ಕುಂದಾಪುರ: ಬಿಲ್ಲವ ಸಂಘದಿಂದ ವಿದ್ಯಾರ್ಥಿ ವೇತನ ವಿತರಣೆ; ಅಭಿನಂದನಾ ಕಾರ್ಯಕ್ರಮ
ಕುಂದಾಪುರ, ಜು.26: ಕಲಿಕೆಗೆ ಪ್ರೋತ್ಸಾಹ ನೀಡಲು ವಿದ್ಯಾರ್ಥಿ ವೇತನದಂತಹ ಸಮಾಜಮುಖಿ ಚಿಂತನೆಯುಳ್ಳ ಕಾರ್ಯಕ್ರಮದ ಮೂಲಕ ಶೈಕ್ಷಣಿಕ, ಸಾಮಾಜಿಕ ಹಾಗೂ ಸಂಘಟನೆಗೆ ಶಕ್ತಿ ನೀಡುವಲ್ಲಿ ಸಹಕಾರಿಯಾಗಿದೆ ಎಂದು ಬಿಲ್ಲವ ಸೇವಾ ಸಮಾಜದ ಗೌರವ ಅಧ್ಯಕ್ಷ ಎನ್.ಟಿ.ಪೂಜಾರಿ ಹೇಳಿದ್ದಾರೆ.
ಇಲ್ಲಿನ ಶ್ರೀನಾರಾಯಣ ಗುರು ಸಭಾಭವನದಲ್ಲಿ ರವಿವಾರ ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆ ಇವರ ಆಶ್ರಯದಲ್ಲಿ ದಿ.ಸುರೇಶ್ ಪೂಜಾರಿ ಪಡುಕೋಣೆ ಅವರಿಂದ ಆರಂಭ ವಾದ 34ನೇ ವರ್ಷದ ವಿದ್ಯಾರ್ಥಿ ಸಹಾಯಧನ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ದರು.
ಹಿರಿಯರು ಕಟ್ಟಿ ಬೆಳೆಸಿದ ಸಂಘವನ್ನು ಕಿರಿಯರು ಬೆಳೆಸುತ್ತಿದ್ದು ಪ್ರಸ್ತುತ ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ ಹಾಗೂ ಆಡಳಿತ ಮಂಡಳಿ ಶ್ರಮ ಅಭಿನಂದನೀಯ. ದೇಶದಲ್ಲಿ ಪ್ರಸ್ತುತ ಯುವ ಝೆನ್ ಜಿ ಕಾಲ. ನಮ್ಮ ಸಮಾಜದ ಯುವ ಸಮುದಾಯವು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಮುದ್ರಾಡಿ ಮಾತನಾಡಿ, ನಾರಾಯಣ ಗುರುಗಳ ಸಂದೇಶ ನಮ್ಮ ನಿತ್ಯ ಸ್ಮರಣೆಯಾಗಬೇಕು. ಬದಲಾದ ಕಾಲಘಟ್ಟದಲ್ಲಿ ಬಿಲ್ಲವ ಸಮಾಜ ಹಿಂದಿನ ಕಷ್ಟಗಳನ್ನು ಮೆಟ್ಟಿ ನಿಂತಿದೆ. ಪ್ರತ್ಯಕ್ಷ ದೇವರಾಗಿರುವ ತಂದೆ- ತಾಯಿಗಳನ್ನು ಗೌರವಿಸಿ, ಪ್ರೀತಿಸುವ ಮನೋಭಾವ ಇರಬೇಕು. ಸಾಮಾಜಿಕ ಜಾಲತಾಣಗಳನ್ನು ಎಚ್ಚರಿಕೆಯಿಂದ ಬಳಸಬೇಕು ಎಂದರು.
