×
Ad

ಎಸ್‌ಐಆರ್: ಆನ್‌ಲೈನ್‌ನಲ್ಲಿ ಅರ್ಜಿ ತುಂಬುವುದು ಸಕ್ರಮವಾದರೆ, ಸಾಮೂಹಿಕ ಸ್ಥಳದಲ್ಲಿ ಅರ್ಜಿ ತುಂಬಿದರೆ ಹೇಗೆ ಅಕ್ರಮ?: ಸಹಬಾಳ್ವೆ

Update: 2026-07-07 19:03 IST

ಉಡುಪಿ, ಜು.7: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್)ಗೆ ಸಂಬಂಧಿಸಿ ಚುನಾವಣಾ ಆಯೋಗ ಹಾಗು ಎನ್.ಡಿ.ಎ. ಪಕ್ಷಗಳಿಗೆ ಪ್ರಶ್ನೆಗಳನ್ನು ಎತ್ತಿರುವ ಉಡುಪಿ ಜಿಲ್ಲೆ ಸಹಬಾಳ್ವೆ ಸಂಘಟನೆ, ಮತದಾರರ ದಾಖಲೆ ನಮೂನೆ (ಎನುಮರೇಷನ್ ಫಾರ್ಮ್) ಗಳನ್ನು ಆನ್‌ಲೈನ್‌ನಲ್ಲಿ ತುಂಬುವುದು ಸಕ್ರಮವಾದರೆ, ಸಾಮೂಹಿಕ ಸ್ಥಳದಲ್ಲಿ ಮತದಾರರು ಅಥವಾ ಅವರ ಸಂಬಂಧಿಕರು ಹಾಜರಿದ್ದು ತುಂಬುವುದು ಹೇಗೆ ಅಕ್ರಮವಾಗುತ್ತದೆ? ಎಂದು ಪ್ರಶ್ನಿಸಿದೆ.

ಎಸ್‌ಐಆರ್ ಆರಂಭವಾದ ವಾರದಲ್ಲಿ ನಾಲ್ಕು ಬಿಎಲ್‌ಓಗಳು ಕೆಲಸದ ಒತ್ತಡದ ಕಾರಣ ಮೃತಪಟ್ಟಿರುವುದಾಗಿ ವರದಿಯಾಗಿದೆ. ಬಿಎಲ್‌ಓಗಳು ಕೆಳ ಹಂತದ ಸರಕಾರಿ ನೌಕರರಾಗಿದ್ದರೂ ಅವರೂ ದೈಹಿಕ ಮಿತಿಗಳಿರುವ ಮನುಷ್ಯರೇ ಆಗಿದ್ದಾರೆ. ಹಿಂದೆ ಎಸ್‌ಐಆರ್ ನಡೆದ ರಾಜ್ಯಗಳಲ್ಲೂ ಇಂತಹ ನೂರಾರು ವಿನಾಕಾರಣ ಸಾವುಗಳು ಸಂಭವಿಸಿವೆ. ಈ ಸನ್ನಿವೇಶದಲ್ಲಿ ಚುನಾವಣಾ ಆಯೋಗವು ಹಾಗು ವಿನಾಕಾರಣ ವಿವಾದ ಹುಟ್ಟು ಹಾಕಲು ಮುಂದಾಗಿರುವ ಎನ್.ಡಿ.ಎ. ಪಕ್ಷಗಳು ನಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಅಗತ್ಯ ಇದೆ ಎಂದು ಸಹಬಾಳ್ವೆ ಪ್ರಧಾನ ಸಂಚಾಲಕ ಕೆ.ಫಣಿರಾಜ್ ತಿಳಿಸಿದ್ದಾರೆ.

