ಕಾಬೆಟ್ಟು ಅಂಬೇಡ್ಕರ್ ಭವನ ಸಮಿತಿಯ ಅಕ್ರಮ ರಚನೆ ವಿರೋಧಿಸಿ ದಲಿತ ಸಂಘಟನೆಯಿಂದ ಪ್ರತಿಭಟನೆ
ಕಾರ್ಕಳ, ಜು.6: ಕಾಬೆಟ್ಟು ಡಾ.ಬಿ.ಆರ್.ಅಂಬೇಡ್ಕರ್ ಭವನದ ನಿರ್ವಹಣೆ ಮತ್ತು ಮೇಲ್ವಿಚಾರಣಾ ಸಮಿತಿ ರಚನೆ ಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಒಕ್ಕೂಟ ಕಾರ್ಕಳ ವತಿಯಿಂದ ಸೋಮವಾರ ಕಾರ್ಕಳ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸುಧಾಕರ್ ದಾನಶಾಲೆ ಮಾತನಾಡಿ, ಕಾರ್ಕಳದ ದಲಿತ ಸಂಘಟನೆಗಳ ಇತಿಹಾಸದಲ್ಲಿ ಈ ರೀತಿಯ ಪ್ರತಿಭಟನೆ ನಡೆದಿಲ್ಲ. ಅಂಬೇಡ್ಕರ್ ಭವನ ನಿರ್ಮಾಣದ ಸಂದರ್ಭ ನಮ್ಮೊಳಗೆ ಇದ್ದ ಒಗ್ಗಟ್ಟು ಈಗ ಇಲ್ಲ. ಅನಧಿಕೃತವಾಗಿ ರಚನೆಯಾಗಿರುವ ಭವನದ ನಿರ್ವಹಣಾ ಸಮಿತಿಯನ್ನು ರದ್ದುಗೊಳಿಸಿ ಹೊಸ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.
ಎ.27ರಂದು ಸಮಾಜ ಕಲ್ಯಾಣ ಇಲಾಖೆ ನೀಡಿದ ಸಭಾ ಸೂಚನಾ ಪತ್ರದಲ್ಲಿ ಜೂ.4ರಂದು ನಿರ್ವಹಣಾ ಸಮಿತಿ ರಚನೆಯ ಸಭೆ ನಡೆಸುವು ದಾಗಿ ತಿಳಿಸಲಾಗಿತ್ತು. ಆದರೆ ಈ ಸಭೆಯನ್ನು ರದ್ದುಪಡಿಸಿರುವುದಾಗಿ ಜೂ.3ರಂದು ತಿಳಿ ಸಿದ್ದು, ಆ ಬಳಿಕ ಯಾವುದೇ ಸಭೆ ನಡೆಸದೆ ತಾಲೂಕಿನ ಸುಮಾರು 7 ದಲಿತ ಸಂಘಟನೆಗಳ ಗಮನಕ್ಕೆ ತಾರದೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮೂರು ಜನ ವ್ಯಕ್ತಿಗಳನ್ನು ಅನಧಿಕೃತವಾಗಿ ಆಯ್ಕೆ ಮಾಡಿದೆ ಎಂದು ಅವರು ಆರೋಪಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹರೀಶ್ ಮುಡಾರು ಮಾತನಾಡಿ, ಬೇರೆ ತಾಲೂಕುಗಳಿಗೆ ಹೋಲಿಸಿದರೆ, ದಲಿತ ಸಂಘಟನೆಗಳ ಹೋರಾಟ, ಶಾಸಕರ ಇಚ್ಚಾಶಕ್ತಿಯಿಂದ ಬಹಳ ಅಚ್ಚುಕಟ್ಟಾದ ಭವನ ಕಾರ್ಕಳದಲ್ಲಿ ನಿರ್ಮಾಣವಾ ಗಿದೆ. ಆದರೆ ಇದರ ಉದ್ಘಾಟನೆ ಮಾತ್ರ ತರಾತುರಿಯಲ್ಲಿ ನಡೆದಿದೆ. ಅದೇ ರೀತಿ ಭವನ ನಿರ್ವಹಣಾ ಸಮಿತಿಯನ್ನು ಕದ್ದುಮುಚ್ಚಿ ರಚಿಸಲಾಗಿದೆ ಎಂದು ದೂರಿದರು.
