×
Ad

ಜು.13ರಂದು ಸರಕಾರದ ನೀತಿ ವಿರೋಧಿಸಿ ಬಿಸಿಯೂಟ ಬಂದ್

Update: 2026-07-10 22:04 IST

ಉಡುಪಿ, ಜು.10: ಅಕ್ಷರ ದಾಸೋಹ ಯೋಜನೆಗೆ ಬೆಲೆ ಏರಿಕೆಗೆ ಅನುಗುಣವಾಗಿ ಅನುದಾನ ಹೆಚ್ಚಿಸದೇ, ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ಸರಕಾರದ ನೀತಿಯನ್ನು ವಿರೋಧಿಸಿ ಉಡುಪಿ ಜಿಲ್ಲಾ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ರಾಜ್ಯವ್ಯಾಪಿ ಹೋರಾಟದ ಭಾಗವಾಗಿ ಜು.13ರಂದು ಬಿಸಿಯೂಟ ಬಂದ್ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಿದೆ.

ಈ ಹೋರಾಟದಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಅಕ್ಷರ ದಾಸೋಹ ನೌಕರರ ಸಂಘದ ಗೌರವಾಧ್ಯಕ್ಷೆ ಎಸ್.ವರಲಕ್ಷ್ಮಿ ಭಾಗವಹಿಸಲಿದ್ದಾರೆ. ಈ ಹಕ್ಕುಗಳಿಗಾಗಿ ರಾಜ್ಯದಾದ್ಯಂತ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಹೋರಾಟ ನಡೆಯಲಿದ್ದು, ಅದರ ಅಂಗವಾಗಿ ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಶುಕ್ರವಾರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ಪ್ರಮುಖ ಬೇಡಿಕೆಗಳು: ಚುನಾವಣಾ ಭರವಸೆಯಂತೆ ವೇತನವನ್ನು 7,000ರೂ. ಹೆಚ್ಚಳ ಮಾಡಬೇಕು. ಆರು ಗಂಟೆ ಗಳ ಕೆಲಸಕ್ಕೆ ಸಂಬಂಧಿಸಿದ ಸುತ್ತೋಲೆ ತಕ್ಷಣ ಹೊರಡಿಸಬೇಕು. ಆರೋಗ್ಯ ವಿಮೆ ಜಾರಿಗೊಳಿಸಬೇಕು. ಸಾಧಿಲ್ವಾರು ಜಂಟಿ ಖಾತೆಯನ್ನು ಮುಖ್ಯ ಅಡುಗೆಯವರಿಗೆ ನೀಡಬೇಕು.

ಕೆಪಿಎಸ್ ಶಾಲೆಗಳು, ಇಸ್ಕಾನ್, ಮಠ ಹಾಗೂ ಇತರ ಖಾಸಗಿ ಸಂಸ್ಥೆಗಳಿಗೆ ಯೋಜನೆ ವಹಿಸಿ ನೌಕರರನ್ನು ಕೆಲಸ ದಿಂದ ತೆಗೆಯುವ ನೀತಿಯನ್ನು ಕೈಬಿಡಬೇಕು ಹಾಗೂ ಎಂಡಿಎಂ ಯೋಜನೆಗೆ ಸಮರ್ಪಕ ಅನುದಾನ ನೀಡಬೇಕು. ನಿವೃತ್ತ ನೌಕರರಿಗೆ ಮಾಸಿಕ ರೂ 10,000 ಪಿಂಚಣಿ ನೀಡಬೇಕು. ನಿವೃತ್ತರಾದ ಎಲ್ಲ ನೌಕರರಿಗೆ ಬಾಕಿ ಇರುವ ಇಡುಗಂಟು ಸೌಲಭ್ಯವನ್ನು ತಕ್ಷಣ ಜಾರಿಗೊಳಿಸಬೇಕು.

ಸಮರ್ಪಕ ಅಡುಗೆ ಕೇಂದ್ರಗಳಿಲ್ಲದ ಶಾಲೆಗಳಲ್ಲಿ ಸುಸಜ್ಜಿತ ಅಡುಗೆ ಕೇಂದ್ರಗಳನ್ನು ನಿರ್ಮಿಸಿ, ಸ್ವಚ್ಛ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸಬೇಕು. ಉತ್ತರ ಪ್ರದೇಶ ಮತ್ತು ಪಂಜಾಬ್ ಹೈಕೋರ್ಟ್ ತೀರ್ಪಿನಂತೆ ವರ್ಷಪೂರ್ತಿ 12 ತಿಂಗಳ ಕೆಲಸ ಹಾಗೂ ಕನಿಷ್ಠ ಕೂಲಿ ಜಾರಿಗೊಳಿಸಬೇಕು. ಅಕ್ಷರ ದಾಸೋಹ ಯೋಜನೆಯನ್ನು ಶಿಕ್ಷಣ ಇಲಾಖೆಯ ಅಧೀನದಲ್ಲಿಯೇ ಮುಂದುವರಿಸಬೇಕು; ಖಾಸಗೀಕರಣ ಮಾಡಬಾರದು.

ಬೇಸಿಗೆ, ದಸರಾ ರಜೆ ಹಾಗೂ ಚುನಾವಣಾ ಅವಧಿಯಲ್ಲಿಯೂ ಕಡ್ಡಾಯವಾಗಿ ವೇತನ ನೀಡಬೇಕು. ಶಾಲೆಗಳಲ್ಲಿ ಡಿ ಗ್ರೂಪ್ ಸಿಬ್ಬಂದಿ ಕೊರತೆಯನ್ನು ಗಮನಿಸಿ, ಅಕ್ಷರ ದಾಸೋಹ ನೌಕರರನ್ನು ಖಾಯಂ ಸಿಬ್ಬಂದಿಯಾಗಿ ನೇಮಕ ಮಾಡಬೇಕು. ಅಪಘಾತದಲ್ಲಿ ಮೃತಪಟ್ಟ ಅಡುಗೆ ಸಿಬ್ಬಂದಿಗಳ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಿ, ಮೃತರ ಕುಟುಂಬಕ್ಕೆ 25ಲಕ್ಷ ರೂ. ಪರಿಹಾರ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸ ಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಂದ, ಜಿಲ್ಲಾ ಕಾರ್ಯದರ್ಶಿಗಳಾದ ರತ್ನ ಮತ್ತು ಮಂಜುಳ, ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಕವಿರಾಜ್ ಎಸ್.ಕಾಂಚನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News