ಎಸ್‌ಐಆರ್ ನಡಾವಳಿಗಳನ್ನು ಮೂರು ತಿಂಗಳ ಅವಧಿಗೆ ಕಟ್ಟುನಿಟ್ಟಾಗಿ ನಿಯಮಿಸಿ, ಬಿಎಲ್‌ಓಗಳ ಮೇಲೆ ದಿನಕ್ಕೆ ಐವತ್ತು ಮನೆಗಳನ್ನು ಅನಿವಾರ್ಯವಾಗಿ ತಲುಪ ಬೇಕಾದ ಕಠಿಣ ಗುರಿ ನಿರ್ಧಾರ ಮಾಡಿರುವುದು ಯಾಕೆ? ರಾಜ್ಯದಲ್ಲಿ ಚುನಾವಣೆಗಳು ಎರಡುವರೆ ವರ್ಷಗಳ ನಂತರ ನಡೆಯಲಿದ್ದು, ಹಾಗಿರುವಾಗ, ನಿಧಾನವಾಗಿ ಎಸ್‌ಐಆರ್ ನಡಾವಳಿಗಳನ್ನು ಆರರಿಂದ ಒಂಬತ್ತು ತಿಂಗಳ ಕಾಲಾವಧಿಗೆ ವಿಸ್ತರಿಸಿ, ಸಕ್ಷಮವಾಗಿ ನಡೆಸಲು ಅಡ್ಡಿ ಏನಿದೆ?

ಪ್ರತಿ ಬಿಎಲ್‌ಓಗಳು ಮನೆ ಮನೆಗೆ ತೆರಳಿ ಮತದಾರರ ದಾಖಲಾತಿ ನಮೂನೆಗಳನ್ನು ವಿತರಿಸಿ ಬರುವುದಷ್ಟೇ ಅಲ್ಲದೇ, ಸರಿಯಾದ ಕ್ರಮದಲ್ಲಿ ತುಂಬಲು ಮಾಹಿತಿ ಒದಗಿಸಬೇಕಾಗುತ್ತದೆ. ಅಗತ್ಯವಿದ್ದರೆ ಅವರ ಸಮಕ್ಷಮವೇ ತುಂಬಿಸುವಂತೆ ಕೋರಿಕೆಯೂ ಬರುತ್ತದೆ. ಇಷ್ಟು ಹೊಣೆ ನಿಭಾಯಿಸಲು ಪ್ರತಿ ಮನೆಗೆ ಸರಾಸರಿ ಎಷ್ಟು ಸಮಯ ಬೇಕಾಗುತ್ತದೆ ಎಂಬ ವೈಜ್ಞಾನಿಕ ಮಾಪನ ಮಾಡಿ 50 ಮನೆಗಳ ಗುರಿ ವಿಧಿಸಿದ್ದೀರಾ?

ನಿಯಮಿತ ಗುರಿ ತಲುಪುವ ಒತ್ತಡದಲ್ಲಿ, ಹಲವು ಕಡೆ ಬಿಎಲ್‌ಓಗಳು ಸಾಮೂಹಿಕವಾಗಿ ನಮೂನೆ ವಿತರಣೆ ಹಾಗು ಭರ್ತಿ ಕಾರ್ಯ ಮಾಡುತ್ತಿರುವುದು, ಅಪರಾಧ ಎನ್ನಲಾಗುತ್ತಿದೆ. ಪ್ರತಿಯೊಬ್ಬ ಮತದಾರರೂ, ಮುಖ್ಯವಾಗಿ 2002ರ ಮತದಾರರ ಪಟ್ಟಿಯಲ್ಲಿ ಇರುವ ತಮ್ಮ ಅಥವ ಸಂಬಂಧಿಯ ವಿವರಗಳನ್ನು ತಪ್ಪಿಲ್ಲದೇ ತುಂಬ ಬೇಕಾಗಿದೆ. 2002ರ ಪಟ್ಟಿಯನ್ನು ಬಿಎಲ್‌ಓಗಳಾಗಲೀ ಮತದಾರರಾಗಲೀ ಬದಲಿಸಲು ಸಾಧ್ಯವೇ ಇರದ ರೀತಿಯಲ್ಲಿ ನಡಾ ವಳಿ ನಿಯಮವನ್ನು ನೀವೇ ರೂಪಿಸಿದ್ದೀರಿ.

ಬಿಎಲ್‌ಓಗಳಿಗೆ ಪ್ರತಿ ಮನೆಯಲ್ಲಿ ಇರುವ, ಆಯೋಗವೇ ಪೂರ್ವ ನಿರ್ಧಾರಿತವಾಗಿ ಗುರುತಿಸಿ ಮುದ್ರಿಸಿರುವ ಸಂಖ್ಯೆಯ ನಮೂನೆಗಳನ್ನು ವಿತರಿಸುವ ಕಾರ್ಯವಹಿಸಿರುವಾಗ, ಅವರು ನಕಲಿ ನಮೂನೆಗಳನ್ನು ತಯಾರು ಮಾಡಿ ವಿತರಿಸುತ್ತಾರೆ ಎಂಬ ಅನುಮಾನ ಏಕೆ? ಈ ರೀತಿ ಸಾಮೂಹಿಕವಾಗಿ ಕಾರ್ಯ ನಿರ್ವಹಿಸಿದರೆ, ನಿಯಮಿತ ನಡಾವಳಿಗಳಲ್ಲಿ ಯಾವ ಬಗೆಯ ಅಕ್ರಮಗಳು ನಡೆಯಲು ಸಾಧ್ಯವಿದೆ?

