ಆಳ್ವಾಸ್ ಉದ್ಯೋಗ ಮೇಳದ ಮಾಹಿತಿ-ತರಬೇತಿ ಕಾರ್ಯಕ್ರಮ
ಕುಂದಾಪುರ, ಆ.5: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಉದ್ಯೋಗ ಮೇಳವು ಪದವಿ, ಎಂಜಿನಿಯರಿಂಗ್ ಸಹಿತ ಎಲ್ಲ ವಿದ್ಯಾರ್ಹತೆ ಹೊಂದಿರುವ ಯುವ ಸಮೂಹಕ್ಕೆ ಒಂದೊಳ್ಳೆಯ ಅವಕಾಶವಾಗಿದೆ. ಇದನ್ನು ಹೆಚ್ಚೆಚ್ಚು ಜನರು ಬಳಸಿಕೊಳ್ಳಬೇಕು. ಹೆಚ್ಚಿನವರಿಗೆ ಇದರಿಂದ ಉದ್ಯೋಗ ಸಿಗುವಂತಾಗಲಿ ಎಂದು ಕುಂದಾಪುರ ಶಾಸಕ ಕಿರಣ್ ಕುರ್ಮಾ ಕೊಡ್ಗಿ ಹೇಳಿದ್ದಾರೆ.
ಆ.7-8ರಂದು ಮೂಡಬಿದಿರೆಯಲ್ಲಿ ನಡೆಯುವ ಆಳ್ವಾಸ್ ಉದ್ಯೋಗ ಮೇಳದ ಅಂಗವಾಗಿ ಆಳ್ವಾಸ್ ನುಡಿಸಿರಿ ಕುಂದಾಪುರ ತಾಲೂಕು ಘಟಕ, ಲಯನ್ಸ್ ಕ್ಲಬ್ ಕುಂದಾಪುರ, ರೋಟರಿ ಕ್ಲಬ್ ಕೋಟೇಶ್ವರ, ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನ ರೋಟರಿ ಕಲಾಮಂದಿರ ದಲ್ಲಿ ಬುಧವಾರ ನಡೆದ ಮಾಹಿತಿ ಹಾಗೂ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡುತಿದ್ದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ಡಾ.ಎಂ.ಮೋಹನ್ ಆಳ್ವರ ನೇತೃತ್ವದಲ್ಲಿ ಕಳೆದ ಅನೇಕ ವರ್ಷಗಳಿಂದ ಈ ಉದ್ಯೋಗ ಮೇಳ ಉತ್ತಮ ರೀತಿಯಲ್ಲಿ ನಡೆಯತ್ತಿದೆ. ಇದು ಕರಾವಳಿ ಜಿಲ್ಲೆಗಳ ಮಕ್ಕಳಿಗೆ ಉತ್ತಮ ಅವಕಾಶ ಆಗಿದೆ. 350 ಕ್ಕೂ ಮಿಕ್ಕಿ ಕಂಪೆನಿಗಳು ಬರುತ್ತಿದ್ದು, ಒಳ್ಳೆಯ ಉದ್ದೇಶದಿಂದ ಈ ಮೇಳ ನಡೆಯುತ್ತಿದೆ ಎಂದು ಶಾಸಕರು ತಿಳಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಉದ್ಯೋಗ ಮೇಳದ ಕುರಿತು ಮಾಹಿತಿ ನೀಡಿ, ಕೇವಲ ಸಂದರ್ಶನಕ್ಕೆ ಬರುವ ಬದಲು, ಅದಕ್ಕೆ ಬೇಕಾದ ಪೂರ್ವ ತಯಾರಿ ಮಾಡಿಕೊಂಡು ಬರಬೇಕು. ಅದರಿಂದ ನಿಮ್ಮ ವಿದ್ಯಾರ್ಹತೆಗೆ ಸಂಬಂಧಿಸಿ ಅರ್ಹ ಉದ್ಯೋಗವನ್ನು ಪಡೆಯಲು ಸಾಧ್ಯ ಎಂದರು.
ಆಳ್ವಾಸ್ ನುಡಿಸಿರಿ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ಲಯನ್ಸ್ ನಿಯೋಜಿತ ಜಿಲ್ಲಾ ಗವರ್ನರ್ ರಮಾನಂದ ಕೆ., ಲಯನ್ಸ್ ಕ್ಲಬ್ ಕುಂದಾಪುರ ಕಾರ್ಯದರ್ಶಿ ದಿನಕರ ಆರ್.ಶೆಟ್ಟಿ, ರೋಟರಿ ಕ್ಲಬ್ ಕೋಟೇಶ್ವರ ಅಧ್ಯಕ್ಷೆ ಅಕ್ಷತಾ ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.
ಆಳ್ವಾಸ್ ನುಡಿಸಿರಿ ಕುಂದಾಪುರ ತಾಲೂಕು ಘಟಕ ಸಂಚಾಲಕ ಸುಬ್ರಹ್ಮಣ್ಯ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ ದರು. ಶಿಕ್ಷಕ ಉದಯ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.