ತೆಂಕನಿಡಿಯೂರು ಕಾಲೇಜಿನಲ್ಲಿ ಎಸ್‌ಐಆರ್ ಮಾಹಿತಿ ಜಾಥಾ
ಉಡುಪಿ, ಜು.10: ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲಿನ ಚುನಾವಣಾ ಸಾಕ್ಷರತಾ ಕ್ಲಬ್ ಆಶ್ರಯದಲ್ಲಿ ಎಸ್‌ಐಆರ್ ಕುರಿತಂತೆ ವಿವಿಧ ಜಾಗೃತಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿತ್ತು.
ಎಸ್‌ಐಆರ್ ಕುರಿತು ಮಾಹಿತಿ ಉಪನ್ಯಾಸವನ್ನು ಚುನಾವಣಾ ಸಾಕ್ಷರತಾ ಕ್ಲಬ್ ಸಂಚಾಲಕ ಪ್ರಶಾಂತ್ ಎನ್, ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನೀಡಿದರು. ಪ್ರಾಂಶುಪಾಲರಾದ ನಿತ್ಯಾನಂದ ವಿ ಗಾವಂಕರ್ ಮಾತನಾಡಿ, ಎಸ್‌ಐಆರ್ ಕುರಿತ ಮಾಹಿತಿಯನ್ನು ತಮ್ಮ ಕುಟುಂಬ, ನೆರೆಹೊರೆ ಮತ್ತು ಗ್ರಾಮದಲ್ಲಿ ಹಂಚಿಕೊಂಡು ತಾವು ಜಾಗೃತರಾಗುವ ಜೊತೆಗೆ ಸಮಾಜವನ್ನೂ ಜಾಗೃತಗೊಳಿಸಬೇಕೆಂದರು.
ಇದೇ ವೇಳೆ ವಿದ್ಯಾರ್ಥಿಗಳಿಂದ ಜಾಗೃತ ಜಾಥಾ ಹಾಗೂ ಸಾಕ್ಷರತಾ ಕ್ಲಬ್ ಸದಸ್ಯರಿಂದ ಕಾಲೇಜಿನ ಅಸುಪಾಸಿನ ಮನೆಗಳಿಗೆ ಭೇಟಿ ನೀಡಿ ಎಸ್‌ಐಆರ್ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶೃತಿ ಬಿ ಎಸ್, ಛಾಯಾ, ಶ್ರೀಕಾಂತ್ ಉಪಸ್ಥಿತರಿದ್ದರು.
ಮತದಾರರ ಸಾಕ್ಷರತಾ ಕ್ಲಬ್‌ನ ಸಂಚಾಲಕರಾದ ಪ್ರಶಾಂತ್ ಅವರು, ತೆಕ್ಕಟ್ಟೆ, ಬ್ರಹ್ಮಾವರ, ಉದ್ಯಾವರ ಪದವಿ ಪೂರ್ವ ಕಾಲೇಜುಗಳಲ್ಲಿ ಎಸ್‌ಐಆರ್ ಮಾಹಿತಿ ಕಾರ್ಯಗಾರವನ್ನು ನಡೆಸಿಕೊಟ್ಟರು.