ಮರಣಾನಂತರ ದೇಹದಾನ ಮಾಡಿದ ಕಾರ್ಮಿಕ ಗಣಪರಿಗೆ ಜೀವಮಾನ ಸಾಧನಾ ಗೌರವ
ಕುಂದಾಪುರ, ಜು.6: ಮರಣಾನಂತರ ತಮ್ಮ ದೇಹವನ್ನು ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನೆಗಾಗಿ ದಾನ ಮಾಡುವ ಸಂಕಲ್ಪದ ಮೂಲಕ ಸಮಾಜಕ್ಕೆ ಮಾದರಿಯಾದ ಹಿರಿಯ ಕಟ್ಟಡ ಕಾರ್ಮಿಕ ಗಣಪ ಅವರಿಗೆ ಕುಂದಾ ಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು) ವತಿಯಿಂದ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕುಂದಾಪುರದ ಬೆವರು ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಸಮಾಜಕ್ಕೆ ಮಾದರಿಯಾಗಲು ಉನ್ನತ ಶಿಕ್ಷಣವೇ ಬೇಕೆಂದಿಲ್ಲ. ಮಾನವೀಯ ಮೌಲ್ಯ ಗಳು ಮತ್ತು ಸಮಾಜದ ಮೇಲಿನ ಕಾಳಜಿ ಇದ್ದರೆ ಸಾಮಾನ್ಯ ಕಾರ್ಮಿಕರೂ ಮಹತ್ತರ ಸಾಧನೆ ಮಾಡಬಲ್ಲರು ಎಂಬುದಕ್ಕೆ ಗಣಪ ಉತ್ತಮ ಉದಾಹರಣೆ. ತಮ್ಮ ಮರಣಾನಂತರ ದೇಹದಾನ ಮಾಡುವ ನಿರ್ಧಾರದ ಜೊತೆಗೆ, ನೂರಾರು ಕಟ್ಟಡ ಕಾರ್ಮಿಕರಲ್ಲಿ ಸಂಘಟನೆಯ ಅರಿವು ಮೂಡಿಸಿ ಅವರನ್ನು ಹಕ್ಕುಗಳಿಗಾಗಿ ಸಂಘಟಿಸುವಲ್ಲಿ ಅವರು ನೀಡಿದ ಕೊಡುಗೆ ಅವರ ಜೀವಮಾನದ ಶ್ರೇಷ್ಠ ಸಾಧನೆಯಾಗಿದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಚಿಕ್ಕ ಮೊಗವೀರ ಗಂಗೊಳ್ಳಿ ಮಾತನಾಡಿ, ಗಣಪ ದೇಹದಾನದ ಮೂಲಕ ವೈದ್ಯಕೀಯ ವಿದ್ಯಾರ್ಥಿ ಗಳ ಶಿಕ್ಷಣಕ್ಕೂ, ಸಮಾಜದ ಹಿತಕ್ಕೂ ಕೊಡುಗೆ ನೀಡುವ ಆದರ್ಶ ನಿರ್ಧಾರ ಕೈಗೊಂಡಿದ್ದಾರೆ. ಅವರ ಈ ಸೇವೆ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಮಾದರಿಯಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣಪ, ಕಾರ್ಮಿಕರ ನಡುವೆ ಈ ಗೌರವ ಸ್ವೀಕರಿಸುವುದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣವಾಗಿದೆ. ಬ್ರಹ್ಮಚರ್ಯ ಪಾಲನೆ ಮಾಡಿದ ನಾನು ಕಟ್ಟಡ ಕಾರ್ಮಿಕರ ಸಂಘವನ್ನೇ ನನ್ನ ಕುಟುಂಬವೆಂದು ಭಾವಿಸಿದ್ದೇನೆ ಎಂದು ತಿಳಿಸಿದರು.
ಸಂಘದ ಕೋಶಾಧಿಕಾರಿ ಚಂದ್ರಶೇಖರ್ ವಿ., ಉಪಾಧ್ಯಕ್ಷರಾದ ಶ್ರೀನಿವಾಸ ಪೂಜಾರಿ, ಸಂತೋಷ ಹೆಮ್ಮಾಡಿ, ರೇಣುಕಾ ಗುಜ್ಜಾಡಿ, ಕೃಷ್ಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ವಿಜೇಂದ್ರ ಕೋಣಿ ಸ್ವಾಗತಿಸಿ, ಶಶಿಕಾಂತ್ ಎಸ್.ಕೆ. ವಂದಿಸಿದರು.