ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ತರಬೇತಿ ಮುಖ್ಯ: ಬಸ್ರೂರು ರಾಜೀವ ಶೆಟ್ಟಿ
ಉಡುಪಿ ಆ.11: ಇಂದು ತಂತ್ರಜ್ಞಾನ ನಮ್ಮ ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ಸಂದರ್ಭದಲ್ಲಿ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿ ಬಳಸಿಕೊಳ್ಳಲು ಉತ್ತಮ ತರಬೇತಿಯ ಅಗತ್ಯವಿದೆ. ತರಬೇತಿ ಮೂಲಕ ರೆಡ್‌ಕ್ರಾಸ್ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಅನುಷ್ಠಾನ ಮಾಡಲು ಸಾಧ್ಯ ಎಂದು ರಾಜ್ಯ ರೆಡ್‌ಕ್ರಾಸ್ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಹೇಳಿದ್ದಾರೆ.
ನಗರದ ಅಜ್ಜರಕಾಡು ಬ್ರಹ್ಮಗಿರಿಯ ರೆಡ್‌ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಉಡುಪಿ ಜಿಲ್ಲಾ ರೆಡ್‌ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಪದವಿ ಕಾಲೇಜುಗಳ ರೆಡ್‌ಕ್ರಾಸ್ ಅಧಿಕಾರಿಗಳ ಒಂದು ದಿನದ ತರಬೇತಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ರೆಡ್‌ಕ್ರಾಸ್ ಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ರೆಡ್‌ಕ್ರಾಸ್ ವತಿಯಿಂದ ಮುಂದೆ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ.ಗಾಯತ್ರಿ ರೆಡ್‌ಕ್ರಾಸ್ ಕಾರ್ಯಕ್ರಮಗಳ ವಿವರ ನೀಡಿದರು.ಕುಂದಾಪುರ ರೆಡ್‌ಕ್ರಾಸ್ ಘಟಕದ ಸಭಾಪತಿ ಜಯಕರ ಶೆಟ್ಟಿ ಎಸ್., ಖಜಾಂಚಿ ಶಿವರಾಮ ಶೆಟ್ಟಿ, ಜಿಲ್ಲಾ ಖಜಾಂಚಿ ರಮಾದೇವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರೆಡ್‌ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು. ಆಡಳಿತ ಮಂಡಳಿಯ ಸದಸ್ಯ ಚಂದ್ರಶೇಖರ್ ಟಿ. ವಂದಿಸಿದರು.
ಇದೇ ಸಂದರ್ಭದಲ್ಲಿ ಕಳೆದ ವರ್ಷದ ಜಿನೇವಾ ಒಪ್ಪಂದ ಜಾಥಾ ಮತ್ತು ನಿಧಿ ಸಂಗ್ರಹಣೆಯಲ್ಲಿ ಪ್ರಥಮ ಬಹುಮಾನ ಪಡೆದ ಪೂರ್ಣಪ್ರಜ್ಞಾ ಕಾಲೇಜು, ದ್ವಿತೀಯ ಬಹುಮಾನ ಪಡೆದ ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಮತ್ತು ತೃತೀಯ ಬಹುಮಾನ ಪಡೆದ ಸೈಂಟ್ ಮೇರಿಸ್ ಕಾಲೇಜು ಶಿರ್ವ ಇದರ ಅಧಿಕಾರಿಗಳು ಘಟಕ ನಾಯಕರೊಂದಿಗೆ ಬಹುಮಾನ ಸ್ವೀಕರಿಸಿದರು.