ಉಡುಪಿ ಜಿಲ್ಲೆಯಲ್ಲಿ ತಗ್ಗಿದ ಮಳೆಯ ಬಿರುಸು

Update: 2026-08-05 21:42 IST

ಉಡುಪಿ, ಆ.5: ಈ ತಿಂಗಳ ಮೊದಲ ದಿನದಿಂದ ಧಾರಾಕಾರವಾಗಿ ಸುರಿದ ಮುಂಗಾರು ಮಳೆಯ ಬಿರುಸು ಇಂದು ತಗ್ಗಿದೆ. ಬುಧವಾರ ಹಗಲಿನಲ್ಲಿ ಆಗಾಗ ಕಾಣಿಸಿಕೊಂಡ ಮಳೆ, ಸಂಜೆಯ ವೇಳೆ ಬಿರುಸು ಪಡೆಯುವ ಲಕ್ಷಣ ಕಂಡುಬಂದಿದೆ.

ಉಡುಪಿ ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಶೇ.27ರಷ್ಟು ಮಳೆ ಕೊರತೆ ಕಾಣಿಸಿಕೊಂಡಿದ್ದರೆ, ಇದೀಗ ಆಗಸ್ಟ್‌ನ ಮೊದಲ ಐದು ದಿನಗಳಲ್ಲಿ ವಾಡಿಕೆಗಿಂತ ಶೇ. 63ರಷ್ಟು ಅಧಿಕ ಮಳೆ ಸುರಿದಿದೆ. ಈ ಅವಧಿಯಲ್ಲಿ 213ಮಿ.ಮೀ. ಮಳೆಯಾ ಗಬೇಕಿದ್ದು ಈ ಬಾರಿ 346 ಮಿ.ಮೀ. ಮಳೆಯಾಗಿದೆ. ಇದರಿಂದ ನಿರಾಶೆಯಲ್ಲಿದ್ದ ಜಿಲ್ಲೆಯ ರೈತರ ಮುಖದಲ್ಲಿ ಮತ್ತೆ ನಗು ಕಾಣಿಸಿಕೊಂಡಿದೆ.

ನಿನ್ನೆ ಬೀಸಿದ ಗಾಳಿ-ಮಳೆಯಿಂದ ಕುಂದಾಪುರ ತಾಲೂಕು ಆನಗಳ್ಳಿ ಗ್ರಾಮದ ಮಂಜಯ್ಯ ಶೆಟ್ಟಿ ಅವರ ವಾಸ್ತವ್ಯದ ಮನೆ ಸಂಪೂರ್ಣ ಹಾನಿ ಗೊಂಡಿದ್ದು, ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

ಜಿಲ್ಲೆಯಲ್ಲಿ 70.4ಮಿ.ಮೀ. ಮಳೆ: ಜಿಲ್ಲೆಯಲ್ಲಿ ಇಂದು ಸರಾಸರಿ 70.4ಮಿ.ಮೀ. ಮಳೆಯಾದ ವರದಿ ಬಂದಿದೆ. ಹೆಬ್ರಿಯಲ್ಲಿ 112.1ಮಿ.ಮೀ. ಮಳೆಯಾದರೆ ಕುಂದಾಪುರದಲ್ಲಿ 83.5ಮಿ.ಮೀ. ಬ್ರಹ್ಮಾವರದಲ್ಲಿ 78.7, ಬೈಂದೂರು 70.3, ಕಾರ್ಕಳ 50.3, ಉಡುಪಿ 40.9, ಕಾಪು 24.4ಮಿ.ಮೀ ಮಳೆಯಾದ ವರದಿ ಬಂದಿದೆ.

ಹೆಬ್ರಿಯಲ್ಲಿ ಅತ್ಯಧಿಕ ಮಳೆ: ಇಂದಿನ ಮಟ್ಟಿಗೆ ರಾಜ್ಯದಲ್ಲಿ ಅತ್ಯಧಿಕ ಮಳೆ ಬಿದ್ದಿರುವುದು ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ. ಇಲ್ಲಿ ಆ.4ರ ಬೆಳಗ್ಗೆ 8:30ರಿಂದ ಆ.5ರ ಬೆಳಗ್ಗೆ 8:30ರವರೆಗೆ 24 ಗಂಟೆಗಳ ಅವಧಿಯಲ್ಲಿ ಒಟ್ಟು 185.2ಮಿ.ಮೀ. ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಆಗುಂಬೆ 143 ಮಿ.ಮೀ. ಮಳೆ ಕಂಡು ಎರಡನೇ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕಳ್ತೂರಿನಲ್ಲಿ 140ಮಿ.ಮೀ. ಹಾಗೂ ನಾಲ್ಕೂರಿನಲ್ಲಿ 139.5ಮಿ.ಮೀ ಮಳೆಯಾದ ವರದಿ ಬಂದಿದೆ.

ಉಡುಪಿ ಜಿಲ್ಲೆಯ ಕುಚ್ಚೂರು (126), ಶಿವಪುರ (122), ಬಿಲ್ಲಾಡಿ (117), ಬೆಳ್ವೆ (111) ಮಿ.ಮೀ. ಮಳೆ ಕಂಡಿದೆ. ಉಳಿದಂತೆ ಹೆಂಗವಳ್ಳಿ, ಹಂಗಳೂರು, ಹಕ್ಲಾಡಿ, ಬಸರೂರು, ಕರ್ಜೆ, ಮೊಳಹಳ್ಳಿಗಳಲ್ಲೂ 100ಮಿ.ಮೀ.ಗಿಂತ ಅಧಿಕ ಮಳೆ ಸುರಿದಿದೆ. 




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News