ರೆಂಜಾಳ ಭೂಕುಸಿತದ ಪ್ರದೇಶಕ್ಕೆ ಕಾಂಗ್ರೆಸ್ ನಿಯೋಗ ಭೇಟಿ

Update: 2026-08-05 20:47 IST

ಕಾರ್ಕಳ, .5: ಕಳೆದ ಕೆಲವು ದಿನಗಳ ಸತತ ಮಳೆಯಿಂದ ಹಠಾತ್ ಭೂಕುಸಿತ ಕಂಡುಬಂದ ರೆಂಜಾಳ ಗ್ರಾಮದ ಹೆಡ್ಮೆ ಪ್ರದೇಶಕ್ಕೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ನೇತೃತ್ವದಲ್ಲಿ ಕಾಂಗ್ರೆಸ್‌ನ ನಿಯೋಗವೊಂದು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿತು.

ಭೂಕುಸಿತ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿರುವ ಪರಿಸರದ ಮನೆಗಳಲ್ಲಿರುವವರನ್ನು ಸ್ಥಳಾಂತರಿಸುವ ಕೆಲಸ ಈಗಾಗಲೇ ನಡೆದಿದ್ದು, ಇನ್ನಷ್ಟು ಮನೆಗಳವರನ್ನು ಬೇಕಿದ್ದರೆ ಸ್ಥಳಾಂತರಿಸಿ ಅವರಿಗೆ ಬೇಕಾದ ಸೌಲಭ್ಯ ಕಲ್ಪಿಸಲು ಕಾಂಗ್ರೆಸ್ ಸಿದ್ಧವಿದೆ ಎಂದು ಶುಭದ ರಾವ್ ಭರವಸೆ ನೀಡಿದರು.

ನಿಯೋಗದಲ್ಲಿ ಭೂನ್ಯಾಯ ಮಂಡಳಿ ಸದಸ್ಯ ರಮೇಶ್ ಶೆಟ್ಟಿ, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಮಾಜಿ ಪುರಸಭಾ ಸದಸ್ಯ ವಿವೇಕ್ ಶೆಣೈ, ಸುಧಾಕರ ಶೆಟ್ಟಿ ಮುಂತಾದವರಿದ್ದರು.

ಇಲಾಖೆಯಿಂದ ಅಧ್ಯಯನ: ಕುಸಿತ ಕಂಡುಬಂದ ಪ್ರದೇಶಕ್ಕೆ ಅಧಿಕಾರಿ ಗಳೊಂದಿಗೆ ಮಂಗಳವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು, ಇಲ್ಲಿ ಇನ್ನೂ ಹೆಚ್ಚಿನ ಭೂಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ ತಕ್ಷಣವೇ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ ಇಲಾಖೆಯಿಂದ ಅಧ್ಯಯನ ನಡೆಸಲು ತಂಡವೊಂದನ್ನು ಕಳುಹಿಸಿ ಕೊಡುವಂತೆ ನಿರ್ದೇಶಕರನ್ನು ಕೋರಲಾಗಿದ್ದು, ಒಂದೆರಡು ದಿನಗಳಲ್ಲಿ ತಂಡ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಭೂ ಕುಸಿತದಿಂದ ತೊಂದರೆಗೊಳಗಾದ ಕುಟುಂಬಗಳಿಗೆ ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ರೆಂಜಾಳ ಸರಕಾರಿ ಸಂಯುಕ್ತ ಪ್ರೌಢಶಾಲೆ ಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡುವಂತೆ ಮನೆಯ ಸದಸ್ಯರಿಗೆ ಸಲಹೆ ನೀಡಿದರು.

ಇಲ್ಲಿ ನಿರಂತರವಾಗಿ ನಿಗಾ ವಹಿಸಿ ಯಾರಿಗೂ ಯಾವುದೇ ತೊಂದರೆಯಾಗದಂತೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳು ಸ್ಥಳೀಯ ಅಧಿಕಾರಿ ಸೂಚನೆ ನೀಡಿದರು. 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News