ಹವ್ಯಕ ಸಭಾ ಉಡುಪಿ ಅಧ್ಯಕ್ಷರಾಗಿ ಸಿ.ಎಚ್. ಸುಬ್ರಹ್ಮಣ್ಯ ಭಟ್ ಆಯ್ಕೆ

Update: 2026-07-26 20:52 IST

ಸಿ.ಎಚ್. ಸುಬ್ರಹ್ಮಣ್ಯ ಭಟ್

ಉಡುಪಿ, ಜು.26: 1997ರಲ್ಲಿ ಸ್ಥಾಪನೆಗೊಂಡ ಹವ್ಯಕ ಸಭಾ ಉಡುಪಿ ಯ 30ನೇ ವಾರ್ಷಿಕ ಮಹಾಸಭೆಯು ರವಿವಾರ ಹವ್ಯಕ ಸಭಾದ ಅಧ್ಯಕ್ಷ ಪ್ರೊ.ಶಂಕರ್ ಅಧ್ಯಕ್ಷತೆಯಲ್ಲಿ ಪೆರಂಪಳ್ಳಿಯ ಹವ್ಯಕ ಧಾಮದಲ್ಲಿ ನಡೆಯಿತು.

ಕಾರ್ಯದರ್ಶಿ ಪ್ರಸನ್ನ ಅಡಿಗ ಗತವರ್ಷದಲ್ಲಿ ಕೈಗೊಂಡ ಕಾರ್ಯ ಚಟುವಟಿಕೆಗಳ ವರದಿ ವಾಚಿಸಿದರು. ಕೋಶಾಧಿ ಕಾರಿ ಗಿರೀಶ್ ಕೆ.ಎನ್. ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿ, ಸಭೆಯ ಅನುಮೋದನೆಯನ್ನು ಪಡೆದರು.

ಒಟ್ಟು 23 ಸದಸ್ಯರನ್ನೊಳಗೊಂಡ ನೂತನ ಕಾರ್ಯಕಾರಿ ಸಮಿತಿಗೆ ಆಯ್ಕೆ ನಡೆಯಿತು. 2026-27ನೇ ಸಾಲಿನ ಅಧ್ಯಕ್ಷರಾಗಿ ಶಿಕ್ಷಣ ತಜ್ಞ ಸಿ.ಎಚ್. ಸುಬ್ರಹ್ಮಣ್ಯ ಭಟ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಡಾ. ಮಹಾದೇವ ಭಟ್ ಹಾಗೂ ಶ್ವೇತಾ ಹೆಗಡೆ ಆಯ್ಕೆಯಾದರು.

ನೂತನ ಕಾರ್ಯದರ್ಶಿಯಾಗಿ ನಟೇಶ್ ವೈ.ಆರ್., ಜತೆ ಕಾರ್ಯದರ್ಶಿ ಯಾಗಿ ಡಾ.ಜಯಶಂಕರ ಕಂಗಣ್ಣಾರು ಮತ್ತು ಲಕ್ಷ್ಮಿ ಹೆಗ್ಡೆ, ಕೋಶಾಧಿಕಾರಿ ಯಾಗಿ ಅರವಿಂದ ಕುಮಾರ್ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಪ್ರೊ. ಕೆ.ಸದಾಶಿವ ರಾವ್ ಆಯ್ಕೆಯಾದರು.

ಉಡುಪಿ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಹವ್ಯಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಪ್ರೊ. ಶಂಕರ್ ಎಲ್ಲರ ಸಹಕಾರವನ್ನು ಸ್ಮರಿಸಿದರಲ್ಲದೇ, ಧರ್ಮಸ್ಥಳದ ವ್ಯಸನ ವರ್ಜನಾಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತನ್ನ ಅನುಭವಗಳನ್ನು ಹಂಚಿಕೊಂಡರು.

ಎಚ್.ಎನ್. ವೆಂಕಟೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಸನ್ನ ಅಡಿಗ ವಂದಿಸಿದರು. ಡಾ. ಜಯಶಂಕರ ಕಂಗಣ್ಣಾರು ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News