×
Ad

ಉಡುಪಿ ಜಿಲ್ಲೆಯಾದ್ಯಂತ ಅಲ್ಲಲ್ಲಿ ಗಾಳಿಮಳೆಗೆ ಅಪಾರ ಹಾನಿ, ಲಕ್ಷಾಂತರ ರೂ. ನಷ್ಟ

ಬ್ರಹ್ಮಾವರದಲ್ಲಿ ಹಾರಿಹೋದ ಸರಕಾರಿ ಶಾಲೆಯ ಹೆಂಚು

Update: 2026-07-06 20:21 IST

ಉಡುಪಿ, ಜು.6: ರವಿವಾರ ರಾತ್ರಿ ಹಾಗೂ ಸೋಮವಾರ ಬೆಳಗ್ಗೆ ಬೀಸಿದ ಭಾರೀ ಗಾಳಿಗೆ ಉಡುಪಿ ಜಿಲ್ಲೆಯ ಅಲ್ಲಲ್ಲಿ ಹತ್ತಕ್ಕೂ ಅಧಿಕ ಮನೆ, ತೋಟ ಸೇರಿದಂತೆ ವಿವಿಧ ಸೊತ್ತುಗಳಿಗೆ ಹಾನಿಯುಂಟಾಗಿದ್ದು, ಲಕ್ಷಾಂತರ ರೂ. ನಷ್ಟದ ಅಂದಾಜು ಮಾಡಲಾಗಿದೆ.

ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ಮಳೆ ಸಹಿತ ಬೀಸಿದ ಗಾಳಿಗೆ ಬ್ರಹ್ಮಾವರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಬೋರ್ಡ್ ಶಾಲೆ) ಮಾಡಿನ ಹೆಂಚು ಹಾರಿಹೋಗಿದ್ದು, ಹೆಂಚೊಂದು ತರಗತಿಯೊಳಗೆ ಬಿದ್ದ ಪರಿಣಾಮ ಶಾಲೆಯ ವಿದ್ಯಾರ್ಥಿನಿಯೊಬ್ಬರ ಕಾಲಿಗೆ ಸಣ್ಣ ಪ್ರಮಾಣದ ಗಾಯವಾಗಿದೆ ಎಂದು ಬ್ರಹ್ಮಾವರ ತಹಶೀಲ್ದಾರರ ಕಚೇರಿ ವರದಿ ತಿಳಿಸಿದೆ.

ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಸಂಬಂಧಿತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹಳೆಯ ಶಾಲಾ ಕಟ್ಟಡಗಳ ಸ್ಥಿತಿ-ಗತಿಯನ್ನು ಪರಿಶೀಲಿಸಿ ಅಗತ್ಯ ತುರ್ತು ದುರಸ್ಥಿ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಿನ್ನೆ ಮತ್ತು ಇಂದು ಬೀಸಿದ ಗಾಳಿಗೆ ಹಲವೆಡೆ ಮರಗಳು ಉರುಳಿ ಬಿದ್ದಿದ್ದು, ಇದರಿಂದ ಅನೇಕ ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಹೀಗಾಗಿ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಈ ಬಾರಿ ಮುಂಗಾರು ಮಳೆಯ ಪ್ರಮಾಣ ತುಂಬಾ ಕಡಿಮೆಯಾಗಿದ್ದರೂ, ಆಗಾಗ ಮಳೆಯೊಂದಿಗೆ ಬೀಸುವ ಗಾಳಿಯಿಂದ ಸಾಕಷ್ಟು ಹಾನಿ ಆಗುತ್ತಿ ರುವ ವರದಿಗಳು ಬಂದಿವೆ.

ಕುಂದಾಪುರ ತಾಲೂಕು ಬೇಳೂರು ಗ್ರಾಮದ ದೇಲಟ್ಟು ಎಂಬಲ್ಲಿ ಆನಂದರಾಮ ಅಡಿಗ ಎಂಬವರ ಮನೆಯ ಹಟ್ಟಿ ಮಾಡು ನಿನ್ನೆ ರಾತ್ರಿ ಬೀಸಿದ ಬಿರುಗಾಳಿಯಿಂದ ಸಂಪೂರ್ಣ ನಾಶವಾಗಿದೆ. ಅಲ್ಲದೇ ತೋಟದ ನಾಲ್ಕಾರು ಅಡಿಕೆ ಮರಗಳು ಸಹ ಗಾಳಿ ಉರುಳಿದ್ದು, ಒಟ್ಟಾರೆಯಾಗಿ 50,000 ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

ರವಿವಾರ ರಾತ್ರಿ ಮತ್ತು ಇಂದು ಬೆಳಗ್ಗೆ ಬಂದ ಗಾಳಿ-ಮಳೆಗೆ ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲೇ ಹೆಚ್ಚಿನ ಮನೆಗಳಿಗೆ ಹಾನಿಯುಂಟಾ ಗಿವೆ. ಗುಜ್ಜಾಡಿ ಗ್ರಾಮದ ಮಂಜುನಾಥ ಆಚಾರ್ಯದ ವಾಸ್ತವ್ಯದ ಮನೆ ಕಳೆದ ರಾತ್ರಿ ಮಳೆಗೆ ಭಾಗಶ: ಹಾನಿಗೊಂಡಿದ್ದು, 30,000ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.