ಅನಧಿಕೃತವಾಗಿ ರಚನೆಗೊಂಡ ಸಮಿತಿಯನ್ನು ರದ್ದುಗೊಳಿಸಿ ಹೊಸ ಸಮಿತಿ ರಚನೆಯಾಗಬೇಕು. ಯಾರನ್ನು ಬೇಕಾ ದರೂ ನೇಮಿಸಲಿ, ಆದರೆ ಆಯ್ಕೆ ನ್ಯಾಯಯುತವಾಗಿ ಪಾರದರ್ಶಕವಾಗಿ ನಡೆಯಬೇಕು. ಒಂದು ವೇಳೆ 10 ದಿನದೊಳಗೆ ಸಮಿತಿಯನ್ನು ಬರ್ಕಾಸುಗೊಳಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗು ವುದು ಎಂದು ಅವರು ಎಚ್ಚರಿಕೆ ನೀಡಿದರು.
ದಲಿತ ಸಂಘಟನೆಯ ಪ್ರಮುಖ ತಾ.ಪಂ. ಮಾಜಿ ಅಧ್ಯಕ್ಷ ಸುಂದರ್ ಬಿ., ಶ್ರೀನಿವಾಸ್ ಕಾರ್ಲ, ಪ್ರಸನ್ನ, ಸತೀಶ್ ಇರ್ವತ್ತೂರು ಮಾತನಾಡಿ, ಯಾವುದೇ ಪಕ್ಷ, ಯಾವುದೇ ಸಮುದಾಯ, ಯಾವುದೇ ಪಂಗಡದ ವಿರುದ್ಧ ನಮ್ಮ ಪ್ರತಿಭಟನೆಯಲ್ಲ. ಬದಲಾಗಿ ಸಮಿತಿ ರಚನೆಯಲ್ಲಾದ ಲೋಪ ದೋಷದ ವಿರುದ್ಧ ಪ್ರತಿಭಟನೆ ಇದಾಗಿದೆ. ಸಮಿತಿ ಮೂರು ಮಂದಿಗೆ ಸೀಮಿತವಲ್ಲ. ಆದ್ದರಿಂದ ಈಗಿನ ಸಮಿತಿ ವಜಾಗೊಳಿಸಿ, ಸಮರ್ಥ ವ್ಯಕ್ತಿಗಳ ಆಯ್ಕೆಯಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕರರಿಂದ ಮನವಿ ಸ್ವೀಕರಿಸಿದ ಕಾರ್ಕಳ ಶಾಸಕ ಸುನೀಲ್ ಕುಮಾರ್, ದಲಿತ ಸಂಘಟನೆಗಳ ಹೋರಾಟ ಹಾಗೂ ಎಲ್ಲರ ಪ್ರಯತ್ನದಿಂದ ಕಾರ್ಕಳ ತಾಲೂಕಿನಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್ ಭವನದ ನಿರ್ವಹಣೆ ಮತ್ತು ಮೇಲ್ವಿಚಾರಣಾ ಸಮಿತಿಯ ರಚನೆಯನ್ನು ದಲಿತ ಸಂಘಟನೆಗಳು ಅಥವಾ ಜನಪ್ರತಿನಿಧಿಗಳ ಜೊತೆ ಚರ್ಚಿಸದೆ ಏಕಪಕ್ಷೀಯವಾಗಿ ಮಾಡಿರುವುದು ಸರಿಯಲ್ಲ ಎಂದರು.
ಕಾರ್ಕಳ ತಾಲೂಕು ತಹಶೀಲ್ದಾರ್ ಅವರಿಗೆ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು. ಉಪತಹಶೀಲ್ದಾರ್ ಮಂಜು ನಾಥ ಬಿ. ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಒಕ್ಕೂಟದ ಕೋಶಾಧಿಕಾರಿ ಸುರೇಂದ್ರ ಹವಾಲ್ದಾರ್ ಬೆಟ್ಟು, ಸುನಿಲ್, ಸುನಿತಾ, ಅಣ್ಣಿ ಎಂ., ಪ್ರವೀಣ್ ಮುಂಡ್ಲಿ, ಶಂಕರ, ಗೋವರ್ಧನ್, ಕೃಷ್ಣ ಪಳ್ಳಿ, ರತ್ನಾಕರ್ ಪಳ್ಳಿ, ರಮೇಶ್ ಜರಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.