×
Ad

ತೊಟ್ಟಂ ಚರ್ಚ್‌ನಲ್ಲಿ ವನಮಹೋತ್ಸವ ಆಚರಣೆ: ಗಿಡಗಳ ವಿತರಣೆ

Update: 2026-07-06 19:30 IST

ಉಡುಪಿ, ಜು.6: ಕಥೋಲಿಕ್ ಸಭಾ ಉಡುಪಿ ಪ್ರದೇಶ ತೊಟ್ಟಂ ಘಟಕ ಹಾಗೂ ಸಂತ ಆನ್ನಮ್ಮ ಚರ್ಚ್ ಪರಿಸರ ಆಯೋಗದ ಸಂಯುಕ್ತ ಆಶ್ರಯದಲ್ಲಿ ಲೌದಾತೋ ಸಿ ದಿನ ಹಾಗೂ ವನಮಹೋತ್ಸವ-2026 ಕಾರ್ಯಕ್ರಮವನ್ನು ರವಿವಾರ ತೊಟ್ಟಂನ ಸಂತ ಆನ್ನಮ್ಮ ಚರ್ಚ್‌ನಲ್ಲಿ ಆಚರಿಸಲಾಯಿತು.

ಪವಿತ್ರ ಬಲಿಪೂಜೆಯ ಬಳಿಕ ನಡೆದ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ವಿಶೇಷ ವನಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಕೇವಲ ಔಪಚಾರಿಕ ಗಿಡ ನೆಡುವ ಕಾರ್ಯಕ್ರಮಕ್ಕೆ ಸೀಮಿತ ವಾಗದೆ, ಪರಿಸರ ಸಂರಕ್ಷಣೆಯನ್ನು ಜನಾಂದೋಲನವಾಗಿಸುವ ಉದ್ದೇಶದಿಂದ ವಿನೂತನ ಯೋಜನೆಯನ್ನು ರೂಪಿಸಿರುವುದು ಕಾರ್ಯ ಕ್ರಮದ ವಿಶೇಷ ಆಕರ್ಷಣೆಯಾಗಿತ್ತು.

ಚರ್ಚಿನ ಧರ್ಮಗುರು ಫಾ.ಹೆನ್ರಿ ಮಸ್ಕರೇನ್ಹಸ್ ಮಾರ್ಗದರ್ಶನದಲ್ಲಿ ಕ್ಯಾಥೋಲಿಕ್ ಸಭಾ ತೊಟ್ಟಂ ಘಟಕವು 60 ಬಂಗನಪಳ್ಳಿ ಮಾವಿನ ಗಿಡಗಳನ್ನು ಖರೀದಿಸಿ, ಚರ್ಚಿನ 12 ವಾರ್ಡ್‌ಗಳ ಮುಖ್ಯಸ್ಥರಿಗೆ ತಲಾ 5 ಗಿಡಗಳಂತೆ ವಿತರಿಸಿತು. ಪ್ರತಿ ವಾರ್ಡ್‌ನ ಐದು ಕುಟುಂಬಗಳಲ್ಲಿ ಈ ಗಿಡಗಳನ್ನು ನೆಟ್ಟು ಪೋಷಿಸುವ ಯೋಜನೆ ರೂಪಿಸಲಾಗಿದೆ.

ಅದರಂತೆ ವಂ.ಹೆನ್ರಿ ಮಸ್ಕರೇನ್ಹಸ್ 12 ವಾರ್ಡ್‌ಗಳ ಪ್ರತಿನಿಧಿಗಳಿಗೆ ಮಾವಿನ ಗಿಡಗಳನ್ನು ವಿತರಿಸಿದರು. ನಂತರ ಕ್ಯಾಥೋಲಿಕ್ ಸಭಾ ಹಾಗೂ ಚರ್ಚ್ ಪಾಲನಾ ಮಂಡಳಿಯ ಪದಾಧಿಕಾರಿಗಳೊಂದಿಗೆ ಎಲ್ಲಾ ವಾರ್ಡ್ ಗಳಿಗೆ ಭೇಟಿ ನೀಡಿ, ಆಯ್ಕೆಗೊಂಡ ಕುಟುಂಬಗಳ ಮನೆಗಳಲ್ಲಿ ಸ್ವತಃ ಗಿಡ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.