ಮತದಾರರಿಗೆ ನಮೂನೆ ಭರ್ತಿ ಮಾಡಲು ಸಮಸ್ಯೆಯಾದರೆ, ಸಹಾಯ ಕೇಂದ್ರಗಳು ಅಥವಾ ರಾಜಕೀಯ ಪಕ್ಷಗಳ ಎಜೆಂಟರ ನೆರವು ಪಡೆಯಲು ಸೂಚಿಸುತ್ತೀರಿ. ಅವರುಗಳೂ ಈ ಕಾರ್ಯವನ್ನು ಸಾಮೂಹಿಕವಾಗಿಯೇ ನಿರ್ವಹಿಸು ತ್ತಾರೆ ತಾನೇ? ಅದು ನಿಯಮಬದ್ಧ ಆಗುವುದಾದರೆ ನೀವೇ ನಿಯಮಿಸಿದ ಬಿಎಸ್‌ಓಗಳು ಮಾಡಿದರೆ ಆಕ್ರಮ ಹೇಗಾಗುತ್ತದೆ?

ಎನ್.ಡಿ.ಎ. ಪಕ್ಷಗಳ ನಾಯಕರು’ ರಾಜ್ಯದಲ್ಲಿ 20-25ಲಕ್ಷ ಅಕ್ರಮ ವಲಸಿಗರು ಇದ್ದು, ಅವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಷಡ್ಯಂತ್ರ ನಡೆಯುತ್ತಿದೆ’ ಎಂಬ ಹೇಳಿಕೆ ನೀಡಿದ್ದಾರೆ. ನಿಮಗೆ ಅಷ್ಟು ಖಚಿತವಾದ ಮಾಹಿತಿ ಎಲ್ಲಿಂದ ದೊರಕಿದೆ? ಅದಕ್ಕೆ ಸಾಕ್ಷಿ ಪುರಾವೆಗಳು ಇವೆಯಾ? ಅಂತಹವರು 2002ರ ಮತದಾರರ ಪಟ್ಟಿಯಲ್ಲಿ ಯಾರು ಮತ್ತು ಹೇಗೆ ಸೇರಿಸಬಲ್ಲರು? ಇಷ್ಟು ಖಚಿತ ಮಾಹಿತಿ ಇದ್ದಲ್ಲಿ ಅವುಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸದೇ ಸಾರ್ವಜನಿಕ ಹೇಳಿಕೆಗಳನ್ನು ಬೇಜವಾಬ್ದಾರಿಯಿಂದ ನೀಡುತ್ತಾ, ಸಾರ್ವಜನಿಕ ಗೊಂದಲ ಏಕೆ ಸೃಷ್ಟಿಸುತ್ತಿದ್ದೀರಿ?

ವೈಜ್ಞಾನಿಕ ತರ್ಕಗಳ ನೆಲೆಯಲ್ಲಿ ಚುನಾವಣಾ ಆಯುಕ್ತರು ಹಾಗು ಎನ್.ಡಿ.ಎ. ಪಕ್ಷಗಳೂ ಉತ್ತರಿಸುವರೇ? ಪಾಪದ ಬಿಎಲ್‌ಓಗಳು ಮಾನವ ಸಾಧ್ಯ ಅವಧಿಯಲ್ಲಿ ಕಾರ್ಯ ನಿರ್ವಹಿಸುವ ವಾತಾವರಣ ನಿರ್ಮಿ ಸುವರೇ? ಎಂದು ಸಹಬಾಳ್ವೆ ಸಂಚಾಲಕ ಸಮಿತಿ ಪರವಾಗಿ ಪ್ರಧಾನ ಸಂಚಾಲಕ ಕೆ.ಫಣಿರಾಜ್ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News