ಅಂಪಾರು ಗ್ರಾಮದ ಕೊರಗಬ್ಬ ಕಾಂಚನ್‌ರ ಮನೆ ಮೇಲೆ ಮರಬಿದ್ದು 20 ಸಾವಿರ, ಕರ್ಕುಂಜೆಯ ಅಬ್ದುಲ್ ರೆಹಮಾನ್ ಮನೆ ಮೇಲೆ ಮರಬಿದ್ದು 50ಸಾವಿರ, ಹಾರ್ದಳ್ಳಿ ಮಂಡಳ್ಳಿಯ ಗಣಪು ಮೊಗವೀರ ಇವರ ಮನೆ ಮೇಲೆ ಮರಬಿದ್ದು 300 ಸಾವಿರ, ಕರ್ಕುಂಜೆಯ ಶೇಷ ಇವರ ಮನೆ ಮೇಲೆ ಮರಬಿದ್ದು 20 ಸಾವಿರ ರೂ. ನಷ್ಟವಾಗಿರುವ ಮಾಹಿತಿ ಬಂದಿದೆ.

ಅದೇ ರೀತಿ ಸಿದ್ಧಾಪುರದ ತಿಮ್ಮ ಅವರ ಮನೆ ಗಾಳಿ-ಮಳೆಗೆ ಭಾಗಶ: ಹಾನಿಯಾಗಿ 20ಸಾವಿರ, ಸಂಜೀವಿ ಶೆಡ್ತಿ ಅವರ ಮನೆಗೆ 20ಸಾವಿರ, ಉಮೇಶ ಅವರ ಮನೆಗೆ 25ಸಾವಿರ, ವಸಂತ ಶೆಟ್ಟಿ ಅನೆಗೆ 20ಸಾವಿರ ರೂ. ನಷ್ಟವಾ ದರೆ, ಕನ್ಯಾನದ ನಾರಾಯಣ ಎಂಬವರ ಮನೆ ಮೇಲೆ ಮರ ಬಿದ್ದು 30ಸಾವಿರ ರೂ.ನಷ್ಟವಾಗಿದೆ.

ಕುಂದಾಪುರ ತಾಲೂಕು 74 ಉಳ್ಳೂರು ಗ್ರಾಮದ ಸಾಧಮ್ಮ ಶೆಡ್ತಿ ಅವರ ಮನೆ ಮೇಲೆ ಮರ ಬಿದ್ದು 10ಸಾವಿರ, ಕೆದೂರು ಗ್ರಾಮದ ಸಾಧು ಶೆಡ್ತಿ ಅವರ ಮನೆ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದ್ದು 20 ಸಾವಿರ ನಷ್ಟದ ಅಂದಾಜು ಮಾಡಲಾಗಿದೆ. ಬೈಂದೂರು ತಾಲೂಕು ಶಿರೂರು ಗ್ರಾಮದ ಮಾಧವ ಪೂಜಾರಿ ಅವರ ಮನೆಗೆ 40ಸಾವಿರ ರೂ. ಹಾಗೂ ಹೆಬ್ರಿಯ ಪಾರ್ವತಿ ಪೂಜಾರಿ ಅವರ ಮನೆ ಮೇಲೆ ಮರಬಿದ್ದು 30,000ರೂ. ನಷ್ಟದ ವರದಿ ಬಂದಿದೆ.

ಅಡಿಕೆ ತೋಟಕ್ಕೆ ಹಾನಿ: ಸಿದ್ದಾಪುರ ಗ್ರಾಮದ ಸದಾನಂದ ಶೆಟ್ಟಿ ಇವರ ಅಡಿಕೆ ತೋಟ ರವಿವಾರ ರಾತ್ರಿ ಬೀಸಿದ ಬಿರುಗಾಳಿಗೆ ಭಾಗಶ: ಹಾನಿಗೊಳಗಾಗಿದೆ. ತೋಟದಲ್ಲಿದ್ದ 75 ಅಡಿಕೆ ಮರಗಳು ಗಾಳಿಗೆ ಮುರಿದ್ದು ಬಿದ್ದು ಧರಾಶಾಹಿಯಾಗಿವೆ. ಇದರಿಂದ ಅಂದಾಜು 50,000ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