ಬಿಲ್ಲವ ಸಮುದಾಯ ಸಂಘಟಿತವಾಗಿ ಬೆಳವಣಿಗೆ ಕಾಣುತ್ತಿವೆ. ಬಿಲ್ಲವ ಸಮುದಾಯದ 26 ಪಂಗಡಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ಬಿಲ್ಲವ ನಿಗಮ ಸರ್ಕಾರದ ಆಶಯಗಳನ್ನು ಈಡೇರಿಸಲು ಬದ್ಧವಾಗಿದೆ. ಸರ್ಕಾರ ನೀಡುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಲು ನಮ್ಮಲ್ಲಿ ಕಾಳಜಿ ಇರಬೇಕು ಎಂದರು.
ವಿದ್ಯಾರ್ಥಿ ವೇತನ ವಿತರಣೆ ಮಾಡಿ ಮಾತನಾಡಿದ ಮುಂಬೈ ಉದ್ಯಮಿ ಬಾಬು ಪೂಜಾರಿ ಸಂಕುಮನೆ ಪಡುಕೋಣೆ ಅವರು, ವಿದ್ಯಾರ್ಥಿಗಳ ಸಾಧನೆ ನಿಂತ ನೀರಾಗಬಾರದು. ಸಾಧನೆ ಮೂಲಕ ಸಾಧಕರ ಜಾಗವನ್ನು ಯುವ ಸಮುದಾಯ ತುಂಬಬೇಕು. ವಿದ್ಯೆಯೇ ನಮ್ಮ ಪ್ರತಿಭೆಯ ಶ್ರೀರಕ್ಷೆಯಾಗ ಬೇಕು. ಪಡುಕೋಣೆ ಸುರೇಶ್ ಎಸ್ ಪೂಜಾರಿ ಅವರು ನೆಟ್ಟು ಬೆಳೆಸಿದ ಮರ ಇಂದು ಸಮೃದ್ಧ ಫಲ ನೀಡುತ್ತಿದೆ ಎಂದರು.
ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆಯ ಅಧ್ಯಕ್ಷ ಭರತ್ ಎಸ್ ಪೂಜಾರಿ, ವಿದ್ಯಾರ್ಥಿ ಗಳು ಭವಿಷ್ಯದ ನಿರ್ಧಾರ ತೆಗೆದುಕೊಳ್ಳುವಾಗ ಸರಿಯಾದ ಆಯ್ಕೆಯನ್ನು ಮಾಡಿಕೊಳ್ಳಬೇಕು. ಪುಸ್ತಕದ ಓದಿನೊಂದಿಗೆ ಜೀವನ ನಿರಂತರ ಕಲಿಕೆಯ ಶಾಲೆಯಾಗಬೇಕು. ನಿರ್ಧಾರಗಳು ವಿದ್ಯೆಗೆ ಮಾತ್ರ ಸೀಮಿತವಾಗದೆ ಭವಿಷ್ಯದ ಜೀವನ ರೂಪಿಸಿಕೊಳ್ಳುವ ನಿರ್ಧಾರವೂ ಆಗಿರಬೇಕು ಎಂದರು.
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ವೈದ್ಯಾಧಿಕಾರಿ ಡಾ.ಕೆ.ಪ್ರೇಮಾನಂದ, ಉದ್ಯಮಿ ಅಭಿಷೇಕ್ ಪೂಜಾರಿ, ಹುಬ್ಬಳ್ಳಿ ಉದ್ಯಮಿ ವಿಜಯ್ ಪಿ ಪೂಜಾರಿ, ದುಬೈ ಉದ್ಯಮಿ ಮಂಜುನಾಥ ಪೂಜಾರಿ ಸೇನಾಪುರ, ಉದಯ್ ಕುಮಾರ್ ಪೂಜಾರಿ ಬೆಳ್ವೆ, ಉಪನ್ಯಾಸಕಿ ಮಂಜುಳಾ ಜಿ ತೆಕ್ಕಟ್ಟೆ, ಸಂಘದ ಉಪಾಧ್ಯಕ್ಷರಾದ ರಾಮ ಪೂಜಾರಿ ಮುಲ್ಲಿಮನೆ, ಶ್ರೀನಿವಾಸ ಪೂಜಾರಿ ವಂಡ್ಸೆ, ಮೋಹನ್ ಪೂಜಾರಿ ಉಪ್ಪುಂದ, ಗಿರಿಜಾ ಮಾಣಿ ಗೋಪಾಲ, ಶ್ರೀ ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ರವೀಂದ್ರ ಪೂಜಾರಿ ಹಂಗಳೂರು, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ವಾಸುದೇವ ಪೂಜಾರಿ, ಯು.ಕುಪ್ಪಯ್ಯ ಬಿಲ್ಲವ, ಆನಂದ ಪೂಜಾರಿ ಕೊಡೇರಿ ಉಪಸ್ಥಿತರಿದ್ದರು.
ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪ್ರೀತಮ್ ಜಿ ಪೂಜಾರಿ ಹಾಗೂ ದ್ವಿತೀಯ ಸ್ಥಾನ ಪಡೆದ ಅನ್ವರ್ಥ್ ಪೂಜಾರಿ ಅವರನ್ನು ಗೌರವಿಸಲಾಯಿತು. 627 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಎಸೆಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಎಂಎಸ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು ಸಾಧನೆ ಮಾಡಿದ ವಿಶೇಷಚೇತನ ವಿದ್ಯಾರ್ಥಿನಿ ರೂಪ ಅವರನ್ನು ಗೌರವಿಸಲಾಯಿತು.
ಸಂಘದ ಕಾರ್ಯದರ್ಶಿ ಯೋಗೀಶ್ ಪೂಜಾರಿ ಕೋಡಿ ಸ್ವಾಗತಿಸಿದರು, ಶಿಕ್ಷಕ ಸತೀಶ್ ಪೂಜಾರಿ ವಡ್ಡರ್ಸೆ ನಿರೂಪಿಸಿದರು, ಪ್ರಧಾನ ಕಾರ್ಯದರ್ಶಿ ಆನಂದ್ ಪೂಜಾರಿ ಕೊಡೇರಿ ವಂದಿಸಿದರು.
‘ಉತ್ತಮ, ಸಮಾಜಮುಖಿ ಕಾರ್ಯಗಳು ಯಶಸ್ವಿಯಾಗಬೇಕಾದರೆ ಎಲ್ಲರ ಸಹಭಾಗಿತ್ವವಿರಬೇಕು. ವ್ಯಕ್ತಿತ್ವ ಹಾಗೂ ಧೀಮಂತಿಕೆ ಹೊಂದಿರುವ ಎನ್.ಟಿ.ಪೂಜಾರಿ ಅವರ ಸೇವೆ ಸಮಾಜಕ್ಕೆ ಇನ್ನಷ್ಟು ಸುದೀರ್ಘ ಕಾಲ ಬೇಕು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಎಷ್ಟೋ ಮಂದಿ ಮಕ್ಕಳ ಹಾಗೂ ಪೋಷಕರ ಕನಸು ಕೊಚ್ಚಿಹೋಗಿದೆ. ಸಂಘಟನೆ ಸುಲಭದ ಕಾರ್ಯವಲ್ಲ, ಬದ್ಧತೆ ಹಾಗೂ ಆರ್ಥಿಕ ಶಕ್ತಿ ಬೇಕು. ವಿದ್ಯಾರ್ಥಿ ವೇತನ ಪಡೆದುಕೊಂಡಿರುವ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಭದ್ರ ಪಡಿಸಿಕೊಂಡು, ಇನ್ನಷ್ಟು ವಿದ್ಯಾರ್ಥಿಗಳನ್ನು ಬೆಳೆಸಬೇಕು.
-ಅಶೋಕ ಪೂಜಾರಿ ಬೀಜಾಡಿ, ಬಿಲ್ಲವ ಸಮಾಜಸೇವಾ ಸಂಘದ ಅಧ್ಯಕ್ಷ.