ ಪದೇ ಕೋರ್ಟ್‌ನಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಸಂದೇಶ ಬರುತ್ತಿರುವ ಬಗ್ಗೆ ವಕೀಲರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News