ಜಿಲ್ಲೆಯಲ್ಲಿ 45.3ಮಿ.ಮೀ. ಮಳೆ: ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 45.3ಮಿ.ಮೀ. ಮಳೆಯಾಗಿದೆ. ಕುಂದಾಪುರದಲ್ಲಿ ಅತ್ಯಧಿಕ 71.7ಮಿ.ಮೀ. ಮಳೆಯಾದರೆ, ಬೈಂದೂರಿನಲ್ಲಿ 50.0, ಹೆಬ್ರಿಯಲ್ಲಿ 47.8, ಉಡುಪಿಯಲ್ಲಿ 33.5, ಬ್ರಹ್ಮಾವರದಲ್ಲಿ 32.9 ಕಾರ್ಕಳದಲ್ಲಿ 27.3 ಹಾಗೂ ಹೆಬ್ರಿಯಲ್ಲಿ 19.9ಮಿ.ಮೀ. ಮಳೆಯಾದ ವರದಿ ಬಂದಿದೆ.

ರಸ್ತೆಯಲ್ಲೇ ಹರಿಯುತ್ತಿರುವ ಮಳೆ ನೀರು

ಈ ಬಾರಿ ದುರ್ಬಲಗೊಂಡ ಮುಂಗಾರು ಮಳೆ ರೈತರಲ್ಲಿ, ಸಾರ್ವಜನಿಕ ರಲ್ಲಿ ಆತಂಕ ಮೂಡಿಸಿದ್ದರೂ, ಉಡುಪಿ ನಗರಸಭೆ ಮಾತ್ರ ಯಾವುದೇ ಚಿಂತೆ ಇಲ್ಲದೇ ಆರಾಮವಾಗಿದೆ. ನಗರಸಭಾ ವ್ಯಾಪ್ತಿಯ ಚರಂಡಿ, ತೋಡುಗಳನ್ನು ಸ್ವಚ್ಛಗೊಳಿಸಿ ಬಿದ್ದ ಮಳೆಯ ನೀರು ಸರಾಗವಾಗಿ ಹರಿದುಹೋಗಲು ಅವಕಾಶ ಮಾಡಿಕೊಂಡಬೇಕಿದ್ದ ಈ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಂತಿಲ್ಲ.

ಮುಂಗಾರು ಪ್ರಾರಂಭಗೊಂಡು ಒಂದು ತಿಂಗಳು ಕಳೆದರೂ, ಈಗಲೂ ಒಮ್ಮೊಮ್ಮೆ ಜೋರಾಗಿ ಸುರಿಯುವ ಮಳೆಯ ನೀರೆಲ್ಲಾ ಹರಿಯುವುದೇ ರಸ್ತೆಯಲ್ಲಿ. ಮಳೆ ಬರುವಾಗ ಒಂದು ಸುತ್ತು ನಗರ ಪ್ರದೀಕ್ಷಣೆ ಮಾಡಿದರೆ ಇದು ಢಾಳಾಗಿ ಕಾಣುತ್ತದೆ. ಚರಂಡಿ ಮಳೆ ನೀರು ಹರಿಯಲು ಇರದೇ ಕಸಕಡ್ಡಿ, ತ್ಯಾಜ್ಯ ಸಂಗ್ರಹಕ್ಕಾಗಿ ಇರುವಂತಿದೆ.

ನಗರದ ಕರಾವಳಿ ಬೈಪಾಸ್‌ನ್ನೇ ನೋಡಿ.... ಐದು ನಿಮಿಷ ಮಳೆ ಬಂದರೆ ನೀರು ಹರಿಯುವುದು ರಸ್ತೆಯಲ್ಲೇ. ಪಾದಾಚಾರಿಗಳಿಗೆ ವಾಹನಗಳಿಂದ ನೀರಿನ ಅಭಿಶೇಷ ನಡೆಯವುದು ಸಾಮಾನ್ಯ. ಕೆಲವು ವಾಹನ ಚಾಲಕರಿಗೂ ಇದು ಖುಷಿಯ ಸಂಗತಿ. ನೀರು ಹರಿಯುವಲ್ಲೇ ಬಂದು ಬಡಪಾಯಿ ಪಾದಚಾರಿಗೆ ನೀರಿನ ಅಭಿಷೇಕ ಮಾಡುತ್ತಾರೆ. ಕೊಡೆ ಹಿಡಿದು ಸರ್ಕಸ್ ಮಾಡುತ್ತಾ ನೀರಿನಲ್ಲಿ ನಡೆಯುವ ಪಾದಾಚಾರಿಗೆ ಸಂಕಟ ತಪ್ಪಿದಲ್ಲ.

ನಗರಸಭೆ ಕೂಡಲೇ ಎಚ್ಚೆತ್ತುಕೊಂಡು ನೀರು ಚರಂಡಿಯಲ್ಲೇ ಸರಾಗವಾಗಿ ಹರಿದುಹೋಗಲು ಅವಕಾಶ ಮಾಡಿಕೊಡಲು ಈಗಲಾದರೂ ಮನಸ್ಸು ಮಾಡಬೇಕಾಗಿದೆ.



 


 


 


 






 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News