ಪ್ರಯತ್ನವೇ ಯಶಸ್ಸಿನ ಕೀಲಿ ಕೈ: ಮಂಜುನಾಥ್ ನಾಯಕ್
ಬ್ರಹ್ಮಾವರ, ಜು.17: ಹೇರೂರಿನ ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಆಯೋಜಿ ಸಲಾಗಿದ್ದ ಮಸಾಲ, ಹಪ್ಪಳ, ಉಪ್ಪಿನಕಾಯಿ ಹಾಗೂ ಫಾಸ್ಟ್ ಫುಡ್ ತಯಾರಿಕೆ ತರಬೇತಿಯ ಸಮಾರೋಪ ಸಮಾರಂಭ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉದ್ಯಮಿ ಹಾಗೂ ಉಡುಪಿ ಜಿಲ್ಲಾ ಬೇಕರಿ ಮತ್ತು ಆಹಾರ ಉದ್ಯಮಿಗಳ ಅಸೋಸಿಯೇಷನ್‌ನ ನಿರ್ದೇಶಕ ಮಂಜುನಾಥ್ ನಾಯಕ್ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು.
ಉದ್ಯಮದಲ್ಲಿ ಯಶಸ್ಸು ಸಾಧಿಸಲು ಆಸಕ್ತಿ, ಗುಣಮಟ್ಟ ಹಾಗೂ ನಿರಂತರ ಪ್ರಯತ್ನ ಅತ್ಯಂತ ಮುಖ್ಯ ಎಂದ ಅವರು, ತಮ್ಮ ಸ್ವಂತ ಉದ್ಯಮದ ಅನುಭವವನ್ನು ಹಂಚಿಕೊಂಡರು.ಮಸಾಲಾ ಪೌಡರ್ ತಯಾರಿಕೆಯ ಕುರಿತು ಯಾವುದೇ ಪೂರ್ವಜ್ಞಾನವಿಲ್ಲದಿದ್ದರೂ, ಆಸಕ್ತಿ ಮತ್ತು ಪರಿಶ್ರಮದಿಂದ ಇಂದು ತಮ್ಮದೇ ಆದ ಬ್ರಾಂಡ್ ಹೊಂದಿರು ವುದಾಗಿ ತಿಳಿಸಿದರು.
ಆಹಾರ ಉದ್ಯಮದ ಕ್ಷೇತ್ರದಲ್ಲಿ ತ್ವರಿತ ಯಶಸ್ಸಿಗಾಗಿ ಯಾವುದೇ ಕಾರಣಕ್ಕೂ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಬಾರದು. ಗ್ರಾಹಕರಿಗೆ ಸದಾ ಗುಣಮಟ್ಟದ ಆಹಾರವನ್ನು ಒದಗಿಸಬೇಕು. ಹೊಸದಾಗಿ ತಯಾರಿಸಿದ ಆಹಾರ ಪದಾರ್ಥಗಳನ್ನು ಮೊದಲು ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೆ ನೀಡಿ, ಅವರ ಅಭಿಪ್ರಾಯ ಮತ್ತು ತೃಪ್ತಿ ಯನ್ನು ತಿಳಿದುಕೊಂಡ ನಂತರ ಮಾರುಕಟ್ಟೆಗೆ ಪರಿಚಯಿಸುವುದು ಉತ್ತಮ ಎಂದು ಸಲಹೆ ನೀಡಿ, ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆಯನ್ನು ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಡಾ. ಬೊಮ್ಮಯ್ಯ ಎಂ. ವಹಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಚೈತ್ರ ಕೆ. ಕಾರ್ಯಕ್ರಮ ನಿರೂಪಿಸಿ ಹಿರಿಯ ಉಪನ್ಯಾಸಕರಾದ ಸಂತೋಷ್ ಸ್ವಾಗತಿಸಿದರು. ಸಹಾಯಕ ರವಿ ವಂದಿಸಿದರು.