ಧರ್ಮಗುರು ಫಾ.ಹೆನ್ರಿ ಮಸ್ಕರೇನ್ಹಾಸ್ ತಮ್ಮ ಸಂದೇಶದಲ್ಲಿ ಪ್ರಕೃತಿ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ದೇವರು ಸೃಷ್ಟಿಸಿದ ಪ್ರಕೃತಿಯನ್ನು ಪ್ರೀತಿಸಿ, ಮರಗಳನ್ನು ಮಕ್ಕಳಂತೆ ಪೋಷಿಸಬೇಕು. ಮರಗಳು ಶುದ್ಧ ಗಾಳಿ, ಹಣ್ಣು, ನೆರಳು ಹಾಗೂ ಪರಿಸರ ಸಮತೋಲನವನ್ನು ನೀಡುವುದರೊಂದಿಗೆ ಮಾನವನ ಬದುಕಿಗೆ ಅಮೂಲ್ಯ ಕೊಡುಗೆ ನೀಡುತ್ತವೆ ಎಂದು ಹೇಳಿದರು. ಕ್ಯಾಥೋಲಿಕ್ ಸಭೆಯ ಸಮಾಜಮುಖಿ ಕಾರ್ಯ ಕ್ರಮಗಳಿಗೆ ನಿರಂತರ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.

ಇದು ಕೇವಲ ಒಂದು ವರ್ಷದ ಕಾರ್ಯಕ್ರಮವಲ್ಲದೆ, ಐದು ವರ್ಷಗಳ ವಿಶೇಷ ಪರಿಸರ ಸಂರಕ್ಷಣಾ ಯೋಜನೆ ಯಾಗಿದೆ. ಪ್ರತಿವರ್ಷ ಗಿಡಗಳ ಬೆಳವಣಿಗೆ ಹಾಗೂ ನಿರ್ವಹಣೆಯನ್ನು ಮೌಲ್ಯಮಾಪನ ಮಾಡಿ, ಅತ್ಯುತ್ತಮವಾಗಿ ಗಿಡಗಳನ್ನು ಪೋಷಿಸಿದ ವಾರ್ಡ್‌ಗಳಿಗೆ ಬಹುಮಾನ ನೀಡಲಾಗುವುದು. ಇದೇ ಮಾದರಿಯಲ್ಲಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ ತೊಟ್ಟಂ ಧರ್ಮಕೇಂದ್ರದ ಪ್ರತಿಯೊಂದು ಕುಟುಂಬಕ್ಕೂ ಒಂದೊಂದು ಹಣ್ಣಿನ ಗಿಡ ವಿತರಿ ಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಕ್ಯಾಥೋಲಿಕ್ ಸಭಾ ತೊಟ್ಟಂ ಘಟಕ ಹಮ್ಮಿಕೊಂಡಿದೆ.

ಪಾಲನ ಮಂಡಳಿ ಉಪಾಧ್ಯಕ್ಷ ಲೆಸ್ಲಿ ಅರೋಜಾ ಮಾತನಾಡಿದರು. ಆರಂಭದಲ್ಲಿ ಕ್ಯಾಥೋಲಿಕ್ ಸಭಾ ತೊಟ್ಟಂ ಘಟಕದ ಅಧ್ಯಕ್ಷ ರೋಬಿ ಗ್ಯಾಬ್ರಿಯೇಲ್ ಫೆರ್ನಾಂಡಿಸ್, ಕಾರ್ಯದರ್ಶಿ ಲವೀನಾ ಫೆರ್ನಾಂಡಿಸ್, 21 ಆಯೋಗಗಳ ಸಂಯೋಜಕಿ ಶಾಂತಿ ಫೆರ್ನಾಂಡಿಸ್, ಪರಿಸರ ಆಯೋಗದ ಸಂಯೋಜಕ ಆಥರ್ರ ವಾಜ್, ವಾರ್ಡ್ ಮುಖ್ಯಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News